ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕಾರ್ಯಗಳಿಗೆ ದೇಗುಲ ನವೀಕರಣ ಅಡ್ಡಿ

Last Updated 15 ಸೆಪ್ಟೆಂಬರ್ 2017, 9:10 IST
ಅಕ್ಷರ ಗಾತ್ರ

ಮೈಸೂರು: ನಗರದ ಅರಮನೆ ಆವರಣದಲ್ಲಿರುವ ದೇಗುಲಗಳ ನವೀಕರಣ ಕಾಮಗಾರಿಯು ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಶ್ವೇತವರಾಹಸ್ವಾಮಿ ದೇಗುಲ ಸೇರಿದಂತೆ ಅರಮನೆಯೊಳಗಿನ 7 ದೇಗುಲಗಳ ನವೀಕರಣ ಹಾಗೂ ರಾಜಗೋಪುರ ಸಂರಕ್ಷಣೆ ಕಾಮಗಾರಿಯನ್ನು ಪುರಾತತ್ವ ಇಲಾಖೆ ಕೈಗೆತ್ತಿಕೊಂಡಿದೆ. ದೇವಸ್ಥಾನದ ಕಟ್ಟಡ ತ್ಯಾಜ್ಯವನ್ನು ರಸ್ತೆಗಳಲ್ಲಿಯೇ ರಾಶಿ ಹಾಕಲಾಗಿದೆ. ಇದು ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ದಸರಾ ಉದ್ಘಾಟನೆಗೆ ಕೇವಲ ಏಳು ದಿನಗಳಷ್ಟೇ ಬಾಕಿಯಿದ್ದು, ಅರಮನೆ ಶೃಂಗಾರದ ಕಾರ್ಯವಿನ್ನೂ ಮುಗಿದಿಲ್ಲ. ಪ್ರವೇಶ ದ್ವಾರ, ಗ್ರಿಲ್‌ಗಳಿಗೆ ಬಣ್ಣ ಬಳಿಯುವ ಕೆಲಸ ಹಾಗೂ ಕೆಟ್ಟು ಹೋಗಿರುವ ಬಲ್ಬುಗಳ ಬದಲಾವಣೆ ಕೆಲಸವೂ ನಡೆಯುತ್ತಿದೆ. ಅಲ್ಲದೆ, ಅರಮನೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಕ್ಕೆ ಟೈಲ್ಸ್‌ ಅಳವಡಿಸಲು ಪಾಲಿಕೆ ಕೈಗೆತ್ತಿಕೊಂಡಿರುವ ಕಾಮಗಾರಿಯೂ ಮುಗಿದಿಲ್ಲ.

‘ಅರಮನೆ ಆವರಣದಲ್ಲಿ ದೇಗುಲಗಳ ನವೀಕರಣ ಕಾಮಗಾರಿ ಶುರುವಾಗಿ 1 ತಿಂಗಳಾಗಿದೆ ಅಷ್ಟೆ. ದಸರೆ ಕಾರ್ಯಕ್ರಮಗಳಿಗೆ ಅಡ್ಡಿಯಾದರೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತೇವೆ’ ಎಂದು ಪುರಾತತ್ವ ಇಲಾಖೆ ಉಪನಿರ್ದೇಶಕ ಗವಿಸಿದ್ದಯ್ಯ ‘ಪ್ರಜಾವಾಣಿ‌’ಗೆ ಪ್ರತಿಕ್ರಿಯಿಸಿದರು.

ಅರಮನೆ ಆವರಣ ಈಗ ಪ್ರವಾ ಸಿಗರಿಂದ ಗಿಜಿಗುಡುತ್ತಿದೆ. ಅಲ್ಲದೆ, ಸೆ.21ರಂದು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ಅರಮನೆ ಮುಂಭಾ ಗದಲ್ಲಿ ನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 30ರಂದು ಜಂಬೂಸವಾರಿ ನಡೆಯಲಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರು ಪಾಲ್ಗೊಳ್ಳಲಿದ್ದಾರೆ.

‘ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ. ಕಾರ್ಯಕ್ರಮ ಗಳಿಗೆ ಹಾಗೂ ಪ್ರವಾಸಿಗರಿಗೆ ತೊಂದರೆ ಉಂಟಾದರೆ 10 ದಿನಗಳ ಮಟ್ಟಿಗೆ ದೇಗುಲದ ಹೊರಗಿನ ಕಾಮಗಾರಿ ಸ್ಥಗಿತಗೊಳಿಸುತ್ತೇವೆ. ಈ ಸಂದರ್ಭದಲ್ಲಿ ಒಳಗಿನ ಸಣ್ಣಪುಟ್ಟ ಕೆಲಸಗಳನ್ನು ಮುಗಿಸುತ್ತೇವೆ’ ಎಂದು ಪುರಾತತ್ವ ಇಲಾಖೆ ಎಂಜಿನಿಯರ್‌ ವೆಂಕಟೇಶ್‌ ತಿಳಿಸಿದರು.

‘ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳಿಗೆ ಅಗತ್ಯವಿದ್ದರೆ ದೇಗುಲ ಬಿಟ್ಟುಕೊಡುತ್ತೇವೆ. ಆದರೆ, ಸಾರ್ವಜನಿಕರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ’ ಎಂದರು. ಅರಮನೆಯ ದೀಪಾಲಂಕಾರಕ್ಕಾಗಿ ಕೆಟ್ಟು ಹೋಗಿರುವ ಬಲ್ಬುಗಳನ್ನು ಬದಲಿಸುವ ಹಾಗೂ ಹೊಸದಾಗಿ ಜೋಡಿಸುವ ಕಾಮಗಾರಿಯೂ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT