ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಶಾಲಾ ಕಟ್ಟಡದಲ್ಲೇ ಆಟ–ಪಾಠ

Last Updated 16 ಸೆಪ್ಟೆಂಬರ್ 2017, 5:29 IST
ಅಕ್ಷರ ಗಾತ್ರ

ಕೂಡ್ಲಿಗಿ: ಶಿಥಿಲಗೊಂಡಿರುವ ಕಟ್ಟಡ ಗಳು, ಬಿದ್ದು ಹೋಗಿರುವ ಹೆಂಚುಗಳು, ಬಿರುಕು ಬಿಟ್ಟ ಗೋಡೆಗಳು, ಮುರಿದು ಹೋಗಿರುವ ಕಿಟಕಿ, ಬಾಗಿಲುಗಳು, ನೀರು ಹನಿಸುವ ಚಾವಣೆಗಳು...   ಇದು ತಾಲ್ಲೂಕಿನ ಕೆಲ ಸರ್ಕಾರಿ ಪ್ರಾಥಮಿಕ ಶಾಲೆಗಳ ದುಸ್ಥಿತಿ.

ತಾಲ್ಲೂಕಿನ ಹಿರೇಹೆಗ್ಡಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 40 ವರ್ಷದ ಹಿಂದೆ ಹೆಂಚುಗಳನ್ನು ಹಾಕ ಲಾಗಿದೆ. ಮಳೆ ಬಂದರೆ, ಹೆಂಚುಗಳು ನೆಲ ಕಚ್ಚುತ್ತವೆ. ವಿದ್ಯಾರ್ಥಿಗಳು ಭಯ ದಲ್ಲೇ ಪಾಠ ಕೇಳಬೇಕಾದ ಸ್ಥಿತಿ ಇದೆ. ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ತೀರುಗಳು ಮುರಿದು, ಹೆಂಚುಗಳು ಬಿದ್ದು ಹೋಗುತ್ತಿವೆ. ಕಂದಗಲ್ಲು ಗ್ರಾಮದಲ್ಲಿನ ಶಾಲೆಯಲ್ಲಿ ಇತ್ತೀಚೆಗೆ ಕಟ್ಟಿಸಿದ ಆರ್‌ಸಿಸಿ ಕಟ್ಟಡದ ಚಾವಣಿ ಸಹ ಕುಸಿದು ಸೋರುತ್ತಿವೆ.

ಇದು ಕೇವಲ ಹಿರೇಹೆಗ್ಡಾಳ್ ಅಥವಾ ಕಂದಗಲ್ಲು ಗ್ರಾಮದಲ್ಲಿ ಶಾಲಾ ಕೊಠಡಿಗಳ ಕಥೆಯಲ್ಲ. ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲಾ ಕೊಠಡಿಗಳ ಸ್ಥಿತಿ ಇದೇ ಅಗಿದೆ. ಇಂತಹ ಕೊಠಡಿಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಆತಂಕದಿಂದ ಇರಬೇಕಾಗಿದೆ. ಕೆಲವು ಕಡೆ ಕಟ್ಟಡ ಚಾವಣಿ ಬೀಳುಬ ಭಯದಲ್ಲಿ ಶಿಕ್ಷಕರು, ಮಕ್ಕಳನ್ನು ಮರದ ನೆರಳಲ್ಲಿ ಕೂರಿಸಿ ಪಾಠ ಮಾಡುತ್ತಾರೆ. ಬಿಸಿಲು ಹೆಚ್ಚಾದರೆ, ಮಳೆ ಬಂದರೆ ಮೂರ್ನಾಲ್ಕು ತರಗತಿ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡಿ ಪಾಠ ಮಾಡುವ ಅನಿವಾರ್ಯತೆ ಇದೆ.

ತಾಲ್ಲೂಕಿನಲ್ಲಿ 107 ಕಿರಿಯ ಪ್ರಾಥಮಿಕ ಶಾಲೆ ಹಾಗೂ 168  ಹಿರಿಯ ಪ್ರಾಥಮಿಕ ಶಾಲೆಗಳಿವೆ. ಹಿಂದುಳಿದ ತಾಲ್ಲೂಕು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿನಲ್ಲಿ ಬಡ ಕೂಲಿ ಕಾರ್ಮಿಕರು, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗೆ ಜನರೇ ಹೆಚ್ಚಿದ್ದಾರೆ. ಇವರೆಲ್ಲಾ ತಮ್ಮ ಮಕ್ಕಳನ್ನು ಓದಿಸಲು ಸರ್ಕಾರಿ ಶಾಲೆಗಳನ್ನೆ ಅವಲಂಬಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 1637 ಶಾಲಾ ಕೊಠಡಿಗಳಿದ್ದು, ಇವುಗಳಲ್ಲಿ 86 ಸಣ್ಣ ಪ್ರಮಾಣದಲ್ಲಿ ದುರಸ್ತಿಯಲ್ಲಿವೆ, 108 ಕೊಠಡಿಗಳು ದೊಡ್ಡ ದುರಸ್ತಿಯಲ್ಲಿವೆ.

ಅಲ್ಲದೆ 148 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ ಎಂದು ಶಿಕ್ಷಣ ಇಲಾ ಖೆಯ ಅಂಕಿ ಅಂಶಗಳು ಹೇಳುತ್ತಿವೆ. ಅಲ್ಲದೆ ಬಹುತೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಸಾಮಗ್ರಿ ಗಳನ್ನು ಇಡಲು ಪ್ರತ್ಯೇಕ ಕೊಠಡಿಗಳಿಲ್ಲ. ಇವೆಲ್ಲವನ್ನು ಸರಿ ದೂಗಿಸಲು ಸುಮಾರು 268 ಕೊಠಡಿಗಳ ಅಗತ್ಯತೆ ಇದೆ. ಆದರೆ ಇವುಗಳನ್ನು ನಿರ್ಮಾಣ ಮಾಡಲು ಕಳೆದ ಎರಡು ಮೂರು ವರ್ಷದಿಂದ ಯಾವುದೇ ಯೋಜನೆಯಲ್ಲಿ ನೂತನ ಕಟ್ಟಡಗಳು ಮಂಜೂರಾಗಿಲ್ಲ.

ಶಿಕ್ಷಕರ ಕೊರತೆ: ತಾಲ್ಲೂಕಿನಲ್ಲಿ 30,147 ವಿದ್ಯಾರ್ಥಿಗಳಿದ್ದು, ತಾಲ್ಲೂಕಿಗೆ 1352 ಶಿಕ್ಷಕರ ಹುದ್ದೆಗಳು ಮಂಜೂ ರಾಗಿವೆ. ಇದರಲ್ಲಿ ಆರ್‌ಟಿಇ ಪ್ರಕಾರ 143 ಹುದ್ದೆಗಳ ಅಗತ್ಯವಿದ್ದು, 78 ಹುದ್ದೆಗಳು ಹೆಚ್ಚುವರಿಯಾಗಿವೆ. 65 ಹುದ್ದೆಗಳು ಖಾಲಿ ಬಿದ್ದಿವೆ. ಶೈಕ್ಷಣಿಕವಾಗಿ ಹಿಂದುಳಿದ ತಾಲ್ಲೂಕಿನ ಗುಡೇಕೋಟೆ ಹೋಬಳಿ ಹಾಗೂ ಹೊಸಹಳ್ಳಿ ಹೋಬಳಿಯ ಅನೇಕ ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಣದಲ್ಲಿ ಮುಂದುವರಿದಿರುವ ಕೊಟ್ಟೂರು ಪಟ್ಟಣ ಹಾಗೂ ಹೋಬಳಿಯ ಶಾಲೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಶಿಕ್ಷಕರಿದ್ದಾರೆ. ಆದರೆ ಅವರನ್ನು ಖಾಲಿ ಇರುವ ಕಡೆ ವರ್ಗಾವಣೆ ಮಾಡಲು ಅಗುತ್ತಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

* * 

ತಾಲ್ಲೂಕಿನಲ್ಲಿನ ಶಾಲಾ ಕೊಠಡಿಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ
ಪಿ. ಸುನಂದಾ
ಕ್ಷೇತ್ರ ಶಿಕ್ಷಣಾಧಿಕಾರಿ, ಕೂಡ್ಲಿಗಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT