ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ವೈತ ದರ್ಶನದ ಸಾಮಾಜಿಕ ಅನ್ವಯ

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಜಾತಿ ಭೇದ, ಮತ ದ್ವೇಷಗಳಿಲ್ಲದೆ ಸರ್ವರೂ
ಸಹೋದರರಂತೆ ಬಾಳುವ ಮಾದರಿ ಕ್ಷೇತ್ರವಿದು.

ನಾರಾಯಣ ಗುರುಗಳು ಮೊಟ್ಟ ಮೊದಲಿಗೆ ಪ್ರತಿಷ್ಠಾಪಿಸಿದ ಅರುವಿಪ್ಪುರಂನ ಶಿವ ದೇವಾಲಯದ ಗೋಡೆಯ ಮೇಲೆ ಅವರೇ ಬರೆಯಿಸಿದ ಫಲಕದಲ್ಲಿರುವ ಸಾಲುಗಳಿವು.

ಸುದೀರ್ಘ ಅವಧಿಯ ಪರಿವ್ರಾಜಕತ್ವ ಮತ್ತು ದಕ್ಷಿಣ ಕೇರಳದ ಕಾಡು ಮೇಡುಗಳಲ್ಲಿರುವ ಗುಹೆಗಳಲ್ಲಿ ತಪಸ್ಸು ನಡೆಸಿ ಸಾಮಾಜಿಕ ಬದುಕಿಗೆ ಆಗಷ್ಟೇ ಮರು ಪ್ರವೇಶ ಪಡೆದಿದ್ದ ಗುರುಗಳು ಬರೆದ ಈ ಸಾಲುಗಳು ಮುಂದಿನ ದಿನಗಳಲ್ಲಿ ಅವರು ರಚಿಸಿದ ಅನುಭಾವಿ ತಾತ್ವಿಕ ರಚನೆಗಳ ತಿರುಳನ್ನು ಸೂತ್ರ ರೂಪದಲ್ಲಿ ಹಿಡಿದಿಟ್ಟಿವೆ ಎಂದರೆ ತಪ್ಪಾಗಲಾರದು.

ಬೌದ್ಧ ಧರ್ಮದ ಅವನತಿಯ ನಂತರ ಭಾರತೀಯ ಜ್ಞಾನ ಪರಂಪರೆಯಲ್ಲಿ ಲೌಕಿಕವಾಗಿ ಮುಖ್ಯವಾಗುವ ಜಾತಿ ತಾರತಮ್ಯದಂತಹ ವಿಚಾರಗಳು ಚರ್ಚೆಯಾದದ್ದು ಬಹಳ ಕಡಿಮೆ. ಅದ್ವೈತ ವೇದಾಂತ ಅರಳಿದ ನಂತರವೂ ತಾತ್ವಿಕ ಚರ್ಚೆ ಎಂಬುದು ತರ್ಕವನ್ನು ಮುಖ್ಯವಾಗಿಟ್ಟುಕೊಂಡ ಬೌದ್ಧಿಕ ಕೂದಲು ಸೀಳುವಿಕೆಗಳಿಗೆ ಸೀಮಿತವಾಗಿ ಉಳಿಯಿತೇ ಹೊರತು ಒಟ್ಟಾಗಿ ಬದುಕುವುದಕ್ಕೆ ಬೇಕಿರುವ ತಾತ್ವಿಕ ತಳಹದಿಯೊಂದನ್ನು ನಿರ್ಮಿಸುವ ಪ್ರಯತ್ನವಾಗಲೇ ಇಲ್ಲ.

ಅಧ್ಯಾತ್ಮ ಮತ್ತು ತಾತ್ವಿಕತೆಗಳು ಬೌದ್ಧಿಕ ವ್ಯಾಯಾಮಗಳಾಗಿಯಷ್ಟೇ ಉಳಿದದ್ದು ಅನೇಕ ಸಾಮಾಜಿಕ ಪಿಡುಗುಗಳು ಆಳವಾಗಿ ಬೇರು ಬಿಡಲು ಕಾರಣವಾಯಿತು. ಇದು ಸಹಸ್ರಮಾನಗಳಷ್ಟು ಕಾಲ ಮುಂದುವರಿಯಿತು. ಮನುಕುಲದ ಏಕತೆಯನ್ನು ಹೇಳುವ ತಾತ್ವಿಕತೆಯನ್ನೇ ಮನುಷ್ಯರನ್ನು ಒಡೆಯುವುದಕ್ಕಾಗಿ ಬಳಸುವ ಅಸಂಗತವೂ ಈ ಅವಧಿಯಲ್ಲಿ ಸಂಭವಿಸಿತಷ್ಟೇ ಅಲ್ಲದೇ ಈ ಕಾಲದಲ್ಲಿಯೂ ಅದು ಮುಂದುವರಿಯುತ್ತಿದೆ.

ಥಾಮಸ್ ಹಕ್ಸ್‌ಲೀ ಹೇಳಿದಂತೆ ‘ದೂರಗಾಮಿ ಪರಿಣಾಮಗಳನ್ನು ಅನುಲಕ್ಷಿಸಿ ನೋಡಿದರೆ ಎಲ್ಲಾ ಸತ್ಯಗಳೂ ಕೊನೆಗೂ ಮಾಡುವುದು ಸಾಮಾನ್ಯ ಜ್ಞಾನ ಅಥವಾ ನಿತ್ಯ ಸತ್ಯವನ್ನೇ ಸ್ಪಷ್ಟೀಕರಿಸುವ ಕೆಲಸವನ್ನಷ್ಟೇ. ಗುರು ಪರಂಪರೆಯೊಂದರ ಅನುಯಾಯಿಯಾಗಿರುವ ನಾನು ನಾರಾಯಣ ಗುರುಗಳ ಉಪದೇಶಗಳನ್ನು ಇದೇ ಬಗೆಯಲ್ಲಿ ಸಮೀಪಿಸಲು ಇಚ್ಛಿಸುತ್ತೇನೆ.

ಗುರುಗಳು ತಮ್ಮ ಹೆಸರಿನ ಜೊತೆಗೆ ‘ಗುರು’ ಎಂಬ ಪ್ರತ್ಯಯವನ್ನು ಪ್ರಜ್ಞಾಪೂರ್ವಕವಾಗಿ ಸೇರಿಸಿಕೊಂಡರು. ಅವರ ಸಹಿ ಕೂಡಾ ‘ನಾರಾಯಣ ಗುರು’ ಎಂದೇ ಇತ್ತು. ಹೀಗೆ ಪ್ರಜ್ಞಾಪೂರ್ವಕವಾಗಿ ‘ಗುರು’ವಿನ ಹೊಣೆಯನ್ನು ಹೊತ್ತುಕೊಳ್ಳುವ ಮೂಲಕ ಅವರು ಕಳೆದುಹೋಗಿದ್ದ ಗುರು ಪರಂಪರೆಯನ್ನು ಪುನಃ ಸ್ಥಾಪಿಸಿದ್ದರು.

ಇದು ಅವರ ದೊಡ್ಡ ಕೊಡುಗೆ. ದುರದೃಷ್ಟವಶಾತ್ ವರ್ತಮಾನದಲ್ಲಿ ಅನೇಕ ಭಕ್ತರು ಈ ಅಂಶವನ್ನು ಮರೆತು ನಾರಾಯಣ ಗುರುಗಳನ್ನು ‘ಶ್ರೀ ನಾರಾಯಣ’ರನ್ನಾಗಿ ಪರಿವರ್ತಿಸಿ ದೊಡ್ಡದೊಂದು ಪರಂಪರೆಯ ಪುನರುತ್ಥಾನವನ್ನು ತಮಗೆ ಅರಿವಿಲ್ಲದಂತೆಯೇ ಮರೆಮಾಚುತ್ತಿದ್ದಾರೆ.

ಜ್ಞಾನದ ಸಾರ್ವಕಾಲಿಕತೆ ಮತ್ತು ಮನುಷ್ಯನ ವಿಶ್ವಾತ್ಮಕತೆಯ ಸಂದರ್ಭದಲ್ಲಿ ಗುರುವನ್ನು ಹೇಗೆ ಗ್ರಹಿಸಬಹುದು? ಮನುಷ್ಯ ಮನಸ್ಸು ಕಲ್ಪಿಸಿಕೊಳ್ಳಬಹುದಾದ ಅತ್ಯುನ್ನತ ಮೌಲ್ಯಗಳನ್ನು ಕಂಡು ಪ್ರತಿಪಾದಿಸುವವರನ್ನು ಗುರುವೆಂದು ನಾವು ಭಾವಿಸುತ್ತೇವೆ. ಈ ಕಾರಣದಿಂದಾಗಿಯೇ ಎಲ್ಲಾ ಗುರುಗಳೂ ‘ಜಗದ್ಗುರು’ ಎಂಬ ಗೌರವಕ್ಕೆ ಅರ್ಹರು.

ಒಂದು ಜಾತಿ, ಉಪಜಾತಿ, ಒಂದು ಪಂಥ ಅಥವಾ ಮತಕ್ಕೆ ಸೀಮಿತವಾಗಿರುವ ಅನೇಕರು ತಮ್ಮ ಹೆಸರಿನ ಜೊತೆಗೆ ‘ಜಗದ್ಗುರು’ ವಿಶೇಷಣವನ್ನು ಸೇರಿಸಿಕೊಂಡಿರುವ ದಿನಮಾನಗಳಲ್ಲಿ ಬದುಕುತ್ತಿರುವ ನಾವು ನಿಜವಾದ ಗುರು ಪರಿಕಲ್ಪನೆಯನ್ನು ಮರೆತುಬಿಟ್ಟಿದ್ದೇವೆ. ನಿಜ ಅರ್ಥದ ಗುರುಗಳೆಲ್ಲರ ಬೋಧನೆಗಳೂ ಸಾರ್ವಲೌಕಿಕವಾಗಿ ಪ್ರಸ್ತುತವಾಗುವಂಥವು.

ಇವು ನಿರ್ದಿಷ್ಟ ಗುಂಪು, ನಂಬಿಕೆ ಮತ್ತು ಪಂಥಗಳಿಗೆ ಅತೀತವಾದವು. ಹಾಗಾಗಿಯೇ ನಿಜವಾದ ಗುರುವಿನ ಬೋಧನೆಗಳು ನಮ್ಮನ್ನು ಎಲ್ಲಾ ಮಿತಿಗಳನ್ನು ಮೀರಿ ವಿಶ್ವಾತ್ಮಕವಾಗುವಂತೆ ಮಾಡುತ್ತವೆ. ಹಾಗಾಗಿಯೇ ಈ ಎಲ್ಲಾ ಗುರುಗಳ ಬೋಧನೆಗಳೂ ಇಡೀ ಮನುಕುಲದ ಪರಂಪರೆಯ ಭಾಗ.

ನಾರಾಯಣ ಗುರುಗಳ ಉದಾಹರಣೆಯೇ ಹೇಳುತ್ತಿರುವಂತೆ ಎಲ್ಲಾ ಮಿತಿಗಳ ಮಧ್ಯೆಯೂ ಗುರು ಪರಂಪರೆಯೊಂದು ಭಾರತದಲ್ಲಿ ಸದಾ ಜೀವಂತವಾಗಿ ಉಳಿದು ಬಂತು. ಹಾಗೆ ನೋಡಿದರೆ ಇದು ಭಾರತಕ್ಕೆ ಸೀಮಿತವಾಗಿರುವ ವಿಚಾರವೇನೂ ಅಲ್ಲ. ಇದು ಪ್ರಪಂಚದ ಎಲ್ಲೆಡೆಯೂ ದೇಶಕಾಲಾತೀತವಾಗಿ ಉಳಿದು ಬಂದಿರುವ ಪರಂಪರೆ. ಹಾಗಾಗಿಯೇ ಸಾರ್ವಕಾಲಿಕವೂ ಸಾರ್ವಲೌಕಿಕವೂ ಆಗಿರುವ ಮೌಲ್ಯಗಳು ತಲೆಮಾರುಗಳನ್ನು ದಾಟಿ ಹರಿದುಬಂದವು.

ಕೆಲವು ಮತ-ಧರ್ಮಗಳು ಈ ಬಗೆಯ ‘ಗುರು’ಗಳ ಸುತ್ತ ಬೆಳೆದಿರುವುದು ನಿಜ. ಆದರೆ ‘ಗುರುತನ’ ಎಂಬ ಪರಿಕಲ್ಪನೆಗೆ ಈ ಮತ-ಧರ್ಮದ ಸಾಂಸ್ಥಿಕತೆಯ ಅಗತ್ಯವೇನೂ ಇಲ್ಲ ಎಂಬುದನ್ನೂ ನಾವು ಅರಿಯಬೇಕು. ಹಾಗೆ ನೋಡಿದರೆ ಎಲ್ಲಾ ಗುರುಗಳೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಲೇ ಚಿಂತನೆಗಳಲ್ಲಿ ಅಸಾಮಾನ್ಯರಾಗಿದ್ದವರು.

ತೀರಾ ಇತ್ತೀಚೆಗೆ ಎನ್ನಬಹುದಾದ ಕಾಲಘಟ್ಟದಲ್ಲಿ ನಾರಾಯಣ ಗುರುಗಳು (1854-1928) ಚಿಂತನೆಯ ಆಳಕ್ಕಿಳಿದು ಅಲ್ಲಿ ಕಂಡುಕೊಂಡ ಸತ್ಯಗಳನ್ನು ಪ್ರಪಂಚದ ಅನೇಕ ಅನುಭಾವಿ ಕವಿಗಳಂತೆ ಪದ್ಯಗಳಾಗಿ ಅಭಿವ್ಯಕ್ತಿಸಿದರು. ಅಥವಾ ಇದನ್ನು ಗುರುಗಳ ಚಿಂತನೆಗಳು ಮಲಯಾಳಂ, ತಮಿಳು ಮತ್ತು ಸಂಸ್ಕೃತ ಕವಿತೆಗಳಾಗಿ ಅರಳಿದವು ಎಂದೂ ಹೇಳಬಹುದು. ಗುರುಗಳು ತಮ್ಮ ಹಿಂದಿನವರಂತೆ ‘ಪ್ರಸ್ಥಾನತ್ರಯ’ಯಗಳಿಗೆ ಭಾಷ್ಯ ಬರೆಯಲಿಲ್ಲ. ಅವರು ಇನ್ನೂ ಹಿಂದಕ್ಕೆ ಹೋಗಿ ಋಷಿಗಳಂತೆ ತಮ್ಮದೇ ಕೃತಿಗಳನ್ನು ರಚಿಸಿದರು.

ಗುರುಗಳ ದರ್ಶನದಂತೆ ಅನುಭಾವ ಮತ್ತು ವೈಜ್ಞಾನಿಕ ಸತ್ಯಗಳು ಪರಸ್ಪರ ಪೂರಕ. ಅಂದರೆ ಮನುಷ್ಯ ಪ್ರಯತ್ನದ ಯಾವ ಆಯಾಮವೂ ಕೀಳಲ್ಲ. ಸೂರ್ಯನ ಬೆಳಕಿನ ಜೊತೆಗೇ ಅದು ತರುವ ಬಿಸುಪನ್ನೂ ಒಟ್ಟಾಗಿಯೇ ಗ್ರಹಿಸುವಂಥ ಸಮಗ್ರ ಗ್ರಹಿಕೆಯ ವಿಧಾನವಿದು. ಮನುಷ್ಯ ಎದುರಿಸುವ ಸಮಸ್ಯೆಗಳ ಕುರಿತ ಗುರುಗಳ ಕಾಳಜಿ ಅವರು ತಮ್ಮ ಜ್ಞಾನದ ಅನ್ವಯಕ್ಕೆ ಬಳಸುವ ಗತಿತರ್ಕದಿಂದ ಪ್ರೇರಿತವಾಗಿದೆ.

ಒಂದು ನಿರ್ದಿಷ್ಟ ಸ್ಥಿತಿಗೆ ಕಾರಣವಾಗಿರುವ ಎಲ್ಲವನ್ನೂ ಒಟ್ಟಾಗಿ ಪರಿಗಣಿಸಿ ಅದರ ಪರಿಹಾರಕ್ಕೆ ಪ್ರಯತ್ನಿಸುವ ವಿಧಾನವಿದು. ಪ್ಲೇಟೋ ಜ್ಞಾನದ ಮೆಟ್ಟಿಲುಗಳೆಂದು ವಿವರಿಸಿರುವ ಇದೇ ಪರಿಕಲ್ಪನೆ ಭಾರತೀಯ ಸಂಸ್ಕೃತಿಯಲ್ಲಿ ಯೋಗ ಎಂಬ ಹೆಸರಿನಿಂದ ಬಹುಕಾಲದಿಂದ ಇದೆ. ಈ ಯೋಗ ಎಂಬುದು ಕೇವಲ ದೈಹಿಕ ವ್ಯಾಯಾಮದ ಒಂದಷ್ಟು ವಿಧಾನಗಳಲ್ಲ.

ಇದು ನಿರ್ದಿಷ್ಟ ಸ್ಥಿತಿಯೊಂದಕ್ಕೆ ಕಾರಣವಾಗಿರುವ ಎರಡು ಭಿನ್ನ ಧ್ರುವಗಳಲ್ಲಿರುವ ಕಾರಣಗಳ ಮಧ್ಯೆ ಸಾಧಿಸುವ ಸಮನ್ವಯ. ಮನುಕುಲ ಒಟ್ಟಾಗಿ ಶಾಂತಿಯಿಂದ ಬದುಕುವುದಕ್ಕೆ ಕಂಡುಕೊಂಡಿರುವ ವಿಧಾನವಿದು. ವ್ಯಕ್ತಿ ತನ್ನ ಶಾಂತಿಯುತ ಬದುಕಿಗಾಗಿ ಆರಿಸಿಕೊಳ್ಳುವ ಮಾರ್ಗ ಒಟ್ಟಾಗಿ ಸಮುದಾಯವೇ ಶಾಂತಿಯಿಂದಿರುವುದಕ್ಕೆ ಹೇತುವಾಗುವ ವಿಧಾನ. 'ವಸುಧೈವ ಕುಟುಂಬಕಂ' ಮತ್ತು 'ಲೋಕಾಸಮಸ್ತಾ ಸುಖಿನೋ ಭವಂತು' ಎಂಬಂಥ ಮಾತುಗಳು ಸೂಚಿಸುವುದೂ ಇದನ್ನೇ.

ಈ ಚಿಂತನೆಯೊಳಗಿನಿಂದ ಮೂಡುವ ದರ್ಶನವನ್ನು ಸಾಮಾಜಿಕ ಬದುಕಿಗೆ ಅನ್ವಯಿಸಿ ನೋಡಿರುವುದರಲ್ಲಿ ಗುರು ದರ್ಶನದ ಹೆಗ್ಗಳಿಕೆ ಇದೆ. ಅದ್ವೈತ ಎಂಬುದು ಸಾಮಾಜಿಕ ಸಂದರ್ಭಕ್ಕೆ ಅನ್ವಯಿಸುವಾಗ ಸಮತ್ವವಾಗಿ ಬದಲಾಗುತ್ತದೆ. ಅವರ ‘ಜಾತಿ ಮೀಮಾಂಸಾ’ ಎಂಬ ವಚನದ ಸಾಲುಗಳು ಧ್ವನಿಸುವುದು ಇದನ್ನೇ.

ಒಂದೇ ಜಾತಿ ಒಂದೇ ಮತ, ಒಂದೇ ದೈವ ಮನುಜಗೆ, ಒಂದೇ ಯೋನಿ ಒಂದಾಕಾರ ಯಾವ ಭೇದವಿಲ್ಲಿದರಲ್ಲಿ ನಾರಾಯಣ ಗುರುಗಳು ತಮ್ಮ ಜೀವಿತಾವಧಿಯಲ್ಲಿ ತಮ್ಮ ಸುತ್ತಲಿನ ಸಮಾಜದಲ್ಲಿ ಕ್ರಾಂತಿಕಾರಕವಾದ ಬದಲಾವಣೆಗಳಿಗಾಗಿ ಪ್ರಯತ್ನಿಸಿದರು. ಅವರ ಪ್ರಯತ್ನಗಳು ವ್ಯಕ್ತಿಯ ವೈಯಕ್ತಿಕ ಬದುಕಿನಿಂದ ತೊಡಗಿ ಅವನ ಸಾಮಾಜಿಕ ಬದುಕಿನ ತನಕ ವ್ಯಾಪಿಸಿದ್ದವು.

ಅದ್ದೂರಿ ಮದುವೆಗಳು, ಬಾಲ್ಯ ವಿವಾಹ, ಪ್ರಾಣಿ ಬಲಿ ಮುಂತಾದುವುಗಳು ನಡೆಯುವ ಸ್ಥಳಕ್ಕೇ ಹೋಗಿ ಬಹಳ ಸೃಜನಶೀಲ ಎನ್ನಬಹುದಾದ ವಿಧಾನದಲ್ಲಿ ಅವುಗಳನ್ನು ಮಾಡುವವರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು. ಕೇವಲ ಒಣ ಭೋದನೆಗಳಿಗೆ ಸೀಮಿತವಾಗಿ ಉಳಿಯದೆ ಇಂಥ ಕ್ರಿಯೆಯಲ್ಲಿ ತೊಡಗುವಂತೆ ಪ್ರೇರೇಪಿಸಿರುವ ಅಂಶಗಳು ಯಾವುವು ಎಂಬುದನ್ನು ಗಮನಿಸಿ ಪ್ರತಿಕ್ರಿಯಿಸುತ್ತಿದ್ದರು. ಸಮಾಜದ ಮೇಲಿನ ತಮ್ಮ ಜವಾಬ್ದಾರಿ ಎಂಬ ನೆಲೆಯಲ್ಲಿ ಅವರು ಈ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.

ಗುರುಗಳ ‘ಅನುಕಂಪ ದಶಕಂ’ ಎಂಬ ಹತ್ತು ಸಾಲುಗಳ ಪದ್ಯ ಅವರ ಈ ದೃಷ್ಟಿಕೋನವನ್ನು ಬಹಳ ಸ್ಪಷ್ಟವಾಗಿ ನಿರ್ವಚಿಸುತ್ತದೆ. ಇದು ಆರಂಭವಾಗುವುದೇ ಒಂದು ಇರುವೆಗೂ ಕೇಡು ಬಾರದಿರಲಿ ಎಂದು ಕರುಣಾಕರನೊಂದಿಗೆ ಪ್ರಾರ್ಥಿಸುವುದರೊಂದಿಗೆ. ದಯೆ, ಅನುಗ್ರಹ ಮತ್ತು ಪ್ರೀತಿ ಎಂಬ ಭಿನ್ನ ಅರ್ಥಗಳಲ್ಲಿ ಅನಾವರಣಗೊಳ್ಳುವ ಈ ಕರುಣೆ ಎಂಬುದು ಪ್ರಪಂಚದ ಎಲ್ಲ ಅಧ್ಯಾತ್ಮ ಮತ್ತು ಧಾರ್ಮಿಕ ಪರಂಪರೆಗಳ ನೆಲೆಗಟ್ಟಾಗಿರುವ ಸಿದ್ಧಾಂತ.

ಇದನ್ನು ಪ್ರತಿಪಾದಿಸಿದ ಎಲ್ಲರನ್ನೂ ಗುರುತಿಸಿ ಒಂದಾಗಿ ಕಾಣುವ ಗುರುಗಳ ಪ್ರಯತ್ನ ಕೇವಲ ಬೌದ್ಧಿಕವಾದುದಷ್ಟೇ ಅಲ್ಲ. ಇದವರ ಮಟ್ಟಿಗೆ ಭಾವನಾತ್ಮಕವಾಗಿಯೂ ನಿಜ. ಪ್ರೀತಿಯಿಲ್ಲದ ಹೃದಯ ಹೇಗೆ ಶೋಕದ ಮೂಲವೆಂದು ಗುರುತಿಸುವ ಅವರು ‘ಯಾರು ಪ್ರೀತಿಸುತ್ತಾನೋ ಅವನು ಬದುಕುತ್ತಾನೆ’ ಎಂಬ ಮಂತ್ರವನ್ನು ನೀಡುತ್ತಾರೆ.

ಈ ಪದ್ಯ ಮತ್ತೊಂದು ಕಾರಣಕ್ಕೂ ಮುಖ್ಯವಾಗುತ್ತದೆ. ಇದರಲ್ಲಿ ಅವರು ತಮ್ಮ ಸ್ಫೂರ್ತಿಯ ಸೆಲೆಗಳನ್ನು ಬಿಚ್ಚಿಡುತ್ತಾರೆ. ಆ ಮೂಲಕ ಕರುಣೆಯ ಹಾದಿಯನ್ನು ತುಳಿದ ಪೂರ್ವಸೂರಿಗಳನ್ನು ನೆನಪಿಸಿಕೊಳ್ಳುತ್ತದೆ. ಎಲ್ಲಾ ಗುರುಗಳೂ ತಮ್ಮ ದೇಶ ಮತ್ತು ಕಾಲಗಳ ಮಿತಿಯನ್ನು ಮೀರಿ ಸಾರ್ವತ್ರಿಕವಾಗಿರುವ ಕರುಣೆ ಎಂಬ ಮೌಲ್ಯವನ್ನು ಎತ್ತಿ ಹಿಡಿದರು ಎಂಬುದನ್ನೂ ಈ ಪದ್ಯ ಹೇಳುತ್ತದೆ.

ನಾರಾಯಣ ಗುರುಗಳ ಶಿಷ್ಯ ನಟರಾಜ ಗುರು ದಾಖಲಿಸಿರುವಂತೆ ಮಾವಿನ ಮರವೊಂದರ ಹಣ್ಣುಗಳಿಂದ ತುಂಬಿರುವ ಕೊಂಬೆಯೊಂದು ಕೈಗೆಟುಕುವಷ್ಟು ಬಾಗಿರುವುದನ್ನು ಕಂಡು ಗುರುಗಳು ಕಣ್ಣಲ್ಲಿ ನೀರು ತುಂಬಿಕೊಂಡು ‘ಎಂತಾ ಕರುಣೆ’ ಎಂದು ಉದ್ಗರಿಸಿದ್ದರಂತೆ.

ಈ ದೃಷ್ಟಿಯಲ್ಲೇ ನಾವು ನಾರಾಯಣ ಗುರುಗಳ ಕೃತಿಗಳನ್ನು ನೋಡಬೇಕಾಗುತ್ತದೆ. ಅವರ ‘ಜಾತಿ ಮೀಮಾಂಸಾ’ ಮನುಕುಲದ ಏಕತೆಯನ್ನು ಪ್ರತಿಪಾದಿಸುತ್ತದೆ.

ಮನುಷ್ಯಾಣಾಂ ಮನುಷ್ಯತ್ವಂ
ಜಾತಿರ್ ಗೋತ್ವಂ ಗವಾಂ ಯಥಾನ ಬ್ರಾಹ್ಮಣಾದಿರಸ್ಯೈವಂ
ಹಾ! ತತ್ವಂ ವೇತ್ತಿ ಕೋಪಿ ನ.
ಒಂದೇ ಜಾತಿ ಒಂದೇ ಮತ, ಒಂದೇ ದೈವ ಮನುಷ್ಯಗೆ,
ಒಂದೇ ಯೋನಿ ಒಂದಾಕಾರ ಯಾವ ಭೇದವಿಲ್ಲಿದರಲ್ಲಿ,.
ಒಂದೇ ಜಾತಿಯಿಂದಲ್ಲವೇ ಹುಟ್ಟುವುದು ಸಂತತಿ
ನರಜಾತಿಯಿಯ್ದು ನೆನೆದೊಡೆ ಒಂದೇಜಾತಿಯೊಳುಳ್ಳದು.
ನರಜಾತಿಯಿಂದಲ್ಲವೇ ಹುಟ್ಟುವುದು ವಿಪ್ರನೂ
ಮಾದಿಗತಾನು ಏನುಂಟಂತರವು ನರಜಾತಿಯೊಳ್?
ಮಾದಿಗಿತ್ತಿಯಲ್ಲಿ ಹಿಂದೆ ಪರಾಶರ ಮಹಾಮುನಿ
ಹುಟ್ಟಿದ ವೇದವ ಸೂತ್ರಿಸಿದ ಮುನಿ ಬೆಸ್ತ ಕನ್ಯೆಯೊಳು.

ಗುರುಗಳು ಪ್ರತಿಪಾದಿಸಿರುವಂತೆ ಇಡೀ ಮನುಕುಲವೇ ಒಂದು ಜಾತಿ. ಗೋವುಗಳೆಲ್ಲವೂ ಹೇಗೆ ಗೋವಿನ ಜಾತಿಗೆ ಸೇರುತ್ತವೆಯೋ ಹಾಗೆಯೇ ಮನುಷ್ಯರೆಲ್ಲವೂ ಮನುಷ್ಯ ಜಾತಿಗೆ ಸೇರುತ್ತಾರೆ ಎಂಬುದು ಅವರ ಪ್ರತಿಪಾದನೆ. ಮನುಷ್ಯ ಜಾತಿ ಒಂದೇ ಎಂಬುದನ್ನು ಆಧ್ಯಾತ್ಮಿಕವಾದ ಅರ್ಥದಲ್ಲಿಯೂ ಗ್ರಹಿಸಲು ಸಾಧ್ಯವಿದೆ. ಮನುಷ್ಯ ಯಾವುದೇ ಜಾತಿ, ಮತ ಅಥವಾ ಧರ್ಮವನ್ನು ಅನುಸರಿಸುತ್ತಿದ್ದರೂ ಅವನ ಆತ್ಯಂತಿಕ ಗುರಿ ಒಂದೇ.

ಗುರುಗಳ ‘ಆತ್ಮೋಪದೇಶ ಶತಕಂ’ ಕೃತಿಯಲ್ಲಿ ಇರುವ ವಿವರಗಳ ಜೊತೆಗೆ ಇದನ್ನು ಓದಿಕೊಂಡರೆ ಹೆಚ್ಚು ಸ್ಪಷ್ಟವಾಗುತ್ತದೆ. ಈ ಶತಕದ 44ನೇ ವಚನದಿಂದ ಗುರುಗಳು ಮತ-ಧರ್ಮಗಳ ವೈವಿಧ್ಯವನ್ನು ವಿವರಿಸುತ್ತಾರೆ. ಈ ಧರ್ಮಗಳನ್ನು ಕೇವಲ ಯಾಂತ್ರಿಕವಾಗಿ ಆಚರಿಸಿದರೆ ಅದು ಮನುಷ್ಯ ಮನಸ್ಸಿನಲ್ಲಿ ಸೃಷ್ಟಿಸಬಹುದಾದ ಗೊಂದಲಗಳು ಎಂದು ಹೇಳುವ ಅವರು ಐವತ್ತನೇ ವಚನದಿಂದ ಆಚೆಗೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಬಗೆಯನ್ನು ವಿವರಿಸುತ್ತಾರೆ.

ಕುರುಡರು ಆನೆಯನ್ನು ಗ್ರಹಿಸುವ ರೂಪಕದೊಂದಿಗೆ ಗೊಂದಲಗಳನ್ನು ವಿವರಿಸುವ ಅವರು ಅಪಗ್ರಹಿಕೆಗಳನ್ನು ಬದಿಗಿಡಲು ತೊಡಗಿದರೆ ಅರ್ಥ ಹೇಗೆ ಅನಾವರಣಗೊಳ್ಳುತ್ತದೆ ಎಂಬುದನ್ನು ವಿವರಿಸುತ್ತಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ ‘ಅಲೆದಾಟವನ್ನು ಬಿಟ್ಟು, ಶಾಂತನಾಗಿ ಕುಳಿತರೆ’ ಅದು ಅರ್ಥವಾಗಲು ತೊಡಗುತ್ತದೆ. ಗುರುಗಳು ಹೇಳಿರುವ ಸಾರ್ವಕಾಲಿಕ ಮತ್ತು ಸಾರ್ವಲೌಕಿಕವಾದ ಸತ್ಯ ಇದು.

(ಲೇಖಕರು ನಾರಾಯಣ ಗುರುಗಳ ಶಿಷ್ಯ ನಟರಾಜ ಗುರುಗಳ ಶಿಷ್ಯ. ಅಕ್ಕನ ವಚನಗಳನ್ನು ಇಂಗ್ಲಿಷ್ ಮತ್ತು ಮಲಯಾಳಂಗೆ ಅನುವಾದಿಸಿದ್ದಾರೆ. ಟಿಬೆಟ್ ನ ಯೋಗಿ ಮಿಲರೇಪನ ಕೃತಿಗಳನ್ನು ಮಲಯಾಳಂಗೆ ಅನುವಾದಿಸಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT