ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆ ಕೆಳಗೊಂದು ಕೆರೆ!

Last Updated 16 ಸೆಪ್ಟೆಂಬರ್ 2017, 8:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜೋರಾಗಿ ಮಳೆ ಸುರಿದ ವೇಳೆ ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡದ ನೆಲ ಮಾಳಿಗೆಯಲ್ಲಿ ಸಣ್ಣದೊಂದು ಕೆರೆ ಗೋಚರಿಸುತ್ತದೆ! ಅದರ ಹತ್ತಿರ ಹೋದರೆ ಸೊಳ್ಳೆಯ ಸೈನ್ಯ ಬೆನ್ನಟ್ಟಿ ಕಚ್ಚುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಾಲ್ಕು ಎಕರೆ ಪ್ರದೇಶದಲ್ಲಿ ₹ 23.35 ಕೋಟಿ ವೆಚ್ಚದಲ್ಲಿ ಈ ನೂತನ ಆಸ್ಪತ್ರೆಯನ್ನು ನಿರ್ಮಿಸಿ ಎರಡು ವರ್ಷಗಳು ಕಳೆದಿಲ್ಲ. ಹೊಸ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಿ ಐದು ತಿಂಗಳು ಕಳೆದಿಲ್ಲ. ಅಷ್ಟರಲ್ಲಾಗಲೇ ಅವೈಜ್ಞಾನಿಕ ಕಾಮಗಾರಿ ಆಸ್ಪತ್ರೆಯ ವಾತಾವರಣವನ್ನು ಅಧ್ವಾನಗೊಳಿಸಲು ಆರಂಭಿಸಿದೆ.

ಆಸ್ಪತ್ರೆಯ ನೆಲ ಮಾಳಿಗೆಗೆ ವಾಹನಗಳನ್ನು ನಿಲುಗಡೆ ಮಾಡಲು ಹೋಗಿ ಕೆರೆಯ ಸನ್ನಿವೇಶ ಕಂಡು ವಾಪಸ್‌ ಆದವರೆಲ್ಲ ‘ಏನಿದು ಅವ್ಯವಸ್ಥೆ’ ಎಂದು ಪ್ರಶ್ನಿಸುತ್ತಿದ್ದಾರೆ. ಯಾವುದೇ ಕಟ್ಟಡ ಕಟ್ಟಬೇಕಾದರೂ ಎಂಜಿನಿಯರ್‌ಗಳು ವೈಜ್ಞಾನಿಕವಾಗಿ, ತಾರ್ಕಿಕವಾಗಿ ಲೆಕ್ಕ ಹಾಕಿಯೇ ನಿರ್ಮಾಣ ಮಾಡುತ್ತಾರೆ. ಹಾಗಿದ್ದ ಮೇಲೆ ನೆಲ ಮಾಳಿಗೆಯಲ್ಲಿ ಮೊಳಕಾಲುದ್ದ ನೀರು ಏಕೆ ನಿಲ್ಲುತ್ತಿದೆ. ಈ ಬೇಜವಾಬ್ದಾರಿ ಕೆಲಸಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮೊದಲೇ ಮಾಹಿತಿ ಇತ್ತು!
ಈ ಕುರಿತು ಆಸ್ಪತ್ರೆಯ ಮುಖ್ಯಸ್ಥರೂ ಆಗಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಅವರನ್ನು ಪ್ರಶ್ನಿಸಿದರೆ, ‘ಈ ಬಗ್ಗೆ ನಮಗೆ ಮೊದಲೇ ಮಾಹಿತಿ ಇತ್ತು. ಜೋರಾಗಿ ಮಳೆ ಬಂದರೆ ನೆಲ ಮಾಳಿಗೆಯಲ್ಲಿ ನೀರು ನಿಲ್ಲುತ್ತದೆ ಎಂದು ನಿಮಾರ್ಣ ಕಾಮಗಾರಿ ನೋಡಿಕೊಳ್ಳುತ್ತಿದ್ದ ಎಂಜಿನಿಯರ್‌ಗಳೇ ಹೇಳಿದ್ದರು. ಕಟ್ಟಡ ನಿರ್ಮಿಸಿದ ಕೆಬಿಆರ್ ಸಂಸ್ಥೆಯವರಿಗೆ ನಾವು ನೀರು ಖಾಲಿ ಮಾಡಿಸಲು ಹೇಳಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತೇವೆ’ ಎಂದು ಹೇಳಿದರು.

‘ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ. ಬೈಕ್‌ ಪಾರ್ಕ್‌ ಮಾಡಲು ಆಸ್ಪತ್ರೆಯ ಕಟ್ಟಡದ ಕೆಳಭಾಗಕ್ಕೆ ಹೋದವನು ಕ್ಷಣ ದಂಗಾಗಿ ಹೋದೆ. ಮೇಲೆ ಅಚ್ಚುಕಟ್ಟಾಗಿ ಕಾಣುವ ಆಸ್ಪತ್ರೆಯ ಕೆಳಭಾಗದಲ್ಲಿ ಕೆರೆ ನಿರ್ಮಾಣವಾದ ಪರಿಸ್ಥಿತಿ ಇತ್ತು. ಜತೆಗೆ ವಿಪರೀತ ಸೊಳ್ಳೆಗಳು ಗೋಚರಿಸಿದವು. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಆಸ್ಪತ್ರೆಯೇ ಆರೋಗ್ಯವಂತರಿಗೆ ಸಾಂಕ್ರಾಮಿಕ ರೋಗ ಹರಡುವ ತಾಣವಾದರೂ ಅಚ್ಚರಿಯಿಲ್ಲ’ ಎಂದು ಬಚ್ಚಹಳ್ಳಿಯ ನಿವಾಸಿ ಸುನಿಲ್‌ ತಿಳಿಸಿದರು.

‘ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಆಸ್ಪತ್ರೆಯ ಇಡೀ ಪರಿಸರವೇ ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ. ರೋಗಿಗಳ ಜತೆಗೆ ಆಸ್ಪತ್ರೆಗೆ ಬರುವವರಿಗೆ ಇಲ್ಲಿರುವ ಸೊಳ್ಳೆಗಳೇ ಕಚ್ಚಿದರೆ ಸಾಕು ಸಾಂಕ್ರಾಮಿಕ ರೋಗ ಬರುತ್ತದೆ ಎನ್ನುಷ್ಟರ ಮಟ್ಟಿಗೆ ಭೀತಿ ಇದೆ.

ಅಷ್ಟರ ಮಟ್ಟಿಗೆ ಆಸ್ಪತ್ರೆಯ ವಾತಾವರಣ ಹದಗೆಟ್ಟು ಹೋಗಿದೆ. ಸ್ವಚ್ಛತೆ, ಒಣಗಲು ದಿನ ಬಗ್ಗೆ ಜನರಿಗೆ ಅರಿವು ಮೂಡಿಸುವವರ ಕೊಠಡಿಯ ಬುಡದಲ್ಲೇ ನೀರು ಮಡುಗಟ್ಟಿ ನಿಂತರೆ ಹೇಗೆ’ ಎಂದು ಸುಲ್ತಾನ್‌ಪೇಟೆ ನಿವಾಸಿ ಎಸ್‌.ವಿ.ಶಿವಶಂಕರ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT