ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಲೆಕೆಳಗಾಗುತ್ತಿದೆ ಶಿಕ್ಷಣ ವ್ಯವಸ್ಥೆ’

ಪ್ರೊ ವಿ.ಕೃ. ಗೋಕಾಕ್‌ ಪ್ರಶಸ್ತಿ, ಭಾರತೀಯ ವಿದ್ಯಾಭವನ
Last Updated 10 ಸೆಪ್ಟೆಂಬರ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲಾ ಕಡೆಗಳಿಂದ ಭರಪೂರ ಮಾಹಿತಿ ಸಿಗುತ್ತಿರುವುದರಿಂದ ಶಿಕ್ಷಣ ವ್ಯವಸ್ಥೆಯೇ ತಲೆಕೆಳಗಾಗಿದೆ. ಕಿರಿಯರಿಂದ ಹಿರಿಯರು ಪಾಠ ಹೇಳಿಸಿಕೊಳ್ಳಬೇಕಾದ ವಿಲಕ್ಷಣ ವಿದ್ಯಮಾನ ನಮ್ಮ ನಡುವೆ ನಡೆಯುತ್ತಿದೆ’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಭಾನುವಾರ ಆಯೋಜಿದ್ದ ಕಾರ್ಯಕ್ರಮದಲ್ಲಿ ‘ಪ್ರೊ ವಿ.ಕೃ. ಗೋಕಾಕ್‌ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಗುರುಗಳ ಮೂಲಕ ದೊರೆಯುತ್ತಿದ್ದ ಮಾಹಿತಿ ಈಗ ತಂತ್ರಜ್ಞಾನದ ಮೂಲಕ ಸಿಗುತ್ತಿದೆ. ಹಾಗಾಗಿ ತರಗತಿಗಳಲ್ಲಿ ಮಕ್ಕಳಿಗೆ ಗೊತ್ತಿರುವ ಮಾಹಿತಿ ನೀಡುವುದರ ಬದಲಿಗೆ ಪ್ರಜ್ಞಾವಂತ ಚಿಂತನೆಯನ್ನು ಕಲಿಸಿ ಕೊಡಬೇಕು’ ಎಂದು ಸಲಹೆ ನೀಡಿದರು.

‘ಮಾರುಕಟ್ಟೆ ಹೇಗೆ ನಮ್ಮನ್ನು ಆಳುತ್ತಿದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಬಾಟಲಿ ನೀರನ್ನು ವ್ಯಾಪಾರ ಮಾಡಲು ಕಂಪೆನಿಗಳು ‘ನಲ್ಲಿ ನೀರು’ ಕುಡಿಯಲು ಯೋಗ್ಯವಲ್ಲ ಎಂಬ ಕಲ್ಪನೆಯನ್ನು ಬಿತ್ತಿವೆ. ಪ್ರತಿ ಮನೆಗೆ ನೀರು ಸರಬರಾಜು ಮಾಡಲು ಜಲಮಂಡಳಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಈ ವಿಷಯಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು’ ಎಂದರು.

‘ಬಹುರಾಷ್ಟ್ರೀಯ ಕಂಪೆನಿಗಳು ಹೇಗೆ ಮಕ್ಕಳನ್ನು ಕೇಂದ್ರಿಕೃತವಾಗಿಸಿಕೊಂಡು ತಮ್ಮ ಮಾರುಕಟ್ಟೆಯನ್ನು ಬೆಳೆಸಿಕೊಳ್ಳುತ್ತಿವೆ. ಅದೇ ವಿಧಾನವನ್ನು ನಾವು ಸಕಾರಾತ್ಮಕ ಸಂಗತಿಗಾಗಿ ಬಳಸಬೇಕು. ಮಕ್ಕಳಲ್ಲಿ ಬದಲಾವಣೆ ಕಂಡುಬಂದರೆ ಅದರ ವ್ಯಾಪ್ತಿ ಹೆಚ್ಚಾಗಿರುತ್ತದೆ. ಈ ವಿಷಯವನ್ನು ಬಹಳಷ್ಟು ಜನರಿಗೆ ತಲುಪಿಸಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ‘ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗುತ್ತಿದೆ. ಆದರೆ, ಅಂತಿಮವಾಗಿ ಮನುಷ್ಯನಲ್ಲಿ ಇರಬೇಕಾದ ಮಾನವೀಯತೆ ಮತ್ತು ನಿಸ್ವಾರ್ಥ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದೆ’ ಎಂದು ಹೇಳಿದರು.

ಪ್ರಶಸ್ತಿಯು ₹10,000 ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT