ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ, ವೀರಶೈವ ಒಗ್ಗೂಡಲು ಸಾಧ್ಯವಿಲ್ಲ

Last Updated 16 ಸೆಪ್ಟೆಂಬರ್ 2017, 6:05 IST
ಅಕ್ಷರ ಗಾತ್ರ

ಬೀದರ್: ‘ಲಿಂಗಾಯತ ಹಾಗೂ ವೀರಶೈವ ಎರಡೂ ಪೂರ್ವ ಮತ್ತು ಪಶ್ಚಿಮ ಇದ್ದಂತೆ. ವಿರುದ್ಧ ದಿಕ್ಕಿನಲ್ಲಿರುವ ಇವು ಎಂದಿಗೂ ಒಗ್ಗೂಡಲು ಸಾಧ್ಯವಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮುಂದುವರಿಯಲಿದೆ’ ಎಂದು ಲಿಂಗಾಯತ ಧರ್ಮ ಸಮನ್ವಯ ಸಮಿತಿ ಸದಸ್ಯರಾದ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಅವರು ತಿಳಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಬೆಂಬಲ ನೀಡಿದರೆ ಹಿಂದೂ ಧರ್ಮಕ್ಕೆ ಅಪಾಯ ಎದುರಾಗಲಿದೆ ಎನ್ನುವ ಭಯ ಬಿಜೆಪಿಯವರಿಗೆ ಇದೆ. ಪ್ರತ್ಯೇಕ ಧರ್ಮ ಘೋಷಿಸಿದರೆ ಹಿಂದೂ ಧರ್ಮದಲ್ಲಿ ಒಡಕು ಮೂಡಲಿದೆ ಎನ್ನುವುದು ಭ್ರಮೆ ಮಾತ್ರ. ಇದರಿಂದ ಯಾರೂ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಲಿಂಗಾಯತರ ಸಾಹಿತ್ಯ, ಪರಂಪರೆ ವೀರಶೈವರಿಗಿಂತ ಭಿನ್ನವಾಗಿವೆ. ಜೈನ, ಬೌದ್ಧ ಹಾಗೂ ಸಿಖ್‌ ಧರ್ಮಕ್ಕೆ ಮಾನ್ಯತೆ ನೀಡಿರುವಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕು’ ಎಂದು ಒತ್ತಾಯಿಸಿದರು.

‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಕಾರ್ಯಕ್ರಮವೊಂದರ ಆಮಂತ್ರಣ ಪತ್ರಿಕೆ ಕೊಡಲು ಭಾಲ್ಕಿ ಮಠಕ್ಕೆ ಬಂದಿದ್ದರು. ಲಿಂಗಾಯತರ ರ‍್ಯಾಲಿ ನಡೆಸದಂತೆ ಮನವಿ ಮಾಡಿಲ್ಲ. ಆದರೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಲಿಂಗಾಯತ ಪರ ಹೋರಾಟ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

‘ಕಲ್ಯಾಣ ನಾಡಾದ ಬೀದರ್‌ನಿಂದ ಹೋರಾಟ ಆರಂಭವಾಗಿದೆ. ಬೆಳಗಾವಿ ಹಾಗೂ ಲಾತೂರ್‌ನಲ್ಲಿ ನಡೆದ ಲಿಂಗಾಯತ ರ‍್ಯಾಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಪ್ಟೆಂಬರ್‌ 24ರಂದು ಕಲಬುರ್ಗಿಯಲ್ಲೂ ಬೃಹತ್‌ ರ‍್ಯಾಲಿ ನಡೆಯಲಿದೆ’ ಎಂದು ಹೇಳಿದರು.

ಒಡಕು ಮೂಡಿಲ್ಲ: ‘ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಂಚಾಚಾರ್ಯರು ನಮ್ಮೊಂದಿಗೆ ಸಮಾನ ಆಸನ ಹಂಚಿಕೊಳ್ಳುತ್ತಿರಲಿಲ್ಲ. ಎತ್ತರದ ಆಸನಗಳಲ್ಲಿ ಮಾತ್ರ ಕುಳಿತುಕೊಳ್ಳುತ್ತಿದ್ದರು. ಲಿಂಗಾಯತರ ಹೋರಾಟ ಆರಂಭವಾದ ಮೇಲೆ ಸಮಾನ ಆಸನಗಳಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಇದು ಲಿಂಗಾಯತರ ಹೋರಾಟಕ್ಕೆ ಸಂದ ಮೊದಲ ಜಯ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ತಿಳಿಸಿದರು.

‘ಪಂಚಾಚಾರ್ಯರು 12ನೇ ಶತಮಾನಕ್ಕೆ ಮೊದಲೇ ಲಿಂಗಾಯತ ಧರ್ಮ ಇತ್ತು ಎಂದು ಹೇಳುತ್ತಿದ್ದಾರೆ. ವೀರಶೈವರು 12ನೇ ಶತಮಾನದ ಹಿಂದಿನ ದಾಖಲೆಗಳನ್ನು ಒದಗಿಸಿ ಸಾಬೀತು ಪಡಿಸಬೇಕು’ ಎಂದರು.

ಪಾಟೀಲ ಹೇಳಿದ್ದು ಸತ್ಯ: ‘ಸಿದ್ಧಗಂಗಾ ಮಠದ ಶ್ರೀಗಳು ಲಿಂಗಾಯತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿರುವುದು ಸತ್ಯ. ಅದನ್ನು ಕಿರಿಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಒಂದೇ ದಿನ ಮಠದಿಂದ ಎರಡು ಪತ್ರಿಕಾ ಪ್ರಕಟಣೆಗಳು ಹೊರ ಬಿದ್ದಿವೆ. ಇದು ರಾಜಕೀಯ ಷಡ್ಯಂತ್ರವಾಗಿದೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಆರೋಪಿಸಿದರು.

ಲಿಂಗಾಯತ ಧರ್ಮ ಸಮನ್ವಯ ಸಮಿತಿಯ ಸದಸ್ಯರಾದ ಗುರುಬಸವ ಪಟ್ಟದ್ದೇವರು, ಬಸವರಾಜ ಧನ್ನೂರ, ಬಾಬು ವಾಲಿ, ಬಿ.ಜಿ.ಶೆಟಕಾರ, ಶ್ರೀಕಾಂತ ಸ್ವಾಮಿ, ರಾಜಕುಮಾರ ಗಂದಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT