ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮುಖ ಪ್ರತಿಭೆ ಫರ್ಹಾನ್

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಆಗ ಫರ್ಹಾನ್ ಅಖ್ತರ್ ವಯಸ್ಸು 17. ‘ಲಮ್ಹೆ’ ಚಿತ್ರ ನಿರ್ಮಾಣಕ್ಕೆ ಯಶ್ ರಾಜ್ ಪ್ರೊಡಕ್ಷನ್ಸ್ ಇಳಿದಿತ್ತು. ಅಪ್ರೆಂಟಿಸ್ ಗಳಿಗೆ ಅರ್ಜಿ ಆಹ್ವಾನಿಸಿದ್ದ ಕಂಪೆನಿಯತ್ತ ಫರ್ಹಾನ್ ಕೂಡ ಮುಖ ಮಾಡಿದರು.

ಬಾಲಕನಾಗಿ ಪರ್ಹಾನ್ ಮಹಾ ಸುಳ್ಳುಬುರುಕ. ಅಪ್ಪ ಜಾವೆದ್ ಅಖ್ತರ್ ಹಾಗೂ ಅಮ್ಮ ಹನಿ ಇರಾನಿ ಇಬ್ಬರೂ ಮಗನ ಯಾವ ಮಾತನ್ನು ನಂಬುವುದು ಎಂಬ ಗೊಂದಲದಲ್ಲಿ ಇದ್ದರು. ಮಗ ಸಿನಿಮಾ ಸಹಾಯಕನಾಗಿ ಅಪ್ರೆಂಟಿಷಿಪ್ ಆಯ್ಕೆ ಮಾಡಿಕೊಂಡದ್ದೂ ಅವರಿಗೆ ಮೊದಲು ಸುಳ್ಳೆಂದೇ ಅನಿಸಿತ್ತು.

ಜಾವೆದ್ ಅಖ್ತರ್, ಹನಿ ಇಬ್ಬರೂ ಸಿನಿಮಾ ಬರಹಗಾರರು. ಆದರೆ, ಅವರು ಮಗನಿಗೆ ‘ಇದೇ ಮಾಡು’ ಎಂದು ತಾಕೀತು ಮಾಡಲಿಲ್ಲ. ಮಗನಿಗೆ ಅವಕಾಶ ಕೊಡಿ ಎಂದು ಯಾರನ್ನೂ ಕೇಳಲಿಲ್ಲ. ಅಪ್ಪ, ಅಮ್ಮ ವಿವಾಹ ವಿಚ್ಛೇದನ ಪಡೆದ ಮೇಲೆ ಫರ್ಹಾನ್ ಹೆಚ್ಚು ಕಲಿತದ್ದು ಅಪ್ಪನಿಂದ ಎನ್ನುವುದು ಬೇರೆ ಮಾತು.

‘ಲಮ್ಹೆ’ಯಲ್ಲಿ ಮಾಡಿದ ಅಭ್ಯಾಸ,  ಪಂಕಜ್ ಪರಾಶರ್ ನಿರ್ದೇಶನದ ‘ಹಿಮಾಲಯ್ ಪುತ್ರ್’ ಸಿನಿಮಾದಲ್ಲಿ ಕೆಲಸ ಮಾಡಲು ಆತ್ಮಸ್ಥೈರ್ಯ ತುಂಬಿತು. ಹೊಸ ಜಮಾನದ ಸಿನಿಮಾ ತಯಾರಿಕೆಗೆ ಜಾಹೀರಾತು ಲೋಕದ ಪರಿಚಯವೂ ಇರಬೇಕು ಎಂದು ಚಿಕ್ಕಪ್ರಾಯದಲ್ಲಿಯೇ ಪರ್ಹಾನ್‌ಗೆ ಅನಿಸಿತು. ಅದಕ್ಕೇ ‘ಸ್ಕ್ರಿಪ್ಟ್ ಶಾಪ್’ ಎಂಬ ಕೋರ್ಸ್‌ನಲ್ಲಿ ಮೂರು ವರ್ಷ ವಿದ್ಯಾರ್ಥಿಯಾದದ್ದು.

‘ದಿಲ್ ಚಾಹ್ತಾ ಹೈ’ ಒಬ್ಬ ಸ್ನೇಹಿತನ ಬದುಕಿನ ಘಟನೆಗಳಿಂದ ಪ್ರಭಾವಿತವಾಗಿ ಬರೆದ ಸ್ಕ್ರಿಪ್ಟ್. ಗೋವಾ ಹಾಗೂ ಮುಂಬೈನ ಪಾಶ್ಚಾತ್ಯ ಸಂಸ್ಕೃತಿ ಮೆಚ್ಚಿಕೊಂಡ ಯುವಜನರ ಮಾನಸೋಲ್ಲಾಸ ಕಂಡುಂಡು ರಚಿಸಿದ ಚಿತ್ರಕಥೆ ಅದು. ಬರೆಯುವಾಗ ನಿರ್ದೇಶಿಸುವ ಉಮೇದೇನೂ ಇರಲಿಲ್ಲ. ತಯಾರಾದ ಮೇಲೆ ತಾನಷ್ಟೇ ಅದನ್ನು ಆತ್ಮದ ಸಮೇತ ನಿರ್ದೇಶಿಸಲು ಸಾಧ್ಯ ಅನಿಸಿತು. ‘ದಿಲ್ ಚಾಹ್ತಾ ಹೈ’ ಹಿಂದಿ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದಿತು.

ಮೂರು ವರ್ಷ ಕಳೆದ ಮೇಲೆ ಪರ್ಹಾನ್ ಕೈಗೆತ್ತಿಕೊಂಡದ್ದು ಅಪ್ಪ ಬರೆದಿದ್ದ ‘ಲಕ್ಷ್ಯ್’ ಸಿನಿಮಾ ಚಿತ್ರಕಥೆ. ಅಪ್ಪನಿಗೇ ಕೆಲವು ತಿದ್ದುಪಡಿ ಮಾಡುವಂತೆ ಸೂಚಿಸಿದ ಅವರಿಗೆ ಆಗ ಮೊದಲ ಗೆಲುವು ಕೊಟ್ಟಿದ್ದ ಆತ್ಮಬಲದ ಇಂಧನ ಜೊತೆಗಿತ್ತು. ಉತ್ತಮ ವಿಮರ್ಶೆಗಳು ಬಂದರೂ ‘ಲಕ್ಷ್ಯ್’ ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದ ಸೋತಿತು. ಸ್ನೇಹಿತರನ್ನು ಕೂಡಿಹಾಕಿಕೊಂಡು ಕಂಠಮಟ್ಟ ಕುಡಿದು ಫರ್ಹಾನ್ ಆ ಚಿತ್ರದ ಸೋಲಿಗೆ ಕಾರಣ ಹುಡುಕಲು ಯತ್ನಿಸಿದ್ದರು.

ಬರಹಗಾರ ಆಗಲು ಹೋಗಿ ನಿರ್ದೇಶಕನೂ ಆದ ಫರ್ಹಾನ್, ಆಮೇಲೆ ನಿರ್ಮಾಪಕ ಕೂಡ ಆದರು. ಒತ್ತಡವ ದಾಟಲೆಂದು ಗಿಟಾರ್ ಕಲಿಯಲಾರಂಭಿಸಿದ್ದು 27ನೆಯ ವಯಸ್ಸಿನಲ್ಲಿ. ಸಂಗೀತವೂ ಒಲಿಯಿತು. ‘ರಾಕ್ ಆನ್’ ಹಿಂದಿ ಸಿನಿಮಾ ಮೂಲಕ ನಾಯಕನಾಗುವ ಅವಕಾಶವನ್ನೂ ಸೃಷ್ಟಿಸಿಕೊಂಡರು. ಆಗ ಅವರ ವಯಸ್ಸು 34.

ಶಾರುಖ್ ಖಾನ್, ಅಮೀರ್ ಖಾನ್ ಸಿನಿಮಾಗಳಿಗೆ ಬರೆದು ಕೈಪಳಗಿಸಿಕೊಂಡ ಫರ್ಹಾನ್ ಬದುಕನ್ನು ಬಂದಹಾಗೆ ಸ್ವೀಕರಿಸಿದವರು. ಅವರದ್ದೇ 'ಜಿಂದಗಿ ನಾ ಮಿಲೇಗಿ ದೊಬಾರಾ' ಹಿಂದಿ ಚಿತ್ರ ಅವರೊಳಗಿನ ಉತ್ಕಟತೆಗೆ ಹಿಡಿದ ಕನ್ನಡಿ.

ಯಾರದ್ದೋ ಕರೆಗೆ ಸುಮ್ಮನೆ ಓಗೊಡದ ವ್ಯಕ್ತಿತ್ವ ಅವರದ್ದು. ಎ.ಆರ್.ರೆಹಮಾನ್ ‘ಬ್ಲ್ಯೂ’ ಎಂಬ ಆಲ್ಬಂಗೆ ಹಾಡಲು ಬುಲಾವು ಕೊಟ್ಟಾಗ ಯೋಚನೆಯನ್ನೂ ಮಾಡದೆ ತಿರಸ್ಕರಿಸಿದ್ದವರು.ಮಿಲ್ಖಾ ಸಿಂಗ್ ಪಾತ್ರಕ್ಕೆ ತಕ್ಕಂತೆ 13 ತಿಂಗಳು ಬೆವರು ಬಸಿದು ದೇಹ ಕಟೆದದ್ದು ಅವರು ಎದೆಗೊಟ್ಟ ವಿಶೇಷ ಸವಾಲೇ ಹೌದು.

ಬರಹ, ಚಿತ್ರ, ಜಾಹೀರಾತು, ಕಿರುಚಿತ್ರ, ಸಂಗೀತ, ಗಾಯನ, ಗೀತ ಸಾಹಿತ್ಯ ಎಲ್ಲ ಪ್ರಕಾರಗಳಿಗೂ ಚಕಚಕನೆ ಒಗ್ಗಿಕೊಳ್ಳುತ್ತಾ ಬಂದ ಪರ್ಹಾನ್ ನಿಸ್ಸಂಶಯವಾಗಿ ಬಹುಮುಖ ಪ್ರತಿಭೆ. ಸಂಪಾದಿಸಿದ ಹಣವನ್ನು ತಮ್ಮತನದ ಸಿನಿಮಾಗಳಲ್ಲಿಯೇ ತೊಡಗಿಸುವ ಜಾಯಮಾನ ಅವರದ್ದು. ಅವರ ಅಭಿನಯದ ‘ಲಖನೌ ಸೆಂಟ್ರಲ್’ ಚಿತ್ರ ಇನ್ನೇನು ತೆರೆಕಾಣಲಿದೆ. ಈಗ ಅವರಿಗೆ 43 ವರ್ಷ ವಯಸ್ಸಾಗಿದೆ. ಅಂದರೆ, 26 ವರ್ಷ ಚಿತ್ರರಂಗದಲ್ಲಿ ಸೈಕಲ್ ಹೊಡೆದಿದ್ದಾರೆ ಎಂದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT