ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಬ್ಬೆ, ಉತ್ತರೆ ಬಿರುಸಿನ ಮಳೆ: ಹೊಂಡಗಳಿಗೆ ನೀರು

Last Updated 18 ಸೆಪ್ಟೆಂಬರ್ 2017, 9:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಳೆದ ತಿಂಗಳು ಸುರಿದ ಪುಬ್ಬೆ ಮಳೆ, ಈಗ ಸುರಿಯುತ್ತಿರುವ ಉತ್ತರ ಮಳೆಯಿಂದ ನಗರದ ಕೆಲವು ಹೊಂಡಗಳು ಅರ್ಧ ತುಂಬಿವೆ, ಸಿಹಿನೀರು ಹೊಂಡ ಇನ್ನೊಂದು ಬಿರುಸಿನ ಮಳೆಗೆ ಕೋಡಿ ಬೀಳುವ ಸಾಧ್ಯತೆ ಇದೆ.

ಮೂರು ತಿಂಗಳ ಹಿಂದೆ ಪೌರಕಾರ್ಮಿಕರು ಕೆಲವು ಹೊಂಡ, ಕಲ್ಯಾಣಿ, ಬಾವಿಗಳನ್ನು ಸ್ವಚ್ಛಗೊಳಿಸಿದ್ದರು. ಅವುಗಳಲ್ಲಿ ಮೂರ್ನಾಲ್ಕು ಹೊಂಡಗಳು ಮೊನ್ನೆ ಸುರಿದ ಮಳೆಗೆ ಅರ್ಧ ಭಾಗ ತುಂಬಿವೆ. ‘ಈಗಷ್ಟೇ ಉತ್ತರೆ ಮಳೆ ಆರಂಭವಾಗಿದೆ. ಹಸ್ತೆ, ಚಿತ್ತೆ, ಸ್ವಾತಿ, ವಿಶಾಖೆ ಮಳೆವರೆಗೆ ಬಿರುಸಾಗಿ ಮಳೆ ಬರುವ ಸಾಧ್ಯತೆ ಇದ್ದು, ಆಗ ಉಳಿದ ಹೊಂಡಗಳು ಭರ್ತಿಯಾಗುತ್ತವೆ. ಪೌರಕಾರ್ಮಿಕರ ಶ್ರಮ ಸಾರ್ಥಕವಾಗುತ್ತದೆ’ ಎನ್ನುತ್ತಾರೆ ಪರಿಸರ ಕಾರ್ಯಕರ್ತರು.

ಕೆಂಚಮಲ್ಲಪ್ಪನ ಹೊಂಡಕ್ಕೆ ನೀರು : ಪುಬ್ಬೆ ಮಳೆ ಬಂದಾಗ ಎಲ್ಐಸಿ ಕಚೇರಿ ಪಕ್ಕದಲ್ಲಿರುವ ಕೆಂಚಮಲ್ಲಪ್ಪನ ಹೊಂಡ ಅರ್ಧ ಭಾಗ ತುಂಬಿತ್ತು. ಶುಕ್ರವಾರ ಮತ್ತು ಶನಿವಾರ ಸುರಿದ ಬಿರುಸಿನ ಮಳೆಯಿಂದಾಗಿ ಹೊಂಡಕ್ಕೆ ಮತ್ತಷ್ಟು ನೀರು ತುಂಬಿಕೊಂಡಿದೆ. ಕಾರ್ಮಿಕರು ಸಾಲುಗಟ್ಟಿ ನಿಂತು ಹೂಳು ಎತ್ತುತ್ತಿದ್ದ ಜಾಗದಲ್ಲೇ ಮಳೆ ನೀರು ಹೊಂಡಕ್ಕೆ ಹರಿದುಬರುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು.

ಹೊಂಡಕ್ಕೆ ಹರಿಯುವ ಮಳೆ ನೀರಿನ ಕಾಲುವೆಯಲ್ಲಿ ಕಸ, ಮಣ್ಣು ತುಂಬಿಕೊಂಡಿತ್ತು. ಹೀಗಾಗಿ ಮಳೆ ನೀರು ಹರಿಯದೇ ರಸ್ತೆ ಪಾಲಾಗುತ್ತಿತ್ತು. ಹದಿನೈದು ದಿನಗಳ ಹಿಂದೆ ಮಳೆ ಸುರಿದ ವೇಳೆಯಲ್ಲಿ ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಪೌರಕಾರ್ಮಿಕರ ನೆರವಿನಿಂದ ಕಾಲುವೆ ಸ್ವಚ್ಛಗೊಳಿಸಿದ್ದರು. ಹೀಗಾಗಿ ಶನಿವಾರ ಸುರಿದ ಬಿರುಸಿನ ಮಳೆಯ ನೀರು ಹೊಂಡಕ್ಕೆ ಹರಿದಿದೆ.

ಚನ್ನಕೇಶವಸ್ವಾಮಿ ಹೊಂಡ : ಬಿ.ಡಿ ರಸ್ತೆ ಭಾಗದಿಂದ ಹರಿಯುವ ಮಳೆ ನೀರು ಆಕಾಶವಾಣಿ ಕೇಂದ್ರ ಮತ್ತು ವಸತಿ ಗೃಹ, ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೂಲಕ ಚನ್ನಕೇಶವಸ್ವಾಮಿ ದೇವಾಲಯ ಪಕ್ಕದಲ್ಲಿರುವ ಹೊಂಡಕ್ಕೆ ಸೇರುತ್ತದೆ. ಇದರ ಜತೆಗೆ ಸರಸ್ವತಿ ಕಾನೂನು ಕಾಲೇಜು ಆವರಣದಲ್ಲಿ ಬಿದ್ದ ನೀರು ಅಲ್ಲಿಗೆ ಹೋಗಬೇಕು.

ಆದರೆ, ನಗರದಲ್ಲಿ ಇಷ್ಟು ಮಳೆಯಾದರೂ, ಈ ಹೊಂಡಕ್ಕೆ ನೀರು ಹರಿದಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಮಂಜುನಾಥ್, ‘ನೀರು ಹರಿಯಲು ಕೊಳವೆ ಜೋಡಣೆಯಲ್ಲಿ ಒಂದಷ್ಟು ಸಮಸ್ಯೆಯಾಗಿತ್ತು. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಜತೆ ಚರ್ಚಿಸಿ, ಸಮಸ್ಯೆ ಸರಿಮಾಡಿದ್ದೇವೆ. ಇನ್ನು ಎಲ್ಲ ಮಳೆ ನೀರು ಹೊಂಡಕ್ಕೆ ಸೇರುತ್ತದೆ. ನಂತರ ಸುತ್ತಲಿನ ಕೊಳವೆಬಾವಿಗಳು ರೀಚಾರ್ಜ್ ಆಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಣಪತಿ ದೇಗುಲದ ಬಾವಿಗೆ ನೀರಿಲ್ಲ: ‘ಕ್ಲೀನ್ ಹೊಂಡ’ ಅಭಿಯಾನದಲ್ಲಿ ಸ್ವಚ್ಛಗೊಳಿಸಿದ ವೆಂಕಟರಮಣನ ದೇವಸ್ಥಾನದ ಕಲ್ಯಾಣಿ, ಎಸ್ ಪಿ ಕಚೇರಿ ಎದುರಿನ ರಸ್ತೆಯ ಗಣಪತಿ ದೇವಾಲಯದ ಬಾವಿ, ಮುಕ್ತಿಧಾಮದ ಪಕ್ಕದಲ್ಲಿದ್ದ ಕೆಂಚಪ್ಪನ ಬಾವಿಗೆ ನೀರು ಹರಿದಿಲ್ಲ. ಇದಕ್ಕೆ ಸಮರ್ಪಕವಾದ ಕಾರಣ ತಿಳಿಯುತ್ತಿಲ್ಲ.

ತಜ್ಞರ ಮಾಹಿತಿ ಪ್ರಕಾರ, ‘ಈ ಕಲ್ಯಾಣಿಗಳಿಗೆ ಹರಿಯುವ ಮಳೆ ನೀರಿನ ಕಾಲುವೆಯಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ನಗರಸಭೆಯವರು ಪರಿಶೀಲಿಸಬೇಕು’ ಎನ್ನುತ್ತಾರೆ. ‘ನಗರದಲ್ಲಿರುವ ಎರಡು ಮಳೆ ಮಾಪನ ಕೇಂದ್ರಗಳಲ್ಲಿ ಹದಿನೈದು ದಿನಗಳಲ್ಲಿ 300 ಮಿ.ಮೀ.ಗೂ ಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ. ಆ ರಭಸಕ್ಕೆ ಎಲ್ಲ ಹೊಂಡಗಳೂ ತುಂಬಬೇಕಿತ್ತು’ ಎಂದು ಅಂದಾಜಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT