ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ಬೇಕಿದೆ ರಾಜಕೀಯ ಸ್ಥಿರತೆ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ರಾಜಕಾರಣವೇ ಹೀಗೆ. ಅಲ್ಲಿನ ವಿದ್ಯಮಾನಗಳು ಸಿನಿಮಾಕ್ಕಿಂತ ರೋಚಕ. ಏಕೆಂದರೆ ಅಲ್ಲಿ ಸಿನಿಮಾ ಪ್ರಭಾವ ಜಾಸ್ತಿ. ಈಗ ಆಡಳಿತಾರೂಢ ಎಐಎಡಿಎಂಕೆ ಒಳಗೆ ನಡೆದಿರುವುದು, ಈಗ ನಡೆಯುತ್ತಿರುವುದು ಕೂಡ ಅದೇ ರೀತಿಯ ಸಿನಿಮೀಯ ಮಾದರಿಯ ಬೆಳವಣಿಗೆಗಳು. ಪಕ್ಷದ ಪ್ರಶ್ನಾತೀತ ನಾಯಕಿಯಾಗಿದ್ದ ಜಯಲಲಿತಾ ನಿಧನದ ನಂತರ ಏಕಾಏಕಿ ಮುನ್ನೆಲೆಗೆ ಬಂದು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ವಿ.ಕೆ. ಶಶಿಕಲಾ ಈಗ ತಮ್ಮ ಹುದ್ದೆಯಿಂದ ವಜಾ ಆಗಿದ್ದಾರೆ. ಪಕ್ಷದ ಸಾಮಾನ್ಯ ಪರಿಷತ್ತು ಮಂಗಳವಾರ ಈ ಕುರಿತು ತೆಗೆದುಕೊಂಡ ನಿರ್ಣಯ ದೂರಗಾಮಿ ಪರಿಣಾಮ ಬೀರಲಿದೆ. ಶಶಿಕಲಾ ಮಾಡಿದ್ದ ಎಲ್ಲ ನೇಮಕಗಳು ರದ್ದಾಗಿವೆ. ಪಕ್ಷವನ್ನು ಕೈವಶ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದ ಉಪ ಪ್ರಧಾನ ಕಾರ್ಯದರ್ಶಿಯಾಗಿ ಸೋದರಳಿಯ ಟಿ.ಟಿ.ವಿ. ದಿನಕರನ್‌ ಅವರನ್ನು ಶಶಿಕಲಾ ನೇಮಿಸಿಕೊಂಡಿದ್ದರು. ಅದಕ್ಕೂ ಈಗ ಬೆಲೆ ಇಲ್ಲ. ಜಯಾ ಸಾವಿನ ಬೆನ್ನಲ್ಲೇ ಅವರು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಶಾಸಕರ ದೊಡ್ಡ ಗುಂಪನ್ನು ಚೆನ್ನೈ ಹೊರವಲಯದ ರೆಸಾರ್ಟ್‌ನಲ್ಲಿ ಕೂಡಿ ಹಾಕಿದ್ದರು. ಹಕ್ಕು ಮಂಡಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದರು. ಆದರೆ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಜೈಲುಪಾಲಾದ ಕಾರಣ ಮುಖ್ಯಮಂತ್ರಿ ಹುದ್ದೆಯೂ ಅವರ ಪಾಲಿಗೆ ಕನ್ನಡಿಯ ಗಂಟಾಗಿಯೇ ಉಳಿಯಿತು. ಅಧಿಕಾರ ನಡೆಸಬೇಕು ಎನ್ನುವವರಿಗೆ ಬೇಕಿರುವುದು ಅನುಭವ, ಬದ್ಧತೆ, ಜನಸೇವೆಯ ತುಡಿತ. ಅದ್ಯಾವುದೂ ಇಲ್ಲದೆ ಶರವೇಗದಲ್ಲಿ ರಾಜಕೀಯದ ತುತ್ತತುದಿಗೇರಿದ್ದ ಅವರು ಅಷ್ಟೇ ವೇಗದಲ್ಲಿ ಪಾತಾಳಕ್ಕೆ ಕುಸಿದಿದ್ದಾರೆ. ಪಕ್ಷದ ಹುದ್ದೆಯಿಂದ ಅವರ ವಜಾ, ದಿಟ್ಟ ಮತ್ತು ಸ್ವಾಗತಾರ್ಹ ನಿರ್ಧಾರ. ಸಾಮಾನ್ಯ ಪರಿಷತ್ತಿನ 2000ಕ್ಕೂ ಹೆಚ್ಚು ಸದಸ್ಯರ ಪೈಕಿ ಶೇ 95ರಷ್ಟು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು ಎನ್ನುವುದು ಈ ನಿರ್ಣಯಕ್ಕೆ ಇನ್ನಷ್ಟು ಬಲ, ಮಾನ್ಯತೆ ತಂದುಕೊಟ್ಟಿದೆ. ಆದರೆ, ‘ಇನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯೇ ಇರುವುದಿಲ್ಲ; ದಿವಂಗತ ಜಯಲಲಿತಾ ಅವರೇ ಶಾಶ್ವತ ಪ್ರಧಾನ ಕಾರ್ಯದರ್ಶಿ’ ಎನ್ನುವುದು ಮಾತ್ರ ಅಸಂಗತ. ಜಯಾ ಹೆಸರಿನ ಊರುಗೋಲನ್ನೇ ಪಕ್ಷ ಇನ್ನೂ ಎಷ್ಟು ಕಾಲ ನೆಚ್ಚಿಕೊಂಡಿರುತ್ತದೆ? ಇದರ ನಡುವೆ ಪಕ್ಷವನ್ನು ಮುನ್ನಡೆಸಲು ಸಂಯೋಜಕ, ಜಂಟಿ ಸಂಯೋಜಕ ಹುದ್ದೆ ಸೃಷ್ಟಿಸಿ ಹಿರಿಯ ನಾಯಕರಿಬ್ಬರೂ ಹಂಚಿಕೊಂಡಿರುವುದು, ಒಮ್ಮತ ಪ್ರದರ್ಶಿಸಿರುವುದು ಒಳ್ಳೆಯ ಬೆಳವಣಿಗೆ.

ಇವೆಲ್ಲವುಗಳ ನಂತರವಾದರೂ ಅಲ್ಲಿ ರಾಜಕೀಯ ಅಸ್ಥಿರತೆ ಪೂರ್ಣ ನಿವಾರಣೆ ಆಗಬೇಕಾಗಿತ್ತು. ಸದ್ಯಕ್ಕಂತೂ ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಜಯಾ ನಿಧನದ ಬಳಿಕ ಎಐಎಡಿಎಂಕೆ ಪಕ್ಷ ಮತ್ತು ಅದರ ಸರ್ಕಾರಕ್ಕೆ ಒಂದರ ಹಿಂದೊಂದು ಕಂಟಕಗಳು ಎದುರಾಗುತ್ತಲೇ ಇವೆ. ಮೊದಲಿಗೆ ಪಕ್ಷ ಹೋಳಾಗಿ, ಕೆಲವರು ಆಗಿನ ಮುಖ್ಯಮಂತ್ರಿ ಪನ್ನೀರಸೆಲ್ವಂ ಹಿಂದೆ, ಇನ್ನು ಕೆಲವರು ಶಶಿಕಲಾ ಹಿಂದೆ ಹೋಗಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಶಿಕಲಾ ಬಣದ ಪಳನಿಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಒಲಿಯಿತು. ಆದರೆ ಎರಡೂ ಬಣಗಳು ಕಚ್ಚಾಟ ಮುಂದುವರಿಸಿದ್ದು ರಾಜ್ಯದ ಆಡಳಿತದ ಮೇಲೆ ದುಷ್ಪರಿಣಾಮ ಬೀರಿತ್ತು. ಈ ಗೊಂದಲಗಳೆಲ್ಲ ಮುಗಿದು ಆ. 21ರಂದು ಪನ್ನೀರಸೆಲ್ವಂ, ಪಳನಿಸ್ವಾಮಿ ಗುಂಪುಗಳು ಒಗ್ಗೂಡುವಾಗ ಶಶಿಕಲಾ ಅವರನ್ನು ಪಕ್ಷದ ಎಲ್ಲ ವ್ಯವಹಾರಗಳಿಂದ ದೂರ ಇಡಬೇಕು ಎಂಬ ಒಪ್ಪಂದವಾಗಿತ್ತು. ಈಗ ಆ ಬೇಡಿಕೆಯೂ ಈಡೇರಿದೆ. ಆದರೆ 19 ಬಂಡುಕೋರ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ದಿನಕರನ್‌, ಸರ್ಕಾರದ ಸ್ಥಿರತೆಗೆ ಮಗ್ಗುಲ ಮುಳ್ಳಾಗಿಯೇ ಇದ್ದಾರೆ. ತಮ್ಮ ಹುದ್ದೆಗೆ ಕುತ್ತು ಬಂದ ನಂತರ ಅವರು ಆಡಿದ ಮಾತುಗಳನ್ನು ಕೇಳಿದರೆ ಅವರೇನೂ ಸೋಲೊಪ್ಪಿಕೊಳ್ಳುವಂತೆ ಕಾಣುತ್ತಿಲ್ಲ. ಹೀಗಾಗಿ ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಇಂತಹ ಅನಿಶ್ಚಯ ಮುಂದುವರಿಯುವುದು ಒಳ್ಳೆಯದಲ್ಲ. ಅಲ್ಲಿ ರಾಜಕೀಯ ಗೊಂದಲಗಳಿಗೆ ಆದಷ್ಟು ಬೇಗ ತೆರೆಬೀಳಬೇಕು; ಸ್ಥಿರತೆ ಮೂಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT