ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನಂಗಳದಲ್ಲಿ ಮಾಸದ ನಗು

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಲೇಖಕಿಯರ ಸಂಘದ ಪ್ರಥಮ ಅಧ್ಯಕ್ಷೆಯಾಗಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದ ಈ ಸಾಧಕಿಯ ಜನ್ಮಶತಮಾನೋತ್ಸವದ ವರ್ಷವಿದು. ನಾಳೆ ಕರ್ನಾಟಕ ಲೇಖಕಿಯರ ಸಂಘ ‘ಟಿ. ಸುನಂದಮ್ಮ ಕೃತಿಗಳ ಅವಲೋಕನ’ವನ್ನು ಆಯೋಜಿಸಿದೆ.

ಹೆಣ್ಣುಮಕ್ಕಳ ಬರವಣಿಗೆ ಬಗ್ಗೆ ತಾತ್ಸಾರವಿದ್ದ ಕಾಲದಲ್ಲಿ ಬರವಣಿಗೆಯನ್ನು ಆರಂಭಿಸಿ ತಮ್ಮ ಹೆಜ್ಜೆಯನ್ನು ದೃಢಗೊಳಿಸಿಕೊಂಡವರು ಹಾಸ್ಯಸಾಹಿತಿ ಟಿ. ಸುನಂದಮ್ಮ (1917–2006). ಟಿ. ಸುನಂದಮ್ಮ ಅವರ ಸೊಸೆ ಶ್ರೀಲತಾ ಶ್ರೀನಾಥ್‌ ಅವರು ಈ ಸಂದರ್ಭದಲ್ಲಿ ಅವರನ್ನು ಕುರಿತ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

‘ಅತ್ತೆಯವರು ಜನಿಸಿದ್ದು 1917ರ ಆಗಸ್ಟ್‌ 8ರಂದು ಮೈಸೂರಿನಲ್ಲಿ. ತಂದೆ ಟಿ. ರಾಮಯ್ಯ, ತಾಯಿ ನಾಗಮ್ಮ. ಉಪವಿಭಾಗಾಧಿಕಾರಿಯಾಗಿ ವೃತ್ತಿ ಆರಂಭಿಸಿದ ರಾಮಯ್ಯನವರು ಬಳಿಕ ಮೈಸೂರು ಮಹಾರಾಜರ ಬಳಿ ಕೆಲಸ ನಿರ್ವಹಿಸಿದರು. ಆ ಕಾಲದಲ್ಲಿಯೇ ತಮ್ಮ ಎಲ್ಲ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದ್ದರು. ಕೆಲಸದ ವರ್ಗಾವಣೆಗಳಿಂದಾಗಿ ತರೀಕೆರೆ ಮತ್ತು ದಾವಣಗೆರೆಗೆ ಹೋದಾಗ ಅಲ್ಲಿ ಬಾಲಕಿಯರ ಶಾಲೆಗಳಿರಲಿಲ್ಲ. ಆಗ ಬಾಲಕರ ಶಾಲೆಗೇ ಅತ್ತೆಯನ್ನು ದಾಖಲಿಸಿದ ಹೆಗ್ಗಳಿಕೆ ರಾಮಯ್ಯ ಅವರದ್ದು’.

‘ಬಾಲಕರ ಶಾಲೆಗೆ ಮಗಳನ್ನು ಸೇರಿಸಿದ್ದಕ್ಕೆ ಆಕ್ಷೇಪಗಳು ವ್ಯಕ್ತವಾದಾಗ ಶಾಲೆಯ ಉಪಾಧ್ಯಾಯರನ್ನೇ ಮನೆಗೆ ಕರೆಯಿಸಿ ಪಾಠ ಹೇಳಿಸಿದ್ದರು. ಅತ್ತೆಯವರದ್ದು ಬಾಲ್ಯವಿವಾಹ. ಆಗ ಲೋಯರ್‌ ಸೆಕಂಡರಿಯಲ್ಲಿದ್ದರು. ಮಾವ ವೆಂಕಟನಾರಾಣಪ್ಪ ಇಂಟರ್‌ಮೀಡಿಯಟ್‌, ಅಂದರೆ ಈಗಿನ ಪಿಯುಸಿಯಲ್ಲಿದ್ದರು. ಅತ್ತೆಯವರ ಪ್ರೌಢಶಾಲಾ ವಿದ್ಯಾಭ್ಯಾಸವೂ ಬಾಲಕರ ಶಾಲೆಯಲ್ಲಿಯೇ ನಡೆಯಿತು. ಆಗ ಇವರಿಗಾಗಿ ಒಂದು ಪ್ರತ್ಯೇಕ ಮೇಜು, ಖುರ್ಚಿ ಇತ್ತಂತೆ! ಶಾಲೆಯ ಗಂಟೆ ಹೊಡೆದು ಅಧ್ಯಾಪಕರು ತರಗತಿಗೆ ಬರುವವರೆಗೆ ಇವರು ಮುಖ್ಯೋಪಾಧ್ಯಯರ ಕೊಠಡಿಗೆ ಹೊಂದಿಕೊಂಡಂತಿದ್ದ ಸ್ಥಳದಲ್ಲಿ ಕುಳಿತಿರುತ್ತಿದ್ದರಂತೆ’. ಇಂತಹ ಹಲವು ಸಂಗತಿಗಳನ್ನು ಅತ್ತೆ ಹೇಳುತ್ತಿದ್ದರು.

‘ಅತ್ತೆಯವರಷ್ಟೇ ದಿಟ್ಟೆ ಅವರ ತಾಯಿ ನಾಗಮ್ಮ. ಅತ್ತೆ ಋತುಮತಿಯಾದಾಗಲೂ ಶಾಲೆಗೆ ಕಳುಹಿಸಿದ್ದರಂತೆ. ‘‘ನನ್ನನ್ನು ಶಾಲೆಗೆ ಕಳುಹಿಸಿದ ನನ್ನ ಅಮ್ಮ ಮತ್ತು ತರಗತಿಗೆ ಹಾಜರಾದ ನಾನು ಇಬ್ಬರೂ ಧೀರರಲ್ಲವೇ’’ ಎಂದು ಖುಷಿಯಾಗಿ ಹೆಮ್ಮೆಯಿಂದ ಹೇಳುತ್ತಿದ್ದರು ಅತ್ತೆ.

ವಾಣಿವಿಲಾಸ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್‌ ಪೂರ್ಣಗೊಳಿಸಿದ ನಂತರ ಪದವಿಗೆ ಸೆಂಟ್ರಲ್‌ ಕಾಲೇಜನ್ನು ಸೇರಬೇಕಾಯಿತು. ಅಲ್ಲಿ ಪುರುಷರೊಂದಿಗೆ ಕಲಿಯಲು ಅತ್ತೆಯವರ ಮಾವನ ಮನೆಯಿಂದ ವಿರೋಧ ವ್ಯಕ್ತವಾದ್ದರಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಆದರೂ ಕನ್ನಡದ ಹೆಸರಾಂತ ಲೇಖಕರ ಕೃತಿಗಳನ್ನು, ಸ್ಕಾಟ್‌, ಡಿಕನ್ಸ್‌, ಶೇಕ್ಸ್‌ಪಿಯರ್‌, ಜೇನ್‌ ಆಸ್ಟಿನ್‌ ಮುಂತಾದವರನ್ನು ನಿರಂತರವಾಗಿ ಓದುವ ಮೂಲಕ ಅರಿವನ್ನು ವಿಸ್ತರಿಸಿಕೊಂಡಿದ್ದರು ಅತ್ತೆ.

‘ನಮ್ಮ ಮಾವನವರು ಕಾನೂನು ವಿದ್ಯಾಭ್ಯಾಸಕ್ಕಾಗಿ ಪೂನಾಕ್ಕೆ ತೆರಳಿದಾಗ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಹಿಂದಿ ಪರೀಕ್ಷೆಯನ್ನು ತೆಗೆದುಕೊಂಡು ತೇರ್ಗಡೆಯಾದರು. ಅವರ ತಾಯಿಯೇ ಅವರಿಗೆ ಆಪ್ತ ಗೆಳತಿಯಾಗಿದರಂತೆ. ಇಬ್ಬರೂ ಹೋದ ಕಡೆಯಲ್ಲೆಲ್ಲ ಮಹಿಳಾ ಸಮಾಜಗಳನ್ನು ಆರಂಭಿಸುತ್ತಿದ್ದರಂತೆ. ಇಬ್ಬರೂ ಅಲ್ಲಿಯೇ ಬ್ಯಾಡ್‌ಮಿಂಟನ್‌, ಟೇಬಲ್‌ ಟೆನಿಸ್‌ ಮುಂತಾದ ಆಟಗಳನ್ನು ಆಡುತ್ತಿದ್ದರಂತೆ.

ಬಾಲ್ಯದಲ್ಲಿಯೇ ಬರೆಯಲು ಆರಂಭಿಸಿದ್ದ ಅತ್ತೆಯವರ ‘ಹೂವು’ ಕವನ ಪ್ರಕಟವಾದಾಗ ಅವರಿಗಿನ್ನೂ ಒಂಬತ್ತು ವರ್ಷ. ಬಾಲವಿಧವೆಯರ ಕುರಿತ ‘ಹೂ ಬಾಡಿತು’ ಕಥೆ ಪ್ರಕಟವಾದಾಗ ಅವರ ಹೆಸರಿನ ಜೊತೆ, ‘ಹನ್ನೆರಡು ವರ್ಷದ ಹುಡುಗಿ ಬರೆದಿದ್ದು’ ಎಂದೂ ಪ್ರಕಟವಾಗಿತ್ತಂತೆ! ಡಾ. ಎಂ. ಶಿವರಾಂ ಅವರ ‘ಕೊರವಂಜಿ’ ನಿಯತಕಾಲಿಕಕ್ಕೆ ಬರೆಯಲು ಆರಂಭಿಸಿದ್ದು ಅವರ ಬರಹದ ಗತಿಯನ್ನೇ ಬದಲಾಯಿಸಿತು.

‘ನಾನ್ಕಾರಿಟ್ಟಿದ್ದು’ ಪ್ರಕಟವಾದಾಗ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ ಮತ್ತು ರಾಶಿಯವರು ಮೆಚ್ಚುಗೆ ಪತ್ರಗಳನ್ನು ಬರೆದಿದ್ದರು. ಬಹುಶಃ ಇದೇ ಅವರನ್ನು ಹಾಸ್ಯಸಾಹಿತ್ಯದಲ್ಲಿ ಗಟ್ಟಿಗೊಳ್ಳುವಂತೆ ಮಾಡಿತು. ಅವರ ಸಾಹಿತ್ಯಪ್ರಯಾಣದ ಸಂಗತಿಗಳು ನವಪೀಳಿಗೆಯವರಿಗೆ ಸ್ಫೂರ್ತಿ.

‘ಮಗ ಮಧ್ಯ ವಯಸ್ಸಿನಲ್ಲಿಯೇ ಹೋದಾಗ ತುಂಬಾ ದುಃಖಪಟ್ಟರು. ಸ್ವಲ್ಪ ವರ್ಷಗಳ ನಂತರ ಮಾವನವರೂ ತೀರಿಕೊಂಡರು. ನಾನು ಮತ್ತು ಅತ್ತೆ ಇಬ್ಬರೇ ಇರಬೇಕಾಯಿತು. ನನ್ನೊಂದಿಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಬಹುತೇಕ ಎಲ್ಲ ಕಾರ್ಯಕ್ರಮಗಳಿಗೂ ಕರೆದುಕೊಂಡು ಹೋಗುತ್ತಿದ್ದರು. ಮುಂಬೈನಲ್ಲಿ ಓದಿ, ಬೆಳೆದಿದ್ದ ನನಗೆ ಅತ್ತೆಯವರ ಜೊತೆಗಿನ ನಿರಂತರ ಒಡನಾಟದಿಂದಾಗಿ ಸ್ಪಷ್ಟವಾಗಿ ಕನ್ನಡ ಕಲಿಯಲು ಸಾಧ್ಯವಾಯಿತು. ಓದಿನಲ್ಲಿ ಅವರಿಗೆ ತುಂಬಾ ಆಸಕ್ತಿ.

ಸದಾ ಏನಾದರೂ ಓದುತ್ತಿದ್ದರು. ಆಗಾಗ ಹೊಳೆಯುವ ವಿಚಾರಗಳನ್ನು ನೋಟ್‌ ಮಾಡಿಟ್ಟುಕೊಂಡು ಪ್ರತಿದಿನ ಬೆಳಿಗ್ಗೆ ಬರೆಯಲು ಕೂರುತ್ತಿದ್ದರು. ಬೇರೆ ಸಮಯದಲ್ಲಿ ಬರೆಯಲು ಕುಳಿತಿದ್ದನ್ನು ನಾನು ನೋಡಿಯೇ ಇಲ್ಲ. ಅತ್ತೆ ತುಂಬಾ ಸ್ನೇಹಜೀವಿ. ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿದ್ದರು.

ಎಷ್ಟು ಶಿಸ್ತಿನ ವ್ಯಕ್ತಿ ಎಂದರೆ ತಾವು ರಚಿಸಿದ ಕೃತಿಗಳ ಪಟ್ಟಿ, ಕಾರ್ಯಕ್ರಮಗಳಲ್ಲಿ ಭಾಗಿಯಾದ ಛಾಯಾಚಿತ್ರಗಳು, ದಿನಪತ್ರಿಕೆಗಳ ಕಟಿಂಗ್ಸ್‌ಗಳು ಮತ್ತು ಪ್ರಶಸ್ತಿಗಳ ಪಟ್ಟಿಯನ್ನು ಅಚ್ಚುಕಟ್ಟಾಗಿ ಮಾಡಿಟ್ಟಿದ್ದರು. ಅವರ ಬಗ್ಗೆ ಯಾರು ಏನೇ ಕೇಳಿದರೂ ಸುಲಭದಲ್ಲಿ ಮಾಹಿತಿ ನೀಡಬಲ್ಲೆ. ಸನುಂದಮ್ಮ ನನ್ನ ಅತ್ತೆ ಎಂದು ಹೇಳಿಕೊಳ್ಳಲು ಹಮ್ಮೆ’ ಎಂದು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ನೆನೆಯುತ್ತಾರೆ, ಶ್ರೀಲತಾ.‌

‘ಸಾಮಾಜಿಕ ನೋಟದ ಲೇಖಕಿ’
ಇಪ್ಪತ್ತನೇ ಶತಮಾನದಲ್ಲಿ ಸುನಂದಮ್ಮನವರ ಹಾಸ್ಯಲೇಖನ ಇಲ್ಲದ ವಿಶೇಷಾಂಕಗಳೇ ವಿರಳ ಎನ್ನುವಂತಾಗಿತ್ತು. ದೇಶದಲ್ಲಿ ನಾಣ್ಯದ ರೂಪ ಬದಲಾದಾಗ, ಮಹಿಳಾ ಸಣ್ಣ ಉಳಿತಾಯ ಯೋಜನೆ ಜಾರಿಗೆ ಬಂದಾಗ, ಬಂಗಾರದ ನಿಯಂತ್ರಣ ಕಾಯ್ದೆ ಜಾರಿಗೆ ಬಂದಾಗ, ಮಿತ ಸಂತಾನ ಚಳವಳಿ ಪ್ರಚಾರ ಜೋರಾಗಿದ್ದಾಗ, ಪೇಜರ್‌–ಮೊಬೈಲ್‌ಗಳು ಎಲ್ಲರ ಕೈ ತುಂಬಿದಾಗ... ಹೀಗೆ ಎಲ್ಲ ಬೆಳವಣಿಗೆಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ವಿಶ್ಲೇಷಿಸಿ, ಅದರಿಂದಾಗಬಹುದಾದ ಪರಿಣಾಮಗಳಿಗೆ ವಿನೋದದ ಲೇಪ ಹಚ್ಚಿ ಬರೆಯುವುದನ್ನು ಕರಗತ ಮಾಡಿಕೊಂಡಿದ್ದರು. ಅವರು ಬರೆದ ಹಲವು ರೂಪಕಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.
–ನಾಗಮಣಿ ಎಸ್‌. ರಾವ್‌,
ಹಿರಿಯ ಪತ್ರಕರ್ತೆ

*
‘ಸಾಹಿತ್ಯರಚನೆಯೇ ವೃತ್ತಿಯಾಗಿತ್ತು’
ಹಾಸ್ಯಪ್ರಸಂಗಗಳನ್ನು ಸುನಂದಮ್ಮ ಅವರಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವರು ಮತ್ತೊಬ್ಬರಿಲ್ಲ. ಬದುಕಿನ ಸುತ್ತಮುತ್ತಲಿನವರನ್ನೇ ತಮ್ಮ ಪ್ರಬಂಧಗಳ ಪಾತ್ರವನ್ನಾಗಿಸಿದ್ದರು. ಮನುಷ್ಯ ಸ್ವಭಾವ ಸಹಜವಾಗಿ ಹಣ, ಆಸ್ತಿ, ಒಡವೆ, ಸುಖ–ಭೋಗಗಳ ಬಗ್ಗೆ ಆಸೆ–ಆಕಾಂಕ್ಷೆ ಹೊಂದಿರುವುದನ್ನು ಬಿಂಬಿಸುವ ‘ಜಾಕ್ವೆಲಿನ್‌ ಆಸ್ತಿಪತ್ರ’, ಸಮಾಜಸೇವೆಯ ಹೆಸರಿನಲ್ಲಿ ಶ್ರೀಮಂತರು ನಡೆಸುವ ಅವ್ಯವಹಾರಗಳನ್ನು ಬಯಲು ಮಾಡುವ ‘ಐರಾವತಮ್ಮನ ಅಬಲಾಲಯ’, ತನ್ನ ಕನಸುಗಳು ನನಸಾಗದೆ ಹಿಸ್ಟೀರಿಯಾ ರೋಗಕ್ಕೆ ತುತ್ತಾಗುವ ಹೆಣ್ಣೊಬ್ಬಳ ಜೀವನಕಥೆ ಆಧರಿಸಿದ ‘ಮರಳಿ ಮೆಂಟಲಾಸ್ಪತ್ರೆಗೆ’ ಮುಂತಾದ ಕೃತಿಗಳು ಇದಕ್ಕೆ ಉತ್ತಮ ನಿದರ್ಶನ. ಸಾಹಿತ್ಯರಚನೆಯನ್ನೇ ಜೀವನದ ಮುಖ್ಯ ವೃತ್ತಿಯಾಗಿಸಿಕೊಂಡಿದ್ದರು ಸುನಂದಮ್ಮ. ಆ ಕಾಲದಲ್ಲಿಯೇ ಕುದುರೆಸವಾರಿಯನ್ನೂ ಕಲಿತಿದ್ದ ಅವರು ತುಂಬಾ ದಿಟ್ಟ ಮಹಿಳೆ.
ಅ.ರಾ. ಮಿತ್ರ, ಹಾಸ್ಯಸಾಹಿತಿ ಮತ್ತು ವಿದ್ವಾಂಸ

*
‘ಲೇಖಕಿಯರ ಸಂಘದ ಸ್ಥಾಪಕಿ’
ಲೇಖಕಿಯರನ್ನು ಒಗ್ಗೂಡಿಸುವ ಆಲೋಚನೆ ಭಾಗವಾಗಿ ಸುನಂದಮ್ಮ ಹಲವು ಲೇಖಕಿಯರ ಜತೆ ಸೇರಿ ಲೇಖಕಿಯರ ಸಂಘ ಆರಂಭಿಸಿದರು. ಮೊದಲ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು. ಸಂಘವನ್ನು ಕಟ್ಟಿಬೆಳೆಸಲು ಆ ಕಾಲದಲ್ಲಿ ಅವರು ಪಟ್ಟ ಕಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ಒಂದೊಂದು ಸಲ ಒಬ್ಬೊಬ್ಬ ಲೇಖಕಿಯರ ಮನೆಗಳಲ್ಲಿ ಸೇರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಇಂದು ಸಾವಿರಾರು ಸದಸ್ಯೆಯರೊಂದಿಗೆ ಸಂಘವು ವಿಸ್ತಾರವಾಗಿ ಬೆಳೆದಿದೆ. ಸುನಂದಮ್ಮ ಸಂಘದ ಅಡಿಪಾಯ.
ಡಾ.ವಸುಂಧರಾ ಭೂಪತಿ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ

*
ಪ್ರಮುಖ ಕೃತಿಗಳು
ಬಣ್ಣದ ಚಿಟ್ಟೆ, ಜಂಭದ ಚೀಲ, ಪೆಪ್ಪರ್‌ ಮಿಂಟ್‌, ವೃಕ್ಷವಾಹನ, ಮುತ್ತಿನ ಚೆಂಡು, ರೂಢಿ ಗಾಡಿ, ನನ್ನ ಅತ್ತೆಗಿರಿ, ಟಿ. ಸುನಂದಮ್ಮ ಸಮಗ್ರ ಹಾಸ್ಯಸಾಹಿತ್ಯ, ಸಮಯ ಸಿಂಧು, ಬೆಸ್ಟ್‌ ಆಫ್‌ ಸುನಂದಮ್ಮ, ಕೊರವಂಜಿ ಸುನಂದಮ್ಮ, ಚಕ್ರ–ಚುಕ್ಕೆ, ಆದರ್ಶವಾದ ಆಡಂಬರ, ಕೂಸು ಹುಟ್ಟುವುದಕ್ಕೆ ಮುಂಚೆ, ಮಡದಿಯ ಪತ್ರ, ಬಲಿ, ಎರಡು ನೋಟ.

*
ಸುನಂದಮ್ಮ ಜನ್ಮಶತಮಾನೋತ್ಸವ
* ದಿನಾಂಕ:
ಸೆಪ್ಟೆಂಬರ್ 17, 2017
* ಸಮಯ: ಬೆಳಿಗ್ಗೆ 10.30ರಿಂದ
* ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
* ಉದ್ಘಾಟನೆ: ಅ.ರಾ. ಮಿತ್ರ
* ಅತಿಥಿಗಳು: ನುಗ್ಗೇಹಳ್ಳಿ ಪಂಕಜಾ, ಹೇಮಲತಾ ಮಹಿಷಿ
* ಕೃತಿಗಳ ಅವಲೋಕನ: ಭುವನೇಶ್ವರಿ ಹಗಡೆ
* ಅಧ್ಯಕ್ಷತೆ: ಡಾ. ವಸುಂಧರಾ ಭೂಪತಿ
ಮಾಹಿತಿಗೆ: 9986840477

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT