ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ನೆಲಕ್ಕುರುಳಿದ ಮೆಕ್ಕೆಜೋಳ

Last Updated 14 ಸೆಪ್ಟೆಂಬರ್ 2017, 6:15 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲ್ಲೂಕಿನಲ್ಲಿ ಮಂಗಳ ವಾರ ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದೆ. ಗಾಳಿಯೊಂದಿಗೆ ಸುರಿದ ಭಾರಿ ಮಳೆಗೆ ತೆನೆಗಳು ಬಲಿಯುವ ಹಂತದಲ್ಲಿದ್ದ ಗೋವಿನ ಜೋಳದ ಬೆಳೆಗಳು ನೆಲಕ್ಕೆ ಹಾಸಿದ್ದು, ಹಾನಿ ಸಂಭವಿಸಿದೆ. ಶಿರಗಂಬಿ, ಹಿರೇಯಡಚಿ, ಚಿಕ್ಕಯಡಚಿ, ಜೋಗಿಹಳ್ಳಿ, ನೂಲಗೇರಿ, ಅಬಲೂರು, ಕಳಗೊಂಡ, ದೂಪದಹಳ್ಳಿ ಮುಂತಾದ ಗ್ರಾಮಗಳಲ್ಲಿ ಹಾನಿಯ ಪ್ರಮಾಣ ಹೆಚ್ಚಿದೆ.

‘ಭಾರಿ ಗಾಳಿ ಮತ್ತು ಮಳೆಯಿಂದ ಫಲಕ್ಕೆ ಬಂದ ಗೋವಿನ ಜೋಳದ ಬೆಳೆ ನೆಲಕ್ಕುರುಳಿದ್ದು, ರೈತರಿಗೆ ತುಂಬಾ ನಷ್ಟ ಉಂಟಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಜೋಗಿಹಳ್ಳಿ ಗ್ರಾಮದ ರೈತ ಮುಖಂಡ ಬಸವರಾಜ ಬಣಕಾರ ಆಗ್ರಹಿಸಿದರು.

ಬುಧವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದ ತಹಶೀಲ್ದಾರ್ ಎ.ವಿ.ಶಿಗ್ಗಾವಿ, ‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಸುಮಾರು 125 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಜಂಟಿಯಾಗಿ ಸಮೀಕ್ಷೆ ನಡೆಸಿ ಹಾನಿಯ ವರದಿ ನೀಡಬೇಕೆಂದು ಸೂಚಿಸಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರಿ ಗಾಳಿಯಿಂದ ವಿವಿಧ ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ರಾಣೇಬೆನ್ನೂರು–ಹಿರೇಕೆರೂರ ರಸ್ತೆಯಲ್ಲಿ ತಾವರಗಿ ಗ್ರಾಮದ ಸಮೀಪ ಮರ ಉರುಳಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅನೇಕ ಕಡೆಗಳಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿದ್ದು, ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ರಭಸದ ಮಳೆಯಿಂದ ಕೆಲವು ಕೆರೆಗಳ ಅಂಗಳದಲ್ಲಿ ನೀರು ಕಾಣುತ್ತಿದ್ದು, ರೈತರಲ್ಲಿ ಒಂದಿಷ್ಟು ಸಂತಸ ಮೂಡಿಸಿದೆ.

ಬ್ಯಾಡಗಿಯಲ್ಲಿ ಉತ್ತಮ ಮಳೆ
ಬ್ಯಾಡಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು. ಸಿಡಿಲು ಹಾಗೂ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಇದರಿಂದ ತಾಲ್ಲೂಕಿನ ಅಳಲಗೇರಿ, ಕಲ್ಲೆದೇವರು, ಹೆಡಿಗ್ಗೊಂಡ ಹಾಗೂ ಕಾಗಿನೆಲೆ ಭಾಗಗಳಲ್ಲಿ ಸುಮಾರು 6 ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವಾಗಿ ರುವುದನ್ನು ಹೊರತುಪಡಿಸಿದರೆ ಯಾವುದೇ ಹಾನಿ ಸಂಭವಿಸಿಲ್ಲ. ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎನ್ನಲಾಗಿದೆ.

ಮುಂಜಾನೆಯಿಂದಲೂ ಬಿಸಿ ವಾತಾವರಣವಿತ್ತು. ಸಂಜೆಯಾದರೂ ಮಳೆಯ ಲಕ್ಷಣಗಳು ಕಂಡು ಬರಲಿಲ್ಲ. ರಾತ್ರಿ 9.45ಕ್ಕೆ ಗುಡುಗು ಸಿಡಿಲಿನ ಆರ್ಭಟ ಆರಂಭವಾಯಿತು. ಒಮ್ಮೆಲೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಯವರೆಗೂ ಸುರಿಯಿತು. ಬಳಿಕ ವಿರಾಮ ನೀಡಿದ ವರುಣ ಮತ್ತೆ ಸುರಿಯಲು ಆರಂಭಿಸಿತು. ರಭಸದ ಮಳೆಗೆ ಪಟ್ಟಣದ ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡು ಬಂದಿತು.

ಬ್ಯಾಡಗಿಯಲ್ಲಿ ಗರಿಷ್ಠ 42ಮಿ.ಮೀ ಮಳೆಯಾಗಿದ್ದು, ಹೆಡಿಗ್ಗೊಂಡದಲ್ಲಿ 32.2ಮಿ.ಮೀ ಹಾಗೂ ಕಾಗಿನೆಲೆ ಅತೀ ಕಡಿಮೆ 16.4ಮಿ.ಮೀ ಮಳೆಯಾಗಿದೆ. ತಾಲ್ಲೂಕಿನಲ್ಲಿ ಇದುವರೆಗೆ ಸೆಪ್ಟೆಂಬರ್‌ನಲ್ಲಿ ಸರಾಸರಿ 84.93ಮಿ.ಮೀ ಮಳೆಯಾಗಿದ್ದು, ಪಟ್ಟಣ ದಲ್ಲಿ ಅತೀ ಹೆಚ್ಚು 140.ಮೀ ಮಳೆ ಬಿದ್ದ ಬಗ್ಗೆ ದಾಖಲಾಗಿದೆ. ಹೆಡಿಗ್ಗೊಂಡದಲ್ಲಿ 86.2ಮಿ.ಮೀ ಮಳೆಯಾಗಿದ್ದರೆ, ಕಾಗಿನೆಲೆ ಭಾಗದಲ್ಲಿ ಅತೀ ಕಡಿಮೆ 28.4ಮಿ.ಮೀ ಮಳೆ ಸುರಿದಿದೆ.

ಕುಮುದ್ವತಿಗೆ ಜೀವಕಳೆ
ರಟ್ಟೀಹಳ್ಳಿ: ಕುಮುದ್ವತಿ ನದಿ  ಬುಧವಾರ ಬೆಳಿಗ್ಗೆಯಿಂದ ತುಂಬಿ ಹರಿಯಲು ಪ್ರಾರಂಭಿಸಿದ್ದಾಳೆ. ಪ್ರಸ್ತುತ ನದಿಗೆ ತುಂಗಾ ಮೇಲ್ದಂಡೆ ಕಾಲುವೆಯೇ ಆಸರೆಯಾಗಿದೆ.
ಕುಮುದ್ವತಿ ನದಿ ತುಂಬಿ ಹರಿದು ರಾಣೆಬೆನ್ನೂರ ತಾಲ್ಲೂಕು ಪ್ರವೇಶಿಸಿ ತುಂಗಭದ್ರಾ ನದಿ ಸೇರಿ ಮತ್ತೆ ತುಂಗಾ ಮೇಲ್ದಂಡೆ ಕಾಲುವೆ ಎಂಬ ಹೆಸರಿನ ಮೂಲಕ ರಟ್ಟೀಹಳ್ಳಿ ಭಾಗವನ್ನು ಪ್ರವೇಶಿಸುತ್ತಿದ್ದ ನೀರು ಈಗ ಮತ್ತೆ ನದಿ ಸೇರುವಂತಾಗಿದ್ದು ನದಿಯ  ನೀರನು ನದಿಗೆ ಸೇರಿಸಿ ಎಂಬ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.

ಸಾಮಾನ್ಯವಾಗಿ ಐತಿಹಾಸಿಕ ಮದಗ–ಮಾಸೂರಿನ ಕೆಂಚಮ್ಮನ ಕೆರೆ ತುಂಬಿ ಹರಿದರೆ ಮಾತ್ರ ಕುಮುದ್ವತಿ ನದಿಗೆ ಜೀವ ಕಳೆ ಬರುತ್ತದೆ. ನಾಲ್ಕು ವರ್ಷಗಳಿಂದ ನೀರಿನ ಕೊರತೆ ಅನು ಭವಿಸಿದ ಕೆರೆ ಈ ವರ್ಷ ಸಂಪೂರ್ಣ ನೀರಿಲ್ಲದೆ ಖಾಲಿಯಾಗಿತ್ತು. ಈಗ ಮಲೆ ನಾಡು ಮತ್ತು ಶಿಕಾರಿಪುರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಶಿಕಾರಿಪುರದ ಅಂಜನಾಪುರ ಜಲಾ ಶಯದಿಂದ ನೀರು ಹೊರಬಿಡುತ್ತಿರು ವುದರಿಂದ ಮದಗ–ಮಾಸೂರಿನ ಕೆರೆ ನೀರಿನಿಂದ ತುಂಬುತ್ತಿದೆ. ಸಂಪೂರ್ಣ ಕೆರೆ ತುಂಬಿದ ಮೇಲೆ ಕುಮುದ್ವತಿ ನದಿ ತುಂಬಿ ಹರಿಯಲು ಪ್ರಾರಂಭಿಸುತ್ತಾಳೆ.

ಇತಿಹಾಸದ ಪ್ರಕಾರ ಕುಮದ್ವತಿ ನದಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದ ಅಗಸ್ತ್ಯ ತೀರ್ಥದ ಬಳಿ ಜನ್ಮ ತಾಳುತ್ತಾಳೆ. ಇಲ್ಲಿಂದ ಮುಂದೆ ಬೆಟ್ಟ ಗುಡ್ಡದ ಮೂಲಕ ಮದಗಮಾಸೂರಿನ ಕೆರೆಯ ಬಳಿ ಸೇರಿ ಸಂಪೂರ್ಣ ಕುಮದ್ವತಿ ನದಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾಳೆ.

ಕುಮುದ್ವತಿ ನದಿ ಹರಿಯುತ್ತಿರುವ ತಿಪ್ಪಾಯಿಕೊಪ್ಪ, ಮಾಸೂರು, ರಾಮ ತೀರ್ಥ, ಖಂಡೀಬಾಗೂರ, ಹಿರೇ ಮೊರಬ, ಚಿಕ್ಕಮೊರಬ, ಯಲಿವಾಳ, ಚಪ್ಪರದಹಳ್ಳಿ, ರಟ್ಟೀಹಳ್ಳಿ, ಮಳಗಿ, ತೋಟಗಂಟಿ, ಸಣ್ಣಗುಬ್ಬಿ, ಹಿರೇಮಾದಾ ಪುರ, ಕುಡಪಲಿ, ಚಿಕ್ಕಾಮಾಗನೂರು, ಹಿರೆಮಾಗನೂರು, ರಾಣೆಬೆನ್ನೂರ ತಾಲ್ಲೂಕಿನ ಕುಪ್ಪೇಲೂರ, ಲಿಂಗದಹಳ್ಳಿ, ಮಣಕೂರು, ಹೊಳೆಆನ್ವೇರಿ ಮುಂತಾದ ಗ್ರಾಮಗಳಿಗೆ ಜೀವ ನೀಡುವ ಶಕ್ತಿ ಹೊಂದಿದೆ. ಅಲ್ಲಲ್ಲಿ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಿ ನೀರು ನಿಲ್ಲುವಂತೆ ಮಾಡಿದರೆ ಬೇಸಿಗೆಯಲ್ಲೂ ಈ ಭಾಗದ ಜನತೆ ನೀರಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ರೈತರು ಹೇಳುತ್ತಾರೆ.

ಬಿತ್ತನೆ ಬೀಜ ಲಭ್ಯ
ಬ್ಯಾಡಗಿ: ಈಗಾಗಲೆ ಎಲೆಕೋಸು ಬೆಳೆ ಪಡೆದುಕೊಂಡಿರುವ ರೈತರು ಹಿ.ಂಗಾರು ಬಿತ್ತನೆಗೆ ಹೊಲವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಳ, ಸೂರ್ಯಕಾಂತಿ, ಗೋದಿ, ಅಲಸಂದಿ, ಮುಂತಾದ ಹಿಂಗಾರು ಬಿತ್ತನೆ ಬೀಜಗಳ ಸಂಗ್ರಹಣೆ ಆರಂಭವಾಗಿದೆ. ರೈತ ಬಾಂಧವರು ಹಿಂಗಾರು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಖರೀದಿಸು ವಂತೆ ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

* * 

ಈ ವರ್ಷ ಕುಮದ್ವತಿ ಸಂಪೂರ್ಣ ಬತ್ತಿ ಹೋಗಿತ್ತು ಆಗಸ್ಟ್‌ ತಿಂಗಳಲ್ಲಿ ನೀರೇ ಇರಲಿಲ್ಲ. ಈಗ ನೀರು ಹರಿದು  ಬರುತ್ತಿದೆ. ಆದರೆ ಈ ನೀರಿನಿಂದ ಬೆಳೆ ಕಾಪಾಡಲು ಆಗಲ್ಲ
ರಾಮಚಂದ್ರಪ್ಪ ವೈಶ್ಯರ
ರೈತ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT