ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಸಾವಿರ ಅಕ್ರಮ ಕಟ್ಟಡ ಪತ್ತೆ!

Last Updated 11 ಸೆಪ್ಟೆಂಬರ್ 2017, 4:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡಗಳ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚಿರುವುದು ಮಹಾನಗರ ಪಾಲಿಕೆಯ ಪ್ರಾಥಮಿಕ ಸರ್ವೆಯಲ್ಲಿ ಪತ್ತೆಯಾಗಿವೆ.

ಕೃಷಿ ಭೂಮಿಯನ್ನು ಎನ್‌ಎ(ಕೃಷಿಯೇತರ ಭೂಮಿ) ಮಾಡದೆ ಅಕ್ರಮವಾಗಿ ತಲೆ ಎತ್ತಿರುವ ಬಡಾವಣೆಗಳ ಸಂಖ್ಯೆಯೂ ಹತ್ತಾರು ಇದ್ದು, ಈ ಬಡಾವಣೆಗಳಲ್ಲಿ ಸಾವಿರಾರು ಮನೆಗಳು, ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿವೆ. ಜೊತೆಗೆ ಉದ್ಯಾನ, ರಾಜಕಾಲುವೆ, ರಸ್ತೆಗಳನ್ನು ಒತ್ತುವರಿ ಮಾಡಿ ಅನೇಕ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಪಾಲಿಕೆ ಕಟ್ಟಡವನ್ನು ಬಾಡಿಗೆಗೆ ಅಥವಾ ಲೀಸ್‌ಗೆ ಪಡೆದು, ಅವುಗಳನ್ನು ಬೇರೆಯವರಿಗೆ(ಸಬ್‌ ಲೀಸ್‌) ಹೆಚ್ಚಿನ ದರಕ್ಕೆ ಉಪ ಬಾಡಿಗೆ ನೀಡಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ನಗರದ ಹೊರವಲಯಗಳಲ್ಲಿ ಕೆಲ ಕಂಪೆನಿಗಳು ಬೃಹತ್‌ ವಾಣಿಜ್ಯ ಗೋದಾಮುಗಳನ್ನು ನಿರ್ಮಿಸಿಕೊಂಡು ಕಾನೂನು ಉಲ್ಲಂಘಿಸಲಾಗಿದೆ.

ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಜನಪ್ರತಿನಿಧಿಗಳ ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವುದು ಸರ್ವೆಯಲ್ಲಿ ಪತ್ತೆಯಾಗಿವೆ.

ಶೀಘ್ರದಲ್ಲೇ ಮತ್ತೊಂದು ಸರ್ವೆ: ‘ಅವಳಿ ನಗರದಲ್ಲಿ ಶೇ 10ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳಿರುವುದು ಪತ್ತೆಯಾಗಿದ್ದು, ಅಕ್ರಮ ಕಟ್ಟಡಗಳ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಲು ಶೀಘ್ರದಲ್ಲೇ ಮತ್ತೊಂದು ಸರ್ವೆ ನಡೆಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಕ್ರಮ ಕಟ್ಟಡಗಳ ಪತ್ತೆ ಹಚ್ಚಲು ಪಾಲಿಕೆ ಬಳಿ ಸಿಬ್ಬಂದಿ ಕೊರತೆ ಇದೆ. ಕೇವಲ ಇಬ್ಬರೇ ಸರ್ವೆ ಅಧಿಕಾರಿಗಳಿದ್ದಾರೆ. ಇನ್ನೂ ನಾಲ್ಕು ಮಂದಿ ಅಧಿಕಾರಿಗಳ ಅಗತ್ಯವಿದೆ’ ಎಂದು ಅವರು ಹೇಳಿದರು.

‘ಎರಡನೇ ಸುತ್ತಿನ ವರದಿ ಬಂದ ಬಳಿಕ ಎಲ್ಲ ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಿ, ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಿ ಪಾಲಿಕೆಯ ಆಸ್ತಿ ಸಂರಕ್ಷಿಸಲಾಗುವುದು’ ಎಂದರು.

‘ಕೃಷಿಯೇತರ ಭೂಮಿಯಲ್ಲಿ ನಿರ್ಮಾಣವಾಗಿರುವ ಹೊಸ ಬಡಾವಣೆಗಳಲ್ಲಿ ಉದ್ಯಾನ, ಸಾರ್ವಜನಿಕ ಉಪಯೋಗಕ್ಕೆ ಜಾಗವನ್ನು ಮೀಸಲಿಟ್ಟಿಲ್ಲ. ಅಂಥ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಅಲ್ಲಿನ ನಿವಾಸಿಗಳಿಗೆ ನೀರು, ವಿದ್ಯುತ್‌, ಚರಂಡಿ, ರಸ್ತೆ ಸೌಲಭ್ಯಗಳು ಸಿಗದೇ ಪರದಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT