ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಮುಗಿದ ಮೇಲೆ ಕೆಆರ್‌ಎಸ್‌ ನೀರು ಬಂತು

Last Updated 15 ಸೆಪ್ಟೆಂಬರ್ 2017, 9:04 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಎಸ್‌ ಜಲಾಶಯದಿಂದ ಜಿಲ್ಲೆಯ ನಾಲೆಗಳಿಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ವರ್ಷದ ಎರಡನೇ ಕಟ್ಟು ನೀರು ಹರಿಸಿದ್ದಾರೆ. ಬಿತ್ತನೆ ಕಾಲ ಮುಗಿದು ಹೋಗಿರುವುದರಿಂದ ರಾಗಿ, ಜೋಳ, ಹುರುಳಿ ಮುಂತಾದ ಅಲ್ಪಾವಧಿ ಬೆಳೆ ಬೆಳೆಯಲಷ್ಟೇ ನೀರು ಸೀಮಿತವಾಗಿದೆ.

ಜೂನ್‌, ಜುಲೈ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ ರೈತರು ಬೀಜ ಬಿತ್ತನೆ ಮಾಡಲಿಲ್ಲ. 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರು ಹೊಂದಲಾಗಿತ್ತು. ಆದರೆ ಶೇ 50ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಯಿತು. ಕೆ.ಆರ್‌.ಎಸ್‌ ಜಲಾಶಯದಿಂದಲೂ ನೀರು ಹರಿಯಲಿಲ್ಲ. ಹೀಗಾಗಿ ರೈತರು ಹೋರಾಟಕ್ಕಿಳಿದರು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆ.9ರಂದು ಮೊದಲ ಕಟ್ಟು ನೀರು ಹರಿಸಲಾಯಿತು. ಆದರೆ ಕಬ್ಬು, ಭತ್ತ ಬೆಳೆಯದಂತೆ ಷರತ್ತು ವಿಧಿಸಿದ ಕಾರಣ ರೈತರು ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಈಗ ಸೆ.13ರಂದು ಎರಡನೇ ಕಟ್ಟು ನೀರು ಹರಿಸಲಾಗಿದ್ದು ಅಲ್ಪಾವಧಿ ಬೆಳೆ ಬೆಳೆದುಕೊಳ್ಳಲು ಸೂಚನೆ ನೀಡಲಾಗಿದೆ. ಜಲಾಶಯದಲ್ಲಿ 105 ಅಡಿ ನೀರು ಇದ್ದರೂ ಭತ್ತ ಬೆಳೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು ರೈತರನ್ನು ಕಾಡುತ್ತಿದೆ.

‘90 ಅಡಿ ನೀರು ಇದ್ದಾಗಲೂ ಒಂದು ಭತ್ತದ ಬೆಳೆ ಬೆಳೆದುಕೊಂಡಿದ್ದೇವೆ. ಆದರೆ ಈ ವರ್ಷ ನೂರು ಅಡಿ ಗಡಿ ದಾಟಿದರೂ ಒಂದೂ ಬೆಳೆ ಬೆಳೆದುಕೊಳ್ಳಲೂ ಸಾಧ್ಯವಾಗಲಿಲ್ಲ. ಎಂಬ ನೋವು ನಮ್ಮನ್ನು ಕಾಡುತ್ತಿದೆ. ಇದು ಸರ್ಕಾರಕ್ಕೆ ರೈತರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ. ನೀರು ಗದ್ದೆಯಲ್ಲಿ ವ್ಯರ್ಥವಾಗಿ ಹರಿಯುತ್ತಿದೆ’ ಎಂದು ತಾಲ್ಲೂಕಿನ ರೈತ ಶಿವಕುಮಾರ ತಿಳಿಸಿದರು.

‘ಈಗ ಬಿಟ್ಟಿರುವ ನೀರಿನಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ಆ ನೀರು ಕೂಡ ತಮಿಳುನಾಡಿಗೆ ಹೋಗುತ್ತದೆ. ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ’ ಎಂದು ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆ ಗ್ರಾಮದ ರೈತ ಎಚ್‌.ಹೊನ್ನೇಗೌಡ ತಿಳಿಸಿದರು.

ನೀರಿನ ಸಂಗ್ರಹ ಅವಶ್ಯ: ‘ಭತ್ತ ಬೆಳೆಯುವ ಕಾಲ ಮುಗಿದು ಹೋಗಿದೆ. ಈಗ ನೀರು ಹರಿಸಿದರೆ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ನೀರು ಬಿಟ್ಟಿದ್ದೇವೆ ಎಂಬ ರಾಜಕೀಯ ಕಾರಣಕ್ಕಷ್ಟೇ ನೀರು ಬಿಟ್ಟಂತೆ ಕಾಣುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.

ಗದ್ದೆ ತುಂಬೆಲ್ಲ ನೀರು ತುಂಬಿದರೆ ರಾಗಿ, ಜೋಳ, ಹುರುಳಿ, ಹಲಸಂದೆ ಬೀಜಗಳು ಕೊಳೆತು ಹೋಗುತ್ತದೆ. ಹೀಗಾಗಿ ಸರ್ಕಾರ ಈಗಿರುವ ನೀರನ್ನು ಸಂಗ್ರಹ ಮಾಡಿ ಇಟ್ಟುಕೊಂಡರೆ ಡಿಸೆಂಬರ್‌ ವೇಳೆಗೆ ಬೇಸಿಗೆಯ ಬಿತ್ತನೆ ಕಾಲ ಬರುತ್ತದೆ. ಆಗ ನೀರು ಒಂದು ಬೆಳೆಗೆ ನೀರು ಕೊಟ್ಟರೆ ರೈತರು ಬದುಕುತ್ತಾರೆ.

ಈಗ ನೀರು ಬಿಟ್ಟಿರುವುದು ವ್ಯರ್ಥ. ಈಗಾಗಲೇ ಬಿತ್ತನೆ ಮಾಡಿರುವ ರೈತರಿಗಷ್ಟೇ ಅನುಕೂಲವಾಗುತ್ತದೆ’ ಎಂದು ವಿ.ಸಿ.ಫಾರಂನ ಕೃಷಿ ವಿಜ್ಞಾನಿ ಡಾ.ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT