ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಜೀವ ಉಳಿಸುವ ಪ್ರಯತ್ನ ಕೈಗೂಡಲಿಲ್ಲ

Last Updated 14 ಸೆಪ್ಟೆಂಬರ್ 2017, 6:42 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ಅರಬೈಲ್‌ ಘಟ್ಟದಲ್ಲಿ ಬುಧವಾರ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕ್ಸೈಲೊ ಕಾರು ನಜ್ಜುಗುಜ್ಜಾಗಿತ್ತು. ಅದರೊಳಗೆ ಮಗು ಸೇರಿದಂತೆ ಇಬ್ಬರು ಬದುಕುಳಿದಿದ್ದರು. ಸ್ಥಳೀಯ ಗ್ರಾಮದ ಯುವಕರು ಅವರ ಜೀವ ಉಳಿಸಲು ಮುಂದಾದರು. ಆದರೆ ಹೊರಗೆ ತೆಗೆಯುವಷ್ಟರಲ್ಲಿ ಮಗು ಕೊನೆಯುಸಿರೆಳೆಯಿತು.

ಕಾರಿನಿಂದ ಮೃತದೇಹ ತೆಗೆಯಲು ಅರಬೈಲ್‌ ಗ್ರಾಮಸ್ಥರಾದ ಶ್ರೀಧರ ನಾಯ್ಕ, ದಿನೇಶ ನಾಯ್ಕ, ಸುರೇಶ ಕುಮಾರ, ಶೇಖರ ಸಿದ್ದಿ, ಅನಂತಸಿದ್ದಿ ಗುರು ಆಚಾರಿ ನೆರವಾದರು. ಹಿಂಬದಿಯ ಆಸನದಲ್ಲಿ ಸಿಲುಕಿಕೊಂಡಿದ್ದ ಐವರ ಮೃತದೇಹವನ್ನು ಹರಸಾಹಸಪಟ್ಟು ಹೊರತೆಗೆದರೆ, ಮುಂಬದಿ ಆಸನದಲ್ಲಿದ್ದವರ ಮೃತದೇಹವನ್ನು ಕ್ರೇನ್‌ ಬಳಸಿ ಹೊರತೆಗೆಯಲಾಯಿತು. ಗಂಭೀರ ಗಾಯಗೊಂಡಿದ್ದ ಗಜಾನನ ಬಾಪು ಮೇತ್ರಿ ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸ್ಥಳಕ್ಕೆ ಎಸ್ಪಿ ಭೇಟಿ: ಜಿಲ್ಲೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಹೆಚ್ಚುವರಿ ಎಸ್ಪಿ ಗೋಪಾಲಕೃಷ್ಣ ಬ್ಯಾಕೋಡ ಹಾಗೂ ಶಿರಸಿ ಡಿವೈಸ್ಪಿ ನಾಗೇಶ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಪುರ ಇನ್‌ಸ್ಪೆಕ್ಟರ್‌ ಡಾ.ಮಂಜುನಾಥ ನಾಯಕ ಹಾಗೂ ಪಿಎಸ್ಐ ಶ್ರೀಧರ್ ತಮ್ಮ ಸಿಬ್ಬಂದಿಯೊಂದಿಗೆ ಅಪಘಾತವಾದ ವಾಹನ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ದೊಡ್ಡ ಸಪ್ಪಳ ಕೇಳಿ ಬಂತು.. ‘ಅರಬೈಲ್‌ ಘಟ್ಟದ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದರೂ ಇಷ್ಟೊಂದು ಭೀಕರ ಅಪಘಾತ ನೋಡಿದ್ದು ಇದೇ ಮೊದಲು. ದೊಡ್ಡ ಸಪ್ಪಳ ಕೇಳಿ ಮನೆಯಿಂದ ಓಡಿಬಂದೆವು. ಏನಾಯಿತೆಂದು ನೋಡುವಷ್ಟರಲ್ಲಿ ಲಾರಿಯ ಮುಂಭಾಗಕ್ಕೆ ಅಪ್ಪಳಿಸಿದ್ದ ಕಾರಿನ ಒಳಗಿದ್ದ ಹಲವರು ಜೀವ ಬಿಟ್ಟಿದ್ದರು.

ಮುಂದಿನ ಸೀಟಿನಲ್ಲಿದ್ದ ಒಬ್ಬನಿಗೆ ಹಾಗೂ ಒಂದು ಮಗುವಿಗೆ ಜೀವವಿತ್ತು. ಕ್ರೇನ್ ತಂದು ಹೊರ ತೆಗೆಯುವಷ್ಟರಲ್ಲಿ ಮಗುವೂ ಅಸುನೀಗಿತು’ ಎಂದು ಪ್ರತ್ಯಕ್ಷದರ್ಶಿ ಇಡಗುಂದಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶ್ರೀಧರ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು. ‘ಅರಬೈಲ್‌ ಘಟ್ಟದಲ್ಲಿ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಈ ಭಾಗದ ಹೆದ್ದಾರಿಯನ್ನು ವಿಸ್ತರಣೆ ಮಾಡಬೇಕು’ ಎಂದೂ ಆಗ್ರಹಿಸಿದರು. 

ಅಪಘಾತ; ಒಬ್ಬ ಸಾವು, 13ಕ್ಕೂ ಹೆಚ್ಚು ಜನರಿಗೆ ಗಾಯ
ಭಟ್ಕಳ:  ತಾಲ್ಲೂಕಿನ ಸೋಡಿಗದ್ದೆ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಸ್ ಮತ್ತು ಲಾರಿ ನಡುವೆ ಮಂಗಳವಾರ ತಡ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುಂದಾಪುರದ ಬೋಳಕಟ್ಟೆ ನಿವಾಸಿ, ಮೀನು ಲಾರಿ ಚಾಲಕ ಮೊಹಿದ್ದೀನ್ ಅಬ್ದುಲ್ ಮೃತರು.

ಗೋವಾದಿಂದ ಮಂಗಳೂರಿನ ಕಡೆಗೆ ಹೊರಟಿದ್ದ ಮೀನು ಲಾರಿ ಹಾಗೂ ಮಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆಗ ಖಾಸಗಿ ಬಸ್‌ ಹಿಂದೆ ಬರುತ್ತಿದ್ದ ಮತ್ತೊಂದು ಬಸ್‌ ಡಿಕ್ಕಿ ಹೊಡೆದಿದೆ.

ಮಂಗಳೂರಿನ ರಘುಪತಿ ಹೆಗಡೆ , ಮಲ್ಪೆಯ ಸಂದೀಪ ಶೆಟ್ಟಿ, ವಿಜಯಲಕ್ಷ್ಮೀ ಸುಂದರ ಶೆಟ್ಟಿ, ಉಡುಪಿಯ ವಸಂತ ನಾರಾಯಣ ಶೆಟ್ಟಿ, ರೋಣದ ಸುಭಾಷಚಂದ್ರ ಬಸಪ್ಪ ಕಮ್ಮಾರ್, ಬಾಗಲಕೋಟೆಯ ವಿದ್ಯಾ ನಾರಾಯಣ ಶೇಟ್, ಹಿರಿಯಡ್ಕದ ಸವಿತಾ ಶಂಕರ ಶೆಟ್ಟಿ, ಮಂಗಳೂರಿನ ಗಣೇಶ ವೆಂಕಟೇಶ ಹೆಬ್ಬಾರ್, ಗದುಗಿನ ದಾವುಲ್ ಸಾಬ್, ಬೆಳಗಾವಿಯ ಲೋಕೇಶ ಭೀಮಪ್ಪ, ಧಾರವಾಡದ ರುದ್ರಗೌಡ ಪಾಟೀಲ್, ಬೆಳಗಾವಿಯ ಅಯೂಬ್ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ, ಉಡುಪಿ, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.   ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಯಲ್ವಡಿ ಕವೂರ್‌ ದೇವಿದಾಸ ಈರಾ ನಾಯ್ಕ ಪ್ರಕರಣ ದಾಖಲಿಸಿದ್ದಾರೆ.

ಚೂಡಾಕರ್ಮಕ್ಕೆ ಹೋದವರು ಮರಳಲಿಲ್ಲ
ಯಲ್ಲಾಪುರ: ‘ಚೂಡಾಕರ್ಮಕ್ಕೆ ಹೋದವರು ಕ್ರಿಯಾ ಕರ್ಮದ ಪಾಲಾದರು, ಯಾತ್ರೆ ಮುಗಿಸಿ ಮನೆಗೆ ಬರುತ್ತಿದ್ದವರು, ಮಸಣದತ್ತ ಹೊರಟರು’ ಹೀಗೆ ವಿವೇಕ ಘಾಟಕೆ ಅವರ ಸಂಬಂಧಿಕರು ಅಲ್ಲಿ ಹೇಳುತ್ತ ಹನಿಗಣ್ಣಾದರು. ಇಡೀ ಕುಟುಂಬವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚೂಡಾಕರ್ಮಕ್ಕೆ ಹೋಗಿದ್ದರು.

ಮುಗಿಸಿ ವಾಪಸ್ ಊರಿಗೆ ಮರಳುತ್ತಿರುವಾಗ ತಾಲ್ಲೂಕಿನ ಅರಬೈಲ್ ಬಳಿ ನಡೆದ ಅಪಘಾತದಲ್ಲಿ ವಿವೇಕ, ಅವರ ಪತ್ನಿ ಮೇನಕಾ, ಮಕ್ಕಳಾದ ವೈಷ್ಣವಿ ಹಾಗೂ ವರದರಾಜ ಸಾವನ್ನಪ್ಪಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT