ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತೀಯ ಸಂಸ್ಕೃತಿಗೆ ಹೊಸ ಸ್ಪರ್ಶ ನೀಡಿದ್ದ ದೀನದಯಾಳು’

Last Updated 18 ಸೆಪ್ಟೆಂಬರ್ 2017, 9:35 IST
ಅಕ್ಷರ ಗಾತ್ರ

ಶಿವಮೊಗ್ಗ: ಪಾಶ್ಚಿಮಾತ್ಯರ ವಾದಗಳಿಂದ ದೇಸೀಯ ಏಕಾತ್ಮ ವಾದ ನಶಿಸಿಹೋಗುತ್ತಿದ್ದ ಸಂದರ್ಭದಲ್ಲಿ ದೀನದಯಾಳು ಉಪಾಧ್ಯಾಯರು ಅವುಗಳನ್ನು ಮಂಚೂಣಿಗೆ ತರುವ ಪ್ರಯತ್ನ ನಡೆಸಿದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.

ಗಾಯತ್ರಿ ಮಾಂಗಲ್ಯ ಮಂದಿರಲ್ಲಿ ಭಾನುವಾರ ವಿಕಾಸ ಟ್ರಸ್ಟ್ ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮ ಶತಾಬ್ದಿ ವರ್ಷದ ಅಂಗವಾಗಿ ‘ಏಕಾತ್ಮ ಮಾನವ ದರ್ಶನ - ಲೋಕ ಕಲ್ಯಾಣ ಮಾರ್ಗ’ ಎಂಬ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಕಾಲ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಏಕಾತ್ಮ ಮಾನವ ದರ್ಶನದ ಮೂಲಕ ದೀನದಯಾಳು ಅವರು ವ್ಯಕ್ತಿ ಮತ್ತು ಸಮಾಜ, ಭೌತಿಕತೆ ಮತ್ತು ಆಧ್ಯಾತ್ಮಿಕತೆ ನಡುವಿನ ಸಮನ್ವಯತೆ ವಿವರಿಸಿದ್ದಾರೆ. ದೇಶದಲ್ಲಿ ಏಕಾತ್ಮ ವಾದ ಎಂಬುದು ಹಿಂದಿನಿಂದಲೂ ಇದ್ದಂತಹ ವಿಷಯ. ವಿಕೇಂದ್ರೀಕೃತ ರಾಜಕೀಯ ವ್ಯವಸ್ಥೆ, ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿಯೇ ದೇಶದ ನಿಜವಾದ ಸುಸ್ಥಿರ ಅಭಿವೃದ್ಧಿ ಇದೆ ಎಂಬುದನ್ನು ದೀನದಯಾಳು ಉಪಾಧ್ಯಾಯರು ನಿರೂಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸ್ವತಂತ್ರ ಭಾರತವು ವಿದೇಶಿ ವಿಚಾರಗಳ ತಳಹದಿಯ ಮೇಲೆ ನಿರ್ಧರಿತವಾದುದು ಸಮಂಜಸವಲ್ಲ ಎಂಬುದನ್ನು ಅರಿತಿದ್ದ ಉಪಾಧ್ಯಾಯರು, ಪ್ರಾಚೀನ ಭಾರತೀಯ ಸಂಸ್ಕೃತಿ ಆಧಾರದ ಮೇಲೆ ವಿಕಸಿತವಾಗಬೇಕೆಂಬುದನ್ನು ಬಲವಾಗಿ ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಪಾಶ್ಚಿಮಾತ್ಯ ಸಿದ್ಧಾಂತಗಳ ಪ್ರಭಾವಕ್ಕೆ ದೇಶದ ಬೌದ್ಧಿಕ ಜಗತ್ತು ಒಳಗಾಗಿರುವುದನ್ನು ದೀನದಯಾಳು ಅರಿತಿದ್ದರು. ಪಾಶ್ಚಿಮಾತ್ಯ ವಿಚಾರಧಾರೆ ಭಾರತೀಯ ವೈಚಾರಿಕತೆಯ ಬೆಳವಣಿಗೆಗೆ ಬಹುದೊಡ್ಡ ತಡೆ ಎಂದು ತಿಳಿದಿದ್ದ ಅವರು, ದೇಶದ ರಾಜಕೀಯ ವ್ಯವಸ್ಥೆ, ಆರ್ಥಿಕ ಸಿದ್ಧಾಂತ, ತಾತ್ವಿಕತೆ, ಕಾನೂನುಗಳನ್ನು ರೂಪುಗೊಳಿಸಲು ಆಲೋಚಿಸಿದ್ದರು. ಅದೇ ಏಕಾತ್ಮ ವಾದವಾಗಿ ಹೊರಹೊಮ್ಮಿದೆ. ಇಂದಿನ ದಿನಮಾನದಲ್ಲಿ ಪ್ರಸ್ತುತವೂ ಹೌದು ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಚಿಂತನೆಯ ನಮ್ಮ ಸಂವಿಧಾನ, ಜಗತ್ತಿನ ಇತರೆ ಸಂವಿಧಾನಗಳಿಗೆ ಹೋಲಿಸಿದರೆ ಹೆಚ್ಚು ವಿಭಿನ್ನವಾಗಿದೆ. ಈ ಸಂವಿಧಾನ ಪಾಲನೆ ಕೆಟ್ಟ ವ್ಯಕ್ತಿಗಳ ಕೈಗೆ ಹೋಗಬಾರದು. ಬಹಳಷ್ಟು ಜನ ರಾಜಕಾರಣಿಗಳನ್ನು ದೂರುತ್ತಾರೆ. ಬದಲಾಗಿ ರಾಜಕಾರಣಿಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಯೇ ಎಂದು ಗಮನಿಸಬೇಕಿದೆ ಎಂದರು.

20ನೇ ಶತಮಾನದಲ್ಲಿ ಭಾರತ ಯೋಜನೆಗಳನ್ನು ರೂಪಿಸುವ ಪ್ರಯೋಗಶಾಲೆಯಾಗಿತ್ತು. ಹಸಿವು, ಬಡತನ, ಆರ್ಥಿಕ ಅಸಮಾನತೆ ಎಲ್ಲವೂ ಇತ್ತು. ಇಂದಿಗೂ ಅವು ಇವೆ. ಆದರೆ, 21ನೇ ಶತಮಾನದಲ್ಲಿ ಸಂಸ್ಥೆಗಳಿಗಿಂತ ಮುಖ್ಯವಾಗಿ ವ್ಯಕ್ತಿಗಳು ಹಾಗೂ ವ್ಯಕ್ತಿತ್ವ ರೂಪಿಸುವ ಯೋಚನೆಗಳು ಹೆಚ್ಚು ಮುಖ್ಯವಾಗಿವೆ. ಸಾಮಾಜಿಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಏಕಾತ್ಮ ಮಾರ್ಗ ಪ್ರಮುಖ ದಾರಿಯಾಗಿ ಗೋಚರಿಸುತ್ತಿದೆ ಎಂದರು. ಉದ್ಯಮಿ ಡಿ.ಎಚ್. ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ.ಜಿ.ಬಿ. ಹರೀಶ್ ಇದ್ದರು. ವಿಕಾಸ ಟ್ರಸ್ಟ್ ಕಾರ್ಯದರ್ಶಿ ನಟರಾಜ್ ಭಾಗವತ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT