ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲೂ ಸಿರಿ ಕಂಡ ಸಿರಿಧಾನ್ಯ ಬೆಳೆಗಾರರು

Last Updated 16 ಸೆಪ್ಟೆಂಬರ್ 2017, 9:46 IST
ಅಕ್ಷರ ಗಾತ್ರ

ಸಂತೇಬೆನ್ನೂರು: ’ಭದ್ರಾ ನಾಲೆಯಲ್ಲಿ ನೀರು ಹರಿಯದ ಕಾರಣ ಸತತ ಎರಡು ಭತ್ತದ ಬೆಳೆ ಇಲ್ಲದೇ ಕಂಗಾಲಾಗಿದ್ದ ರೈತರಿಗೆ ಸಿರಿಧಾನ್ಯದ ತಳಿ ಕೊರಲೆ ಆರ್ಥಿಕ ಲಾಭ ನೀಡುವ ಮೂಲಕ ಮಂದಹಾಸ ಮೂಡಿಸಿದೆ’ ಎಂದು ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಒಕ್ಕೂಟ ಸಂಘದ ಟಿ.ಕೃಪಾ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಭೀಮನೆರೆ ಗ್ರಾಮದಲ್ಲಿ ಗುರುವಾರ ಕತ್ತಲಗೆರೆಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಸಾವಯವ ಕೃಷಿಕರ ಒಕ್ಕೂಟ ಸಂಘ ಹಾಗೂ ಜಿಲ್ಲಾ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ’ಸಿರಿಧಾನ್ಯ ಕ್ಷೇತ್ರೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿ ಕಡಿಮೆ ನೀರಿನಲ್ಲಿ ಬೆಳೆಯುವ ಈ ಧಾನ್ಯವನ್ನು ಕಳೆದ ವರ್ಷ ಕೇವಲ ನಾಲ್ಕು ರೈತರು ಬೆಳೆದಿದ್ದರು. ಈ ಭಾರಿ ಸುಮಾರು 600 ಎಕರೆ ಪ್ರದೇಶದಲ್ಲಿ ಕೊರಲೆ ಬಿತ್ತನೆ ನಡೆಸಲಾಗಿದೆ. ಮಳೆ ಕೊರತೆಯಲ್ಲೂ ಉತ್ತಮ ಇಳುವರಿ ದೊರಕಿದೆ. ಪ್ರತಿ ಕ್ವಿಂಟಾಲ್ ಕೊರಲೆಯನ್ನು ₹ 6 ಸಾವಿರಕ್ಕೆ ಖರೀದಿಸಲಾಗಿತ್ತು ಎಂದರು.

ಈ ಭಾರಿ ಧಾರಣೆ ತುಸು ಇಳಿಯಲಿದೆ. ಜಿಲ್ಲೆಯಾದ್ಯಂತ 2000 ಎಕರೆಯಲ್ಲಿ ಬಿತ್ತನೆ ನಡೆಸಲಾಗಿದೆ. ಸಿರಿಧಾನ್ಯ ಬೀಜಕ್ಕೆ ಅಧಿಕ ಬೇಡಿಕೆ ಇದೆ. ಶೇ 12.5 ರಷ್ಟು ನಾರಿನಾಂಶ ಹೊಂದಿದೆ. ಅನೇಕ ಮಾರಕ ರೋಗಗಳ ನಿವಾರಣೆ ಕಂಡು ಬಂದ ಉದಾಹರಣೆಗಳಿವೆ ಎಂದು ತಿಳಿಸಿದರು.

ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ.ಮಲ್ಲೇಶಪ್ಪ ಮಾತನಾಡಿ, ಕೊರಲೆ ಜೊತೆಯಲ್ಲಿ ಇತರೆ ಸಿರಿಧಾನ್ಯ ಬೆಳೆಯಲು ಆಸಕ್ತಿ ತೋರಿಸಿ. ಕೊರಲೆ ಧಾನ್ಯದಲ್ಲಿ ಬಿಸ್ಕೀಟ್, ಬ್ರೆಡ್‌, ದೋಸೆ ಹಾಗೂ ಕೊರಲೆ ಜ್ಯೂಸ್‌ ತಯಾರಿಸಲು ಸಿದ್ಧತೆ ನಡೆಸಿದ್ದೇವೆ ಎಂದರು.

ಕೃಷಿ ತಜ್ಞ ಡಾ.ಓ.ಕುಮಾರ್, ಡಾ.ಎಚ್‌.ಜಿ.ಸಣ್ಣ ತಿಮ್ಮಪ್ಪ, ಡಾ.ಬಿ.ಮಂಜುನಾಥ್ ಸಲಹೆ ನೀಡಿದರು. ಕೃಷಿ ಅಧಿಕಾರಿ ಬಿ.ಎಸ್‌.ಕೇಶವ್, ಲೋಕೇಶಪ್ಪ ಭಾಗವಹಿಸಿದ್ದರು. ರೈತ ವಿಶ್ವನಾಥ್, ಪರಮೇಶ್ವರಪ್ಪ, ವೆಂಕಟೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಂದ್ರಮ್ಮ, ಸಿದ್ದೇಶ್, ರೇವಣಸಿದ್ದಪ್ಪ ಹಾಜರಿದ್ದರು. ಬಸವರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT