ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಫುಟ್‌‍ಪಾತ್ ದುರಸ್ತಿ ಯಾವಾಗ?

Last Updated 11 ಸೆಪ್ಟೆಂಬರ್ 2017, 9:52 IST
ಅಕ್ಷರ ಗಾತ್ರ

ಶಿವಮೊಗ್ಗ: ಬಾಲರಾಜ್ ಅರಸ್ ರಸ್ತೆಗೆ ಹೊಂದಿಕೊಂಡಂತೆ ಇರುವ ಪಾದಚಾರಿ ಮಾರ್ಗ ಕುಸಿದ ಪರಿಣಾಮ ನಾಗರಿಕರು ಈ ಭಾಗದಲ್ಲಿ ಆತಂಕದಲ್ಲೇ ಓಡಾಡುತ್ತಿದ್ದಾರೆ.
ಜನನಿಬಿಡ ವೃತ್ತಗಳಲ್ಲಿ ಒಂದಾದ ಮಹಾವೀರ ವೃತ್ತದ ಬಳಿಯೇ ಈ ಅವ್ಯವಸ್ಥೆ ಉಂಟಾಗಿದೆ. ನಿತ್ಯವೂ ಸಾವಿರಾರು ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತವೆ.

ಸಮೀಪದಲ್ಲೇ ರಾಷ್ಟ್ರೀಯ ಶಿಕ್ಷಣ ಸಮಿತಿ, ಡಿವಿಎಸ್ ಶಾಲಾ, ಕಾಲೇಜುಗಳಿವೆ. ನೂರಾರು ವಿದ್ಯಾರ್ಥಿಗಳು ಪಾದಚಾರಿ ಮಾರ್ಗದ ಬಳಿಯೇ ಸುಳಿದಾಡುತ್ತಾರೆ. ಗಾಂಧಿ ಉದ್ಯಾನದ ಆವರಣದ ಬಳಿಯೇ ದೊಡ್ಡ ಕಾಲುವೆಗೆ ಹೊಂದಿಕೊಂಡಂತೆ ಇರುವ ಪಾದಚಾರಿ ಸ್ಥಳ 2–3 ತಿಂಗಳಿನಿಂದಲೂ ಹದಗೆಟ್ಟ ಸ್ಥಿತಿಯಲ್ಲಿಯೇ ಇದೆ.

ಈಚೆಗೆ ಮಳೆ ಬಂದ ಪರಿಣಾಮ ಹಾಗೂ ಕಾಲುವೆ ನೀರಿನ ಹರಿವಿನಿಂದ ಕೂಡ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ಸಂಚಾರಿ ದೀಪ ವ್ಯವಸ್ಥೆ ಇರುವ ಮಹಾವೀರ ವೃತ್ತದಲ್ಲಿ ವಾರದಲ್ಲಿ ಮೂರ್ನಾಲ್ಕು ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಜನನಿಬಿಡ ಸ್ಥಳವಾಗಿರುವ ಇಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ದಿನವೂ ಓಡಾಡುತ್ತಾರೆ. ಆದರೆ, ಈ ಅವ್ಯವಸ್ಥೆ ಗಮನಿಸಿಯೂ ಪಾದಚಾರಿಗಳ ಸುರಕ್ಷತೆಗೆ ಪಾಲಿಕೆ ಆಡಳಿತ ಕ್ರಮ ಕೈಗೊಂಡಿಲ್ಲ ಎಂಬುದು ನಾಗರಿಕರ ಅಸಮಾಧಾನವಾಗಿದೆ.

ಈಚೆಗೆ ಒಂದು ವಾರದಲ್ಲಿ ಬಿಡುವು ಕೊಟ್ಟು ಸುರಿಯುತ್ತಿರುವ ಮಳೆಯಿಂದ ಕಾಲುವೆ ನೀರಿನಲ್ಲಿ ಸಂಪೂರ್ಣ ಫುಟ್‌ಪಾತ್ ಕೊಚ್ಚಿಹೋಗುವ ಅಪಾಯ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡು ರಸ್ತೆ ಮೇಲೆಯೇ ನಡೆದು ಹೋಗುತ್ತಿದ್ದಾರೆ. ಒಂದು ವೇಳೆ ಫುಟ್‌ಪಾತ್ ಒಡೆದುಹೋದಲ್ಲಿ ವಾಹನ ಸವಾರರಿಗೂ ಸಂಕಷ್ಟ ಎದುರಾಗಲಿದೆ.

ಜನನಿಬಿಡ ರಸ್ತೆ: ಮಹಾವೀರ ವೃತ್ತವು ನಿತ್ಯ ಕಾರ್ಯಕ್ರಮಗಳ ತಾಣವಾಗಿರುವ ಕುವೆಂಪು ರಂಗಮಂದಿರ ಸಂಪರ್ಕಿಸಿದರೆ, ಇನ್ನೊಂದೆಡೆ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಹಲವು ಕಾಲೇಜುಗಳಿಗೆ ಸಂಪರ್ಕ ಕೊಂಡಿಯಾಗಿದೆ. ನಗರ ಸಾರಿಗೆ ಬಸ್‌ಗಳು, ಆಟೊ, ದ್ವಿಚಕ್ರ ವಾಹನಗಳು ರಾತ್ರಿ 11ರವರೆಗೂ ಸಂಚರಿಸುತ್ತಿರುತ್ತವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಎದುರಾಗುವ ಮುನ್ನವೇ ಪ್ರಮುಖ ವೃತ್ತದಲ್ಲಿನ ಈ ಸಮಸ್ಯೆ ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

‘ಪ್ರಮುಖ ವೃತ್ತದಲ್ಲಿಯೇ ಫುಟ್‌ಪಾತ್ ಅವ್ಯವಸ್ಥೆ ಇದ್ದರೂ ಗಮನಿಸದೆ ಇರುವುದು ದುರಂತ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯೂ ನೋಡದಂತೆ ತೆರಳುತ್ತಿದ್ದಾರೆ. ಶಾಲಾ ಮಕ್ಕಳು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗದಂತೆ ಗಮನಹರಿಸಬೇಕು’ ಎನ್ನುತ್ತಾರೆ ನಾಗರಿಕ ಮಂಜುನಾಥ್.

‘ಕೆಲವು ದಿನಗಳ ಹಿಂದೆ ಬಾಲರಾಜ್ ಅರಸ್ ರಸ್ತೆಯ ಪಾದಚಾರಿ ಮಾರ್ಗ ಸಣ್ಣದಾಗಿ ಒಡೆದಿತ್ತು. ನಿರ್ಲಕ್ಷ್ಯ ಮಾಡಿದ್ದರಿಂದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ನೀರಿನ ರಭಸಕ್ಕೆ ಫುಟ್‌ಪಾತ್ ಕುಸಿದಿದೆ. ಈಗಲೂ ಗಮನಹರಿಸದೇ ಇದ್ದರೆ ಹಾನಿ ಪ್ರಮಾಣ ಹೆಚ್ಚಾಗಲಿದೆ. ಅಪಾಯ ಹೆಚ್ಚಾದರೆ ಶಾಲಾ ಮಕ್ಕಳು ಗುಂಡಿಗೆ ಬೀಳುತ್ತಾರೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾಘವೇಂದ್ರ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT