ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಡಿಯಷ್ಟೇ ಕೆರೆ ಪವಿತ್ರ, ಸಂರಕ್ಷಿಸಿ’

Last Updated 15 ಸೆಪ್ಟೆಂಬರ್ 2017, 6:30 IST
ಅಕ್ಷರ ಗಾತ್ರ

ಹಾವೇರಿ:‘ದೇವರ ಗುಡಿಯಷ್ಟೇ ಕೆರೆಗಳು ಪವಿತ್ರ. ನಮ್ಮ ಮಕ್ಕಳು, ಮೊಮ್ಮಕ್ಕಿಳಿಗಾಗಿ ಕೆರೆ ಹಾಗೂ ಪ್ರಕೃತಿಯ ರಕ್ಷಣೆ ಮಾಡಿ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೊಳೂರು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದ ಗಣಜೂರು ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇವಸ್ಥಾನ ಮತ್ತು ಕೆರೆಗಳನ್ನು ಹಾಳುಗೆಡವಿದ್ದೇವೆ. ಕೆರೆಗಳ ಅತಿಕ್ರಮಣ ನಡೆದಿದೆ. ಪುರಾತನ ದೇವಸ್ಥಾನಗಳು  ಪಾಳು ಬಿದ್ದಿವೆ’ ಎಂದರು. ‘ಹಿಂದೆ, ಊರ ಕೆರೆಯನ್ನು ಗ್ರಾಮಸ್ಥರೇ ರಕ್ಷಣೆ ಮಾಡುತ್ತಿದ್ದರು. ವರ್ಷಕ್ಕೊಂದು ಬಾರಿ ಹೂಳೆತ್ತಿ ಸ್ವಚ್ಛ ಮಾಡುತ್ತಿದ್ದರು. ಆದರೆ, ನಳ ಬಂದ ಮೇಲೆ ಮಹಿಳೆಯರೂ ಕೆರೆ ಕಡೆ ಹೋಗುವುದು ಕಡಿಮೆಯಾಗಿದೆ. ಕೆರೆ ರಕ್ಷಣೆಗೆ ಮಹಿಳೆಯರು ಮುಂದೆ ಬರಬೇಕು’ ಎಂದರು.

‘ಈ ಬಾರಿ ಕರಾವಳಿ ಸೇರಿದಂತೆ ಮಲೆನಾಡಿನಲ್ಲೂ ಮಳೆಯ ಕೊರತೆಯಿದ್ದು, ರೌದ್ರ ಸ್ಥಿತಿ ಬಗ್ಗೆ ಚಿಂತನೆ ಮಾಡಬೇಕಿದೆ. ರಾಜ್ಯದಲ್ಲಿ ಮೂರು ವರ್ಷದಿಂದ ಬರವಿದ್ದು, ಕೆರೆ ಅಭಿವೃದ್ಧಿ ಪಡಿಸಿ ನೀರು ತುಂಬಿಸುವುದೇ ಪರಿಹಾರ’ ಎಂದರು.

‘ನಾವು ಅನುಭವಿಸುವ ಜಗತ್ತು, ಪ್ರಕೃತಿ, ಆಸ್ತಿಯೆಲ್ಲ ಅಪ್ಪ– ಅಮ್ಮ ನಿಂದ ಬಂದ ಬಳುವಳಿಯಲ್ಲ. ಮೊಮ್ಮಕ್ಕಳು ಕೊಟ್ಟಿರುವ ಲೀಸ್‌. ಇದನ್ನು ಉತ್ತಮ ಸ್ಥಿತಿಯಲ್ಲಿ ಉಳಿಸಿ, ಅವರಿಗೆ ನೀಡಬೇಕು. ಪ್ರಕೃತಿ ರಕ್ಷಿಸಿದಾಗ ಪುಣ್ಯ ಬರುತ್ತದೆ’ ಎಂದರು.

‘ಮನೆಗೊಂದು ಶೌಚಾಲಯ ಹಾಗೂ ಬಯಲು ಶೌಚ ಮುಕ್ತ ಊರಿನಲ್ಲಿ ನೆಮ್ಮದಿ ನೆಲೆಸಲು ಸಾಧ್ಯ’ ಎಂದ ಅವರು, ‘8 ಸಾವಿರ ಶ್ರದ್ಧಾ ಕೇಂದ್ರಗಳನ್ನು ವರ್ಷಕ್ಕೆ ಎರಡು ಬಾರಿ ನಮ್ಮ  ಕಾರ್ಯಕ್ರಮದ ಮೂಲಕ ಸ್ವಚ್ಛ ಮಾಡಿದ್ದಾರೆ’ ಎಂದರು. 

ಮದ್ಯಪಾನ: ‘ಮದ್ಯಪಾನ ನಿಷೇಧವು ಹೆಮ್ಮೆಯ ಮಾತಲ್ಲ. ಸಂಕಟ ತಾಳಲಾರದೇ ಕೈಗೊಳ್ಳುವ ನಿರ್ಧಾರ’ ಎಂದ ಅವರು, ‘ಮದ್ಯ ವ್ಯಸನಿಗಳು ಸುಖಕ್ಕೂ, ದುಖಕ್ಕೂ ಕುಡಿಯುತ್ತಾರೆ. ಕುಡಿತಕ್ಕೊಂದು ನೆಪ ಹೇಳುತ್ತಾರೆ’ ಎಂದರು.

‘ದಂತ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಈಚೆಗೆ ಮದ್ಯ ಮತ್ತು ಡ್ರಗ್ಸ್ ಸೇವನೆಯಿಂದ ಮೃತಪಟ್ಟನು. ಕರುಳ ಬಳ್ಳಿ ಕಳೆದುಕೊಂಡ ಪೋಷಕರ ನೋವು ಹೇಳತೀರದು’ ಎಂದು ಬೇಸರ ವ್ಯಕ್ತಪಡಿಸಿದರು.

‘ದುಶ್ಚಟಗಳಿಂದ ಜೀವನ ನಾಶ ಮಾಡಬೇಡಿ. ಬದುಕು ಮತ್ತೆ ಬರುವುದಿಲ್ಲ. ಸಂಪತ್ತು, ಸಂತೋಷಕ್ಕೆ ದುಶ್ಚಟ ಹಾಗೂ ಕಷ್ಟಬಂದಾಗ ಆತ್ಮಹತ್ಯೆ ಮಾಡಬೇಡಿ. ಬದುಕನ್ನು ಪ್ರೀತಿಸಿ, ಎದುರಿಸಿ, ಅನುಭವಿಸಿ ಪುಣ್ಯವಂತರಾಗಿ’ ಎಂದರು.

ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಮುಜರಾಯಿ ಖಾತೆಯಲ್ಲಿ ಬೇಡಿಕೆ ಹೆಚ್ಚು ಪೂರೈಕೆ ಕಡಿಮೆ. ನನಗೆ ರಾಜ್ಯ ಸಚಿವನಿಂದ ಸಂಪುಟ ದರ್ಜೆಗೆ ಬಡ್ತಿ ನೀಡಿದಂತೆ, ಮುಜರಾಯಿ ಇಲಾಖೆಗೂ ಹೆಚ್ಚಿನ ಅನುದಾನ ನೀಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ’ ಎಂದರು.

‘ಗಣಜೂರು ಬಳಿಯ ಮೊರಂ ಕಣಿಯೊಂದನ್ನು ಕೆರೆ ಮಾಡುವಂತೆ ಜನ ಮನವಿ ಮಾಡಿದ್ದಾರೆ’ ಎಂದ ಅವರು, ‘ಈ ಭಾಗದಲ್ಲಿ ಬಂಗಾರದ ನಿಕ್ಷೇಪವಿದ್ದು, ಕಂಪೆನಿಯೊಂದು 76 ಎಕರೆ ಜಮೀನು ಪಡೆದಿದೆ. ಇದು ಬಂಗಾರದ ನಾಡಾಗಲಿದೆ’ ಎಂದರು.

‘ಕೆರೆ ಜೀವಂತವಾಗಿದ್ದರೆ ಮಾತ್ರ ಆ ಊರಿನ ಜನರ ಬದುಕು ಉಳಿಯಲು ಸಾಧ್ಯ’ ಎಂಬ ಮಾತು ಈಗ ಜನರಿಗೆ ಅರಿವಾಗಿದೆ

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ನಾಗಮ್ಮ ನಾಗಪ್ಪ ಬಂಕಾಪುರ, ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ,  ಕೊಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದಿಲ್‌ಶಾದ್‌ಬಿ ವಿಜಿಅಹ್ಮದ್‌ ಮುಖಾಶಿ, ಯೋಜನೆಯ ಜಯಶಂಕರ ಶರ್ಮಾ, ಮಹಾಬಲ ಕುಲಾಲ್, ಗಣೇಶ ಮರಾಠೆ, ಮೋಹನ ಮೆಣಸಿನಕಾಯಿ, ಮುರಿಗೆಪ್ಪ ಶೆಟ್ಟರ್, ಮಲ್ಲಪ್ಪ ಚಿಕ್ಕಪ್ಪ ಬಣಕಾರ, ಪ್ರಕಾಶ್ ಶೆಟ್ಟಿ ಮತ್ತಿತರರು ಇದ್ದರು.

‘ಭವಿಷ್ಯಕ್ಕಾಗಿ ಸಸಿ ನೆಡಿ’
ಒಂದು ಊರಿನಲ್ಲಿ 95 ವರ್ಷದ ಮುದುಕನೊಬ್ಬ ಮಾವಿನ ಸಸಿ ನೆಡುತ್ತಿದ್ದನು. ಇದನ್ನು ಕಂಡ ರಾಜ, ‘ಮಾವಿನ ಮರ ಬೆಳೆಸಿ, ಹಣ್ಣು ತಿನ್ನುವ ಆಸೆಯೇ?’ ಎಂದು ಪ್ರಶ್ನಿಸಿದನು.
ಅದಕ್ಕೆ ಪ್ರತಿಕ್ರಿಯಿಸಿದ ಮುದುಕ, ‘ನನ್ನ ಮುತ್ತಜ್ಜ, ಅಜ್ಜ ನೆಟ್ಟು ಬೆಳೆಸಿದ ಮರಗಳ ಹಣ್ಣನ್ನು ನಾನು ತಿಂದಿದ್ದೇನೆ. ಇದು, ನನ್ನ ಮೊಮ್ಮಕ್ಕಳಿಗಾಗಿ ನೆಡುತ್ತಿದ್ದೇನೆ’ ಎಂದು ಹೇಳಿದ ಎಂದು ನೀತಿ ಕತೆ ಹೇಳಿದ ಡಿ.ವೀರೇಂದ್ರ ಹೆಗ್ಗಡೆ, ‘ನಾನು, ನನ್ನದು ಬದಲಾಗಿ ನಮ್ಮದು ಎಂಬ ಭವಿಷ್ಯದ ಬಗ್ಗೆ ಚಿಂತನೆ ಮಾಡಿ’ ಎಂದರು.

‘ಸಮಯಕ್ಕೆ ಆದ್ಯತೆ’
ನಿಗದಿತ ಸಮಯಕ್ಕೆ ಬಂದ ಡಿ.ವೀರೇಂದ್ರ ಹೆಗ್ಗಡೆ ಕೆರೆಗೆ ಪೂಜೆ ನೆರವೇರಿಸಿದರು. ಬಳಿಕ ಸಮಯ ವ್ಯರ್ಥ ಮಾಡದೇ ವೇದಿಕೆ ಕಡೆಗೆ ಬಂದರು. ಭಾಷಣ ಆರಂಭಿಸುವಾಗ ಹಾಗೂ ಮಧ್ಯದಲ್ಲಿ ಆಗಾಗ್ಗೆ ವಾಚ್‌ ನೋಡಿಕೊಂಡು ಸಮಯೋ ಚಿತವಾಗಿ ಮಾತು ಮುಗಿಸಿದರು.

* * 

ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಮದ್ಯ ವರ್ಜನ ಶಿಬಿರದ ಕಾಯಂ ಕೇಂದ್ರ ಆರಂಭಿಸಲಾಗುವುದು
ರುದ್ರಪ್ಪ ಲಮಾಣಿ
ಸಚಿವ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT