ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ನಿರ್ಲಕ್ಷ್ಯ ಅಕ್ಷಮ್ಯ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ವಿಚಾರ ಮತ್ತೆ ರಾಷ್ಟ್ರದ ಗಮನ ಸೆಳೆದುಕೊಂಡಿದೆ. ಗುರುಗ್ರಾಮದ ರಾಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಶೌಚಾಲಯದಲ್ಲಿ ಏಳು ವರ್ಷದ ಬಾಲಕ ಪ್ರದ್ಯುಮಾನ್ ಠಾಕೂರ್ ಹತ್ಯೆಯ ನಂತರ ಇದು ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ಪ್ರಕರಣದ ಸಂಬಂಧದಲ್ಲಿ ವಿವರಣೆ ಕೋರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ನೀಡಿರುವುದು ಪ್ರಕರಣದ ಗಂಭೀರತೆಗೆ ಸಾಕ್ಷಿಯಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಲಕನ ತಂದೆ ಸುಪ್ರೀಂ ಕೋರ್ಟ್‍‍ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯಿಂದಲೂ (ಸಿಬಿಎಸ್ಇ) ವಿವರಣೆ ಕೋರಿದೆ. ಬಾಲ ನ್ಯಾಯ ಕಾಯಿದೆ ಅನ್ವಯ ಮಕ್ಕಳ ಸುರಕ್ಷತೆ ನಿಯಮಾವಳಿಗಳ ಅನುಷ್ಠಾನದ ಅಗತ್ಯವನ್ನು ಈಗಾಗಲೇ ಪ್ರತಿಪಾದಿಸಲಾಗಿದೆ. ಈ ಪ್ರಕಾರ, ಮಕ್ಕಳಿಗೆ ಸುರಕ್ಷತೆಯ ಪರಿಸರ ಇರುವುದು ಅತ್ಯವಶ್ಯಕ. ಆದರೆ ಸುರಕ್ಷಿತ ನೆಲೆ ಎಂದು ಭಾವಿಸಿಕೊಳ್ಳಲಾದ ಪ್ರತಿಷ್ಠಿತ ಶಾಲೆಯಲ್ಲೇ ಬಾಲಕನ ಅಮಾನುಷ ಹತ್ಯೆ, ಶಾಲೆಗಳಲ್ಲಿನ ಭದ್ರತಾ ವ್ಯವಸ್ಥೆಯ ಲೋಪಗಳನ್ನು ಎತ್ತಿ ಹೇಳುತ್ತದೆ.

ರಾಯನ್ ಶಾಲೆಯ ದುರಂತದ ಆಚೆಗೆ ಈ ಪ್ರಕರಣವನ್ನು ನೋಡಬೇಕು. ಶಿಕ್ಷಣ ಎಂಬುದು ಇತ್ತೀಚಿನ ದಶಕಗಳಲ್ಲಿ ಲಾಭದಾಯಕ ವಾಣಿಜ್ಯ ಚಟುವಟಿಕೆ ಆಗಿದ್ದು ಹಣ ಗಳಿಕೆಯೇ ಮುಖ್ಯವಾಗಿದೆ. ಇದಕ್ಕೆ ನಮ್ಮ ಭ್ರಷ್ಟ ವ್ಯವಸ್ಥೆಯೂ ಪೂರಕವಾಗಿದೆ. ವಿದ್ಯಾಮಂದಿರಗಳೆಂದು ಕರೆಯಲಾಗುವ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಕನಿಷ್ಠ ಗ್ಯಾರಂಟಿಯೂ ಒದಗಿಸಲು ಸಾಧ್ಯವಾಗದಿದ್ದಲ್ಲಿ ಅದು ನಾಗರಿಕ ಸಮಾಜದ ವೈಫಲ್ಯ. ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ವ್ಯಕ್ತಿಗಳ ಹಿನ್ನೆಲೆ ಪರಿಶೀಲಿಸದೆ ಕಡೆಗಣಿಸಿದ್ದು ಅಕ್ಷಮ್ಯ. ನೇಮಕಾತಿಗೆ ಸಂಬಂಧಿಸಿದಂತೆ ಇಂತಹ ನಿಯಮಗಳ ಉಲ್ಲಂಘನೆ ರಾಷ್ಟ್ರದಾದ್ಯಂತ ಪದೇ ಪದೇ ಆಗುತ್ತಿರುವುದು ವಿಷಾದನೀಯ. ಶಾಲೆಗಳಲ್ಲಿ ಹವಾನಿಯಂತ್ರಿತ ತರಗತಿ ಕೋಣೆಗಳು, ಅತ್ಯಾಧುನಿಕ ವ್ಯವಸ್ಥೆಗಳಿಗಿಂತ ಮೂಲಭೂತ ವಿಚಾರಗಳು ಮುಖ್ಯವಾಗಬೇಕು. ಹಲವು ಶಾಲೆಗಳು ವಿಶ್ವ ದರ್ಜೆಯ ಸೌಲಭ್ಯಗಳ ಬಗ್ಗೆ ಹೇಳಿಕೊಳ್ಳುತ್ತವೆ. ಆದರೆ ಚಾಕು ಇಟ್ಟುಕೊಂಡ ವ್ಯಕ್ತಿ ಶಾಲಾ ಆವರಣ ಪ್ರವೇಶಿಸುವುದು ಹೇಗೆ ಸಾಧ್ಯ?

ಹೆಣ್ಣುಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂಬುದೂ ಈ ಪ್ರಕರಣದಿಂದ ವ್ಯಕ್ತ. ಹೀಗಾಗಿ ಈ ವಿಚಾರದಲ್ಲಿ ಸಮಾಜದ ಸಂವೇದನಾಶೀಲತೆ ಹೆಚ್ಚಾಗಬೇಕು. ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಾದದ್ದು ಅವಶ್ಯ. ಮಕ್ಕಳನ್ನು ಶಾಲೆಗೆ ಕಳುಹಿಸಿದ ಪೋಷಕರಿಗೆ ಯಾವುದೇ ಭೀತಿ ಹಾಗೂ ಅಭದ್ರತೆಯ ಭಾವ ಇಲ್ಲದಂತಹ ಸ್ಥಿತಿ ಸೃಷ್ಟಿಯಾಗಬೇಕು. ಶಾಲಾ ಅವಧಿಯಲ್ಲಿ ತಮ್ಮ ಸುಪರ್ದಿಯಲ್ಲಿ ಇರುವ ಮಕ್ಕಳ ಸುರಕ್ಷತೆಯ ಹೊಣೆಯನ್ನು ಶಾಲಾ ಆಡಳಿತ ವರ್ಗ ಹೊರಬೇಕು. ಈ ಬಗ್ಗೆ ಶಾಲಾ ಆಡಳಿತ ವರ್ಗ ಉತ್ತರದಾಯಿಯಾಗಿರಬೇಕಾದುದೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT