ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ‘ಗೌರಿ’ಯರ ಪ್ರತಿರೋಧ

ಭಯಮುಕ್ತ ಭಾರತ ನಿರ್ಮಿಸುತ್ತೇವೆ– ಹಂತಕರಿಗೆ ಸವಾಲು
Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಇಲ್ಲಿ ನಡೆದ ಪ್ರತಿರೋಧದ ಸಮಾವೇಶವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಹಾಗೂ ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನಗಳ ವಿರುದ್ಧದ ಹೋರಾಟಕ್ಕೆ ಕಿಚ್ಚು ಹಚ್ಚಿತು.

ಗೌರಿ ಲಂಕೇಶ್‌ ಹತ್ಯೆ ವಿರೋಧಿ ವೇದಿಕೆಯು ಆಯೋಜಿಸಿದ್ದ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಅಗಲಿದ ಒಡನಾಡಿಗೆ ಕಂಬನಿ ಮಿಡಿದರು.

ಸಮಾವೇಶ ಆರಂಭವಾಗುತ್ತಿದ್ದಂತೆ ಸಾವಿರಾರು ಮಂದಿ ಎದ್ದು ನಿಂತು ‘ನಾನೂ ಗೌರಿ, ವಿಶ್ವಾಸದ ಗೌರಿ, ಬದ್ಧತೆಯ ಗೌರಿ, ಮಕ್ಕಳ ಗೌರಿ, ರೈತರ ಗೌರಿ, ಮಹಿಳೆಯರ ಗೌರಿ, ಕಾರ್ಮಿಕರ ಗೌರಿ, ಜನರ ಗೌರಿ’ ಎಂದು ಸಾರಿ ಹೇಳಿದರು.

ಸಾಹಿತಿ ದೇವನೂರ ಮಹಾದೇವ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಾಮಾಜಿಕ ಹೋರಾಟಗಾರರಾದ ಮೇಧಾ ಪಾಟ್ಕರ್‌, ಸ್ವಾಮಿ ಅಗ್ನಿವೇಶ್‌, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ಪತ್ರಕರ್ತರಾದ ಪಿ. ಸಾಯಿನಾಥ್‌, ತೀಸ್ತಾ ಸೆಟಲ್ವಾಡ್‌, ಸಾಗರಿಕಾ ಘೋಷ್‌, ಸಿದ್ಧಾರ್ಥ ವರದರಾಜನ್‌ ಸೇರಿದಂತೆ ದೇಶದ 30 ಚಿಂತಕರು ವಿಚಾರ ಮಂಡಿಸಿದರು. ‘ಗೌರಿಯನ್ನು ನೀವು ಕೊಂದಿರಬಹುದು. ಆಕೆ ಸಾವಿಲ್ಲದ ಸಂಗಾತಿಯಾಗಿ ನಮ್ಮೆದೆಯೊಳಗೆ ಯಾವತ್ತೂ ಇರುತ್ತಾಳೆ. ಆಕೆ ಪ್ರತಿಪಾದಿಸುತ್ತಿದ್ದ ವಿಚಾರಧಾರೆಗಳನ್ನು ಯಾವತ್ತೂ ಸಾಯಲು ಬಿಡುವುದಿಲ್ಲ. ಈ ವಿಚಾರ ಧಾರೆಯನ್ನೇ ಮುಂದಿಟ್ಟುಕೊಂಡು ಭಯ ಮುಕ್ತ ಭಾರತ ನಿರ್ಮಿಸುತ್ತೇವೆ ’ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದರು. ನವದೆಹಲಿಯಲ್ಲಿ ರಾಷ್ಟ್ರ ಮಟ್ಟದ ಸಮಾವೇಶ ನಡೆಸುವುದಾಗಿ ‍ಪ್ರಕಟಿಸಿದರು.

‘ಗೌರಿ ಲಂಕೇಶ್‌ ಪತ್ರಿಕೆ’ಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಸಮಾವೇಶಕ್ಕೆ ಚಾಲನೆ ನೀಡಿದರು. ದ್ವೇಷ ಬಿತ್ತುವ ರಾಜಕೀಯ ನಮಗೆ ಬೇಡ ಎಂದು ಸ್ಪಷ್ಟಪಡಿಸಿದ ಅವರು, ‘ಹೋರಾಟವನ್ನು ಇಲ್ಲಿಗೆ ನಿಲ್ಲಿಸಿ ನಿದ್ದೆ ಮಾಡಬಾರದು. ತಾರ್ಕಿಕ ಅಂತ್ಯ ಕಾಣಿಸಬೇಕು’ ಎಂದು ಕಿವಿಮಾತು ಹೇಳಿದರು.

ದೇವನೂರ ಮಹಾದೇವ, ‘ಸ್ವಾತಂತ್ರ್ಯ ಬಂದಾಗ ಭಾರತೀಯ ಸಮಾಜ ಯಥಾಸ್ಥಿತಿಯನ್ನೇ ಬಯಸುತ್ತಿತ್ತು. ಆದರೆ, ಆಗ ಸರ್ಕಾರಗಳಿಗೆ ಕನಸುಗಳಿದ್ದವು. ಸರ್ಕಾರಗಳು ಯಥಾಸ್ಥಿತಿಯ ಜಡ ಸಮಾಜಕ್ಕಿಂತ ಮುಂದೆ ಹೋಗಿ ಕಾರ್ಯಪ್ರವೃತ್ತವಾಗುತ್ತಿದ್ದವು. ಈಗ ಉಲ್ಟಾ ಆಗಿದೆ. ಈಗಿನ ಆಳ್ವಿಕೆ ಯಥಾಸ್ಥಿತಿ ಜಡ ಸಮಾಜಕ್ಕಿಂತ ಹಿಂದಕ್ಕೆ ಹೋಗಿದೆ. ವರ್ತಮಾನ ಕಾಲವನ್ನು ಭೂತಕಾಲವನ್ನಾಗಿಸಲು ಹೊರಟಿದೆ.

ಬಂಡವಾಳಶಾಹಿಗಳ ಬಲೆಗೆ ಸರ್ಕಾರಗಳು ಸಿಲುಕುತ್ತಿವೆ. ಹಾಗಾಗಿ ಕನಸು ದುಃಸ್ವಪ್ನವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಹುತ್ವವೇ ಭಾರತೀಯತೆ. ಇದಕ್ಕೆ ಧಕ್ಕೆ ಆಗಿರುವುದರಿಂದಲೇ ಗೌರಿ, ಎಂ.ಎಂ.ಕಲಬುರ್ಗಿಯಂಥವರು ಬಲಿಯಾಗುತ್ತಿದ್ದಾರೆ. ಪ್ರೀತಿ ಮತ್ತು ಸಹನೆ ಬಹುತ್ವದ ಸ್ವಭಾವಗಳು. ಇವೆರಡೂ ಇದ್ದಾಗ ನಾವು ಸಮಾನತೆಯ ಕಡೆ ಹೆಜ್ಜೆ ಹಾಕುತ್ತೇವೆ. ಆದರೆ, ಇಂದು ಅಸಹನೆ ಮತ್ತು ದ್ವೇಷ ಉಲ್ಬಣವಾಗುತ್ತಿವೆ. ಸರ್ಕಾರಗಳು ದುಃಸ್ವಪ್ನ ಸೃಷ್ಟಿಸುತ್ತಿರುವ ಸಂದರ್ಭದಲ್ಲಿ ಬಹುತ್ವ ಧರ್ಮದ ಪ್ರೀತಿ, ಸಹನೆ ಹಾಗೂ ಸಮಾನತೆಯ ಸ್ವಭಾವಗಳ ಮೂಲಕ ಸಮಾಜಕ್ಕೆ ಮುಖಾಮುಖಿ ಆಗಬೇಕಿದೆ. ನಾವು ಉದಾರವಾಗಬೇಕಿದೆ, ವಿಶಾಲವಾಗಬೇಕಾಗಿದೆ ಹಾಗೂ ಒಟ್ಟಾಗಬೇಕಿದೆ. ಹೀಗಾದರೆ ನಮ್ಮ ಗೌರಿಯನ್ನು ಸರಿಯಾಗಿ ನೆನಪಿಸಿಕೊಂಡಂತೆ ಆಗುತ್ತದೆ’ ಎಂದರು.

ಸಾವು ವ್ಯರ್ಥವಾಗಲು ಬಿಡೆವು: ಉಕ್ಕಿ ಬರುತ್ತಿದ್ದ ದುಃಖವನ್ನು ಸಾವರಿಸಿಕೊಂಡು ಗೆಳತಿಗೆ ಶ್ರದ್ಧಾಂಜಲಿ ಸಲ್ಲಿಸಿದ ತೀಸ್ತಾ ಸೆಟಲ್ವಾಡ್‌, ‘ಬಹುತ್ವ ಹಾಗೂ ಜಾತ್ಯತೀತತೆ ಹೊರಗಿನ ತತ್ವಗಳಲ್ಲ. ಸರ್ವಾಧಿಕಾರಿ ಶಕ್ತಿಗಳ ಯಾವುದೇ ಗುಂಡು ಈ ಮೌಲ್ಯಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಗೌರಿಯ ಸಾವು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೀತಾರಾಂ ಯೆಚೂರಿ, ‘ನಮ್ಮ ಭಾರತದ ಪರಿಕಲ್ಪನೆಯಲ್ಲಿ ಎಲ್ಲರಿಗೂ ಮಾತನಾಡಲು, ಸಂವಾದ ನಡೆಸಲು ಹಾಗೂ ಇಷ್ಟವಿಲ್ಲದ್ದನ್ನು ಒಪ್ಪದಿರಲು ಸಮಾನ ಅವಕಾಶಗಳಿವೆ. ಈ ಗುಣಗಳೇ ಇಲ್ಲದ ಮೇಲೆ ಅದು ನಮ್ಮ ದೇಶವಾಗಿ ಉಳಿಯುವುದಿಲ್ಲ. ದುರ್ಜನರ ಅಟ್ಟಹಾಸಕ್ಕೆ ಸಜ್ಜನರ ಮೌನವೇ ಕಾರಣ. ದೇಶವನ್ನು ಬಲಪಡಿಸಲು ನಾವು ಮೌನ ಮುರಿಯಲೇಬೇಕಾಗಿದೆ’ ಎಂದರು.

‘ಸರಿ ಎನಿಸದ ವಿಚಾರಗಳನ್ನು ಒಪ್ಪದ, ಅವುಗಳನ್ನು ದಿಟ್ಟವಾಗಿ ಖಂಡಿಸುವ ಮನೋಭಾವದ ವ್ಯಕ್ತಿಗಳ ಹತ್ಯೆ ನಡೆಸಲಾಗಿದೆ. ಇವೆಲ್ಲ ಪ್ರತ್ಯೇಕ ಘಟನೆಗಳಲ್ಲ. ಗೋರಕ್ಷಕರ ಹೆಸರಿನಲ್ಲಿ  ದಲಿತರ, ಮುಸ್ಲಿಮರ ಮೇಲಿನ ದಾಳಿ, ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿದೆ. ಏನು ತಿನ್ನಬೇಕು, ಏನು ಧರಿಸಬೇಕು ಎಂಬುದನ್ನು ಇನ್ನೊಬ್ಬರು ನಿರ್ಧರಿಸುವ ದಿನಗಳು ಬಂದಿವೆ. ಸರ್ವಾಧಿಕಾರಿ ದೇಶ ನಿರ್ಮಾಣವಾಗುತ್ತಿದೆ. ಭಾರತದ ಪರಿಕಲ್ಪನೆಗೆ ವಿರುದ್ಧವಾದ ಈ ಬೆಳವಣಿಗೆ ವಿರುದ್ಧ ನಾವು ಹೋರಾಡಬೇಕಿದೆ’ ಎಂದರು. ‘ಸಣ್ಣಪುಟ್ಟ ವಿಚಾರಗಳಿಗೂ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಕರಣದ ಬಗ್ಗೆ ಮೌನ ವಹಿಸಿರುವುದು ಏಕೆ’ ಎಂದು ಮೇಧಾ ಪಾಟ್ಕರ್‌ ಹಾಗೂ ಸ್ವಾಮಿ ಅಗ್ನಿವೇಶ್‌ ಪ್ರಶ್ನಿಸಿದರು.

(ಗೌರಿ ಅವರ ತಾಯಿ ಇಂದಿರಾ ಲಂಕೇಶ್ ಅವರು ಭಾವುಕರಾದಾಗ ತೀಸ್ತಾ ಸೆಟ್ಲವಾಡ್ ಹಾಗೂ ಮೊಮ್ಮಗಳು ಇಶಾ ಸಂತೈಸಿದರು –ಪ್ರಜಾವಾಣಿ ಚಿತ್ರ)

ಹೆತ್ತ ಕರುಳಿನ ಕಂಬನಿ

‘ಮಗಳನ್ನು ಎಂಜಿನಿಯರ್‌ ಮಾಡಬೇಕೆಂಬ ಆಸೆ ನನಗಿತ್ತು. ಅವಳು ಪತ್ರಿಕೋದ್ಯಮವನ್ನು ಆರಿಸಿಕೊಂಡಳು. ಅದಕ್ಕೆ ನ್ಯಾಯ ಒದಗಿಸಿದಳು. ನನ್ನ ಗೌರಿ ಇನ್ನಷ್ಟು ಗೌರಿಯರನ್ನು ಹುಟ್ಟುಹಾಕಿದಳು. ನಾನು ಅನೇಕ ಗೌರಿಯರನ್ನು ಇಲ್ಲಿ ನೋಡುತ್ತಿದ್ದೇನೆ. ಮಗಳ ಬಗ್ಗೆ ಹೆಮ್ಮೆ ಆಗುತ್ತಿದೆ. ನೀವೆಲ್ಲ ನನ್ನ ಗೌರಿಯರು...’ ಎನ್ನುವಾಗ ತಾಯಿ ಇಂದಿರಾ ಲಂಕೇಶ್‌  ಅವರಿಗೆ ಉಮ್ಮಳಿಸಿ ಬರುವ ದುಃಖವನ್ನು ತಡೆಯಲಾಗಲಿಲ್ಲ. ಅವರು ಅಲ್ಲಿಗೇ ಮಾತು ನಿಲ್ಲಿಸಿ ಮೌನಕ್ಕೆ ಶರಣಾದರು.

ಸಹೋದರ ಇಂದ್ರಜಿತ್‌ ಲಂಕೇಶ್‌, ಸಹೋದರಿ ಕವಿತಾ ಲಂಕೇಶ್‌ ಹಾಗೂ ಅವರ ಪುತ್ರಿ ಇಶಾ ಸಮಾವೇಶದಲ್ಲಿ ಪಾಲ್ಗೊಂಡರು.

ಕಾಲಮಿತಿಯಲ್ಲಿ ತನಿಖೆ ಪೂರ್ಣಕ್ಕೆ ಪಟ್ಟು

ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಬೇಕು. ಕಾಲಮಿತಿಯೊಳಗೆ ಹಂತಕರನ್ನು ಹಾಗೂ ಅವರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.

ಗೌರಿ ಅವರು ಸಂವಿಧಾನ ವಿರೋಧಿಗಳ ಹಾಗೂ ಮಾನವತಾ ವಿರೋಧಿಗಳ ವಿರುದ್ಧ ಸಮರ ಸಾರಿದ್ದರು. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದ ವಿಚಾರವಾದಿಗಳ ಸರಣಿ ಕೊಲೆಗಳು ನಡೆದಿವೆ. ಹಾಗಾಗಿ ಈ ಆಯಾಮವನ್ನು ವಿಶೇಷವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಈ ಹತ್ಯೆಗೆ ಆರ್‌ಎಸ್‌ಎಸ್‌, ಹಿಂದೂ ಜಾಗರಣ ವೇದಿಕೆ, ವಿಎಚ್‌ಪಿ, ಭಜರಂಗದಳ, ಶ್ರೀರಾಮ ಸೇನೆ, ಸನಾತನ ಸಂಸ್ಥೆ ಸದಸ್ಯರು ಹಾಗೂ ಬೆಂಬಲಿಗರು ಸಂಭ್ರಮಪಟ್ಟಿದ್ದಾರೆ. ಬಿಜೆಪಿಯ ನಾಯಕರು ಹತ್ಯೆಗೆ ಪರೋಕ್ಷ ಸಮರ್ಥನೆ ನೀಡಿದ್ದಾರೆ. ಯಾವುದೇ ಧರ್ಮದ ಬೋಧನೆಗಳಿಗೂ ವಿರುದ್ಧವಾದ ಅಮಾನವೀಯ ನಡವಳಿಕೆ ಇದು ಎಂದು ಖಂಡಿಸಲಾಯಿತು.

ಮುಂದಿನ ದಿನಗಳಲ್ಲಿ ಕೋಮುವಾದಿ, ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧದ ಎಲ್ಲ ಸಂಘಟನೆಗಳು, ಪಕ್ಷಗಳು, ಗುಂಪುಗಳು ಹಾಗೂ ನಾಗರಿಕರು ಒಟ್ಟಾಗಿ ಹೋರಾಟ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ಮುಖ್ಯಮಂತ್ರಿ ಪರವಾಗಿ ಸಚಿವರಾದ ಎಚ್‌.ಎಂ. ರೇವಣ್ಣ ಹಾಗೂ ಯು.ಟಿ. ಖಾದರ್‌ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT