ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಸ್ ಗೆಲುವಿಗೆ ತಾಹಾ ಸಿಕ್ಸರ್‌ಗಳ ಬಲ

Last Updated 10 ಸೆಪ್ಟೆಂಬರ್ 2017, 19:24 IST
ಅಕ್ಷರ ಗಾತ್ರ

ಮೈಸೂರು: ಬಿಜಾಪುರ ಬುಲ್ಸ್‌ ತಂಡದ ಆಟಗಾರ ಮಹಮ್ಮದ್ ತಾಹಾ ಅವರು ಭಾನುವಾರ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ತೋರಣ ಕಟ್ಟಿದರು.

ಅವರ ಬ್ಯಾಟ್‌ನಿಂದ ಒಂದರ ಮೇಲೊಂದರಂತೆ 9 ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳು ಸಿಡಿದವು. 45 ಎಸೆತಗಳಲ್ಲಿ 83 ರನ್‌ ಚಚ್ಚಿದ ಅವರ ಅಬ್ಬರದ ಆಟ ಬುಲ್ಸ್‌ ತಂಡಕ್ಕೆ ಜಯ ತಂದುಕೊಟ್ಟಿತು. ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಬುಲ್ಸ್‌ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಟೈಗರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 159 ರನ್‌ ಪೇರಿಸಿದರೆ, ಬುಲ್ಸ್‌ ಇನ್ನೂ ಎರಡು ಎಸೆತಗಳು ಇರುವಂತೆಯೇ 6 ವಿಕೆಟ್‌ಗೆ 162 ರನ್‌ ಗಳಿಸಿ ಜಯ ಸಾಧಿಸಿತು.

ಟೂರ್ನಿಯಲ್ಲಿ ಟೈಗರ್ಸ್‌ಗೆ ಎದುರಾದ ಮೊದಲ ಸೋಲು ಇದು. ಆರ್‌.ವಿನಯ್‌ಕುಮಾರ್‌ ನೇತೃತ್ವದ ತಂಡ ನಾಲ್ಕು ಪಂದ್ಯಗಳಿಂದ ಆರು ಪಾಯಿಂಟ್‌ ಹೊಂದಿದೆ. ಭರತ್‌ ಚಿಪ್ಲಿ ನಾಯತ್ವದ ಬುಲ್ಸ್‌ ಇಷ್ಟೇ ಪಂದ್ಯಗಳಿಂದ ನಾಲ್ಕು ಪಾಯಿಂಟ್‌ ಕಲೆಹಾಕಿದೆ.

ತಾಹಾ ಮಿಂಚು: ಸವಾಲಿನ ಗುರಿ ಬೆನ್ನಟ್ಟಿದ ಬುಲ್ಸ್‌ ತಂಡಕ್ಕೆ ಅಭಿಷೇಕ್‌ ಸಕುಜಾ ಎರಡನೇ ಓವರ್‌ನಲ್ಲಿ ಅವಳಿ ಆಘಾತ ನೀಡಿದರು. ಚಿಪ್ಲಿ ಮತ್ತು ದೀಕ್ಷಾನ್ಶು ನೇಗಿ (2) ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು. ಕಳೆದ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಗಳಿಸಿದ್ದ ಚಿಪ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು.

ತಂಡದ ಮೊತ್ತ 54 ಆಗುವಷ್ಟರಲ್ಲಿ ಮತ್ತೆರಡು ವಿಕೆಟ್‌ಗಳು ಬಿದ್ದವು. ಆದರೆ ಐದನೇ ವಿಕೆಟ್‌ಗೆ ಜೊತೆಯಾದ ತಾಹಾ ಮತ್ತು ಎಂ.ನಿದೇಶ್‌ (29; 33 ಎಸೆತ) 55 ಎಸೆತಗಳಲ್ಲಿ 78 ರನ್‌ ಕಲೆಹಾಕಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡರು.

ಎದುರಾಳಿ ತಂಡದ ಎಲ್ಲ ಬೌಲರ್‌ಗಳ ಬೆವರಿಳಿಸಿದ ತಾಹಾ ಕಲಾತ್ಮಕ ಇನಿಂಗ್ಸ್‌ ಕಟ್ಟಿದರು. ಅವರು ಗಳಿಸಿದ 83 ರನ್‌ಗಳಲ್ಲಿ 70 ರನ್‌ಗಳು ಸಿಕ್ಸರ್‌ ಮತ್ತು ಬೌಂಡರಿಗಳಿಂದಲೇ ಬಂದವು.

ಶತಕದೆಡೆಗೆ ದಾಪುಗಾಲಿಟ್ಟಿದ್ದ ತಾಹಾ ಅವರು ಸಕುಜಾ ಎಸೆತದಲ್ಲಿ ಮತ್ತೊಂದು ಸಿಕ್ಸರ್‌ಗೆ ಪ್ರಯತ್ನಿಸಿ ಕ್ರಾಂತಿಕುಮಾರ್‌ಗೆ ಕ್ಯಾಚಿತ್ತರು. ಅವರು ಔಟಾಗುವ ವೇಳೆ ಗೆಲುವಿಗೆ ಇನ್ನೂ 28 ರನ್‌ಗಳು ಬೇಕಿದ್ದವು. ಎ.ಎಂ.ಕಿರಣ್‌ (ಔಟಾಗದೆ 20, 12 ಎಸೆತ) ಅವರು ಮಿಥುನ್ ಜತೆಗೂಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಸಂಘಟಿತ ಪ್ರಯತ್ನ: ಮೊದಲು ಬ್ಯಾಟ್‌ ಮಾಡಿದ ಟೈಗರ್ಸ್‌ ತಂಡ ಎಲ್ಲ ಆಟಗಾರರ ಉಪಯುಕ್ತ ಬ್ಯಾಟಿಂಗ್‌ ನೆರವಿನಿಂದ ಸವಾಲಿನ ಮೊತ್ತ ಪೇರಿಸಿತು. ಈ ತಂಡದ ಯಾರೂ ಅರ್ಧಶತಕ ಗಳಿಸಲಿಲ್ಲ. 31 ಎಸೆತಗಳಲ್ಲಿ 34 ರನ್‌ ಗಳಿಸಿದ ಕೆ.ವಿ.ಸಿದ್ದಾರ್ಥ್‌ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಮಯಂಕ್‌ ಅಗರವಾಲ್‌ (33; 26 ಎಸೆತ, 4 ಬೌಂ), ಕ್ರಾಂತಿಕುಮಾರ್‌ (27; 14 ಎಸೆತ, 2 ಬೌಂ, 2 ಸಿ) ಮತ್ತು ವೈ.ಸ್ವಪ್ನಿಲ್‌ (23; 20 ಎಸೆತ) ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.

22 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಕುಸಿತ ಅನುಭವಿಸಿದ್ದ ತಂಡಕ್ಕೆ ಮಯಂಕ್‌ ಮತ್ತು ಸಿದ್ದಾರ್ಥ್‌ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್‌ಗೆ 37 ರನ್‌ ಸೇರಿಸಿತು. ಪ್ರವೀಣ್‌ ದುಬೆ (16 11 ಎಸೆತ) ಮತ್ತು ಕ್ರಾಂತಿಕುಮಾರ್‌ ಏಳನೇ ವಿಕೆಟ್‌ಗೆ 18 ಎಸೆತಗಳಲ್ಲಿ 39 ರನ್‌ಗಳ ಜತೆಯಾಟ ನೀಡಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್‌: ಹುಬ್ಬಳ್ಳಿ ಟೈಗರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 159 (ಕೆ.ವಿ.ಸಿದ್ದಾರ್ಥ್‌ 34, ಮಯಂಕ್‌ ಅಗರವಾಲ್‌ 33, ಕ್ರಾಂತಿ ಕುಮಾರ್‌ 27, ಸ್ವಪ್ನಿಲ್‌ ವೈ. 23, ಪ್ರವೀಣ್‌ ದುಬೆ 16; ಎಂ.ಜಿ.ನವೀನ್‌ 13ಕ್ಕೆ 2, ರೋನಿತ್‌ ಮೋರೆ 27ಕ್ಕೆ 2, ಕೆ.ಸಿ.ಕಾರ್ಯಪ್ಪ 25ಕ್ಕೆ 1, ಅಭಿಮನ್ಯು ಮಿಥುನ್‌ 39ಕ್ಕೆ 1, ಪೃಥ್ವಿರಾಜ್‌ ಶೆಖಾವತ್‌ 33ಕ್ಕೆ 1); ಬಿಜಾಪುರ ಬುಲ್ಸ್‌ 18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 162 (ಮೊಹಮ್ಮದ್‌ ತಾಹಾ 83, ಎಂ.ನಿದೇಶ್‌ 29, ಎ.ಎಂ.ಕಿರಣ್‌ ಔಟಾಗದೆ 20, ಅಭಿಷೇಕ್‌ ಸಕುಜಾ 21ಕ್ಕೆ 4). ಬಿಜಾಪುರ ಬುಲ್ಸ್‌ಗೆ 4 ವಿಕೆಟ್‌ ಜಯ; ಪಂದ್ಯಶ್ರೇಷ್ಠ: ಮಹಮ್ಮದ್‌
ತಾಹಾ.

*

ಟಸ್ಕರ್ಸ್‌ಗೆ ಗೆಲುವು: ಅಭಿನವ್‌ ಮನೋಹರ್‌ (47) ಮತ್ತು ಸಿ.ಎಂ.ಗೌತಮ್‌ (ಔಟಾಗದೆ 45) ಅವರ ಭರ್ಜರಿ ಆಟದ ನೆರವಿನಿಂದ ಬಳ್ಳಾರಿ ಟಸ್ಕರ್ಸ್‌ ತಂಡ ಎರಡನೇ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಮೈಸೂರು ವಾರಿಯರ್ಸ್‌ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ವಾರಿಯರ್ಸ್‌ ತಂಡ ಸುನಿಲ್‌ ರಾಜು (78; 51 ಎ, 5 ಸಿ, 1 ಬೌಂ) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್‌ ಗಳಿಸಿತು. ಟಸ್ಕರ್ಸ್ 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌: ಮೈಸೂರು ವಾರಿಯರ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 161 (ಸುನಿಲ್‌ ರಾಜು 78, ಅರ್ಜುನ್‌ ಹೊಯ್ಸಳ 23, ಕೆ.ಎಲ್‌.ಶ್ರೀಜಿತ್‌ 16; ಜಹೂರ್‌ ಫರೂಕಿ 30ಕ್ಕೆ 2, ಅಮಿತ್‌ ವರ್ಮಾ 41ಕ್ಕೆ 1); ಬಳ್ಳಾರಿ ಟಸ್ಕರ್ಸ್‌ 19.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 163 (ಸಿ.ಎಂ.ಗೌತಮ್‌ ಔಟಾಗದೆ 45, ಅಭಿನವ್‌ ಮನೋಹರ್‌ 47, ಅಮಿತ್‌ ವರ್ಮಾ 27, ಕೆ.ಬಿ.ಪವನ್‌ 26; ಶ್ರೇಯಸ್‌ ಗೋಪಾಲ್‌ 19ಕ್ಕೆ 2) ಫಲಿತಾಂಶ: ಟಸ್ಕರ್ಸ್‌ಗೆ 5 ವಿಕೆಟ್‌ ಜಯ.

**

ಸಿಕ್ಸರ್‌ಗಳಲ್ಲಿ ದಾಖಲೆ

ಕೆ‍‍ಪಿಎಲ್‌ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಕೀರ್ತಿಗೂ ತಾಹಾ ಭಾಜನರಾದರು. 2015 ರ ಟೂರ್ನಿಯಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡದ ಪರ ಆಡಿದ್ದ ಮಯಂಕ್‌ ಅಗರವಾಲ್‌ ಅವರು ಹುಬ್ಬಳ್ಳಿ ಟೈಗರ್ಸ್‌ ವಿರುದ್ಧದ ಪಂದ್ಯದಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

*

ದಾಖಲೆಯ 9 ಸಿಕ್ಸರ್‌ ಸಿಡಿಸಿದ ಮಹಮ್ಮದ್‌ ತಾಹಾ

ಸಕುಜಾ (21ಕ್ಕೆ 4) ಬೌಲಿಂಗ್‌ ಶ್ರಮಕ್ಕೆ ದೊರೆಯದ ಫಲ

45 ಎಸೆತಗಳಲ್ಲಿ 83 ರನ್‌ಗಳನ್ನು ಚಚ್ಚಿದ ತಾಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT