ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಬಳಿಗೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ತೀರ್ಮಾನ

Last Updated 10 ಸೆಪ್ಟೆಂಬರ್ 2017, 8:37 IST
ಅಕ್ಷರ ಗಾತ್ರ

ಕಳಸ: ಹೊಸದಾಗಿ ರಾಜ್ಯ ಸರ್ಕಾರ ರಚಿಸಿರುವ ತಾಲ್ಲೂಕುಗಳ ಪಟ್ಟಿಯಿಂದ ಕಳಸವನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಶನಿವಾರ ತೀರ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷ ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಈ ತೀರ್ಮಾನ ಕೈಗೊಂಡರು. ಆದರೆ ಈ ಸಭೆಯಲ್ಲಿ ಬಿಜೆಪಿ ಭಾಗವಹಿಸಲಿಲ್ಲ.

ಶಾಸಕ ಬಿ. ಬಿ.ನಿಂಗಯ್ಯ ಮಾತನಾಡಿ, ‘ಕಳಸ ತಾಲ್ಲೂಕು ರಚನೆಯ ಬಗ್ಗೆ ನಾನು ವಿಧಾನಸಭೆಯಲ್ಲಿ ಮುಖ್ಯಮಂತ್ರಿಯ ಗಮನ ಸೆಳೆದಿದ್ದೆ. ಕಂದಾಯ ಕಾರ್ಯರ್ದರ್ಶಿಗಳು ಜಿಲ್ಲಾಧಿಕಾರಿಯಿಂದ ಈ ಬಗ್ಗೆ ವರದಿ ಕೇಳಿದ್ದರು. ಜಿಲ್ಲಾಧಿಕಾರಿ ಪೂರಕ ವರದಿ ನೀಡಿದ್ದರೂ ಕಳಸವನ್ನು ರಾಜಕೀಯ ಕಾರಣಕ್ಕೆ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿರಬೇಕು. ಮತ್ತೊಮ್ಮೆ ಎಲ್ಲ ಪಕ್ಷಗಳ ಪ್ರತಿನಿಧಿಗಳು ಒಗ್ಗಟ್ಟಿನಿಂದ ಮುಖ್ಯಮಂತ್ರಿ ಬಳಿಗೆ ನಿಯೋಗದಲ್ಲಿ ತೆರಳಿದರೆ ಕಳಸಕ್ಕೆ ತಾಲ್ಲೂಕು ಭಾಗ್ಯ ಸಿಗಬಹುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌. ಪ್ರಭಾಕರ್ ಮಾತನಾಡಿ ‘ಕಾಂಗ್ರೆಸ್‌ ಪಕ್ಷವು ಕಳಸ ತಾಲ್ಲೂಕು ಬಗ್ಗೆ ಮೂರು ಬಾರಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ದಿದೆ. ಇದೀಗ ಮತ್ತೆ ಕೆಪಿಸಿಸಿ ಹಾಗೂ ಹಿರಿಯ ಸಚಿವರ ಜತೆ ಸಮಾಲೋಚಿಸಿದ್ದೇವೆ. ಶಾಸಕರ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ಹೋಗಲು ಒಪ್ಪಿಗೆ ಇದೆ ಎಂದರು.

ಇದಕ್ಕೂ ಮುನ್ನ ಜೆಡಿಎಸ್‌ ಧುರೀಣ ಮಂಜಪ್ಪಯ್ಯ ಮಾತನಾಡಿ, ‘ಕಡಬ, ಅಜ್ಜಂಪುರ, ಹೆಬ್ರಿಯ ಬೇಡಿಕೆ ಇತ್ತೀಚಿನದು. ಆದರೆ ಕಳಸದ ಮೂರು ದಶಕದ ಬೇಡಿಕೆ ಕಡೆಗಣಿಸಲಾಗಿದೆ. ಸರ್ವಪಕ್ಷ ನಿಯೋಗದಲ್ಲಿ ಹೋಬಳಿಯ 6 ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳು, ಜಿಲ್ಲೆಯ ಎಲ್ಲ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರನ್ನೂ ಕರೆದೊಯ್ಯಬೇಕು ಎಂದು ಸಲಹೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್‌ ಮಾತನಾಡಿ, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಕಂದಾಯ, ಕಾನೂನು ಸಚಿವರು ಮತ್ತು ಸಂಬಂಧಪಟ್ಟ ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿದರೆ ಮಾತ್ರ ಕಳಸಕ್ಕೆ ನ್ಯಾಯ ಸಿಗುತ್ತದೆ. ಈ ಬಗ್ಗೆ ಶಾಸಕರು ದಿನಾಂಕ ನಿಗದಿ ಮಾಡಿದರೆ ಸರ್ವಪಕ್ಷ ನಿಯೋಗ ಅಲ್ಲಿಗೆ ಕರೆದೊಯ್ಯೋಣ’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯತಿ ಸದಸ್ಯರಾದ ರಾಜೇಂದ್ರ, ರಫೀಕ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್‌, ಮುಖಂಡರಾದ ಜ್ವಾಲನಯ್ಯ, ಆಶಾಲತಾ, ಸಂತೋಷ್‌, ರವಿ ರೈ, ಆ್ಯಂಟೋನಿ, ಹರ್ಷ, ದೇವದಾಸ್‌, ರವಿ, ಸುಜಿತ್‌, ಅನಿಲ್‌, ಬ್ರಹ್ಮದೇವ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT