ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ್ಯುಕೂಪವಾದ ರಸ್ತೆ– ದೂರು

Last Updated 14 ಸೆಪ್ಟೆಂಬರ್ 2017, 10:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಬಸವಭವನದ ಪಕ್ಕದ ರಸ್ತೆಯಿಂದ ಮಾದಗೊಂಡನಹಳ್ಳಿ ಮೊದಲಾದ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿ ಹಾದು ಹೋಗಿರುವ ಮೋರಿ ಬಾಯ್ದೆರೆದಿದ್ದು, ರಸ್ತೆಯಲ್ಲಿನ ಹಳ್ಳಗಳು ಮೃತ್ಯುಕೂಪವಾಗಿ ಪರಿಣಮಿಸಿದೆ.

ತಾಲ್ಲೂಕಿನ ಬಸವಭವನದ ವೃತ್ತದಿಂದ ತೆರಳುವ ಈ ಮಾರ್ಗದಲ್ಲಿ ಕೋಳೂರು, ಹೊಸಹಳ್ಳಿ, ಹಸನ್‌ಘಟ್ಟ ಮೊದಲಾದ ಕಡೆಗಳಿಗೆ ವಾಹನಗಳು ಸಂಚರಿಸುತ್ತಿವೆ. ಮೋರಿಯ ಪಕ್ಕದಲ್ಲಿಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದು, ನೂರಾರು ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ ಎಂದು ಎಂದು ಮಾದಗೊಂಡನಹಳ್ಳಿ ಗ್ರಾಮಸ್ಥರು ವಿವರಿಸಿದ್ದಾರೆ.

ಮೋರಿ ಇರುವ ರಸ್ತೆ ಶಿಥಿಲವಾಗಿ ದೊಡ್ಡ ಹಳ್ಳಗಳು ಬಿದ್ದಿರುವುದರಿಂದ ಇಲ್ಲಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳು ಓಡಾಡುವುದೇ ಕಷ್ಟವಾಗಿದೆ. ಕತ್ತಲಿನಲ್ಲಿ ವೃದ್ಧರು ಹಾಗೂ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಇವೆ. ಸರಕು ಸಾಗಣೆ ವಾಹನಗಳು ಹಾಗೂ ಇತರೆ ವಾಹನಗಳು ಈ ದಾರಿಯಲ್ಲಿ ಸಂಚರಿಸಲಾಗದೇ ಗ್ರಾಮಸ್ಥರು ಪರಿತಪಿಸುವಂತಾಗಿದೆ.

ಇದರಿಂದಾಗಿ ಕಂಟನಕುಟೆ ಕೋಳೂರು ಮಾರ್ಗದಲ್ಲಿ ಸುತ್ತಿಹಾಕಿಕೊಂಡು ಬರಬೇಕಿದ್ದು, 3 ರಿಂದ 4 ಕಿ.ಮೀ ಹೆಚ್ಚಾಗಿದೆ. ಮಾದಗೊಂಡನಹಳ್ಳಿ ಹಾಲಿನ ಡೈರಿ ವಾಹನವೂ ಈ ಮಾರ್ಗದಲ್ಲಿ ಬರಲಾಗದೇ, ಹಾಲಿನ ಕ್ಯಾನ್‌ಗಳನ್ನು ಡೈರಿಯವರೇ ಸಾಗಿಸುವ ಪರಿಸ್ಥಿತಿ ಉಂಟಾಗಿದೆ.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಮಾದಗೊಂಡನಹಳ್ಳಿ ಗ್ರಾಮಸ್ಥರು ದೂರಿದ್ದಾರೆ. ನಗರದ ಹೊರವಲಯದ ರಾಜೀವ್‌ಗಾಂಧಿ ಕಾಲೊನಿಯಲ್ಲಿನ ಮಳೆ ನೀರು ಇದೇ ರಸ್ತೆಯ ಕೆಳಗಿನ ಮೋರಿ ಮುಖಾಂತರ ಕುರುಬರ ಹಳ್ಳಿ ಕೆರೆ ಸೇರುತ್ತದೆ.

ಆದರೆ ಮೋರಿ ಶಿಥಿಲವಾಗಿರುವುದರಿಂದ ಮಳೆ ನೀರು ರಸ್ತೆಗೆ ನುಗ್ಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಮೊದಲು ಮೋರಿಯಲ್ಲಿ ಸರಾಗವಾಗಿ ನೀರು ಹರಿಯುವಂತೆ ದುರಸ್ತಿ ಮಾಡಿ ರಸ್ತೆಯನ್ನು ಸರಿಪಡಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT