ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಮುಖ್ಯವಾಹಿನಿಗೆ ಬಂದಿದ್ದೇನೆ: ಪದ್ಮನಾಭ

Last Updated 12 ಸೆಪ್ಟೆಂಬರ್ 2017, 8:46 IST
ಅಕ್ಷರ ಗಾತ್ರ

ಶೃಂಗೇರಿ: ‘1988-90ರಲ್ಲಿ ಕೊಪ್ಪ ತಾಲ್ಲೂಕಿನ ಗಬ್ಬಗದ್ದೆ ಕಾಡು ನಾಶದ ವಿರುದ್ಧ ಸಿರಿಮನೆ ನಾಗರಾಜ್ ಹೋರಾಟದ ನೇತೃತ್ವ ವಹಿಸಿದಾಗ ಅವರ ಜತೆಗೂಡಿ ಕಾರ್ಯನಿರ್ವಹಿಸಿದ್ದೇನೆ. ಶಂಕರ ಸಾರಿಗೆ ಕಂಪೆನಿಯ ನೌಕರರಿಗೆ ಅನ್ಯಾಯವಾದಾಗ ಕಾರ್ಮಿಕರು ನಡೆಸಿದ ಪ್ರತಿಭಟನೆಯನ್ನು ನೋಡಿ ಹೋರಾಟ ಪ್ರವೃತ್ತಿಯನ್ನು ನಾನು ಬೆಳೆಸಿಕೊಂಡೆ’ ಎಂದು ಮಾಜಿ ನಕ್ಸಲ್ ಹೋರಾಟಗಾರ ನಿಲುಗುಳಿ ಪದ್ಮನಾಭ ತಿಳಿಸಿದರು.

ಸೋಮವಾರ ಶೃಂಗೇರಿ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಅವರು ಮಾತನಾಡಿದರು. ‘ಗಬ್ಬಗದ್ದೆ ಕಾಡು ನಾಶದ ವಿರುದ್ಧ ನಡೆದ ಚಳವಳಿಯಿಂದ ಮಲೆನಾಡಿನಲ್ಲಿ ಅಪ್ಪಿಕೋ ಚಳವಳಿ ಪ್ರಾರಂಭಗೊಂಡಿತ್ತು. ಕರ್ನಾಟಕ ವಿಮೋಚನಾ ರಂಗದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪರಿಸರ ಕಾಳಜಿಯಿಂದ ನಿರಂತರವಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ಭಾಷೆ, ನೆಲ, ಜಲದ ರಕ್ಷಣೆಗಾಗಿ ದುಡಿದಿದ್ದೇನೆ’ ಎಂದು ಹೇಳಿದರು.

‘1998ರಲ್ಲಿ ಆದಿವಾಸಿಗಳ ಸಮಸ್ಯೆ ಪ್ರಾರಂಭಗೊಂಡಿತ್ತು. ‘ಭೂಮಿ, ಮನೆ ಎಲ್ಲ ಸರ್ಕಾರದ ಸೊತ್ತು’ ಎಂಬ ಅಧಿಕಾರದ ದರ್ಪವನ್ನು ಆದಿವಾಸಿಗಳ ಮೇಲೆ ಹೇರಲಾಯಿತು. ಬಳಿಕ ಹಲವಾರು ವರ್ಷಗಳಿಂದ ನಾನು ಭೂಗತನಾಗಿದ್ದು ಪ್ರಸ್ತುತ ನನ್ನ ಮೇಲಿನ ಎಲ್ಲ ಪ್ರಕರಣಗಳು ಖುಲಾಸೆಗೊಂಡಿದೆ. ‘ಶಾಂತಿಗಾಗಿ ನಾಗರಿಕ ವೇದಿಕೆ’ಯ ಮುಖಾಂತರ ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಬಂದಿದ್ದೇನೆ’ ಎಂದರು.

‘ಗೌರಿ ಲಂಕೇಶ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಕೆಲವು ಮಾಧ್ಯಮಗಳು ಸತ್ಯಸತ್ಯತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಇದರ ಹಿಂದೆ ಕೋಮುವಾದಿ ಶಕ್ತಿಗಳ ಕೈವಾಡವಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಮುಖ್ಯವಾಹಿನಿಗೆ ಬಂದಿದ್ದೇನೆ, ವಿನಾ ಶರಣಾಗತಿ ಅಲ್ಲ. ನಕ್ಸಲರು ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಬುಕುಡಿಬೈಲಿನಲ್ಲಿ ಇತ್ತೀಚೆಗೆ ನಕ್ಸಲ್ ಬ್ಯಾನರ್‌ಗಳಲ್ಲಿ ಯಾವ ಒಬ್ಬ ವ್ಯಕ್ತಿಯ ಕುರಿತು ಬೆದರಿಕೆ ಹಾಕಿಲ್ಲ. ಸರ್ಕಾರದ ಮುಂದೆ ಜನರ ಪ್ರಚಲಿತ ಸಮಸ್ಯೆಗಳ ಕುರಿತು ಬರೆಯಲಾಗಿತ್ತು’ ಎಂದರು.

ಮನುಷ್ಯರು ಹಾಗೂ ಕಾಡಿನ ನಡುವೆ ಭಾವನಾತ್ಮಕ ಸಂಬಂಧವಿತ್ತು. ಬ್ರಿಟಿಷರು ಭಾರತಕ್ಕೆ ಬಂದ ನಂತರ ಅವರು ವಾಣಿಜ್ಯ ಉದ್ದೇಶಕ್ಕಾಗಿ ಪರಿಸರನಾಶ, ಬಂಡವಾಳಶಾಯಿ, ಕೈಗಾರೀಕರಣದಿಂದ ಕಾಡು ನಾಶವಾಗಲು ಪ್ರಾರಂಭವಾಯಿತು. ಬಂಗಾಳದ ಬಿರುಸಾಮುಂಡ ಆದಿವಾಸಿಗಳು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟ ನಡೆಸಿದವರು. ಭಾರತದ ಪ್ರಜೆಗಳ ಶ್ರಮ ದೇಶದ ಮಾರಾಟದ ಸರಕು ಆಗಿದೆ.

ದೇಶದ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿಗೂ ಬೆಳೆದಿಲ್ಲ. ಬದಲಾಗಿ ಬಂಡವಾಳಶಾಯಿಯನ್ನು ಬೆಳೆಸುವತ್ತ ಹೆಚ್ಚಿನ ಗಮನ ಹರಿಸಿದರು. ಬ್ರಿಟಿಷರ ಕಾಲದಲ್ಲಿ ಆದಿವಾಸಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಸಮಾಜದ ಕಟ್ಟ ಕಡೆಯ ಜನರಿಗೆ ಸರ್ಕಾರವು ಸರಿಯಾದ ಸವಲತ್ತನ್ನು ನೀಡಿದರೆ ದೇಶದ ಉನ್ನತಿ ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT