ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮುಖದಲ್ಲಿ ಮೂಡಿದ ಮಂದಹಾಸ

Last Updated 12 ಸೆಪ್ಟೆಂಬರ್ 2017, 8:59 IST
ಅಕ್ಷರ ಗಾತ್ರ

ಹಿರಿಯೂರು: ‘ಸಣ್ಣಗೆ ಬೀಳುತ್ತಿದ್ದ ಮಳೆಗೆ ಎರಡು ತಿಂಗಳ ಹಿಂದೆ ಶೇಂಗಾ ಬಿತ್ತನೆ ಮಾಡಿದ್ದೆವು. ಈ ವರ್ಷವೂ ಬೆಳೆ ಕೈಕೊಟ್ಟಿತು ಎಂದು ಕೊಳ್ಳುತ್ತಿರುವಾಗ ಒಂದು ವಾರದಿಂದ ಬೆಳೆಗೆ ಅನುಕೂಲವಾಗುವಷ್ಟು ಮಳೆಯಾದ ಪ್ರಯುಕ್ತ, ಕಣ್ಣಿಗೆ ದೃಷ್ಟಿಯಾಗುವಂತೆ ಬೆಳೆ ಚೇತರಿಸಿಕೊಂಡಿದೆ. ಈ ವರ್ಷ ಕೃಷಿ ಕೈಕಚ್ಚದು ಎಂಬ ಧೈರ್ಯ ಬಂದಿದೆ’ ಎನ್ನುವುದು ಹಿರಿಯೂರು ತಾಲ್ಲೂಕಿನ ಮಾರೇನಹಳ್ಳಿಯ ಪ್ರಗತಿಪರ ರೈತ ಶಿವಣ್ಣ ಅವರ ಅನಿಸಿಕೆ.

ಶೇಂಗಾ, ಮೆಕ್ಕೆ ಜೋಳ, ಸೂರ್ಯಕಾಂತಿ ಬೆಳೆಗಳಿಗೆ ಮುಂದಿನ ಒಂದು ತಿಂಗಳಲ್ಲಿ ಇನ್ನೊಂದು ಮಳೆ ಬೇಕು. ಮಳೆ ಬರದೇ ಹೋದರೆ ಮತ್ತೆ ಆತಂಕ ತಪ್ಪಿದ್ದಲ್ಲ ಎಂಬುದು ಅವರ ಅನುಭವದ ಮಾತು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಅಸ್ಲಂ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಈ ವರ್ಷ ಮುಂಗಾರು ಹಂಗಾಮಿಗೆ 49 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇತ್ತು. 23,200 ಹೆಕ್ಟೇರ್ ಬಿತ್ತನೆ ಆಗಿದ್ದು, ಶೇ 47 ರಷ್ಟು ಸಾಧನೆಯಾಗಿದೆ. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ 25 ಸಾವಿರ ಹೆಕ್ಟೇರ್ ಬಿತ್ತನೆ ಆಗಬೇಕಿತ್ತು. ಆದರೆ, ಕೇವಲ 13 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ.

ಸೂರ್ಯಕಾಂತಿ 3000 ಹೆಕ್ಟೇರ್ ಬದಲಿಗೆ ಕೇವಲ 800 ಹೆಕ್ಟೇರ್ ಬಿತ್ತನೆ ಆಗಿದೆ.10 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದ ರಾಗಿ 7000 ಹೆಕ್ಟೇರ್ ಬಿತ್ತನೆ ಆಗಿದೆ. ಹತ್ತಿ 4000 ಹೆಕ್ಟೇರ್ ಗುರಿ ಇತ್ತು, 3000 ಆಗಿದೆ. ಈಚೆಗೆ ಸಿರಿಧಾನ್ಯಗಳ ಕಡೆ ರೈತರ ಒಲವು ಹೆಚ್ಚಾಗಿರುವ ಕಾರಣ 500 ಹೆಕ್ಟೇರ್ ಗುರಿ ಇದ್ದ ನವಣೆ 880 ಹೆಕ್ಟೇರ್ ಬಿತ್ತನೆ ಆಗಿದೆ. ಸೂರ್ಯಕಾಂತಿ, ಮೆಕ್ಕೆ ಜೋಳದ ಬೆಳೆಗಳಿಗೆ ಇನ್ನೂ ಎರಡು ಹದ ಮಳೆ ಬೇಕು. ಶೇಂಗಾ ಬೆಳೆಗೆ ಒಂದು ಹದ ಬಂದರೆ ಬೆಳೆ ಕೈಗೆ ಬರುತ್ತದೆ. ಶೇ 60 ರಷ್ಟು ಬೆಳೆ ಕೈಗೆ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಹಿಂಗಾರು ಬಗ್ಗೆ ಉತ್ಸುಕತೆ: ಮುಂಗಾರು ಮಳೆ ಸಕಾಲದಲ್ಲಿ ಆಗದ ಕಾರಣ ನಿರಾಸೆಗೊಂಡಿದ್ದ ರೈತರು ಹಿಂಗಾರು ಬಿತ್ತನೆ ಬಗ್ಗೆ ತೀವ್ರ ಆಸಕ್ತರಾಗಿದ್ದಾರೆ. ಬಹುತೇಕ ರೈತರು ಕಡಲೆ ಮತ್ತು ಜೋಳ ಬಿತ್ತನೆ ಮಾಡುವುದುಂಟು. ಕಡಲೆ ಬಿತ್ತನೆ ಗುರಿ 10 ಸಾವಿರ ಹೆಕ್ಟೇರ್ ಇದೆ. ಈ ವರ್ಷ ಈರುಳ್ಳಿ ಕಟಾವು ಮಾಡಿರುವ ರೈತರು, ಮುಂಗಾರು ಹಂಗಾಮಿಗೆ ಭೂಮಿ ಸಿದ್ಧ ಮಾಡಿಕೊಂಡು ಬಿತ್ತನೆ ಮಾಡದಿರುವ ರೈತರು ಕಡಲೆ ಬಿತ್ತನೆ ಮಾಡುವುದರಿಂದ 15 ಸಾವಿರ ಹೆಕ್ಟೇರ್ ತಲುಪುವ ನಿರೀಕ್ಷೆ ಇದೆ.

ಅದಕ್ಕೆ ತಕ್ಕಂತೆ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆ. 20 ರ ನಂತರ ಕಡಲೆ ಬೀಜ ಮಾರಾಟ ಮಾಡಲಾಗುತ್ತದೆ ಎಂದು ಅಸ್ಲಂ ಮಾಹಿತಿ ನೀಡಿದ್ದಾರೆ. ಧರ್ಮಪುರ ಮತ್ತು ಕಸಬಾ ಹೋಬಳಿಯಲ್ಲಿ ಮೂರು ದಿನಗಳ ಹಿಂದೆ ಕೆರೆ ಕಟ್ಟೆಗಳಿಗೆ ನೀರು ಬರುವಂತಹ ಮಳೆ ಬಂದಿದ್ದರೆ, ಜವನಗೊಂಡನಹಳ್ಳಿ, ಐಮಂಗಲ ಹೋಬಳಿಗಳಲ್ಲಿ ಕೆಲವು ಕಡೆ ಬಿರುಸಿನ ಮಳೆ ಬಂದಿದ್ದರೆ, ಮತ್ತೆ ಕೆಲವು ಕಡೆ ಹದ ಮಳೆಯಾಗಿದೆ. ಪ್ರಥಮ ಬಾರಿಗೆ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲೂ ಮಳೆಯಾಗಿದೆ.

ಬಿರುಮಳೆಗೆ ಒಡೆದು ಹೋಗಿರುವ ಚೆಕ್ ಡ್ಯಾಂ ಹಾಗೂ ಒಡ್ಡುಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ವರ್ಷ ಫಸಲ್ ಬಿಮಾ ಯೋಜನೆಯನ್ನು ಕೇವಲ 2000 ರೈತರು ಮಾಡಿಸಿದ್ದರು. ಈ ವರ್ಷ ಹೆಚ್ಚಿನ ಪ್ರಚಾರ ಮಾಡಿದ್ದರಿಂದ 6000 ಕ್ಕೂ ಹೆಚ್ಚು ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಎಂದು ಅವರು ತಿಳಿಸಿದರು.

ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಹೂವು ಕಟ್ಟುವ ಹಂತದ ಬೆಳೆ ಇರುವ ರೈತರು 15 ದಿನದ ನಂತರ ಮತ್ತೊಮ್ಮೆ ಮಳೆ ಬಂದರೆ ಒಳಿತು ಎಂಬ ನಿರೀಕ್ಷೆಯಲ್ಲಿದ್ದಾರೆ. ರೈತರ ನಿರೀಕ್ಷೆ ಸಫಲವಾದರೆ ಐದಾರು ವರ್ಷದ ನಂತರ ರೈತರ ಮನೆಗಳಲ್ಲಿ ಧಾನ್ಯ ತುಂಬಿದ ಚೀಲಗಳನ್ನು ಕಾಣಬಹುದು. ರೈತರ ಮುಖದಲ್ಲಿ ಮಂದಹಾಸ ಮಿನುಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT