ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿನ ಮಧ್ಯೆ ಸಮಾಧಾನದ ನಿಟ್ಟುಸಿರು!

Last Updated 14 ಸೆಪ್ಟೆಂಬರ್ 2017, 6:03 IST
ಅಕ್ಷರ ಗಾತ್ರ

ಧಾರವಾಡ: ‘ಖರೇನೂ ಮಾಯದಂಥಾ ಮಳಿ ಬಂತ್ರೀ.. ಹುಚ್ಚು ನೆರಿಯಾಗ ಕೊಚ್ಚಿ ಹೋದ್ವಿ, ಇನ್‌ ನಮ್‌ ಕತಿ ಮುಗೀತು ಅನ್ಕೊಂತಾ ನೀರಿನ್ಯಾಗ ತೇಲಾಕ ಹತ್ತಿದ್ವಿ, ಮುಂದ ದಂಡಿ ಸಿಕ್ಕಿದ್ದರಿಂದ ಹೋದ ಜೀವಾ ಹೊಳ್ಳಿ ಬಂದಂಗಾತು..’ ಎಂದು ಹೇಳುವಾಗ ಪ್ರವಾಹದಲ್ಲಿ ಪಾರಾಗಿ ಬಂದಿದ್ದ ಹನುಮಂತಪ್ಪ ಲಕ್ಕಣ್ಣವರ ಕೈಗಳು ಇನ್ನೂ ಅದರುತ್ತಿದ್ದವು.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಶಿರೂರು ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿಯ ಇನಾಮಹೊಂಗಲದಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ಎರಡೂ ಗ್ರಾಮಗಳ ನಡುವಿನ ಕುಂಟಿಹಳ್ಳ ಹಾಗೂ ಕಲ್ಲಹಳ್ಳ ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ  ಹನುಮಂತಪ್ಪ ಹಾಗೂ ಇತರ ಮೂವರು, ಒಂದೂವರೆ ದಿನ ಕಳೆದರೂ ಆಘಾತದಿಂದ ಹೊರಬಂದಿರಲಿಲ್ಲ.

ಮತ್ತೊಂದೆಡೆ ಇವರಿದ್ದ ಎರಡು ಟಂಟಂ ವಾಹನಗಳು ದೂರದ ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ಅದನ್ನು ತೆಗೆಯಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದ ದೃಶ್ಯವೂ ಕಂಡುಬಂತು. ಆರು ತಿಂಗಳ ಹಿಂದೆ ಹನುಮಂತಪ್ಪ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭಾರ ಹೊರುವ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ ಟಂಟಂ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಜೀವನೋಪಾಯಕ್ಕೆ ಆಧಾರವಾಗಿದ್ದ ವಾಹನ ನಜ್ಜುಗುಜ್ಜಾಗಿರುವುದರಿಂದ ಬದುಕುಳಿದ ಸಂಭ್ರಮವನ್ನೂ ಅನುಭವಿಸಲಾಗದೆ ಹನುಮಂತಪ್ಪ ಅವರ ತಾಯಿ ಹಾಗೂ ಪತ್ನಿ ಮನೆಯ ಕಂಬಕ್ಕೆ ಒರಗಿ ಕೂತಿದ್ದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಹನುಮಂತಪ್ಪ, ‘ಸಂಜಿ ಏಳಕ್ಕ ಜೋರಾಗಿ ಮಳಿ ಸುರೀತು. ಎರಡು ತಾಸು ಸುರಿದ ಮಳೆಗೆ ಕುಂಟಿಹಳ್ಳದ ರಸ್ತೆ ಮ್ಯಾಗ ನೀರು ಹತ್ತಿತ್ತು. ಇಂಥಾ ನೀರಿನ್ಯಾಗ ಮುಂದ ಹೋಗೂದಾಗಲ್ಲ ಅಂತ ಹೊಳ್ಳಿ ಇನಾಮಹೊಂಗಲಕ್ಕ ಹೋಗೂಣು ಅಂತಾ ಟಂಟಂ ತಿರುಗಿಸಿದೆ. ಅಲ್ಲಿ ಕಲ್ಲಹಳ್ಳವೂ ತುಂಬಿ ರಸ್ತೆ ಮೇಲೆ ನೀರು ಹರಿಯಾಕ ಹತ್ತಿತ್ತು. ಮುಂದ ಹೋಗೋದ್ರಾಗ ಟಂಟಂ ಬಂದ್‌ ಆತು. ಶಿರಕೋಳ ಕಡೆಯಿಂದ ಬರ್ತಿದ್ದ  ಟಂಟಂ ಕೂಡಾ ನೀರಿನ್ಯಾಗ ನಿಂತುಬಿಡ್ತು. ಆಗ ಎರಡೂ ಟಂಟಂಗಳು ನೀರಿನಲ್ಲಿ ಕೊಚ್ಚಿಹೋಗದಂತೆ ಹಗ್ಗ ಹಾಕಿ ಕಟ್ಟಿದ್ವಿ’ ಎಂದು ಘಟನೆ ವಿವರಿಸಿದರು.

‘ಮೊಣಕಾಲಿಗಿಂತ ಕೆಳಗಿದ್ದ ನೀರು, ನೋಡ್‌ ನೋಡ್ತಿದ್ದಂಗ ಒಂದು ಆಳು ಮುಳುಗುವಷ್ಟರ ಮಟ್ಟಿಗೆ ಮ್ಯಾಲ ಬಂತು. ಏನಾಗ್ತೈತಿ ಅಂತಾ ತಿಳ್ಕೊಳ್ಳೋದ್ರಾಗ ನಾನು, ಇನಾಮಹೊಂಗಲದ ಮುಕ್ತುಂಸಾಬ್‌, ಸಂತೋಷ, ಆನಂದ ಶಿರೂರ ನೀರಿನಲ್ಲಿ ಕೊಚ್ಚಿಕೊಂಡು ಹ್ವಾದ್ವಿ.. ಮುಕ್ತುಂಸಾಬ್‌ ಮತ್ತು ನಾನು ಅಂದಾಜು 20 ನಿಮಿಷ, ಮುಳುಗುತ್ತಾ ಏಳುತ್ತಾ ಮುಂದೆ ಹೊಂಟ್ವಿ.

ಕಾಲಿಗೆ ಜಾಲಿಗಿಡದ ಮುಳ್ಳು ಕೊರೆಯಾಕ ಹತ್ತಿತ್ತು. ಈಜಾಕ ಬರ್ತಿದ್ರಿಂದ ನಾವು ಮುಂದ ಹೊಂಟ್ವಿ.. ಮುಂದ ದಂಡಿ ಸಿಕ್ಕಿದ್ರಿಂದ ಮ್ಯಾಲ ಹತ್ತಿದ್ವಿ. ರೋಡ್‌ಗೆ ಬಂದಾಗ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ರು’ ಎಂದು ಆ ಘಟನೆಯನ್ನು ವಿವರಿಸಿದರು.

ನಾಲ್ಕು ತಾಸು ಕಂಬದ ಮೇಲಿದ್ದರು!
ಇನಾಮಹೊಂಗಲದ ಸಂತೋಷ ಮತ್ತು ಆನಂದ ಶಿರೂರ ಸೋದರರು, ಶಿರಕೋಳಕ್ಕೆ ಹೋಗಲು ಟಂಟಂ ನಲ್ಲಿ ಬರುತ್ತಿ ದ್ದರು. ಚಾಲಕನ ಸಲಹೆಯಂತೆ ಟಂಟಂನ ಹಿಂಬದಿ ಇಬ್ಬರೂ ನಿಂತಿದ್ದರು. ಆಗ ರಭಸದಿಂದ ನೀರು ಬಂದದ್ದರಿಂದ ತೇಲಿ ಹೋದರು. ಈಜು ಬಾರದ ಆನಂದ ನೀರು ಕುಡಿಯಲಾರಂಭಿಸಿದರು.

ತಮ್ಮನನ್ನು ಕೈಬಿಡದ ಅಣ್ಣ ಸಂತೋಷ ಅಲ್ಲೇ ಇದ್ದ ವಿದ್ಯುತ್‌ ಕಂಬ ಏರಿ, ಸೋದರನಿಗೂ ಹತ್ತಲು ಹೇಳಿದರು. ಸತತವಾಗಿ 3ರಿಂದ 4 ಗಂಟೆಗಳ ಕಾಲ ಕಂಬದ ಮೇಲೆ ಇದ್ದ ಇವರನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು ಹಗ್ಗ ನೀಡಿ ಕೆಳಗೆ ಇಳಿಸಿದರು.

‘ಮನೆಗೆ ಹೋಗೋ ಹೊತ್ತಿಗೆ ರಾತ್ರಿ ಎರಡಾಗಿತ್ತು. ಒಂದು ಚಿನ್ನದ ಸರ, ಹತ್ತುಸಾವಿರ ರೂಪಾಯಿ ರೊಕ್ಕ, ಮೊಬೈಲ್‌ ಫೋನ್‌ ನೀರಿ ನ್ಯಾಗ ಹರಕೊಂಡು ಹೋದ್ವು. ಸಿದ್ಧಾ ರೂಢ ಮಠದಿಂದ ತಂದಿದ್ದ ಕಟ್ಟು ಕಾಯಿ ಕೊನೀವರೆಗೂ ಕೈಯಾಗ ಇತ್ತು. ಅದ ನಮ್ಮನ್ನ ಕಾಪಾಡಿರ ಬಹುದು’ ಎಂದು ಅವರು ನಿಟ್ಟುಸಿರುಬಿಟ್ಟರು.

* * 

ಮಳಿ ಇಲ್ದ ಎರಡು ವರ್ಷಾತು.. ಬರೀ ಕರಿ ಹೊಲ ಕಾಣ್ತಿದ್ವು, ಆದ್ರ ಈಗ ಮಳಿ ಬಂದರೂ ಅನಾಹುತ ಬಾಳಾ ಆಗೈತಿ
ಹನುಮಂತಪ್ಪ ಲಕ್ಕಣ್ಣವರ
ಪ್ರವಾಹದಿಂದ ಪಾರಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT