ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರಲ್ಲಿ ಬೀಗಿತು ಬಾಳೆ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

* ಮಂಜುನಾಥ ಪಟ್ಟಣಶೆಟ್ಟಿ

ನೀರಿನ ಕೊರತೆ ಎಲ್ಲೂ ತಪ್ಪಿದ್ದಲ್ಲ. ಆದರೆ ಅದಕ್ಕೆ ಪರ್ಯಾಯ ಮಾರ್ಗವಾಗಿ ತಮ್ಮ ಜಮೀನಿಗೆ ಸಮರ್ಪಕ ಹನಿ ನೀರಾವರಿ ಅಳವಡಿಸಿಕೊಂಡು ಬಾಳೆ ಬೆಳೆದಿದ್ದಾರೆ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಗೋಳ ಗ್ರಾಮದ ಅಳವುಂಡಿ ಪ್ರಕಾಶ್.

ತಮ್ಮ 2.50 ಎಕರೆ ಪ್ರದೇಶದಲ್ಲಿ ಜಿ9 ಅಂಗಾಂಶ ತಳಿಯ ಉತ್ತಮ ಗುಣಮಟ್ಟದ ಬಾಳೆ ಬೆಳೆದು ಯಶಸ್ಸನ್ನು ಕಂಡಿದ್ದಾರೆ ಅವರು.

ಕಳೆದ ಏಳೆಂಟು ವರ್ಷಗಳಿಂದ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿದ್ದ ಪ್ರಕಾಶ್, ಈಚೆಗೆ ರೇಷ್ಮೆ ಸಾಕಾಣಿಕೆ ಮನೆ ಹಾಳಾದ ಕಾರಣ ದಿಕ್ಕು ತೋಚದೆ ಚಿಂತೆಯಲ್ಲಿದ್ದರು. ಸಂಬಂಧಿಕರೊಬ್ಬರ ಸಂದರ್ಭೋಚಿತ ಮಾರ್ಗದರ್ಶನದಿಂದ ಬಾಳೆ ಕೃಷಿ ಕೈಗೊಳ್ಳುವ ಮನಸ್ಸು ಮಾಡಿದರು. ಜಿ9 ಅಂಗಾಂಶ ಕೃಷಿ ಬಾಳೆಯನ್ನು ಹನಿ ನೀರಾವರಿ ಮೂಲಕ ಬೆಳೆಯಲು ತೀರ್ಮಾನಿಸಿದರು.

ನಾಟಿ ಮಾಡಿದ್ದು ಹೀಗೆ: ಬೇಸಿಗೆಯಲ್ಲಿ ಟ್ರ್ಯಾಕ್ಟರ್ ಮೂಲಕ 2ರ ನೇಗಿಲು ಹೊಡೆದು ಮೂರು ತಿಂಗಳು ಬಿಸಿಲಿಗೆ ಬಿಟ್ಟಿದ್ದಾರೆ. ಟಿಲ್ಲರ್‌ ರಂಟೆ ಕುಂಟೆ ಹೊಡೆದು ಜಮೀನು ಹದಗೊಳಿಸಿ 30 ಟ್ರಿಪ್ ಕೊಟ್ಟಿಗೆ ಗೊಬ್ಬರ ಹರಡಿ ಮಣ್ಣಿನಲ್ಲಿ ಬೆರೆಸಿದ್ದಾರೆ. ಸಾಲಿನಿಂದ ಸಾಲಿಗೆ 6 ಅಡಿ ಹಾಗೂ ಗಿಡದಿಂದ ಗಿಡಕ್ಕೆ 5ಅಡಿ ಇರುವಂತೆ 1x1ಅಡಿ ಆಳದ ಕುಣಿ ತೆಗೆದು ಅದರಲ್ಲಿ ಬೇವಿನ ಗೊಬ್ಬರ, ಎರೆಹುಳು ಗೊಬ್ಬರ, ಡಿಎಪಿ ರಾಸಾಯನಿಕ ರಸಗೊಬ್ಬರದೊಂದಿಗೆ ಬಾಳೆ ಸಸಿ ನಾಟಿಗೆ ಸಿದ್ಧಗೊಳಿಸಿದ್ದಾರೆ.

ಮಹಾರಾಷ್ಟ್ರದ ಜಲಗಾಂನ ಜೈನ್ ಕಂಪೆನಿಯ ಬಾಳೆ ಸಸಿ ಆಯ್ಕೆ ಮಾಡಿದ್ದಾರೆ. ಪ್ರಯೋಗಾಲಯದಲ್ಲಿ ಒಂದು ತಿಂಗಳ ಕಾಲ ಬೆಳೆಸಿದ ಜಿ9 ಅಂಗಾಂಶ ಕೃಷಿಯ ಬಾಳೆ ಸಸಿಯನ್ನು 16 ರೂಪಾಯಿಗೆ ಒಂದರಂತೆ ಒಟ್ಟು 3500 ಸಸಿ ಖರೀದಿಸಿದ್ದಾರೆ.

ಆಗಸ್ಟ್‌ ಮೊದಲ ವಾರದಲ್ಲಿ ನಾಟಿ ಮಾಡಲಾಯಿತು. ಇದಕ್ಕೆ ಹನಿ ನೀರಾವರಿ ಪೈಪು ಅಳವಡಿಸಿ ನೀರು ಬಿಡಲು ಪ್ರಾರಂಭಿಸಿದ ಒಂದು ತಿಂಗಳಲ್ಲಿಯೇ ಬಾಳೆ ಚಿಗುರಿತು.

ನೀರು ನಿರ್ವಹಣೆ: ಬಾಳೆ ಸಸಿ ನಾಟಿ ಸಮಯದಲ್ಲಿ ಕೊಳವೆ ಬಾವಿಗಳಲ್ಲಿ ಬೆಳೆಗೆ ಸಾಕಾಗುವಷ್ಟು ಎರಡೂವರೆ ಇಂಚು ನೀರಿತ್ತು. ಆದರೆ 6 ತಿಂಗಳು ಕಳೆದ ಬಳಿಕ ಅಂತರ್ಜಲ ಕಡಿಮೆಯಾಗುತ್ತ ಹೋಯಿತು. ಬಾಳೆಗೆ ನೀರು ಹೇಗೆ ಎಂಬ ಚಿಂತೆ ಪ್ರಕಾಶ್‌ ಅವರನ್ನು ಕಾಡಿತ್ತು.

ಪಕ್ಕದ ರೈತರ ಕೊಳವೆಬಾವಿ ಸಹಾಯಕ್ಕೆ ಪಡೆದು ಆ ನೀರನ್ನು ಹನಿ ನೀರಾವರಿ ಮೂಲಕ ಬಾಳೆಗೆ ಅಲ್ಪ ಮಟ್ಟದಲ್ಲಿ ಬಳಸಿದರು.

ಆರೈಕೆ ಹೀಗಿತ್ತು: ಒಂಬತ್ತು ತಿಂಗಳುಗಳ ಕಾಲ ಡಿಎಪಿ ಪೊಟ್ಯಾಷ್, ಮೆಗ್ನಿಶಿಯಂ ಅಮೋನಿಯಾ ಜಿಂಕ್ ಇತರ ಸಸ್ಯವರ್ಧಕ ರಸಗೊಬ್ಬರಗಳನ್ನು ನಿಯಮಿತವಾಗಿ ನೀಡಿದ್ದಾರೆ. ಎರಡು ತಿಂಗಳು ಈಚೆಗೆ ವಾರಕ್ಕೆ ಒಂದು ಬಾರಿಯಂತೆ ನೀರಿನಲ್ಲಿ ಸರಳವಾಗಿ ಕರಗುವ ರಸಗೊಬ್ಬರವನ್ನು ಹನಿ ನೀರಾವರಿ ಮುಖಾಂತರ ಕೊಡುತ್ತಿದ್ದಾರೆ. ತಿಂಗಳಿಗೊಂದು ಬಾರಿ 6 ತಿಂಗಳುಗಳ ಕಾಲ ಗಿಡದ ಬುಡಕ್ಕೆ ಸೊರಗು ರೋಗ ನಿರೋಧಕವಾಗಿ ಕ್ಲೋರೊ ಫೆರಿಫಾಸ್ ಔಷಧಿ ಸಿಂಪಡಿಸಿದ್ದಾರೆ. ಇದರಿಂದ ಬಾಳೆ ಗಿಡಗಳು ಹೆಚ್ಚು ಶಕ್ತಿಯುತವಾಗಿ ಬೆಳೆದಿವೆ.

ಈ ಮಧ್ಯೆ ಕೆಲವು ವಿಫಲವಾದ ಸಸಿಗಳನ್ನು ಕಿತ್ತು ಹಾಕಿ ಮತ್ತೆ ನಾಟಿ ಮಾಡಿದ್ದಾರೆ. ಬಾಳೆ ಕಂಬದ ಬುಡದಲ್ಲಿ ಬೆಳೆಯುವ ಸಣ್ಣ ಸಣ್ಣ ಗುನ್ನೆ(ಸಸಿ)ಗಳನ್ನು ಆಗಾಗ ಕಿತ್ತು ಹಾಕಲಾಯಿತು.

ಬಾಳೆ ರಕ್ಷಣೆ ಹೇಗೆ?: ನಾಟಿ ಮಾಡಿದ ಎಂಟು ತಿಂಗಳಲ್ಲಿ ಗೊನೆ ಒಡೆಯಲು ಪ್ರಾರಂಭವಾಗಿದೆ. ದಪ್ಪ ಹಾಗೂ ಅತಿ ಎತ್ತರವಾಗಿ ಬೆಳೆದ ಬಾಳೆಗಿಡಗಳನ್ನು ಮಳೆ ಬಿರುಗಾಳಿಯಿಂದ ರಕ್ಷಿಸಲು ಗಿಡದಿಂದ ಗಿಡಕ್ಕೆ ಪ್ಲಾಸ್ಟಿಕ್ ಬೆಲ್ಟ್‌ನಿಂದ ಕಟ್ಟಿದ್ದಾರೆ. ಇದಲ್ಲದೇ ಅಲ್ಲಲ್ಲಿ ಬಿದಿರಿನ ಬೊಂಬುಗಳನ್ನು ಗೊನೆಗೆ ಆಸರೆಯಾಗಿ ಕೊಟ್ಟಿದ್ದಾರೆ.

ಮಾರುಕಟ್ಟೆಗೆ ಸೂಕ್ತವಾದ ಉತ್ತಮ ಗುಣಮಟ್ಟದ ಬಾಳೆ ಇವಾಗಿದ್ದು, 3 ರಿಂದ 4 ಅಡಿ ಉದ್ದದ ಗೊನೆಗಳು ಗಾತ್ರ ಮತ್ತು ಆಕಾರದಲ್ಲಿ ಉತ್ತಮವಾಗಿದೆ. ಒಂದು ಬಾಳೆ ಗೊನೆಯಲ್ಲಿ 12ರಿಂದ 16 (ಹಣಿಗೆ) ಚಿಪ್ಪುಗಳಿವೆ. ಸರಾಸರಿ 35 ಕೆಜಿ ಇಳುವರಿ ಅಂದಾಜಿಸಲಾಗಿತ್ತು. ಬಾಳೆ ಖರೀದಿಸಲು ವ್ಯಾಪಾರಸ್ಥರು ನೇರವಾಗಿ ತೋಟಕ್ಕೆ ಭೇಟಿ ನೀಡಿದ್ದಾರೆ.

2.50 ಎಕರೆ ಪ್ರದೇಶದಲ್ಲಿ ಅಂದಾಜು 3 ಸಾವಿರ ಗಿಡಗಳಿಂದ 100 ಟನ್ ಅಧಿಕ ಇಳುವರಿ ದೊರೆಯಬಹುದು ಎಂದು ಪ್ರಕಾಶ್ ಲೆಕ್ಕ ಹಾಕಿದ್ದರು. ಅದೇ ಪ್ರಕಾರ ಕೂಡ್ಲಿಗಿಯಿಂದ ಬಂದ ವ್ಯಾಪಾರಸ್ಥರು ಭರಪೂರ ಗೊನೆಗಳನ್ನು ನೋಡಿ ಗುತ್ತಿಗೆ ನೀಡುವಂತೆ ಕೇಳಿದ್ದಾರೆ.

ಸರಾಸರಿ ಪೂರ್ತಿ ತೋಟಕ್ಕೆ 15 ಲಕ್ಷ ರೂಪಾಯಿಗೆ ಮಾರಿದ್ದಾರೆ. ಸಸಿ, ನಾಟಿ ಖರ್ಚು, ಗೊಬ್ಬರ, ಔಷಧೋಪಚಾರ, ಕಳೆ ಆಳು ಸೇರಿದಂತೆ ಆರೈಕೆಯ ಖರ್ಚು ತೆಗೆದರೂ ಲಾಭ ಹೆಚ್ಚು ಎಂದು ಪ್ರಕಾಶ್ ಖುಷಿಯಿಂದ ಹೇಳುತ್ತಾರೆ.

ಇವರ ಬಾಳೆ ತೋಟ ನೋಡಲು ದೂರದ ಊರುಗಳಿಂದ ರೈತರು ಭೇಟಿ ಕೊಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ: 9164240296.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT