ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಾದರೂ ತುಂಬದ ಹೋಬಳಿಯ ಕೆರೆಗಳು

Last Updated 15 ಸೆಪ್ಟೆಂಬರ್ 2017, 9:50 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಬಿ.ದುರ್ಗ ಹೋಬಳಿಯಾದ್ಯಂತ ಹದವಾಗಿ ಮಳೆಯಾಗಿದ್ದರೂ, ಹೋಬಳಿಯ ಯಾವ ಕೆರೆಗಳಲ್ಲೂ ನೀರು ಸಂಗ್ರಹಗೊಳ್ಳದೇ ಇರುವುದು ಜನರಲ್ಲಿ ಆತಂಕ ಮೂಡಿಸಿದೆ. ಮುಂಗಾರು ಆರಂಭದಿಂದಲೂ ಹೋಬಳಿಯ ಅನೇಕ ಕಡೆಮಳೆರಾಯ ಕಣ್ಣಾ–ಮುಚ್ಚಾಲೆ ಆಟವಾಡಿದ್ದಾನೆ. ಕೆಲವೆಡೆ ಹದವಾಗಿ ಮಳೆಯಾದರೆ, ಮತ್ತೆ ಕೆಲವೆಡೆ ಆಗಸ್ಟ್‌ ತಿಂಗಳವರೆಗೂ ಮಳೆಯಾಗದೇ. ರೈತರನ್ನು ಹೈರಾಣು ಮಾಡಿದೆ.

ಚಿಕ್ಕಜಾಜೂರು, ಕಡೂರು, ಗುಂಜಿಗನೂರು, ರಂಗವ್ವನಹಳ್ಳಿ, ಬಿ.ದುರ್ಗ ಅರ್ಧ ಭಾಗ, ಚಿಕ್ಕಂದವಾಡಿ, ಅರಸನಘಟ್ಟ, ಹನುಮನಕಟ್ಟೆ, ಬಿಜ್ಜನಾಳ್‌, ಕೇಶವಾಪುರ, ಬಾಣಗೆರೆ, ಕೋಟೆಹಾಳ್‌ ಮೊದಲಾದ ಕಡೆಗಳಲ್ಲಿ ಹದವಾದ ಮಳೆಯಾಗಿದೆ.

ಸಮೀಪದ ಪಾಡಿಗಟ್ಟೆ, ಆಡನೂರು, ಕೊಡಗವಳ್ಳಿ, ಕೊಡಗವಳ್ಳಿಹಟ್ಟಿ, ಚಿಕ್ಕ ಎಮ್ಮಿಗನೂರು, ಹಿರೇಎಮ್ಮಿಗನೂರು, ನಂದಿಹಳ್ಳಿ, ಅಂತಾಪುರ, ಕಾಮನಹಳ್ಳಿ, ಅಜ್ಜಿಕ್ಯಾತನಹಳ್ಳಿ, ಹೊಸಹಳ್ಳಿ, ಚಿಕ್ಕನಕಟ್ಟೆ, ಕಾಳಘಟ್ಟ, ಸಾಸಲು, ತರಳಬಾಳುನಗರ, ಮುತ್ತುಗದೂರು, ಅಂದನೂರು, ಬಂಡೆಬೊಮ್ಮೆನಹಳ್ಳಿ, ಹಿರಿಯೂರು ಮೊದಲಾದ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಬಿತ್ತನೆ ಮಾಡಿದ್ದ ಬೆಳೆಗಳು ಕೈಗೆ ಸಿಗುತ್ತವೆಯೋ, ಇಲ್ಲವೋ ಎಂಬ ಭೀತಿಯಲ್ಲಿ ರೈತರಿದ್ದಾರೆ.

ಕೆರೆಗಳು ಖಾಲಿ: ಹೋಬಳಿಯ ದೊಡ್ಡ ಕೆರೆಗಳಾದ ಅಂದನೂರು, ಮುತ್ತುಗದೂರು, ಚಿಕ್ಕಎಮ್ಮಿಗನೂರು, ಚಿಕ್ಕಜಾಜೂರು, ಗುಂಜಿಗನೂರು ಕೆರೆಗಳು ಖಾಲಿಯಾಗಿವೆ. ಚಿಕ್ಕ ಎಮ್ಮಿಗಮನೂರು ಕೆರೆ 207 ಎಕರೆ ಪ್ರದೇಶ ಹೊಂದಿದ್ದರೆ, ಚಿಕ್ಕಜಾಜೂರು ಕೆರೆ 98 ಎಕರೆ ಪ್ರದೇಶವಿದೆ. ಇದುವರೆಗೂ ಬಿದ್ದ ಮಳೆ ಭೂಮಿಗಷ್ಟೇ ಸಾಕಾಗಿದೆ.

ಹಳ್ಳಗಳು ತುಂಬಿ ಹರಿದಿಲ್ಲ. ಕೆರೆಗಳ ಗುಂಡಿಗಳಲ್ಲಿ ಮತ್ತು ಅಂಗಳದಲ್ಲಿ ಅಲ್ಪಸ್ವಲ್ಪ ನೀರು ತುಂಬಿಕೊಂಡಿದ್ದರೂ, ಹತ್ತು–ಹದಿನೈದು ದಿನಗಳಲ್ಲಿ ಖಾಲಿಯಾಗುವ ಸಾಧ್ಯತೆ ಇದೆ.
‘ಮುಂದಾದರೂ ಭಾರಿ ಮಳೆಯಾದರೆ ಮಾತ್ರ ಕೆರೆಗೆ ನೀರು ಬರಲಿದೆ. ಇಲ್ಲದಿದ್ದರೆ, ಈ ವರ್ಷವೂ ಕೆರೆ ಖಾಲಿಯಾಗಿಯೇ ಉಳಿದು ಕೊಳವೆಬಾವಿಗಳು ಬರಿದಾಗುತ್ತದೆ. ಇದರಿಂದಾಗಿ ಹೋಬಳಿ ಮತ್ತೊಂದು ಬರಗಾಲ ಎದುರಿಸುವ ಸ್ಥಿತಿ ಬಂದಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಕೆರೆ ತುಂಬಿಸಲು ಮನವಿ: ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ಮೂಲಕ ದಾವಣಗೆರೆ, ಜಗಳೂರು ತಾಲ್ಲೂಕಿನ ಕೆಲವು ಕೆರೆಗಳು ಹಾಗೂ ಭರಮಸಾಗರ ವ್ಯಾಪ್ತಿಯ ಕೆಲ ಕೆರೆಗಳಿಗೆ ಭದ್ರಾ ನದಿ ನೀರನ್ನು ತುಂಬಿಸುತ್ತಿರುವುದು ಸಂತೋಷದ ಸಂಗತಿ. ಆದರೆ, ಹೊಳಲ್ಕೆರೆ ತಾಲ್ಲೂಕಿನ ಹಾಗೂ ಬಿ.ದುರ್ಗ ಹೋಬಳಿಯ ದೊಡ್ಡ ಕೆರೆಗಳಿಗೂ ನೀರು ತುಂಬಿಸಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಹೀಗಾಗಿ ಕ್ಷೇತ್ರದ ಶಾಸಕರೂ ಆಗಿರುವ ಆಂಜನೇಯ ಅವರು ಹೋಬಳಿಯ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಬಿ.ದುರ್ಗ ಹೋಬಳಿಯ ರೈತರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT