ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

216 ಗಂಟೆಗಳಲ್ಲಿ 21,129 ಶೌಚಾಲಯ ನಿರ್ಮಾಣ

Last Updated 18 ಸೆಪ್ಟೆಂಬರ್ 2017, 7:33 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಸೆ. 8ರಿಂದ 16ರ ವರೆಗೆ ಹಮ್ಮಿಕೊಂಡ ಮಿಷನ್‌ - 200 ಯೋಜನೆ ಗುರಿ ಮೀರಿ ಸಾಧನೆ ಮಾಡಿದೆ. ಈ ಒಂಬತ್ತು ದಿನಗಳ ಅವಧಿಯ 216 ಗಂಟೆಗಳಲ್ಲಿ 20 ಸಾವಿರ ಶೌಚಾಲಯ ನಿರ್ಮಿಸುವ ಗುರಿ ಇತ್ತು. ಆದರೆ, ಅದನ್ನೂ ಮೀರಿ 153 ಗ್ರಾಮ ಪಂಚಾಯಿತಿಗಳಲ್ಲಿ 21,129 ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಅಕ್ಟೋಬರ್ 2ರ ಒಳಗಾಗಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಶೌಚಾಲಯ ನಿರ್ಮಾಣದ ಕಾರಣಕ್ಕೇ ಜಿಲ್ಲೆ ರಾಜ್ಯದಾದ್ಯಂತ ಸುದ್ದಿಯಲ್ಲಿದೆ. ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿ ಉಪವಾಸ ಕುಳಿತ ಗಂಗಾವತಿ ತಾಲ್ಲೂಕು ಢಣಾಪುರದ ಮಲ್ಲಮ್ಮ, ಕೊಪ್ಪಳ ತಾಲ್ಲೂಕು ಕಾಮನೂರು ಗ್ರಾಮದಲ್ಲಿ ದುರ್ಗಮ್ಮ ದೇವಿಗೆ ಹರಕೆ ಹೊತ್ತ ಶಾಲಾ ವಿದ್ಯಾರ್ಥಿನಿಯರಾದ ಅಕ್ಷತಾ, ಸಂಗೀತಾ ಮತ್ತು ವಿದ್ಯಾ, ನೀರಿನ ಕ್ಯಾನ್‌ ಬಳಸಿ ಅತ್ಯಂತ ಕಡಿಮೆ ವೆಚ್ಚದ ಮೂತ್ರವಿಸರ್ಜನಾ ಪ್ಯಾನಲ್‌ನ್ನು ನಿರ್ಮಿಸಿದ ಜಿಲ್ಲಾ ಪಂಚಾಯಿತಿಯ ಪ್ರಯೋಗಶೀಲತೆ, ಕಲ್‌ತಾವರಗೇರಾದಲ್ಲಿ ಬಂಡೆಯ ಮೇಲೇ ಕಟ್ಟೆ ಕಟ್ಟಿ ಶೌಚಾಲಯ ಕಟ್ಟಿದ್ದು ಎಲ್ಲೆಡೆ ಗಮನ ಸೆಳೆದಿತ್ತು.

ನಿರ್ಮಾಣದಲ್ಲಿ ಮುಂದೆ, ಬಳಕೆಯಲ್ಲಿ?
ಶೌಚಾಲಯ ನಿರ್ಮಾಣವೇನೋ ಭರದಿಂದ ಸಾಗಿದೆ. ಆದರೆ, ಬಳಕೆಯಲ್ಲಿ ಮಾತ್ರ ತೀರಾ ಹಿಂದುಳಿದಿದೆ. ಕಾಮನೂರು ಗ್ರಾಮವೊಂದರಲ್ಲೇ ಅತಿ ಹೆಚ್ಚು ಪ್ರಮಾಣದ ಶೌಚಾಲಯಗಳು ನಿರ್ಮಾಣವಾಗಿವೆ. ಆದರೆ, ಇದೇ ಗ್ರಾಮದ ಪ್ರವೇಶದ ದಾರಿಯ ಇಕ್ಕೆಲಗಳಲ್ಲಿ ಬಯಲು ಬಹಿರ್ದೆಸೆ ಕಾಲಿಗೆ ಮೆತ್ತುತ್ತದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ನಗರ ಪ್ರದೇಶದಲ್ಲೂ ಪರಿಸ್ಥಿತಿ ಭಿನ್ನವೇನಲ್ಲ. ಹೆದ್ದಾರಿಯ ಇಕ್ಕೆಲಗಳು, ಕೆರೆಯ ಅಂಗಳ, ಕೋಟೆ ಪ್ರದೇಶ, ಜಾಲಿ ಪೊದೆಗಳು ಇನ್ನೂ ಬಹಿರ್ದೆಸೆಯ ತಾಣಗಳಾಗಿ ಉಳಿದಿವೆ.

‘ಶೌಚಾಲಯ ಬಳಕೆ ಮಾಡುವಂತೆ ಜಿಲ್ಲಾ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಟಿ.ಜನಾರ್ದನ ಹುಲಿಗಿ ಅವರು ಹಳ್ಳಿಗಳಿಗೆ ಹೋಗಿ ಸೀಟಿ ಊದಿ ಕೈಮುಗಿದದ್ದು, ಬಯಲು ಶೌಚಕ್ಕೆ ಹೋಗುವವರ ಕಾಲಿಗೆ ಬಿದ್ದು ನಮಸ್ಕರಿಸಿದ್ದೂ ನಡೆದಿತ್ತು. ಹಾಗಿದ್ದರೂ ಜನರ ಮನೋಭಾವದಲ್ಲಿ ಬದಲಾವಣೆ ಆಗಿಲ್ಲ’ ಎಂದು ಅಧಿಕಾರಿಗಳೇ ಬೇಸರ ವ್ಯಕ್ತಪಡಿಸುತ್ತಾರೆ.

'ಮಿಷನ್‌ - 200 ಯಶಸ್ಸಿಗೆ ಪಂಚಾಯಿತಿ ಪ್ರತಿನಿಧಿಗಳು, ಸಿಬ್ಬಂದಿ, ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತರು ಹೀಗೆ ಎಲ್ಲರೂ ಕೈಜೋಡಿಸಿದ್ದಾರೆ. ಬಳಕೆ ಕುರಿತಂತೆ ಇದೇ ರೀತಿ ಅಭಿಯಾನ ಹಮ್ಮಿಕೊಳ್ಳಲಾಗುವುದು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ ಹೇಳಿದರು.

ಮುಂದೆ?
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ ಪ್ರತಿಕ್ರಿಯಿಸಿ, ‘ಅ.2ರ ಒಳಗೆ ಎಲ್ಲ ಕಡೆ ಪೂರ್ಣ ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ಕೊಡುತ್ತೇವೆ. ನಂತರ ಹಂತಹಂತವಾಗಿ ಬಳಕೆ ಕುರಿತು ಜಾಗೃತಿ ಮೂಡಿಸುತ್ತೇವೆ. ಜನರ ಮನೋಭಾವದಲ್ಲಿ ಬದಲಾವಣೆ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT