ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಯೋ...ಕ್ರೀಡಾಕೂಟವೋ?

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನನ್ನು ಕ್ರೀಡಾಪಟುವನ್ನಾಗಿ ರೂಪಿಸಿದ್ದೇ ದಸರಾ ಕ್ರೀಡಾಕೂಟ. 1993ರಲ್ಲಿ ಮೊದಲ ಬಾರಿ ಹೈಜಂಪ್‌ ಹಾಗೂ ಲಾಂಗ್‌ಜಂಪ್‌ನಲ್ಲಿ ಸ್ಪರ್ಧಿಸಿದ್ದೆ. ಕ್ರೀಡಾಕೂಟದ ಜೊತೆಗೆ ಜಂಬೂಸವಾರಿಯ ಸೊಬಗು ಕಣ್ತುಂಬಿಕೊಂಡಿದ್ದೆ. ಆನಂತರ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು. ಸ್ಥಳೀಯ ಪ್ರತಿಭೆಗಳ ಶೋಧಕ್ಕಿದು ಅತ್ಯುತ್ತಮ ವೇದಿಕೆ. ಆದರೀಗ ಆ ಹೊಳಪು ಕಳೆದುಕೊಂಡಿದೆ’

–ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಒಲಿಂಪಿಯನ್‌ ಅಥ್ಲೀಟ್‌ ಪ್ರಮೀಳಾ ಅಯ್ಯಪ್ಪ. ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾ ಜೀವನ ಆರಂಭಿಸಿದ ಅವರು ಸಿಡ್ನಿ ಹಾಗೂ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.

ಇದನ್ನು ಉಲ್ಲೇಖಿಸಲು ಕಾರಣ ಮತ್ತೊಂದು ದಸರಾ ಕ್ರೀಡಾಕೂಟ ಬಂದಿದೆ. ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಮೆರುಗು ಲಭಿಸುವುದೇ ಕ್ರೀಡಾ ಕೂಟದಿಂದ. ಸಾವಿರಾರು ಕ್ರೀಡಾಳುಗಳು ಭಾಗವಹಿಸುವ ಕ್ರೀಡಾ ಉತ್ಸವವಿದು. ನಾಡಿನ ಸಂಸ್ಕೃತಿ ಹಾಗೂ ಕ್ರೀಡಾ ಸೊಬಗು ಒಂದೆಡೆ ಮೇಳೈಸುತ್ತವೆ.

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ರುವ ರಾಜ್ಯದಲ್ಲಿ ಅದೆಷ್ಟೊ ಪ್ರತಿಭೆಗಳ ಮೊದಲ ಮೆಟ್ಟಿಲು ದಸರಾ ಕ್ರೀಡಾಕೂಟ ಎಂಬುದು ವಿಶೇಷ. ಈ ಕ್ರೀಡಾಕೂಟ ಕಟ್ಟಿಕೊಟ್ಟಿರುವ ಸವಿನೆನಪುಗಳನ್ನು ಇಂದಿಗೂ ಹಿರಿಯ ಕ್ರೀಡಾಪಟುಗಳು ಮೆಲುಕು ಹಾಕುತ್ತಾರೆ. ಬಹಳ ಹಿಂದೆ ದಸರಾ ಕೂಟದಲ್ಲಿ ಪಾಲ್ಗೊಂಡವರು, ಪದಕ ಗೆದ್ದವರು, ಸನಿಹದಿಂದ ವೀಕ್ಷಿಸಿದವರು ಈಗಲೂ ಆ ಕ್ಷಣಗಳನ್ನು ರೋಚಕವಾಗಿ ವರ್ಣಿಸುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ದಸರಾ ಕ್ರೀಡಾಕೂಟ ಅದ್ಭುತ ವೇದಿಕೆ.

ತೀವ್ರ ಬರಗಾಲ ಹಾಗೂ ರೈತರ ಸರಣಿ ಆತ್ಮಹತ್ಯೆ ನೆಪಯೊಡ್ಡಿ 2015ರಲ್ಲಿ ಸ್ಪರ್ಧೆಗಳು ಜಿಲ್ಲಾಮಟ್ಟಕ್ಕೆ ಸೀಮಿತಗೊಂಡಿದ್ದವು.ಕಾವೇರಿ ನದಿ ವಿವಾದ ಕಾವೇರಿದ್ದರಿಂದ ಹಾಗೂ ಬರಗಾಲದ ಕಾರಣಯೊಡ್ಡಿ 2016ರಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳನ್ನು ಮಾತ್ರ ಆಯೋಜಿಸಲಾಗಿತ್ತು. ಈ ಬಾರಿಯೂ ಅದು ಪುನರಾವರ್ತನೆಯಾಗುತ್ತಿದೆ. ಅಖಿಲ ಭಾರತ ಆಹ್ವಾನಿತ ಸ್ಪರ್ಧೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಈ ಬಾರಿ ಸೆಪ್ಟೆಂಬರ್‌ 21ರಿಂದ 25ರವರೆಗೆ ಕ್ರೀಡಾಕೂಟ ನಡೆಯಲಿದೆ. ಜೊತೆಗೆ ಸೈಕ್ಲೋಥಾನ್‌, ಮ್ಯಾರಥಾನ್‌ ಹಾಗೂ ಜಲಸಾಹಸ ಕ್ರೀಡೆಗಳು ಜರುಗಲಿವೆ.

ಈ ಬಾರಿಯೂ ರಾಜ್ಯಮಟ್ಟಕ್ಕೆ ಸೀಮಿತಗೊಂಡಿರುವುದು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಲ್ಲಿ ಬೇಸರ ತರಿಸಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ರೀತಿ ಇದೇನಾ ಎಂದು ಪ್ರಶ್ನಿಸುತ್ತಿದ್ದಾರೆ.

ಅದಷ್ಟೇ ಅಲ್ಲ; ಕ್ರೀಡಾಕೂಟಕ್ಕೆ ಸಿದ್ಧತೆ ಆರಂಭವಾಗುವುದೇ ತಡವಾಗಿ. ಈ ವರ್ಷವೂ ಅದೇ ಸಮಸ್ಯೆ. ಅನಗತ್ಯ ವಿಷಯಗಳಿಗೆ ದುಂದುವೆಚ್ಚ ಮಾಡುವ ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತ ಕ್ರೀಡಾಕೂಟದ ವಿಷಯದಲ್ಲಿ ಮಾತ್ರ ಸದಾ ನಿರ್ಲಕ್ಷ್ಯ ವಹಿಸುತ್ತಿವೆ. ಸೌಲಭ್ಯಗಳಿಗೆ ಇಲ್ಲಿ ಯಾವುದೇ ಕೊರತೆ ಇಲ್ಲ. ಚಾಮುಂಡಿವಿಹಾರದ ವಿಶಾಲ ಪ್ರದೇಶದಲ್ಲಿ ಕ್ರೀಡಾ ಇಲಾಖೆಯ ಸುಸಜ್ಜಿತ ಕ್ರೀಡಾಂಗಣವೇ ಇದೆ. ಹಾಕಿ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಈಜುಕೊಳವಿದೆ.

ಹಿಂದೆ ಅಚ್ಚುಕಟ್ಟಾಗಿ ದಸರಾ ಕ್ರೀಡಾಕೂಟ ನಡೆಯುತಿತ್ತು. ರಾಷ್ಟ್ರಮಟ್ಟದ ಪುರುಷರ ಆಹ್ವಾನಿತ ಕಬಡ್ಡಿ, ವಾಲಿಬಾಲ್ ಮತ್ತು ಹಾಕಿ ಟೂರ್ನಿಗಳನ್ನು ಆಯೋಜಿಸಲಾಗುತಿತ್ತು. ಅದಲ್ಲದೆ; ರಾಜ್ಯಮಟ್ಟದ ಸುಮಾರು 34 ಕ್ರೀಡೆಗಳನ್ನು ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗುತಿತ್ತು. ನೋಡುಗರಿಗೆ ಅದೊಂದು ದೊಡ್ಡ ಹಬ್ಬದಂತಿರುತಿತ್ತು.

‘ದಸರಾ ಕ್ರೀಡಾಕೂಟವು ತನ್ನ ಹಿಂದಿನ ಹೊಳಪು ಕಳೆದುಕೊಳ್ಳುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಟಾಚಾರಕ್ಕೆ ನಡೆಸಲಾಗುತ್ತಿದೆ. ಕ್ರೀಡಾಕೂಟವನ್ನು ಜಾತ್ರೆಯನ್ನಾಗಿಸಿದ್ದಾರೆ. ಉದ್ದೇಶ, ಗುರಿ ಇಲ್ಲ. ಪ್ರತಿಭೆಗಳನ್ನು ಶೋಧಿಸುವ ಕ್ರೀಡಾಕೂಟವಾಗಬೇಕಿತ್ತು. ಆದರೆ, ಹಾಗಾಗುತ್ತಿಲ್ಲ’ ಎಂದು ಟೀಕಿಸುತ್ತಾರೆ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ.

‘ಒಲಿಂಪಿಕ್ಸ್‌ ಸೇರಿದಂತೆ ದೊಡ್ಡಮಟ್ಟದ ಕ್ರೀಡಾಕೂಟಕ್ಕೆ ವರ್ಷಗಟ್ಟಲೆ ಸಿದ್ಧತೆ ನಡೆಯುತ್ತದೆ. ಆದರೆ, ದಸರಾ ಕೂಟಕ್ಕೆ ಸರಿಯಾಗಿ ಸಿದ್ಧತೆ ನಡೆಸಲು ಕ್ರೀಡಾ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಕ್ರೀಡಾ ನಿರ್ವಹಣೆಯ ಜ್ಞಾನದ ಕೊರತೆ ಇದಕ್ಕೆಲ್ಲಾ ಕಾರಣ. ಎಲ್ಲವನ್ನೂ ಗೊಂದಲಮಯ ಮಾಡಿ ಕ್ರೀಡಾಪಟುಗಳನ್ನೂ ಗೊಂದಲಕ್ಕೆ ಸಿಲುಕಿಸುತ್ತಾರೆ’ ಎಂದು ದೈಹಿಕ ಶಿಕ್ಷಣ ತಜ್ಞ ಪ್ರೊ.ಶೇಷಣ್ಣ ಬೇಸರ ವ್ಯಕ್ತಪಡಿಸುತ್ತಾರೆ.

ಕ್ರೀಡಾಪಟುಗಳ ಸಂಖ್ಯೆಯೂ ಕುಸಿಯುತ್ತಿದೆ. ಕ್ರೀಡಾಪ ಟುಗಳನ್ನು ಪ್ರೋತ್ಸಾಹಿಸುವ ಕ್ರೀಡಾಪ್ರೇಮಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಜೊತೆಗೆ ಕ್ರೀಡೆಗೆ ಮೀಸಲಿಡುವ ಅನುದಾನವೂ ತಗ್ಗುತ್ತಿದೆ. ಈ ಬಾರಿ ಕ್ರೀಡಾ ಉಪಸಮಿತಿಯ ವಿಳಂಬ ನೀತಿಯಿಂದಾಗಿ ರಾಷ್ಟ್ರಮಟ್ಟದ ಕಬಡ್ಡಿ, ಬ್ಯಾಡ್ಮಿಂಟನ್‌, ಕೊಕ್ಕೊಗೆ ಕೊಕ್ಕೆ ಬಿದ್ದಿದೆ.

‘ದಸರಾ ಮಹೋತ್ಸವ ಎಷ್ಟೇ ಸರಳವಾಗಿರಲಿ ಅಥವಾ ಅದ್ದೂರಿಯಾಗಿರಲಿ. ಕ್ರೀಡೆಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು. ಬಹುಮಾನ ಮೊತ್ತ ಕಡಿಮೆ ಮಾಡಬಾರದು.ಇದು ಪ್ರತಿಭೆಯ ಅನಾವರಣದ ವೇದಿಕೆ. ದಸರಾದಲ್ಲಿ ಮಿಂಚಿದ ಕ್ರೀಡಾಪಟುಗಳು ಮುಂದೆ ದೊಡ್ಡಮಟ್ಟದಲ್ಲಿ ಹೆಸರು ಮಾಡುತ್ತಾರೆ’ ಎಂದು ಹೇಳುತ್ತಾರೆ ಮಾಜಿ ಕ್ರೀಡಾಪಟು ಹಾಗೂ ಮಾಸ್ಟರ್‌ ಅಥ್ಲೆಟಿಕ್‌ ಸಂಸ್ಥೆ ಕಾರ್ಯದರ್ಶಿ ಪಿ.ಜಿ.ಸತ್ಯನಾರಾಯಣ.

ದಸರಾ ಕ್ರೀಡಾಕೂಟವನ್ನು ಒಲಿಂಪಿಕ್ಸ್‌ ಮಾದರಿಯಲ್ಲಿ ಆಯೋಜಿಸಲಾಗುವುದು ಎಂದು ರಾಜ್ಯದ ಹಿಂದಿನ ಕ್ರೀಡಾ ಸಚಿವರೊಬ್ಬರು ಹೇಳಿದ್ದರು. ಆದರೆ, ‘ಹಿಂದೆ ಇದ್ದ ರೀತಿಯಲ್ಲಿ ಅಚ್ಚುಕಟ್ಟಾಗಿ ಕ್ರೀಡಾಕೂಟ ನಡೆಸಿಕೊಂಡು ಹೋದರೆ ಸಾಕು’ ಎಂಬುದು ಹಿರಿಯ ಕ್ರೀಡಾಪಟುಗಳ ಕಿವಿಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT