ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಈಡೇರಿಸುವಲ್ಲಿ ಮುಂದು: ಸಿದ್ದರಾಮಯ್ಯ

Last Updated 13 ಸೆಪ್ಟೆಂಬರ್ 2017, 6:45 IST
ಅಕ್ಷರ ಗಾತ್ರ

ಬಳ್ಳಾರಿ: ‘ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ ಬಳಿಕ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆ ಗಳ ಪೈಕಿ 155 ಭರವಸೆಗಳನ್ನು ಈಡೇರಿ ಸಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ಜಿಲ್ಲಾಡ ಳಿತ ಏರ್ಪಡಿಸಿದ್ದ ‘ಬಳ್ಳಾರಿ ಅಭಿವೃದ್ಧಿ ಮತ್ತು ಸಾಮಾಜಿಕ ಸಾಧನಾ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಯಾವುದೇ ಸರ್ಕಾರ ಹೀಗೆ ಭರವಸೆಯನ್ನು ಈಡೇರಿಸಲು ಯತ್ನಿಸುವುದಿಲ್ಲ. ಆದರೆ ನಮ್ಮ ಸರ್ಕಾರ ಪ್ರತಿ ವರ್ಷ ಪ್ರಣಾಳಿಕೆಯನ್ನು ಮುಂದಿಟ್ಟು ಕೊಂಡೇ ಆಯವ್ಯಯವನ್ನು ಸಿದ್ಧಪಡಿಸುತ್ತಿದೆ’ ಎಂದರು.

‘ಜಿಲ್ಲೆಯ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ. ಸುವರ್ಣ ಅಕ್ಷರದಲ್ಲಿ ದಾಖಲಿಸಬೇಕಾದ ದಿನ. ₹2959 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ, 3.42 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ, ಸೌಲಭ್ಯಗಳ ವಿತರಣೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 4 ವರ್ಷ ನಾಲ್ಕು ತಿಂಗಳು ಪೂರೈಸುತ್ತಿದೆ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ 5 ವರ್ಷದಲ್ಲಿ ₹86,000 ಕೋಟಿ ವಿನಿಯೋಗಿಸಲಾಗಿದೆ. ಈ ವರ್ಷ ₹27,300 ಕೋಟಿ ಮೀಸಲಿಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ತನ್ನ ಅವಧಿ ಯಲ್ಲಿ ಕೇವಲ ₹21,000 ಕೋಟಿ ಖರ್ಚು ಮಾಡಿತ್ತು. ಆದರೆ. ಈಗ ಆ ಪಕ್ಷಕ್ಕೆ ಈ ಸಮುದಾಯಗಳ ಬಗ್ಗೆ ದಿಢೀರ್ ಕಾಳಜಿ ಮೂಡಿದೆ’ ಎಂದರು.
ಅನಿಲ್‌ ಲಾಡ್‌ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸಚಿವ ತನ್ವಿರ್‌ ಸೇಟ್‌, ಶಾಸಕ ರಾದ ಎನ್‌.ವೈ.ಗೋಪಾಕೃಷ್ಣ, ಈ.ತುಕಾ ರಾಂ, ಪಿ.ಟಿ.ಪರಮೇಶ್ವರ ನಾಯ್ಕ, ಎಲ್‌. ಬಿ.ಪಿ.ಭೀಮಾನಾಯ್ಕ, ಬಿ.ಎಂ.ನಾಗ ರಾಜ. ಕೆ.ಸಿ.ಕೊಂಡಯ್ಯ, ಅಲ್ಲಂ ವೀರ ಭದ್ರಪ್ಪ, ಎಂ.ಪಿ.ರವೀಂದ್ರ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್‌, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್‌. ಗಿರಿಮಲ್ಲಪ್ಪ, ಜಿ.ಪಂ.ಸದಸ್ಯ ಎ.ಮಾನಯ್ಯ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಮೇಯರ್‌ ಜಿ.ವೆಂಕಟರಮಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್‌.ಆಂಜ ನೇಯುಲು, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಆಮ್ಲನ್‌ ಆದಿತ್ಯ ಬಿಸ್ವಾಸ್‌, ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಆರ್‌.ಚೇತನ್‌ ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಜನಸಾಗರ....
ಜಿಲ್ಲೆಯ ವಿವಿಧ ತಾಲ್ಲೂಕಿನ ನೂರಾರು ಹಳ್ಳಿಗಳ ಜನರಷ್ಟೇ ಅಲ್ಲದೆ ನೆರೆಯ ಜಿಲ್ಲೆ ಚಿತ್ರದುರ್ಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಂದಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಹಗಲುವೇಷ, ವೀರಗಾಸೆ, ನಂದಿ ಧ್ವಜ, ಸ್ತ್ರೀಶಕ್ತಿ ಗುಂಪಿನ ಮಹಿಳೆಯರ ಪೂರ್ಣಕುಂಭ ಮೆರವಣಿಗೆ, ಮರಗಾಲು ಕುಣಿತ, ಭರತನಾಟ್ಯ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ನಗರದ ನಾಲ್ಕು ದಿಕ್ಕುಗಳಲ್ಲೂ ಭಾರಿ ವಾಹನಗಳು ಪ್ರವೇಶಿಸದಂತೆ ಪೊಲೀಸ್ ಬಿಗಿಭದ್ರತೆ ಕೈಗೊಂಡಿದ್ದರು. ಸಮಾವೇಶಕ್ಕೆ ಜನರನ್ನು ಕರೆತರುವ ವಾಹನಗಳನ್ನು ನಿಲ್ಲಿಸಲು ನಗರ ಹೊರ ವಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಜನರು ಕಾಲ್ನಡಿಗೆಯಲ್ಲಿ ಬರುತ್ತಿದ್ದುದ ರಿಂದ ಜಾತ್ರೆಯ ದೃಶ್ಯ ನಿರ್ಮಾಣವಾಗಿತ್ತು. ಎಲ್ಲೆಡೆಯಿಂದ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಜನರಿಂದ ನಗರವು ತುಂಬಿಹೋಗಿತ್ತು. ಸಮಾವೇಶದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

‘ಹೈ–ಕ ಮೀಸಲಾತಿ ವಿರೋಧಿಸಿದ್ದ ಬಿಜೆಪಿಗೆ ಧಿಕ್ಕಾರ ಕೂಗಿ’
ಬಳ್ಳಾರಿ: ‘ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಮೀಸಲಾತಿ ಕಲ್ಪಿಸಲು ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರಲು ಬಿಜೆಪಿ ಮುಖಂಡ ಎಲ್‌.ಕೆ.ಅಡ್ವಾಣಿ ವಿರೋಧಿಸಿದ್ದರು. ಅಂಥ ಪಕ್ಷದವರಿಗೆ ಜಿಲ್ಲೆಯ ಜನ ಧಿಕ್ಕಾರ ಕೂಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿದ್ದಾಗ ಜಿ.ಜನಾರ್ದನರೆಡ್ಡಿ, ಬಿ.ಶ್ರೀರಾಮುಲು ಬೊಕ್ಕಸವನ್ನು ಲೂಟಿ ಮಾಡಿ ರಾಜ್ಯ ವನ್ನು ಹಾಳು ಮಾಡಿದರು. ಗಣಿಗಾರಿಕೆ ಯಿಂದ ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾದಾಗ ಯಡಿಯೂರಪ್ಪ ನೇರವಾಗಿ ಚೆಕ್‌ ತೆಗೆದುಕೊಂಡರು’ ಎಂದರು. ಯಡಿಯೂರಪ್ಪ ಪುತ್ರರ ಪ್ರೇರಣಾ ಟ್ರಸ್ಟ್‌ಗೆ ಜೆಎಸ್‌ಡಬ್ಲ್ಯು ಸಂಸ್ಥೆಯಿಂದ ದೇಣಿಗೆ ರೂಪದಲ್ಲಿ ₹10 ಕೋಟಿ ಕಿಕ್‌ಬ್ಯಾಕ್‌ ಪಡೆದ ಆರೋಪದ ಪ್ರಕರಣವನ್ನು ಮುಖ್ಯ ಮಂತ್ರಿ ಉಲ್ಲೇಖಿಸದೇ ತಮ್ಮ ಮಾತಿನಲ್ಲಿ ನೆನಪಿಸಿದರು.

ಪಾದಯಾತ್ರೆ ನೆನಪು: ಭಾಷಣದ ಆರಂಭದಲ್ಲೇ ಮುಖ್ಯಮಂತ್ರಿ, ತಾವು ವಿರೋಧ ಪಕ್ಷದ ನಾಯಕನಾಗಿದ್ದಾಗ 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಬಂದಿದ್ದನ್ನು ಸ್ಮರಿಸಿದರು.  ‘ಅಂದು ಪಾದಯಾತ್ರೆ ನಡೆಸಿದ ಸಂದರ್ಭದಲ್ಲೂ ನಗರದಲ್ಲಿ ಐತಿ ಹಾಸಿಕ ಸಮಾವೇಶ ನಡೆದಿತ್ತು. ಆ ಬಳಿಕ ಕಾಂಗ್ರೆಸ್‌ಗೆ ರಾಜ್ಯದ ಮತದಾರ ರು ಸಂಪೂರ್ಣ ಅಧಿಕಾರ ನೀಡಿ ಆಶೀರ್ವದಿಸಿದ್ದರು. ಈಗ ಅದೇ ಬಳ್ಳಾರಿಯಲ್ಲಿ ಎರಡನೇ ಐತಿಹಾಸಿಕ ಸಮಾವೇಶ ನಡೆಯುತ್ತಿದೆ.

ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್‌ ಅನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. ‘ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಕೊಲೆ ಪ್ರಕರಣವೊಂದರಲ್ಲಿ ಜೈಲು ಕಂಡಿರುವ ಅದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಲು ನೈತಿಕ ಹಕ್ಕಿಲ್ಲ’ ಎಂದು ಪ್ರತಿಪಾದಿಸಿದರು.

ದಲಿತರಿಗೆ ಮಾಡಿದ್ದೇನು?: ‘ದಲಿತರ ಮನೆಯಲ್ಲಿ ಉಪಾಹಾರ ಸೇವಿಸುವ ಯಡಿಯೂರಪ್ಪ ಅವರು ಅಧಿಕಾರದ ಲ್ಲಿದ್ದಾಗ, ದಲಿತರಿಗಾಗಿ ಏನು ಮಾಡಿದರು? ಸಾಲ ಮನ್ನಾ ಮಾಡಲು ಸರ್ಕಾರದಲ್ಲಿ ನೋಟು ಮುದ್ರಿಸುವ ಯಂತ್ರವಿಲ್ಲ ಎಂದು ಹೇಳಿಕೆ ದಾಖಲಿಸಿದ ಯಡಿಯೂರಪ್ಪ ಅವರಿಗೆ ರೈತರ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ. ಅವರಂತೆ ಸತತ ಸುಳ್ಳು ಹೇಳುವ ರಾಜಕಾರಣಿ ಯಾವ ಕಾಲದಲ್ಲೂ ಇರಲಿಲ್ಲ’ ಎಂದರು.

ಸಚಿವರಾದ ಎಚ್‌. ಆಂಜನೇಯ, ಉಮಾಶ್ರೀ, ಸಂತೋಷ್‌ಲಾಡ್‌ ಅವರೂ ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಾರ್ಯವೈಖರಿಯನ್ನು ಖಂಡಿಸಿದರು.

ಗೌರಿ ಹತ್ಯೆ : ಸಿಬಿಐಗೆ ವಹಿಸಲು ಬದ್ಧ- ಸಿಎಂ
ಬಳ್ಳಾರಿ: ‘ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು,

ನಗರದಲ್ಲಿ ಮಂಗಳವಾರ ನಡೆದ ‘ಬಳ್ಳಾರಿ ಅಭಿವೃದ್ಧಿ ಮತ್ತು ಸಾಮಾಜಿಕ ಸಮಾವೇಶ’ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಿಬಿಐ ತನಿಖೆಗೆ ವಹಿಸಲೇಬೇಕು ಎಂದು ಗೌರಿ ಕುಟುಂಬದ ಸದಸ್ಯರು ಆಗ್ರಹಿಸಿಲ್ಲ. ಆದರೂ ಆ ವಿಷಯದಲ್ಲಿ ಸರ್ಕಾರಕ್ಕೆ ಯಾವ ಹಿಂಜರಿಕೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಿಬಿಐ  ಅನ್ನು ಆ ಪಕ್ಷದವರು ಚೋರ್‌ ಬಚಾವೋ ಸಂಸ್ಥೆ ಎಂದು ಜರಿದಿದ್ದರು. ಆದರೆ ಕಾಂಗ್ರೆಸ್‌ ಹಾಗೆ ಕರೆಯುವುದಿಲ್ಲ.

ಮಹಾರಾಷ್ಟ್ರದ ದಾಬೋಲ್ಕರ್‌ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿ ಎರಡು ವರ್ಷವಾಯಿತು. ಆದರೆ ಆರೋಪಿಗಳು ಸಿಕ್ಕಿಲ್ಲ. ಹಾಗೆಂದು ಸಿಬಿಐ ಅನ್ನು ಹೀಗಳೆಯುವುದಿಲ್ಲ. ಸಿಬಿಐಗೆ ವಹಿಸಿದಾಕ್ಷಣ ಆರೋಪಿಗಳು ಸಿಕ್ಕಿಬಿಡುತ್ತಾರಾ’ ಎಂದರು.

‘ಜನವರಿಯಿಂದಲೇ ಆರ್ಥಿಕ ವರ್ಷ ಆಚರಿಸುವ ಕೇಂದ್ರ ಸರ್ಕಾರದ ನಿಲುವನ್ನು ರಾಜ್ಯ ಅನುಸರಿಸಲು ಆಗುವುದಿಲ್ಲ. ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ಫೆಬ್ರುವರಿಯಲ್ಲೇ ಆಯವ್ಯಯವನ್ನು ಮಂಡಿಸಲು ನಿರ್ಧರಿಸಿರುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವೀರಶೈವ–ಲಿಂಗಾಯಿತ ಧರ್ಮ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಶಾಲೆ ಕಟ್ಟಡ ನಿರ್ಮಾಣಕ್ಕೆ ಸಂಸ್ಥೆ: ಸೇಠ್
ಬಳ್ಳಾರಿ: ‘ಕರ್ನಾಟಕ ಪೊಲೀಸ್‌ ಗೃಹಮಂಡಳಿ ಮಾದರಿಯಲ್ಲಿ, ಶಾಲೆ–ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಸಂಸ್ಥೆಯೊಂದನ್ನು ಸ್ಥಾಪಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್‌ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಲೋಪ ತಡೆಗಟ್ಟಲು ಪ್ರತ್ಯೇಕ ಸಂಸ್ಥೆ ಅಗತ್ಯವಾಗಿದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ’ ಎಂದರು. ‘ಸಮೀಕ್ಷೆ ಪ್ರಕಾರ ರಾಜ್ಯದ 36,000 ಸರ್ಕಾರಿ ಶಾಲೆ ಕೊಠಡಿಗಳು ಪೂರ್ಣ ಶಿಥಿಲ ವಾಗಿವೆ. 31,000 ಕೊಠಡಿಗಳು ದುರಸ್ತಿಯಾಗಬೇಕಾಗಿವೆ. 19,000 ಕೊಠಡಿಗಳನ್ನು ನಿರ್ಮಿಸಬೇಕಾಗಿದೆ’ ಎಂದರು.

ಶೇ 50 ಅಂಕ ಕಡ್ಡಾಯ: ‘ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಐಚ್ಛಿಕ ವಿಷಯದಲ್ಲಿ ಶೇ 50 ಅಂಕ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಉತ್ತಮ ಶಿಕ್ಷಣ ನೀಡುವವರು ಉತ್ತಮ ಅಂಕಗಳನ್ನೂ ಗಳಿಸಿರಬೇಕು ಎಂಬ ಕಾರಣಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಿಸಲಾಗಿದೆ. ಮುಂದೆ ಇದೇ ಮಾದರಿಯಲ್ಲಿ  ನೇಮಕಾತಿ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT