ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ರಿಕೆಯನ್ನು ಬೆದರಿಸಲು ವರದಿಗಾರನ ಬಂಧನ’

Last Updated 10 ಸೆಪ್ಟೆಂಬರ್ 2017, 8:44 IST
ಅಕ್ಷರ ಗಾತ್ರ

ಮಂಗಳೂರು: ‘ಪೊಲೀಸರು ಮತ್ತು ಪ್ರಭಾವಿ ರಾಜಕೀಯ ಮುಖಂಡರ ವಿರುದ್ಧ ವರದಿಗಳನ್ನು ಪ್ರಕಟಿಸುತ್ತಿದ್ದ ವಾರ್ತಾಭಾರತಿ ಪತ್ರಿಕೆಯನ್ನು ಬೆದರಿಸಿ, ಬಾಯಿ ಮುಚ್ಚಿಸುವ ಉದ್ದೇಶದಿಂದ ಪತ್ರಿಕೆಯ ಬಂಟ್ವಾಳ ವರದಿಗಾರ ಇಮ್ತಿಯಾಝ್‌ ತುಂಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಆರೋಪಿಸಿದ್ದಾರೆ.

ವರದಿಗಾರನ ಬಂಧನ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಗುರುವಾರ ಸಂಜೆ 7 ಗಂಟೆಗೆ ವರದಿಗಾರನನ್ನು ಪೊಲೀಸರು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಪತ್ರಿಕೆಯ ಸಂಪದಾಕರು ಮತ್ತು ವರದಿಗಾರನಿಗೆ ಪೊಲೀಸರು ಅಥವಾ ಇತರೆ ಇಲಾಖೆಗಳಿಂದ ಯಾವುದೇ ನೋಟಿಸ್‌ ನೀಡಿರಲಿಲ್ಲ. ಜಾಮೀನು ಪಡೆಯಲು ಅವಕಾಶ ದೊರೆಯಬಾರದೆಂಬ ದುರುದ್ದೇಶದಿಂದ ವರದಿಗಾರನನ್ನು ವಿಳಂಬವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು’ ಎಂದು ದೂರಿದ್ದಾರೆ.

ಕೊಲೆ ಪ್ರಕರಣವೊಂದರ ಶಂಕಿತ ಆರೋಪಿಯೊಬ್ಬನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಯ ಕುಟುಂಬದ ಸದಸ್ಯರು ಆರೋಪಿಸಿದ್ದರು. ಈ ಬಗ್ಗೆ ‘ವಾರ್ತಾಭಾರತಿ’ ಸೆ.3ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಪೊಲೀಸರ ವಿರುದ್ಧದ ಆರೋಪ ನಿರಾಕರಿಸಿ ದಕ್ಷಿಣ ಕನ್ನಡ ಎಸ್‌ಪಿ ನೀಡಿದ್ದ ಹೇಳಿಕೆಯನ್ನೂ ಸೆ.4ರ ಸಂಚಿಕೆಯಲ್ಲಿ ಪ್ರಾಮುಖ್ಯವಾಗಿ ಪ್ರಕಟಿಸಲಾಗಿತ್ತು ಎಂದು ತಿಳಿಸಿದ್ದಾರೆ.

‘ಬಂಟ್ವಾಳ ತಾಲ್ಲೂಕಿನಲ್ಲಿ ಕೆಲವು ತಿಂಗಳಿಂದ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾದ ಕೆಲವು ರಾಜಕೀಯ ವ್ಯಕ್ತಿಗಳು ಮತ್ತು ಪರಿಸ್ಥಿತಿ ನಿಯಂತ್ರಿಸಲು ವಿಫಲರಾದ ಪೊಲೀಸರ ವಿರುದ್ಧ ಪತ್ರಿಕೆಯಲ್ಲಿ ಹಲವು ವರದಿಗಳು ಹಾಗೂ ಸಂಪಾದಕೀಯಗಳನ್ನು ಪ್ರಕಟಿಸಲಾಗಿತ್ತು. ಈ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದು ರಾಜಕೀಯ ಪ್ರಭಾವಿಗಳು ಮತ್ತು ಪೊಲೀಸರು ಪತ್ರಿಕೆ ವಿರುದ್ಧ ಕೋಪಗೊಳ್ಳಲು ಕಾರಣವಾಗಿತ್ತು. ಇದೇ ಕಾರಣಕ್ಕಾಗಿ ನಮ್ಮನ್ನು ಬಾಯಿ ಮುಚ್ಚಿಸುವ ಉದ್ದೇಶದಿಂದ ವರದಿಗಾರನನ್ನು ಬಂಧಿಸಿದ್ದಾರೆ’ ಎಂದಿದ್ದಾರೆ.

‘ವರದಿಗಾರನ ಬಂಧನ ಪತ್ರಿಕೆಯ ಕೆಲಸದಲ್ಲಿ ಅತಿಕ್ರಮ ಪ್ರವೇಶದ ಒಂದು ಕ್ರಿಯೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮತ್ತು ನಮ್ಮ ಧ್ವನಿಯನ್ನು ಉಡುಗಿಸುವ ಪ್ರಯತ್ನ. ಜನತೆಯ ಮಾಹಿತಿ ಪಡೆಯುವ ಹಕ್ಕಿನ ನಿರಾಕರಣೆಯೂ ಹೌದು’ ಎಂದು ಅಬ್ದುಸ್ಸಲಾಂ ಪುತ್ತಿಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT