ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಧಾರಾಕಾರ ಉತ್ತರೆ ಮಳೆ

Last Updated 15 ಸೆಪ್ಟೆಂಬರ್ 2017, 7:14 IST
ಅಕ್ಷರ ಗಾತ್ರ

ಬಾಗಲಕೋಟೆ: ಉತ್ತರೆಯು ಬತ್ತಿದರೆ, ಹೆತ್ತಮ್ಮ ತೊರೆದರೆ, ಸತ್ಯರು ಮಿಥ್ಯ ನುಡಿದರೆ ನಾಡು ಇನ್ನೆತ್ತ ಸೇರುವುದು ಎಂಬ ಸರ್ವಜ್ಞ ಕವಿಯ ಆಶಯ ಕೊನೆಗೂ ಸಾಕಾರಗೊಂಡಿತು. ಉತ್ತರೆ ಮಳೆಯ ಆರ್ಭಟಕ್ಕೆ ಜಿಲ್ಲೆ ತತ್ತರಿಸಿದೆ. ಬುಧವಾರ ರಾತ್ರಿಯಿಡೀ ವರ್ಷಧಾರೆ ಯಾಗಿದೆ. ಬಾಗಲಕೋಟೆ ತಾಲ್ಲೂಕಿನಲ್ಲಿ 41 ಮಿ.ಮೀ ದಾಖಲೆಯ ಪ್ರಮಾಣದ ಮಳೆಯಾಗಿದೆ.

ಮಳೆ–ಗಾಳಿಗೆ ಸಿಲುಕಿ ವಿವಿಧೆಡೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ನವನಗರದ ಜಿಲ್ಲಾ ಕ್ರೀಡಾಂ ಗಣದ ಕಾಂಪೌಂಡ್ ಗೋಡೆ ನೆಲಕಚ್ಚಿದೆ. ಕಲಾದಗಿ–ಶೆಲ್ಲಿಕೇರಿ ನಡುವಿನ ರಸ್ತೆ ಜಲಾವೃತಗೊಂಡು ಆರು ತಾಸು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆಲವು ಕಡೆ ಮನೆ, ಶೆಡ್‌ಗಳ ಮೇಲ್ಛಾವಣಿ ಹಾರಿ ಹೋಗಿದೆ. ಮಳೆ ಜೊತೆಗೆ ಗಾಳಿ, ಗುಡುಗು–ಸಿಡಿಲಿನ ಅಬ್ಬರ ಕೂಡಾ ಜೋರಾಗಿತ್ತು. ಕೆರೆ–ಕಟ್ಟೆಗಳು ತುಂಬಿ ಹರಿದಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಇಲ್ಲಿನ ನವನಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ, ಕಲಾದಗಿ, ತುಳಸಿಗೇರಿ, ಹುನಗುಂದ ತಾಲ್ಲೂಕು ಅಮೀನಗಡ, ಶಿರೂರ, ರಕ್ಕಸಗಿ, ಸೂಳೀಬಾವಿ, ಇಂಗಳಗಿ, ರಾಮಥಾಳ ಭಾಗದಲ್ಲಿ ಉತ್ತಮ ಮಳೆಯಾಗಿದೆ. (ಪತ್ರಾಸ್) ಹಾರಿ ಹೋಗಿವೆ. ಜಮೀನುಗಳಲ್ಲಿ ನೀರು ನಿಂತಿದೆ. ಒಡ್ಡುಗಳು ಕೊಚ್ಚಿಕೊಂಡು ಹೋಗಿವೆ. ರಾತ್ರಿ ವಿದ್ಯುತ್ ಕೈಕೊಟ್ಟ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸಿದರು.

15 ಮನೆಗಳಿಗೆ ಹಾನಿ: ಬಾಗಲಕೋಟೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ತಡರಾತ್ರಿ ಹಾಗೂ ಬೆಳಗಿನ ಜಾವ ಮಳೆ ಬಿರುಸುಗೊಂಡಿತ್ತು. ಪರಿಣಾಮವಾಗಿ ಸಿರಗುಪ್ಪಿ ಹಾಗೂ ತಳಗಿಹಾಳ ಗ್ರಾಮ ದಲ್ಲಿ ತಲಾ ಒಂದು ಮನೆ, ಹೊನ್ನಕಟ್ಟಿ ಹಾಗೂ ಹಿರೇಸಂಸಿಯಲ್ಲಿ ತಲಾ ಎರಡು, ಚಿಕ್ಕಸಂಸಿಯಲ್ಲಿ ಒಂದು, ತುಳಸಿಗೇರಿ ಯಲ್ಲಿ ಮೂರು, ಯಡಹಳ್ಳಿಯಲ್ಲಿ ಎರಡು, ಸೀಮಿಕೇರಿ, ಕಡ್ಲಿಮಟ್ಟಿ ಹಾಗೂ ಭಗವತಿಯಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದೆ. ಯಾವುದೇ ಜನ–ಜಾನುವಾರುಗಳ ಸಾವು–ನೋವು ಸಂಭ ವಿಸಿಲ್ಲ ಎಂದು ತಹಶೀಲ್ದಾರ್ ವಿನಯ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ನೆಲಕಚ್ಚಿದ ಕಾಂಪೌಂಡ್: ನವನಗರದ ಜಿಲ್ಲಾ ಕ್ರೀಡಾಂಗಣದ ಕಂಪೌಂಡ್ ಗೋಡೆ ಮಳೆಯ ಹೊಡೆತ ತಾಳಲಾ ರದೇ ನೆಲ ಕಚ್ಚಿದೆ. ಸುಮಾರು 50 ಮೀಟರ್‌ಗೂ ಹೆಚ್ಚು ದೂರ ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ರಾತ್ರಿ ವೇಳೆ ಕುಸಿದು ಬಿದ್ದಿರುವುದರಿಂದ ಜೀವ ಅಪಾಯ ಆಗಿಲ್ಲ. ‘ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊ ಳ್ಳಲಿ’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಲಾಸ್ ಗಾಡಿ ಹೇಳಿದರು.

ಕಾಲುವೆಗೆ ನೀರು ಇಂದು
ಕಲಾದಗಿ: ಕಳಸಕೊಪ್ಪ ಕೆರೆ ಭರ್ತಿಯಾದ ಕಾರಣ  ಕಾಲುವೆಯಲ್ಲಿ ನೀರು ಹರಿಸುವ ಕಾರ್ಯಕ್ಕೆ ಇದೇ15ರಂದು ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಲಿದ್ದಾರೆ. ಮುಂಜಾನೆ 11 ಗಂಟೆಗೆ ಕೆರೆಯ ದಂಡೆಯ ಮೇಲೆ ಕಾರ್ಯಕ್ರಮ ನಡೆಯಲಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಪಿ.ಎಚ್.ಪೂಜಾರಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ಬಿರಾದಾರ ಪಾಟೀಲ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಲಿಂ ಶೇಖ್ ಪಾಲ್ಗೊಳ್ಳಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗಣ್ಣ ಮುಧೋಳ ತಿಳಿಸಿದ್ದಾರೆ.

ಆರು ಗಂಟೆ ರಸ್ತೆ ಸಂಪರ್ಕ ಕಡಿತ
ಕಲಾದಗಿ: ಸಮೀಪದ ಮಾಲಗಿ, ಜಲಗೇರಿ, ಯಂಡಿಗೇರಿ, ಕಳಸಕೊಪ್ಪ, ಗ್ರಾಮಗಳಲ್ಲಿ ಗುರುವಾರ ಬೆಳಗಿನ ಜಾವ ಭಾರಿ ಮಳೆಯಾಗಿದೆ. ಕಳಸಕೊಪ್ಪ ಕೆರೆ  ಭರ್ತಿಯಾಗಿದೆ. ಹೆಚ್ಚಾದ ಕೆರೆಯ ನೀರು ಶೆಲ್ಲಿಕೇರಿ ಹಳ್ಳಕ್ಕೆ ಹರಿದು ಬಂದ ಪರಿಣಾಮ ಶೆಲ್ಲಿಕೇರಿ–ಕಲಾದಗಿ ರಸ್ತೆ ಸಂಪರ್ಕ ಗುರುವಾರ 6 ಗಂಟೆ ಕಾಲ ಕಡಿತಗೊಂಡಿತ್ತು. ಚಿಕ್ಕ ಶೆಲ್ಲಿಕೇರಿ ಹಿರೇಶೆಲ್ಲಿಕೇರಿ ಹಾಗೂ ಕಳಸಕೊಪ್ಪ ಗ್ರಾಮಗಳ ನಿವಾಸಿಗಳು ಹಾಗೂ ಶಿಕ್ಷಕರು ತುಳಸಿಗೇರಿ ಮಾರ್ಗವಾಗಿ ತೆರಳಿದರು. ಕಲಾದಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತರೆ ಮಳೆ ಧಾರಾಕಾರವಾಗಿ ಹರಿದಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT