ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಥಾಳ ಸೇತುವೆ ಜಲಾವೃತ

Last Updated 16 ಸೆಪ್ಟೆಂಬರ್ 2017, 5:45 IST
ಅಕ್ಷರ ಗಾತ್ರ

ಅಮೀನಗಡ (ಕಮತಗಿ): ಸಮೀಪದ ಮಲಪ್ರಭಾ ನದಿಯು ತುಂಬಿ ಹರಿಯು­ತ್ತಿದ್ದು ರಾಮಥಾಳ ಸೇತುವೆ ಜಲಾವೃತ­ವಾಗಿದೆ. ಉತ್ತರಿ ಮಳೆ ಕೂಡಿದ ಮೇಲೆ ರೈತರಲ್ಲಿ ಸಂಭ್ರಮ ಮನೆ ಮಾಡಿದೆ. ಎರಡು ದಿನ ಸುರಿದ ಮಳೆಯಿಂದಾಗಿ ನದಿ, ಹಳ್ಳಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ.

ರಾಮಥಾಳ ಸೇತುವೆ ಸುಮಾರು ಐದಾರು ವರ್ಷಗಳಿಂದ ಮಳೆಯಿಲ್ಲದೇ ತುಂಬಿರಲಿಲ್ಲ. ಈಗ ಅಧಿಕ ಮಳೆಯಾಗಿದ್ದು ಸೇತುವೆ ಭರ್ತಿ ಹರಿಯುತ್ತಿರುವುದರಿಂದ ನೋಡಲು ಮನಸ್ಸಿಗೆ ಮುದವೆನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ರಾಮಥಾಳ ಗ್ರಾಮದ ಶರಣಪ್ಪ ಕೊಪ್ಪದ.

ತುಂಬಿ ಹರಿಯುತ್ತಿರುವ ಜಲಧಾರೆ ನೋಡಲು ಸಮೀಪದ ಗ್ರಾಮಗಳಿಂದ ಜನ ಬರುತ್ತಿದ್ದಾರೆ. ಸುಮಾರು ವರ್ಷ­ಗಳಿಂದ ನೀರಿಲ್ಲದೇ ಭಣಭಣ ಎನ್ನುತ್ತಿದ್ದ ಮಲಪ್ರಭಾ ನದಿಯ ಜಲಧಾರೆ­ಯನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ. ಮಳೆಯ ರಭಸಕ್ಕೆ ನೀರು ಹೊಲ ಗದ್ದೆಗಳಲ್ಲಿ ಹರಿದು ಬರುತ್ತಿರುವುದ­ರಿಂದ ನೀರು ಮಣ್ಣಿನರಾಡಿಯಾಗಿ ಸುರಿ­ಯು­ತ್ತಿದೆ. ಮೀನುಗಾರರು ಸದ್ಯ ಇಲ್ಲಿ ಬಲೆ ಹಾಕಲು ತಯಾರಿ ನಡೆಸುತ್ತಿದ್ದಾರೆ.

ನೀರು ತುಂಬಿ ಹೀಗೆ ಕೋಡಿಯಾಗಿ ಹರಿಯುತ್ತಿರುವುದರಿಂದ ಮೀನುಗಳು ಅಧಿಕವಾಗಿ ಸಿಗುತ್ತವೆ. ಮೀನುಗಾರ ಯಲ್ಲಪ್ಪ ಚೌವಾಣ ಮಾತನಾಡಿ, ‘ನಾವು ರಾತ್ರಿಯಿಂದ ಇಲ್ಲಿಯೇ ಇದ್ದೆವು. 10 ಕೆ.ಜಿ ತೂಕದ ಮೀನುಗಳು ಬಲೆಗೆ ಬಿದ್ದಿವೆ. ಮತ್ತೆ ಬಲೆ ಹಾಕುತ್ತಿದ್ದು 20ರಿಂದ 30 ಕೆ.ಜಿ ಮೀನು ಸಿಗುವ ಸಾಧ್ಯತೆ ಇದೆ’ ಎಂದರು.

ಮಲಪ್ರಭಾ ನದಿ ತೀರದಲ್ಲಿರುವ ಹಿರೇಮಾಗಿ, ಚಿಕ್ಕಮಾಗಿ, ಇಂಗಳಗಿ, ಕೈರವಾಡಗಿ ಹಾಗೂ ಹಡಗಲಿ ಗ್ರಾಮಗಳ­ಲ್ಲಿರುವ ಚೆಕ್‌ ಡ್ಯಾಂ ಗಳು ಭರ್ತಿಯಾಗಿ ಹರಿಯುತ್ತಿವೆ. ಉತ್ತರಿ ಮಳೆಯಿಂದಾಗಿ ಸುತ್ತಮುತ್ತ ಇರುವ ಕೆಲವು ಕೆರೆಗಳಿಗೆ ನೀರು ಬಂದಿದೆ.

ಇನ್ನೆರಡು ದಿನ ಹದವಾಗಿ ಮಳೆಯಾದರೆ ಬಹತೇಕ ಕೆರೆಗಳು ತುಂಬಿ ಕೋಡಿಯಾಗಿ ಬೀಳುವ ಸಾಧ್ಯತೆ ಇದೆ. ನದಿ. ಹಳ್ಳ­ಕೊಳ್ಳಗಳು ತುಂಬಿ ಹರಿಯುತ್ತಿ­ರುವು­ದರಿಂದ ಬತ್ತಿ ಹೋದ ಕೊಳವೆಬಾವಿ­ಗಳಲ್ಲಿ ನೀರು ಬರುತ್ತದೆ. ನೀರಿನ ಸೆಲೆ ಜಾಸ್ತಿಯಾಗುತ್ತದೆ. ಇದರಿಂದ ನದಿ ತೀರದ ರೈತರು ಉತ್ತಮ ಬೆಳೆ ತೆಗೆಯಲು ಅನುಕೂಲವಾಗಲಿದೆ ಎನ್ನುತ್ತಾರೆ ಯುವರೈತ ರವಿ ಸಜ್ಜನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT