ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ವರವಾದ ಮಳೆ; ತೊಗರಿ ಬೆಳೆ ಚೇತರಿಕೆ

Last Updated 11 ಸೆಪ್ಟೆಂಬರ್ 2017, 6:56 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಉತ್ತಮ ಮಳೆಯಿಂದ ತೊಗರಿ ಬೆಳೆ ಚೇತರಿಸಿಕೊಂಡಿದೆ. ಬಯಲು ನಾಡಿನ ರೈತರ ವಾಣಿಜ್ಯ ಬೆಳೆ ಎನಿಸಿದ ತೊಗರಿ ಬೆಳೆಗೆ ಮಳೆ ಪೂರಕವಾಗಿದ್ದು ದಿನದಿಂದ ದಿನಕ್ಕೆ ಬೇಳೆ ಬದಲಾಗುತ್ತ ಸಾಗಿದೆ.

ಉದ್ದು, ಹೆಸರು, ಸೋಯಾ ಮಧ್ಯೆ ಮಿಶ್ರ ಬೆಳೆಯಾಗಿ ಬೇಸಾಯ ನಡೆಸುತ್ತಿರುವ ತೊಗರಿ ಬೆಳೆಯೂ ಹೆಸರು ಹಾಗೂ ರಾಶಿಯ ನಂತರ ರಂಟೆ ಹೊಡೆದಿದ್ದರಿಂದ ಬೆಳೆ ನಳನಳಿಸುತ್ತಿದೆ ಎಂದು ರೈತ ಶಿವಕುಮಾರ ಗುಡಪಳ್ಳಿ ತಿಳಿಸಿದ್ದಾರೆ. ಕೆಲವು ಕಡೆ ಸರಿಯಾಗಿ ನಿರ್ವಹಣೆ ಇಲ್ಲದೇ ಬೆಳೆಯ ಮಧ್ಯೆ ಕಳೆ ಬೆಳೆದು ಬೆಳೆ ನಲುಗಿರುವುದು ತಗ್ಗು ಪ್ರದೇಶದ ಹೊಲಗಳಲ್ಲಿ ಕಂಡುಬಂದಿದೆ.

ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 47,600 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೇಸಾಯ ನಡೆಸಲಾಗುತ್ತಿದೆ. ಕಡಿಮೆ ಸುರಿದ ಕಡೆಗಳಲ್ಲಿ ತೊಗರಿ ಬೆಳವಣಿಗೆ ಕುಸಿತವಿದ್ದು, ಅದನ್ನು ಹರಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಉಳಿದ ಕಡೆಗಳಲ್ಲಿ ಬೆಳೆ ಉತ್ತಮ ಬೆಳವಣಿಗೆಯಲ್ಲಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ತೊಗರಿ ಬೆಳೆಯುವ ತಾಲ್ಲೂಕುಗಳಲ್ಲಿ ಚಿಂಚೋಳಿಯೂ ಒಂದಾಗಿದೆ.

ಹೋಬಳಿಯ ಕುಂಚಾವರಂ ಸುತ್ತಲೂ ಕಬ್ಬು ಬೆಳೆ ಹೆಚ್ಚಾಗಿದ್ದರೆ, ಸುಲೇಪೇಟ, ಕೋಡ್ಲಿ, ಐನಾಪುರ ಮತ್ತು ಚಿಂಚೋಳಿ ಹೋಬಳಿ ವಲಯದಲ್ಲಿ ತೊಗರಿ ಬೆಳೆ ಹೆಚ್ಚಾಗಿ ಬೇಸಾಯ ನಡೆಸಲಾಗುತ್ತಿದೆ.

ಹಿಂಗಾರು ಬಿತ್ತನೆಗೆ ಸಿದ್ಧತೆ: ತಾಲ್ಲೂಕಿನಲ್ಲಿ ರೈತರು ಅಲ್ಪಾವಧಿಯ ಬೆಳೆಗಳ ರಾಶಿಯಲ್ಲಿ ತೊಡಗಿದ್ದರೆ, ಕೆಲವರು ಹೊಲ ಹಸನು ಮಾಡಿ ಹಿಂಗಾರು ಬಿತ್ತನೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ರಾಶಿಗೆ ರಾಶಿವಾಹನಗಳು ಮತ್ತು ರಾಶಿಯಂತ್ರಗಳ ರೈತರಿಗೆ ನೆರವಾಗಿದ್ದು, ಕೆಲವು ಕಡೆ ರೈತರು ಒಂದೇ ಬೆಳೆ ಬೇಸಾಯ ನಡೆಸಿದ ಹೊಲಗಳಲ್ಲಿ ರಂಟೆ ಹೊಡೆದು ಜೋಳ, ಕಡಲೆ ಮೊದಲಾದ ಬೆಳೆ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಉದ್ದು, ಹೆಸರು, ಸೋಯಾ ಬೆಳೆ ಮತ್ತು ತೊಗರಿ ವೈಫಲ್ಯದಿಂದ ಹಿಂಗಾರಿನ ಬಿತ್ತನೆ ಕ್ಷೇತ್ರ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸಕ್ತ ವರ್ಷ ಕೆರೋಳ್ಳಿ ಮತ್ತು ಶಿರೋಳ್ಳಿಯಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ. ಉಳಿದಂತೆ ಐನಾಪುರದಲ್ಲಿ ಕೇವಲ ಆಗಸ್ಟ್‌ ತಿಂಗಳಲ್ಲಿಯೇ 284 ಮಿ.ಮೀ ಮಳೆ ವರದಿಯಾಗಿದೆ.

ಬಿತ್ತನೆ ಬೀಜ ದಾಸ್ತಾನಿಗೆ ಕ್ರಮ: ತಾಲ್ಲೂಕಿನಲ್ಲಿ ಜೋಳ, ಕಡಲೆ ಮೊದ ಲಾದ ಬಿತ್ತನೆ ಬೀಜಗಳನ್ನು ಶೇ 50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಕೃಷಿ ಇಲಾಖೆ ಮುಂದಾಗಿದೆ. ಶೀಘ್ರವೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ದಾಸ್ತಾನು ಮಾಡಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಪ್ಪ ಗಡಗಿಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT