ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರವಾದ–ಹಿಂದುತ್ವವಾದ ಭಿನ್ನವಲ್ಲ

Last Updated 11 ಸೆಪ್ಟೆಂಬರ್ 2017, 5:33 IST
ಅಕ್ಷರ ಗಾತ್ರ

ಶಿರಸಿ: ‘ರಾಷ್ಟ್ರವಾದ ಮತ್ತು ಹಿಂದುತ್ವ ವಾದವನ್ನು ಭಿನ್ನವಾಗಿ ನೋಡುವುದು ಮೂರ್ಖರ ಲಕ್ಷಣ. ಇವೆರಡರಲ್ಲೂ ಯಾವುದೇ ಅಂತರವಿಲ್ಲ. ಇದು ನನ್ನದೊಂದೇ ವಿಚಾರವಲ್ಲ, ಕೋಟ್ಯಂತರ ಜನರ ಭಾವನೆಯಾಗಿದೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಭಾನುವಾರ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕರ್ನಾಟಕ ಸರ್ಕಾರದ ಮೂರ್ಖತನದ ಪರಿಣಾಮವಾಗಿ ಮಹದಾಯಿ ಸಮಸ್ಯೆ ಜೀವಂತವಾಗಿದೆ. ಮಹಾರಾಷ್ಟ್ರ, ಗೋವಾ ಸರ್ಕಾರ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಪ್ರಮುಖರು ಸೇರಿ ಈ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಆದರೆ ಕಾಂಗ್ರೆಸ್ ದುರಹಂಕಾರದ ವರ್ತನೆಯನ್ನು ನಿಲ್ಲಿಸಲಿ’ ಎಂದು ಪ್ರತಿಕ್ರಿಯಿಸಿದರು.

‘ಸಾಮಾನ್ಯ ಜನರಿಗೆ ಅನುಕೂಲ­ವಾಗುವ ಅನೇಕ ಯೋಜನೆಗಳು ನಮ್ಮ ಇಲಾಖೆಯಲ್ಲಿವೆ. ಕೌಶಲ ಅಭಿವೃದ್ಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಲ್ಪನೆಯಾಗಿದೆ. ಕೌಶಲಾಭಿವೃದ್ಧಿ ಅಡಿಯಲ್ಲಿ ಸುಮಾರು 2600 ಉದ್ಯೋಗಗಳನ್ನು ಗುರುತಿಸಲಾಗಿದೆ.

ಸಾಮಾನ್ಯ ಕೆಲಸಗಳೊಂದಿಗೆ ವಿಜ್ಞಾನ, ತಂತ್ರಜ್ಞಾನ ಒಳಗೊಂಡ ಕೌಶಲಗಳನ್ನು ಗುರುತಿಸಿ ಸರ್ಕಾರದಿಂದ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲವನ್ನೂ ಕ್ರೋಡೀಕರಿಸಿ ದೇಶದ ಜನರಿಗೆ ಅನುಕೂಲವಾಗುವ ಹೊಸ ಯೋಜನೆ ಜಾರಿಗೆ ತರಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕಳೆದ ಐದು ಅವಧಿಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಈ ಕ್ಷೇತ್ರದ ಜನರು ತೋರಿರುವ ಪ್ರೀತಿ, ವಿಶ್ವಾಸ ನಾನು ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ. ಈ ದೇಶ ಕೊಟ್ಟಿರುವ ಜವಾಬ್ದಾರಿ ನಿರ್ವಹಣೆಯ ಜೊತೆಗೆ ಈ ಮಣ್ಣಿನ ಸೇವೆ ಮಾಡಲು ಇದು ಅವಕಾಶವಾಗಿದೆ. ಜಿಲ್ಲೆಯ ಸೀಬರ್ಡ್ ನಿರಾಶ್ರಿತರ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಬರುವ ದಿನಗಳಲ್ಲಿ ಅವು ಪರಿಹಾರವಾಗುವ ಭರವಸೆ ಇದೆ’ ಎಂದು ಅನಂತಕುಮಾರ್ ಹೇಳಿದರು.

ಅನಂತಕುಮಾರ್ ಹೆಗಡೆ ಅವರನ್ನು ರಾಜ್ಯದಲ್ಲಿ ದೊಡ್ಡ ನಾಯಕರನ್ನಾಗಿ ರೂಪಿಸುವ ತಂತ್ರ ನಡೆದಿದೆ ನಿಜವೇ ಎಂಬ ಪ್ರಶ್ನೆಗೆ, ‘ತಲೆಬುಡ ಇಲ್ಲದ ವಿಶ್ಲೇಷಣಾಕಾರರ ತರ್ಕಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ’ ಎಂದ ಅವರು, ‘ನೀವು ಕರ್ನಾಟಕದ ಯೋಗಿ ಆದಿತ್ಯನಾಥ ಆಗಬಹುದೇ’ ಎಂದು ಕೇಳಿದ್ದಕ್ಕೆ ‘ನನಗೆ ಅಂತಹ ಯಾವುದೇ ಕನಸು ಬಿದ್ದಿಲ್ಲ’ ಎಂದರು.

ಅಮ್ಮನಿಂದ ಮನೆಗೆ ಸ್ವಾಗತ
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಬಾರಿಗೆ ಶಿರಸಿಯ ಕೆ.ಎಚ್‌.ಬಿ ಕಾಲೊನಿಯಲ್ಲಿರುವ ಮನೆಗೆ ಪತ್ನಿ ರೂಪಾ ಹೆಗಡೆ ಜೊತೆ ಬಂದಿದ್ದ ಅನಂತಕುಮಾರ್ ಹೆಗಡೆ ಅವರನ್ನು ತಾಯಿ ಲಲಿತಾ ಹೆಗಡೆ ಬರಮಾಡಿಕೊಂಡರು. ಕುಟುಂಬದ ಸದಸ್ಯರು ಅನಂತಕುಮಾರ್ ದಂಪತಿಗೆ ಹಾನ ಬಳಿದು, ತೆಂಗಿನಕಾಯಿ ಸುಳಿದರು. ಮನೆಯ ಒಳಗೆ ಹೋದ ಸಚಿವರು ತಂದೆ–ತಾಯಿ ಕಾಲಿಗೆರಗಿ ನಮಸ್ಕರಿಸಿದರು.

ಜಿಲ್ಲೆಯ ವಿವಿಧ ಭಾಗಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಚಿವರ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ, ಕುಮಟಾದ ದಿನಕರ ಶೆಟ್ಟಿ, ಹಳಿಯಾಳದ ಸುನೀಲ ಹೆಗಡೆ, ಯಲ್ಲಾಪುರದ ಪ್ರಮೋದ ಹೆಗಡೆ, ಕಾರವಾರದ ರೂಪಾಲಿ ನಾಯ್ಕ, ಇನ್ನೂ ಹಲವು ಮುಖಂಡರಿದ್ದರೂ, ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಪಸ್ಥಿತಿ ಎದ್ದುಕಂಡಿತು.

ತಾಲ್ಲೂಕಿನ ಗಡಿಭಾಗವಾದ ದಾಸನಕೊಪ್ಪದಲ್ಲಿ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ, ಡಿವೈಎಸ್ಪಿ ನಾಗೇಶ ಶೆಟ್ಟಿ, ತಹಶೀಲ್ದಾರ್ ಬಸಪ್ಪ ಪೂಜಾರಿ ಅವರು ಪುಷ್ಪಗುಚ್ಛ ನೀಡಿ ಸಚಿವರನ್ನು ಸ್ವಾಗತಿಸಿದರು. ಸಚಿವರು ವಿವೇಕಾನಂದ ನಗರದ ಮಹಾಗಣಪತಿ ದೇವಾಲಯ, ಮಾರಿಕಾಂಬಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

* * 

ರಾಜ್ಯ ರಾಜಕಾರಣಕ್ಕೆ ಬರುವ ಮೂರ್ಖ ಕಲ್ಪನೆ ನನಗೆ ಬಂದಿಲ್ಲ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದ ಶೈಲಿ ಅದಾಗಿತ್ತು
ಅನಂತಕುಮಾರ್ ಹೆಗಡೆ, 
ಕೇಂದ್ರ ಕೌಶಲಾಭಿವೃದ್ಧಿ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT