ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇರಿಜ್ ಹೆಗಲಿಗೆ ಹಾಕಿ ಹೊಣೆ

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸದ್ಯ ಭಾರತ ಹಾಕಿ ತಂಡಕ್ಕೆ ತರಬೇತಿ ನೀಡಲು ನನ್ನಷ್ಟು ಅರ್ಹರು ಯಾರೂ ಇಲ್ಲ. ಆದ್ದರಿಂದ ಭರವಸೆಯಿಂದಲೇ ಅರ್ಜಿ ಸಲ್ಲಿಸುತ್ತೇನೆ...’ ಎಂದು ಭಾರತ ಜೂನಿಯರ್ ಹಾಕಿ ತಂಡದ ಕೋಚ್‌ ಹರೇಂದ್ರ ಸಿಂಗ್‌ ಹೇಳಿದ ಮಾತು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಸಾಮಾನ್ಯ ಹೇಳಿಕೆಯಾಗಿರಲಿಲ್ಲ. ಭಾರತ ಹಾಕಿ ತಂಡದ ಮುಖ್ಯ ಕೋಚ್‌ ರೋಲಂಟ್ ಓಲ್ಟಮನ್ಸ್ ಅವರನ್ನು ಹಾಕಿ ಇಂಡಿಯಾ ವಜಾ ಮಾಡಿದಾಗ ಹರೇಂದರ್ ಸಿಂಗ್ ಅವರಂತೆ ಆಸೆ ಪಟ್ಟವರು ಎಷ್ಟು ಮಂದಿಯೋ...?

ಕೆಲವರು ಈ ಆಸೆಯನ್ನು ಮನದೊಳಗೇ ಹುದುಗಿಟ್ಟುಕೊಂಡರು. ಒಲಿಂಪಿಯನ್‌ ಮುಖೇಶ್ ಕುಮಾರ್ ಅವರಂಥವರು ಪರೋಕ್ಷವಾಗಿ ಮನದ ಇಂಗಿತ ಹೊರಸೂಸಿದರು. ಅನುಭವಿಗಳು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರಲ್ಲಿ ಅಚ್ಚರಿ ಇರಲಿಲ್ಲ; ಅತಿಶಯವೂ ಇರಲಿಲ್ಲ. ಆದರೆ ಹಾಕಿ ಇಂಡಿಯಾ ಮತ್ತೆ ವಿದೇಶಿ ವ್ಯಕ್ತಿಯನ್ನೇ ಕೋಚ್ ಆಗಿ ನೇಮಕ ಮಾಡಿ ಎಲ್ಲರಿಗೂ ‘ಚೋಕ್‌’ ನೀಡಿದೆ.

ಭಾರತ ಮಹಿಳಾ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದ ಮೇರಿಜ್ ಅವರನ್ನು ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆಗಳ ಬಗ್ಗೆ ವದಂತಿಗಳು ಇದ್ದವು. ಆದರೆ ವಿದೇಶಿ ಕೋಚ್‌ಗಳನ್ನು ನೇಮಕ ಮಾಡಲು ತೋರಿಸುವಷ್ಟೇ ಉತ್ಸಾಹ ಅವರನ್ನು ಹೊರದಬ್ಬುವುದಕ್ಕೂ ಹಾಕಿ ಇಂಡಿಯಾ ತೋರಿಸುವುದರಿಂದ ಮರಿಜಿನೆ ಈ ಹುದ್ದೆಯನ್ನು ‘ಅಲಂಕರಿಸಲು’ ಒಪ್ಪುವರೇ? ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅವರು ಎಲ್ಲಿಯ ವರೆಗೆ ಹುದ್ದೆಯಲ್ಲಿ ಮುಂದುವರಿಯುವರು? ಎಂಬ ಪ್ರಶ್ನೆಗೆ ಸಿಕ್ಕುವ ಉತ್ತರದ ಮೇಲೆ ಭಾರತ ತಂಡದ ಭವಿಷ್ಯ ನಿಂತಿದೆ.

ಹೊಂದಾಣಿಕೆ ಕಷ್ಟವೇ?
ವಿದೇಶಿ ಕೋಚ್‌ಗಳಿಗೆ ಭಾರತ ತಂಡದ ಜೊತೆ ಹೊಂದಾಣಿಕೆ ಕಷ್ಟ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಏಕಕಾಲದಲ್ಲಿ ತಂಡವನ್ನು ಬಲಪಡಿಸಲು ಮತ್ತು ಆಡಳಿತವನ್ನು ತೃಪ್ತಿಪಡಿಸಲು ಸಾಧ್ಯವೇ ಇಲ್ಲ ಎಂಬ ಅರ್ಥ ಹೊಮ್ಮುವ ಮಾತನ್ನು ರೋಲಂಟ್ ಓಲ್ಟಮನ್ಸ್ ಅವರೇ ಹೇಳಿದ್ದಾರೆ. ಓಲ್ಟಮನ್ಸ್‌, ಕೋಚ್‌ ಹುದ್ದೆಯಿಂದ ವಜಾಗೊಂಡ ಮೊದಲ ವಿದೇಶಿಯಲ್ಲ.

ರಿಕ್ ಚಾರ್ಲ್ಸ್‌ವರ್ಥ್‌, ಜೋಸ್ ಬ್ರಾಸಾ, ಮೈಕೆಲ್‌ ನೋಬ್ಸ್‌, ಟೆರಿ ವಾಲ್ಶ್‌, ಪಾಲ್‌ ವ್ಯಾನ್ ಆಸ್‌ ಅವರಿಗೂ ಇದೇ ಗತಿಯಾಗಿತ್ತು. ಒಲ್ಟಮನ್ಸ್ ಅವರನ್ನು 2013ರಲ್ಲಿ ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್‌ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿತ್ತು. ನಂತರ 2015ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡರು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡಕ್ಕೆ ಪದಕ ಕೊಡುಗೆಯಾಗಿ ನೀಡುವುದು ಅವರಿಗೆ ಹೊರಿಸಿದ್ದ ಪ್ರಮುಖ ಜವಾಬ್ದಾರಿ. ಈ ನಿಟ್ಟಿನಲ್ಲಿ ಅವರು ಹೆಜ್ಜೆಯನ್ನೂ ಇರಿಸಿದ್ದರು. ಕಳೆದ ವರ್ಷ ಅಜ್ಲಾನ್ ಷಾ ಕಪ್ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದ ತಂಡ ನಂತರ ಏಷ್ಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನವನ್ನು ಕೊರಳಿಗೇರಿಸಿಕೊಂಡಿತ್ತು. ಆದರೆ ವಿಶ್ವ ಹಾಕಿ ಸೆಮಿಫೈನಲ್‌ ಲೀಗ್‌ನಲ್ಲಿ ಕೆನಡಾ ಎದುರು ತಂಡ ಸೋತು, ಆರನೇ ಸ್ಥಾನ ಗಳಿಸಿದ್ದು ಹಾಕಿ ಇಂಡಿಯಾದ ಕೋಪಕ್ಕೆ ತುತ್ತಾಗಲು ಕಾರಣವಾಯಿತು.

ಅಲ್ಪ–ದೀರ್ಘ ಕಾಲ ಯೋಜನೆ ಸಂಘರ್ಷ
ಓಲ್ಟಮನ್ಸ್ ಮತ್ತು ಹಾಕಿ ಇಂಡಿಯಾ ನಡುವಿನ ಸಂಘರ್ಷ ಭಾರತದ ಜೂನಿಯರ್ ತಂಡ ವಿಶ್ವಕಪ್ ಗೆದ್ದ ನಂತರ ಹೆಚ್ಚಾಯಿತು. ಜೂನಿಯರ್ ತಂಡದಲ್ಲಿ ಚೆನ್ನಾಗಿ ಆಡಿದವರನ್ನು ಸೀನಿಯರ್ ತಂಡಕ್ಕೆ ಕರೆಸಿಕೊಂಡು ತರಬೇತಿ ನೀಡುವ ಹಾಕಿ ಇಂಡಿಯಾ ಯೋಜನೆಗೆ ಓಲ್ಟಮನ್ಸ್‌ ಸಹಮತ ಸೂಚಿಸದೇ ಇರುವುದೇ ಅವರ ಮೇಲೆ ವಿಶ್ವಾಸ ಕಳೆದುಕೊಳ್ಳಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಮುಂದಿನ ಒಲಿಂಪಿಕ್ಸ್ ವರೆಗೆ ನಿಗದಿತ ಆಟಗಾರರಿಗೆ ಮಾತ್ರ ತರಬೇತಿ ನೀಡುವುದು ಓಲ್ಟಮನ್ಸ್ ಅವರ ದೀರ್ಘ ಕಾಲದ ಯೋಜನೆಯ ಗುರಿ. ಆದರೆ ಯುವ ಆಟಗಾರರಿಗೆ ಅವಕಾಶ ನೀಡುವುದು ಹಾಕಿ ಇಂಡಿಯಾದ ಉದ್ದೇಶ. ಹಾಕಿ ಇಂಡಿಯಾದ ಈ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿ ಮರಿಜಿನೆ ಸಫಲರಾಗುವರೇ ಎಂಬುದನ್ನು ಕಾದುನೋಡಬೇಕಿದೆ.

*
ತಂಡಕ್ಕೆ ಒಳ್ಳೆಯ ಕೋಚ್ ಸಿಗುತ್ತಾರೆ. ಸ್ವದೇಶಿಯಾದರೂ ವಿದೇಶಿಯಾದರೂ ಮುಂದಿನ ದಿನಗಳಲ್ಲಿ ತಂಡವನ್ನು ಎತ್ತರಕ್ಕೆ ಕೊಂಡುಹೋಗುವವರನ್ನೇ ಆಯ್ಕೆ ಮಾಡಲಾಗುವುದು. ಸ್ವದೇಶಿ ಕೋಚ್‌, ವಿದೇಶಿ ಸಹ ಕೋಚ್‌ ಅಥವಾ ವಿದೇಶಿ ಕೋಚ್‌, ಸ್ವದೇಶಿ ಸಹ ಕೋಚ್‌ ಎಂಬ ಪ್ರಯೋಗಕ್ಕೆ ಹಾಕಿ ಇಂಡಿಯಾ ಮೊರೆ ಹೋದರೂ ಅಚ್ಚರಿ ಇಲ್ಲ.
–ಎ.ಬಿ.ಸುಬ್ಬಯ್ಯ,
ಹಾಕಿ ಇಂಡಿಯಾದ ಉನ್ನತಾಧಿಕಾರ ಸಮಿತಿ ಸದಸ್ಯ, ಹಾಕಿ ಕರ್ನಾಟಕ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT