ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಯ ಏತ ನೀರಾವರಿಗೆ ಅನುದಾನ ಬಿಡುಗಡೆ ಮಾಡಿ’

Last Updated 14 ಸೆಪ್ಟೆಂಬರ್ 2017, 7:31 IST
ಅಕ್ಷರ ಗಾತ್ರ

ಕುಷ್ಟಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್‌ 22ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಫಲಾನುಭವಿಗಳ ಸಮಾವೇಶದಲ್ಲಿ ಈ ಭಾಗದ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕೃಷ್ಣಾ ಬಿ ಸ್ಕೀಂ ಯೋಜನೆಗೆ ಹಣ ಬಿಡುಗಡೆ ಮಾಡುವುದಾಗಿ ಘೋಷಿಸುವ ಮೂಲಕ ಬದ್ಧತೆ ಪ್ರದರ್ಶಿಸಲಿ’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅವರು ಅವರಿಗೆ ಸವಾಲು ಹಾಕಿದರು.

ಕೃಷ್ಣಾ ಬಿ ಸ್ಕೀಂ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿ ಸೆ. 20ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಹೋರಾಟಕ್ಕೆ ಸಂಬಂಧ ದಂತೆ ಬುಧವಾರ ಇಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

'ಈ ಭಾಗದ ನೀರಾವರಿ ಯೋಜನೆಗೆ ಪ್ರತಿ ವರ್ಷ ₹ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ವರ್ಷ ಕಳೆದರೂ ಕೊಪ್ಪಳ ಏತ ನೀರಾವರಿಗೆ ಬಿಡಿಗಾಸು ಬಿಡುಗಡೆ ಮಾಡಲಿಲ್ಲ. ಹಾಗಾಗಿ ಯಾವ ಪುರುಷಾರ್ಥಕ್ಕೆ ಇವರು ಜಿಲ್ಲೆಗೆ ಬರುತ್ತಿದ್ದಾರೆ' ಎಂದು ಪ್ರಶ್ನಿಸಿದರು.

'ನೀರಾವರಿ ವಿಷಯದಲ್ಲಿ ಬದ್ಧತೆ ಹೊಂದಿರುವ ಬಿಜೆಪಿ ಯೋಜನೆ ಕಾರ್ಯ ಗತಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಿದ್ದು, ಸ್ಪಷ್ಟ ಸಂದೇಶ ರವಾನಿಸುವ ಸಲುವಾಗಿಯೇ ಬೃಹತ್ ಹೋರಾಟ ಹಮ್ಮಿಕೊಂಡಿದೆ. ಇದರಲ್ಲಿ ಪಕ್ಷದ ಹಿತಕ್ಕಿಂತ ರೈತರ ನೀರಾವರಿ ಕನಸು ಈಡೇರಿಸುವ ಹೊಣೆಗಾರಿಕೆಯನ್ನು ನಿಭಾಯಿಸಲಿದೆ’ ಎಂದರು. ‘ಸಮಾವೇಶಕ್ಕೆ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಹಿರಿಯ ನಾಯಕರು, ಕೇಂದ್ರದ ಸಚಿವರು ಬರಲಿದ್ದಾರೆ. ಈ ಸಂಬಂಧ ಪೂರ್ವಭಾವಿಯಾಗಿ ಜನ ಜಾಗೃತಿಗಾಗಿ ಸೆ. 17 ರಿಂದ 19ರವರೆಗೆ ತಾಲ್ಲೂಕಿನಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ' ಎಂದು ವಿವರಿಸಿದರು.

ಮಾಜಿ ಶಾಸಕ ಕೆ.ಶರಣಪ್ಪ ಮಾತನಾಡಿ, 'ಅನೇಕ ವರ್ಷಗಳ ಹೋರಾಟ ನಡೆದರೂ ಕೃಷ್ಣಾ ಬಿ ಸ್ಕೀಂಗೆ ಚಾಲನೆ ಸಿಕ್ಕಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ. ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ನೀಡಿದ್ದನ್ನೇ ಮುಖ್ಯಮಂತ್ರಿ ನೀರಾವರಿ ಯೋಜನೆಗೆ ನೀಡಿದ್ದೇವೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ' ಎಂದು ಆರೋಪಿಸಿದರು.

‘ತಮ್ಮದೇ ಸರ್ಕಾರ ಇದ್ದರೂ ನೀರಾವರಿ ಯೋಜನೆಗೆ ಒತ್ತಡ ಹೇರುವಲ್ಲಿ ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ಹಸನ್‍ಸಾಬ್ ದೋಟಿಹಾಳ ವಿಫಲರಾಗಿದ್ದಾರೆ. ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಇವರಿಗೆ ಆಸಕ್ತಿಯೇ ಇಲ್ಲ. ಸರ್ಕಾರದ ಕಣ್ಣು ತೆರೆಸುವ ಸಲುವಾಗಿಯೇ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶರಣು ತಳ್ಳಿಕೇರಿ, ಶಶಿಧರ ಕವಲಿ ಮಾತನಾಡಿದರು. ತಾಲ್ಲೂಕು ಪ.ಪಂ ಮೋರ್ಚಾ ಅಧ್ಯಕ್ಷ ವೀರೇಶ ನಾಯಕ ಇದ್ದರು. ವೀರಣ್ಣ ಸಬರದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT