ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಶ್ವೇತಭವನದ ದರ್ಶನ ಭಾಗ್ಯ

Last Updated 15 ಸೆಪ್ಟೆಂಬರ್ 2017, 9:08 IST
ಅಕ್ಷರ ಗಾತ್ರ

ಮೈಸೂರು: ದಸರಾ ಉತ್ಸವದ ಪ್ರಮುಖ ಆಕರ್ಷಣೆ ಎನಿಸಿರುವ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಈ ಬಾರಿಯೂ ಅಚ್ಚರಿಗಳನ್ನು ನಿರೀಕ್ಷಿಸಬಹುದು. ವಸ್ತುಪ್ರದರ್ಶನ ಮೈದಾನದಲ್ಲಿ ಭಿನ್ನವಾದ ಮಳಿಗೆಗಳ ನಿರ್ಮಾಣ ಕಾರ್ಯ ನಡೆದಿದೆ.

ಸೆ. 21ರಿಂದ 90 ದಿನಗಳವರೆಗೆ ನಡೆಯಲಿರುವ ವಸ್ತುಪ್ರದರ್ಶನದ ಗುತ್ತಿಗೆಯನ್ನು ಬೆಂಗಳೂರಿನ ಫನ್‌ವರ್ಲ್ಡ್‌ ಅಂಡ್‌ ರೆಸಾರ್ಟ್ಸ್‌ ₹ 6.66 ಕೋಟಿ ಮೊತ್ತಕ್ಕೆ ಪಡೆದುಕೊಂಡಿದೆ. ಈ ಬಾರಿ ಅಮೆರಿಕದ ವಿಶ್ವವಿಖ್ಯಾತ ಶ್ವೇತಭವನದ (ವೈಟ್‌ಹೌಸ್‌) ಪ್ರತಿಕೃತಿ ನಿರ್ಮಿಸಲು ನಿರ್ಧರಿಸಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆದಿವೆ.

ಕಳೆದ ವರ್ಷ ದಸರಾ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದವರು ಅಮರನಾಥ ಯಾತ್ರೆಯ ಅನುಭವ ಪಡೆದಿದ್ದರು. ಅಮರನಾಥ ದೇವಾಲಯ ಮತ್ತು ಯಾತ್ರೆಯ ಪ್ರತಿಕೃತಿ ಸೃಷ್ಟಿಸಲಾಗಿತ್ತು. ಅದಕ್ಕೂ ಹಿಂದಿನ ವರ್ಷ ವಿಶ್ವದ ಏಳು ಅದ್ಭುತಗಳ ಪ್ರತಿಕೃತಿ ನಿರ್ಮಿಸಲಾಗಿತ್ತು.

‘ಇಲ್ಲಿಗೆ ಭೇಟಿ ನೀಡುವವರಿಗೆ ಪ್ರತಿವರ್ಷವೂ ಹೊಸತನ ನೀಡಬೇಕು ಎಂಬುದು ನಮ್ಮ ಉದ್ದೇಶ. ಈ ಬಾರಿ ಸುಮಾರು ₹ 70ರಿಂದ 80 ಲಕ್ಷ ವೆಚ್ಚದಲ್ಲಿ ಶ್ವೇತಭವನದ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಸೆ.21ರ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ಫನ್‌ ವರ್ಲ್ಡ್‌ ಅಂಡ್‌ ರೆಸಾರ್ಟ್‌ ನಿರ್ದೇಶಕ ವಿನೋದಕುಮಾರ್‌ ಸಬರ್‌ವಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದಸರಾ ವೇಳೆ ವಸ್ತುಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಮೈಸೂರು ಹಾಗೂ ಸುತ್ತಮುತ್ತಲಿನ ಜನರು ಪ್ರತಿವರ್ಷವೂ ಇಲ್ಲಿಗೆ ಭೇಟಿ ನೀಡುವರು. ಎಲ್ಲ ವರ್ಷ ಭೇಟಿ ನೀಡುವವರು ಹೊಸತನ ಬಯಸುತ್ತಾರೆ. ಇದಕ್ಕಾಗಿ ಮನರಂಜನೆಗೆ ಇನ್ನಷ್ಟು ಹೊಸ ಆಟಗಳನ್ನು ಸೇರಿಸಲಾಗಿದೆ ಎಂದರು.

ಆಕರ್ಷಕ ಮಳಿಗೆಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಮತ್ತು ನಿಗಮ ಮಂಡಳಿಗಳ 37 ಮಳಿಗೆಗಳು ಈ ಬಾರಿ ನಿರ್ಮಾಣವಾಗಲಿವೆ. ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಳಿಗೆಗಳ ನಿರ್ಮಾಣ ಶೇ 80ರಷ್ಟು ಪೂರ್ಣಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT