ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಯಲ್ಲೇ ಕಾಲಹರಣ ಮಾಡಬೇಡಿ

Last Updated 13 ಸೆಪ್ಟೆಂಬರ್ 2017, 9:04 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲಾಮಟ್ಟದ ಅಧಿಕಾರಿ ಗಳು ಕೇವಲ ಕಚೇರಿ ಕೆಲಸಗಳಿಗೆ ಅಂಟಿಕೊಂಡು ಕುಳಿತುಕೊಳ್ಳಬಾರದು. ತಿಂಗಳಿಗೆ ಒಮ್ಮೆಯಾದರೂ ಸಂಬಂಧಿಸಿದ ಕ್ಷೇತ್ರಗಳಿಗೆ, ಕಚೇರಿಗಳಿಗೆ ಭೇಟಿ ನೀಡಿ ಕಾಮಗಾರಿಗಳ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ನಂತರವೇ ಸಭೆಯಲ್ಲಿ ಅದರ ಬಗ್ಗೆ ಖಚಿತ ಮಾಹಿತಿ ನೀಡಬೇಕು’ ಎಂದು ಸಂಸದ ಆರ್‌.ಧ್ರುವನಾರಾಯಣ ತಾಕೀತು ಮಾಡಿದರು.

ನಗರದಲ್ಲಿ ಮಂಗಳವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕಚೇರಿಯಲ್ಲಿ ಕುಳಿತು ನೋಟ್‌ ಮಾಡಿಕೊಂಡು ಸಭೆಗೆ ಬರಬೇಡಿ. ನೀವು ಇಷ್ಟಕ್ಕೇ ಸೀಮಿತವಾದರೆ ಕೆಳಹಂತದಲ್ಲಿ ಕೆಲಸಗಳು ಹೇಗೆ ನಡೆಯುತ್ತಿವೆ ಎಂದು ಅರ್ಥವಾಗುವುದಿಲ್ಲ. ಇದು ಅಭಿವೃದ್ಧಿಯ ನಿಧಾನಗತಿಗೆ ಕಾರಣವಾಗುತ್ತದೆ. ಆದ್ದರಿಂದ ಸ್ವಚ್ಛತೆ, ಶಿಕ್ಷಣ, ಕೃಷಿ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳೂ ತಮ್ಮ ವ್ಯಾಪ್ತಿಗೆ ಭೇಟಿ ನೀಡಿ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು’ ಎಂದು ಅವರು ಸೂಚಿಸಿದರು.

ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆದಾಗ ಯಾರೂ ಮೈಗಳ್ಳತನ ತೋರುವ ಹಾಗಿಲ್ಲ. ಮುಂಚಿತವಾಗಿ ತಿಳಿಸಿದ ಮೇಲೂ ಕೆಲ ಅಧಿಕಾರಿಗಳು ಸಭೆಗೆ ಬಂದಿಲ್ಲ. ಅಂಥವರಿಗೆ ‘ಷೋಕಾಸ್’ ನೋಟಿಸ್‌ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿಗೆ ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಮಾಹಿತಿ ಪಡೆದ ಅವರು, ಡಿಸೆಂಬರ್‌ ಒಳಗೆ ಎಲ್ಲ ಕಾಮಗಾರಿಗಳೂ ಮುಗಿಯಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಜಿಲ್ಲೆಯಲ್ಲಿ ಒಟ್ಟು 1,353 ಗ್ರಾಮಗಳಿದ್ದು, ಹಲವು ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಶೇ 75ರಷ್ಟು ಪ್ರಗತಿ ಸಾಧಿಸಿದ್ದು, ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದರು.

364 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ನಿಗದಿ ಮಾಡಿದ್ದು, ಇದರಲ್ಲಿ 247 ಘಟಕ ಸ್ಥಾಪನೆಯಾಗುವೆ. 100 ಘಟಕಗಳ ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಅಂಗನವಾಡಿ ಕೇಂದ್ರಗಳು, ಆಶ್ರಮ, ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಗಮನ ಕೊಡಿ ಎಂದು ಸಂಸದರು ತಿಳಿಸಿದರು.

ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹೊಂಡ ಹೆಚ್ಚು ಉಪಯುಕ್ತವಾಗುತ್ತಿವೆ. ರೈತರೂ ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಆದ್ದರಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆಸ್ಥೆ ವಹಿಸಬೇಕು. ಇದಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ರೈತರೊಂದಿಗೆ ಸಭೆಗಳನ್ನು ನಡೆಸಿ ಮನವರಿಕೆ ಮಾಡಬೇಕು ಎಂದರು.
ಸ್ವಚ್ಛ ಭಾರತ ಆಂದೋಲನಕ್ಕೆ ಸಂಬಂಧಿಸಿದಂತೆ ನಂಜನಗೂಡು ತಾಲ್ಲೂಕು ತೀರ ಹಿಂದುಳಿದಿದೆ. ಅಧಿಕಾರಿಗಳು ಇತ್ತ ಹೆಚ್ಚು ಗಮನ ಕೊಡಬೇಕು. ಇಂತಿಷ್ಟು ದಿನಗಳಲ್ಲಿ ಇಷ್ಟು ಶೌಚಾಲಯ ನಿರ್ಮಿಸಬೇಕು ಎಂಬ ಗ್ರಾಫ್‌ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಧ್ರುವನಾರಾಯಣ ಹೇಳಿದರು.

ಆಶ್ರಮ ಶಾಲೆಗಳು ಸುಧಾರಿಸಲಿ: ಒಟ್ಟು 21 ಆಶ್ರಮ ಶಾಲೆಗಳಿದ್ದು, ಇವುಗಳಲ್ಲಿ ಆರು ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕಿದೆ. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೂ ಉತ್ತಮ ಕಟ್ಟಡ ನಿರ್ಮಿಸ ಲಾಗಿದೆ. ಆದರೆ, ಪೀಠೋಪಕರಣ ಸಂದಾಯವಾಗಿಲ್ಲ ಎಂಬ ದೂರು ಇದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಸಮಸ್ಯೆ ನೀಗಿಸಲಾಗುವುದು ಎಂದು ಸಂಸದ ಹೇಳಿದರು.

ಕೃಷಿ, ತೋಟಗಾರಿಕೆ, ‘ಸೆಸ್ಕ್‌’, ಅರಣ್ಯ ಇಲಾಖೆ, ಆರೋಗ್ಯ, ಆಯುಷ್‌ ಇಲಾಖೆಗಳ ಬಗ್ಗೆಯೂ ಸಂಸದರು ದೀರ್ಘವಾಗಿ ಚರ್ಚಿಸಿದರು. ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ, ಜಿಲ್ಲಾಧಿಕಾರಿ ಡಿ.ರಂದೀಪ್‌, ಸಿಇಒ ಪಿ.ಶಿವಶಂಕರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT