ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕ್ರೀಡಾಂಗಣ; ಅವ್ಯವಸ್ಥೆಯ ತಾಣ

Last Updated 11 ಸೆಪ್ಟೆಂಬರ್ 2017, 7:34 IST
ಅಕ್ಷರ ಗಾತ್ರ

ಚಾಮರಾಜನಗರ: ‘ಒಂದು ಕಾಲದಲ್ಲಿ ಸುತ್ತಮುತ್ತಲ ಹಳ್ಳಿಗಳಿಗೆ ಸಾಲುವಷ್ಟು ನೀರು ಹೊಂದಿದ್ದ ಬೃಹತ್‌ ಕೆರೆ ಇದು. ಈಗ ಇದರಲ್ಲಿ ನೀರು ತುಂಬಿಕೊಂಡರೆ ಆಶ್ಚರ್ಯವೇನೂ ಇಲ್ಲ. ಪಾಳು ಬಿದ್ದಿದೆ ಎಂಬ ಕಾರಣಕ್ಕೆ ಅದನ್ನು ಮುಚ್ಚಿದ್ದರ ಪರಿಣಾಮ ಇದು’ ಎಂದು ನಗರದ ಹಿರಿಯರೊಬ್ಬರು ಜನಪ್ರತಿನಿಧಿಗಳನ್ನು ದೂಷಿಸತೊಡಗಿದರು.

ಸಣ್ಣನೆ ಮಳೆಬಂದರೂ ನೀರು ಹರಿಯಲು ಜಾಗವಿಲ್ಲದೆ ತನ್ನ ಹಿಂದಿನ ಅಸ್ತಿತ್ವವನ್ನು ನೆನಪಿಸುವ ಸ್ಥಳ ಡಾ. ಬಿ.ಆರ್. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣ. ಚಾಮರಾಜನಗರ ಜಿಲ್ಲೆಯಾಗಿ ರಚನೆಯಾದ ಸಂದರ್ಭದಲ್ಲಿ ಆಗಿನ ಶಾಸಕ ವಾಟಾಳ್‌ ನಾಗರಾಜ್‌, ನೀರಿಲ್ಲದೆ ಒಣಗಿದ್ದ ಕೆರೆಯನ್ನು ಕ್ರೀಡಾಂಗಣವಾಗಿ ಪರಿವರ್ತಿಸುವ ಪ್ರಸ್ತಾವವಿಟ್ಟರು.

ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭವಾಗಿದ್ದು 2002ರಲ್ಲಿ. 15 ವರ್ಷ ಕಳೆದರೂ ಅದರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಈ ನಡುವೆ, ಆಗಾಗ್ಗೆ ಸುರಿಯುವ ಮಳೆಗೆ ಕ್ರೀಡಾಂಗಣ ತನ್ನ ಹಳೆಯ ಚಹರೆಯನ್ನು ನೆನಪಿಸುತ್ತಿರುತ್ತದೆ. ‘ಈ ಕೆರೆ ಒಣಗಿದ್ದರೂ, ಮಳೆ ನೀರು ಸಂಗ್ರಹವಾಗುತ್ತಿದ್ದರಿಂದ ನಗರದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿತ್ತು’ ಎಂದು ಕೆಲವರು ಹೇಳುತ್ತಾರೆ.

ಮಳೆಯಿಂದ ಕೆಸರಮಯವಾಗುವ ಇಲ್ಲಿ ಓಡಾಡಲೂ ಹರಸಾಹಸಪಡಬೇಕು. ಇಲ್ಲಿನ ಕ್ರೀಡಾ ವಿದ್ಯಾರ್ಥಿನಿಲಯದಲ್ಲಿನ ವಿದ್ಯಾರ್ಥಿಗಳು ನಿತ್ಯ ಕೆಸರಿನಲ್ಲಿಯೇ ಸಾಗಬೇಕಾಗಿದೆ.
ತೀರಾ ತಗ್ಗಿನ ಪ್ರದೇಶವಾಗಿರುವುದರಿಂದ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ತುಸು ಎತ್ತರಿಸಿ ನಿರ್ಮಿಸಿದ್ದರೂ ಇಷ್ಟು ಅವಾಂತರಗಳು ಉಂಟಾಗುತ್ತಿರಲಿಲ್ಲ ಎನ್ನುವುದು ಜನರ ಅಭಿಪ್ರಾಯ.

ಈಡೇರದ ಭರವಸೆ: ಇತ್ತ ಕೆರೆಯಾಗಿಯೂ ಉಳಿಯದೆ, ಅತ್ತ ಗುಣಮಟ್ಟದ ಪರಿಪೂರ್ಣ ಕ್ರೀಡಾಂಗಣವೂ ಆಗದೆ ಅವ್ಯವಸ್ಥೆಯ ತಾಣವಾಗಿ ಪರಿಣಮಿಸಿದೆ. ₹7 ಕೋಟಿ ಅನುದಾನ ಬಿಡುಗಡೆಯಾಗಿದೆ. ಸುತ್ತಲೂ ಚರಂಡಿ, ಪ್ರವೇಶದ್ವಾರ, ರಸ್ತೆ, ಇನ್ನೊಂದು ಭಾಗದ ಪ್ರೇಕ್ಷಕರ ಗ್ಯಾಲರಿ, ಈಜುಕೊಳಗಳ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಲವು ತಿಂಗಳಿನಿಂದ ಭರವಸೆ ನೀಡುತ್ತಿದ್ದರೂ, ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಒಂದು ಭಾಗದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆಯ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ, ಅಲ್ಲಿ ಇನ್ನೂ ಚರಂಡಿ ವ್ಯವಸ್ಥೆ ಮಾಡದ ಕಾರಣ ಮಳೆ ಬಂದಾಗ ಟ್ರ್ಯಾಕ್‌ ಮೇಲೆ ನೀರು ನಿಂತುಕೊಳ್ಳುತ್ತದೆ. ಇದರಿಂದ ಅದು ಬೇಗನೆ ಹಾಳಾಗುವ ಅಪಾಯವಿದೆ.

ಪರಿಕರಗಳೂ ಮೂಲೆಗೆ: ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ತಂದಿರುವ ಪರಿಕರಗಳು ಬಳಕೆಯಾಗದೆ ವ್ಯರ್ಥವಾಗಿ ಹಾಳಾಗುತ್ತಿವೆ. ಲೆದರ್ ಬಾಲ್‌ ಕ್ರಿಕೆಟ್‌ ತರಬೇತಿಗಾಗಿ ನಿರ್ಮಿಸಿರುವ ಕಾಂಕ್ರೀಟ್‌ ಪಿಚ್‌ ಬಹುತೇಕ ಕಿತ್ತುಹೋಗಿದೆ. ಮ್ಯಾಟ್‌ ಕ್ರೀಡಾಂಗಣದಲ್ಲಿಯೇ ಬಿದ್ದು ಹಾಳಾಗುತ್ತಿದೆ.

ಕ್ರೀಡಾಳುಗಳು ದೈಹಿಕ ಕಸರತ್ತು ನಡೆಸಲು ಅಳವಡಿಸಿರುವ ಕಬ್ಬಿಣದ ಸಾಮಗ್ರಿಗಳು ತುಕ್ಕು ಹಿಡಿದಿವೆ. ಇವುಗಳ ಸುತ್ತಲೂ ಕಳೆಗಿಡಗಳು ಬೆಳೆದುಕೊಂಡಿವೆ. ‘ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ನಡೆದಿದೆ. ಮಳೆ ಬರುತ್ತಿರುವ ಕಾರಣ ವಿಳಂವಾಗುತ್ತಿದೆ. ಶೀಘ್ರದಲ್ಲಿಯೇ ಕಾಮಗಾರಿಗಳು ಆರಂಭವಾಗಲಿವೆ’ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT