ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶಗಂಗೆ ಇಲ್ಲೀಗ ಅಂತರಗಂಗೆ!

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೇರಳ ಗಡಿಭಾಗದ ಕನ್ನಡದ ಊರು ಕನಕ ಮಜಲು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಈ ಪುಟ್ಟ ಗ್ರಾಮದ ಸನಿಹದಲ್ಲೇ ಹರಿಯುತ್ತದೆ ಪಯಶ್ವಿನಿ ನದಿ. ಆದರೆ, ಏನು ಮಾಡುವುದು? ಕಳೆದ ವಸಂತದಲ್ಲಿ ಮರ–ಗಿಡಗಳು ಹೊಸ ಚಿಗುರು ಮೂಡಿಸಿಕೊಳ್ಳುವಾಗ ಈ ಊರಿನ ಜಲಸೆಲೆಗಳೆಲ್ಲ ಬತ್ತಿ ಹೋಗಿದ್ದವು!

ಬಂಟ್ವಾಳ ತಾಲ್ಲೂಕಿನ ನೆತ್ತಿಲ ಬಾಳಿಕೆ, ಬೆಳ್ತಂಗಡಿ ತಾಲ್ಲೂಕಿನ ಬಜಿಲಕೋಡಿ, ಪುತ್ತೂರು ತಾಲ್ಲೂಕಿನ ಬಲ್ನಾಡು... ಹೀಗೆ ಕಡಲು–ಕಾನನಗಳ ನಡುವಿನ ಈ ಜಿಲ್ಲೆಯ ಯಾವ ಗ್ರಾಮಕ್ಕೆ ಹೋದರೂ ‘ಎಂಥ ಮಾಡೋದು ಮಾರಾಯ್ರೆ, ನೀರೇ ಇಲ್ಲ’ ಎನ್ನುವಂತಹ ವಿಷಾದದ ಮಾತು. ವಾರ್ಷಿಕ ಸರಾಸರಿ 3,500 ಮಿಲಿಮೀಟರ್‌ನಷ್ಟು ಮಳೆ ಕಾಣುವ ಜಿಲ್ಲೆಯನ್ನೇ ಇನ್ನಿಲ್ಲದಂತೆ ಸತಾಯಿಸಿತ್ತು ದಾಹ! ಈಗ ಅದೇ ಊರುಗಳ ಕೆಂಬಣ್ಣದ ದಾರಿಗಳಲ್ಲಿ ಒಮ್ಮೆ ಓಡಾಡಿ ನೋಡಿ, ಹೆಜ್ಜೆ–ಹೆಜ್ಜೆಗೂ ಜಲ ಸಮೃದ್ಧಿಯ ಸಂಕೇತಗಳು. ಹೌದು, ತೋಡಿಗಳಲ್ಲಿ ಎದ್ದಿರುವ ಕಿಂಡಿ ಅಣೆಕಟ್ಟೆಗಳು ತೋರಿರುವ ಚಮತ್ಕಾರ ಇದು.

ಇತಿಹಾಸದಲ್ಲೇ ಮೊಟ್ಟಮೊದಲ ಸಲ ತನ್ನ ಎರಡು ತಾಲ್ಲೂಕುಗಳು (ಮಂಗಳೂರು ಹಾಗೂ ಬಂಟ್ವಾಳ) ಬರ ಪೀಡಿತವಾಗಿದ್ದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿಗೆ ಮಂಕು ಬಡಿಸಿತ್ತು. ನೈಸರ್ಗಿಕ ಜಲಪಾತ್ರೆಗಳೆಲ್ಲ ಬರಿದಾದ ಕಾರಣ ಭವಿಷ್ಯದ ಚಿಂತೆ ಸಹ ಕಾಡುತ್ತಿತ್ತು. ಅದೇ ಸಮಯಕ್ಕೆ ಈ ಜಿಲ್ಲಾ ಪಂಚಾಯ್ತಿಯ ಸಿಇಒ ಆಗಿ ಬಂದವರು ಡಾ.ಎಂ.ಆರ್‌.ರವಿ.

ಬರ ಪರಿಹಾರದ ಕೆಲಸ ಎಂದೊಡನೆ ಬಹುತೇಕ ಸರ್ಕಾರಿ ಯೋಜನೆಗಳು ಬೊಟ್ಟು ತೋರಿಸುವುದು ಕೊಳವೆಬಾವಿಗಳನ್ನು ಕೊರೆಸುವತ್ತ. ಆದರೆ, ಅದು ತಾತ್ಕಾಲಿಕ ಪರಿಹಾರ. ಅಂತರ್ಜಲದ ಮಟ್ಟ ಒಂದೇ ಸಮನೆ ಕುಸಿಯುತ್ತಿರುವ ಈ ದಿನಗಳಲ್ಲಿ ಕೊರೆಸಿದ ಕೊಳವೆ ಬಾವಿಗಳು ಅಷ್ಟೇ ವೇಗದಲ್ಲಿ ಬರಿದಾಗಿ, ಕೊನೆಗೆ ‘ಉಸ್‌’ ಅಂತ ಗಾಳಿ ಹೊರಹಾಕುತ್ತಾ ವೈಫಲ್ಯದ ಸಂದೇಶ ಸಾರುವುದೇ ಹೆಚ್ಚು. ಜಲ ಸಮೃದ್ಧಿಗೆ ಹೆಸರಾಗಿದ್ದ ಬೆಳ್ತಂಗಡಿ ತಾಲ್ಲೂಕಿನಲ್ಲಿ ಅದಾಗಲೇ ಅಂತರ್ಜಲ ಮಟ್ಟ 700 ಅಡಿಗಳಿಗೆ ಇಳಿದುಬಿಟ್ಟಿದೆ. ಕಳೆದ ಒಂದೇ ವರ್ಷದಲ್ಲಿ ಆ ತಾಲ್ಲೂಕಿನಲ್ಲಿ ಅಂತರ್ಜಲದ ಮಟ್ಟ 26 ಅಡಿಗಳಷ್ಟು ಕುಸಿತ ಕಂಡಿದೆ.

‘ಕೊಳವೆಬಾವಿ ಕೊರೆಸೋದಲ್ಲದೆ ಬೇರೇನು ಮಾಡ ಬಹುದು’ ಎಂದು ಯೋಚಿಸುವಾಗ ರವಿ ಅವರಿಗೆ ಹೊಳೆದ ಉಪಾಯ ಕಿಂಡಿ ಅಣೆಕಟ್ಟೆಗಳದ್ದು. ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟ–ಗುಡ್ಡ, ಕಣಿವೆ–ಕಾನನ, ನದಿ–ತೊರೆಗಳ ಭೌಗೋಳಿಕ ವಾತಾವರಣ ಕಿಂಡಿ ಅಣೆಕಟ್ಟೆಗಳಿಗೆ ಹೇಳಿ ಮಾಡಿಸಿದಂತಿದೆ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಏಕೆಂದರೆ, ಮಳೆಗಾಲ ಮುಗಿದ ಮೇಲೂ ಬೆಟ್ಟದಿಂದ ನೀರು ತೊರೆಯಾಗಿ ಹರಿಯುತ್ತಿತ್ತು. ಇಲ್ಲಿನ ಜನ ಅಲ್ಲೊಂದು, ಇಲ್ಲೊಂದು ಕಿಂಡಿ ಅಣೆಕಟ್ಟೆ ನಿರ್ಮಿಸಿಕೊಂಡ ಉದಾಹರಣೆಗಳು ಸಹ ಕಣ್ಣ ಮುಂದಿದ್ದವು. ಆದರೆ, ನಿರ್ವಹಣೆಯ ಕೊರತೆಯಿಂದ ಅವುಗಳೆಲ್ಲ ಶಿಥಿಲಾವಸ್ಥೆಗೆ ತಲುಪಿದ್ದವು.

ಜಿಲ್ಲಾ ಪಂಚಾಯ್ತಿಯಿಂದ ಒಂದು ಜಲ ಸಭೆಯನ್ನು ಕರೆಯಲಾಯಿತು. ಜಲತಜ್ಞರು ಹಾಗೂ ನೀರು ನಿರ್ವಹಣೆ ಕುರಿತು ಅರಿವಿದ್ದ ಕೃಷಿಕರನ್ನು ಆ ಸಭೆಗೆ ಆಹ್ವಾನಿಸಲಾಯಿತು. ಅವರಿಂದಲೂ ಕಿಂಡಿ ಅಣೆಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚಿನ ಒಲವು ವ್ಯಕ್ತವಾದಾಗ, ಖರ್ಚಿನ ಬಾಬತ್ತನ್ನು ಲೆಕ್ಕಾಚಾರ ಮಾಡಲಾಯಿತು. ಸಾಮಗ್ರಿ ಹಾಗೂ ಕೂಲಿ ಖರ್ಚನ್ನು ಲೆಕ್ಕ ಹಾಕುತ್ತಾ ಹೋದಾಗ ಒಂದೊಂದು ಅಣೆಕಟ್ಟೆ ನಿರ್ಮಾಣಕ್ಕೆ ಕನಿಷ್ಠ ₹2.32 ಲಕ್ಷ ಬೇಕು, ಗರಿಷ್ಠ ₹5 ಲಕ್ಷಕ್ಕಿಂತ ಹೆಚ್ಚು ವ್ಯಯವಾಗದು ಎಂಬ ಉತ್ತರ ಸಿಕ್ಕಿತು.

ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ ಮಳೆ ಕಂಡರೂ ಮಳೆ ನೀರು, ಕಡಲಿನ ಸಾಂಗತ್ಯ ಬಯಸಿ ಬರ್‍ರೆಂದು ಹರಿದುಹೋಗುತ್ತದೆ. ‘ಓಡುವ ಮಳೆ ನೀರನ್ನು ಅಲ್ಲಲ್ಲಿ ತಡೆದು ನಿಲ್ಲಿಸಬೇಕು, ಸದ್ಯದ ಕೊರತೆ ನೀಗಿಸುವುದಲ್ಲದೆ ಭೂಗರ್ಭದಲ್ಲಿ ನೀರಿನ ದೊಡ್ಡ ಠೇವಣಿಯನ್ನೂ ಇಡಬೇಕು’ ಎಂಬ ಕನಸು ಕಂಡ ರವಿಯವರು, ಒಂದು ಸಾವಿರ ಕಿಂಡಿ ಅಣೆಕಟ್ಟೆಗಳ ನಿರ್ಮಾಣಕ್ಕೆ ಗುರಿ ಹಾಕಿಕೊಂಡರು.

ಅಷ್ಟೊಂದು ಕಿಂಡಿ ಅಣೆಕಟ್ಟೆಗಳ ನಿರ್ಮಾಣಕ್ಕೆ
₹43 ಕೋಟಿಯಷ್ಟು ದೊಡ್ಡ ಮೊತ್ತ ಬೇಕಾಗುತ್ತದೆ, ಅದನ್ನು ಹೇಗೆ ಹೊಂದಿಸುವುದು ಎಂಬ ಪ್ರಶ್ನೆ ಕಾಡತೊಡಗಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಅನುದಾನಕ್ಕೆ ಅವಕಾಶವಿದೆಯೇ ಎಂದು ಯೋಚಿಸಲಾಯಿತು. ಬಡವರಿಗೆ ಉದ್ಯೋಗ ಸಿಗಬೇಕು ಮತ್ತು ಅದರಿಂದ ಶಾಶ್ವತ ಆಸ್ತಿಯೊಂದು ಸೃಷ್ಟಿಯಾಗಬೇಕು; ಅಂತಹ ಯೋಜನೆಗಳಿಗಷ್ಟೇ ಅನುದಾನ ಎನ್ನುತ್ತದೆ ನರೇಗಾ.

ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಒಯ್ದ ರವಿಯವರು, ಅಣೆಕಟ್ಟುಗಳ ರೂಪದಲ್ಲಿ ಶಾಶ್ವತ ಆಸ್ತಿ ಸೃಷ್ಟಿ ಆಗುವುದನ್ನೂ ಅವುಗಳ ನಿರ್ಮಾಣ ಕಾಮಗಾರಿಯಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುವುದನ್ನೂ ಮನದಟ್ಟು ಮಾಡಿಕೊಟ್ಟರು. ಆ ಪ್ರಸ್ತಾವಕ್ಕೆ ತಕ್ಷಣವೇ ಮಂಜೂರಾತಿ ಸಿಕ್ಕಿಬಿಟ್ಟಿತು. ಕಿರುಅಣೆಕಟ್ಟೆಗಳ ನಿರ್ಮಾಣಕ್ಕಾಗಿ ನರೇಗಾ ಅನುದಾನವನ್ನು ಬಳಸಿಕೊಂಡ ದೇಶದ ಮೊದಲ ಜಿಲ್ಲೆ ಎಂಬ ಹಿರಿಮೆ ದಕ್ಷಿಣ ಕನ್ನಡದ್ದಾಯಿತು. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಯೋಜನೆಗೆ ಅನುಮೋದನೆ ಸಿಕ್ಕ ಬಳಿಕ ಜಿಲ್ಲಾ ಪಂಚಾಯ್ತಿಯ ಪ್ರತಿಯೊಬ್ಬ ಸದಸ್ಯರಿಗೂ ಸಿಇಒ ಅವರಿಂದ ಪತ್ರ ಹೋಯಿತು: ‘ನಿಮ್ಮ ಕ್ಷೇತ್ರದ ಯಾವ ಯಾವ ಗ್ರಾಮಗಳಲ್ಲಿ ಯೋಜನೆ ಜಾರಿಗೊಳಿಸಬಹುದು ಎಂಬುದರ ಪಟ್ಟಿ ಕೊಡಿ’ ಎಂದು. ಒಬ್ಬೊಬ್ಬ ಸದಸ್ಯರಿಂದ ಮಾಹಿತಿ ಪತ್ರಗಳು ಬರುತ್ತಾ ಹೋದಂತೆ ಒಂದು ಸಾವಿರ ಕಿಂಡಿ ಅಣೆಕಟ್ಟೆಗಳು ಎಲ್ಲೆಲ್ಲಿ ನಿರ್ಮಾಣ ಆಗಬೇಕು ಎಂಬುದರ ಯಾದಿ ಸಿದ್ಧವಾಯಿತು.

ಅಣೆಕಟ್ಟೆ ನಿರ್ಮಾಣದ ಜಾಗ ಗುರ್ತಿಸುವಾಗ ಎಂಜಿನಿಯರ್‌ಗಳ ನಕ್ಷೆಗಿಂತಲೂ ಸ್ಥಳೀಯರ ಪಾರಂಪರಿಕ ಜ್ಞಾನ, ಅನುಭವದ ಮಾತುಗಳಿಗೆ ಮನ್ನಣೆ ನೀಡಲಾಯಿತು. ನೀರಿನ ಹರಿವಿನ ವಿಷಯವಾಗಿ ಲಾಗಾಯ್ತಿನಿಂದ ಬಲ್ಲ ಗ್ರಾಮಸ್ಥರು ಯಾವ ತೋಡಿನ, ಯಾವ ಭಾಗದಲ್ಲಿ ಅಣೆಕಟ್ಟು ಕಟ್ಟಿ, ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲಿಸಬಹುದು ಎಂಬ ಸಲಹೆ ಕೊಟ್ಟರು. ತೋಡುಗಳನ್ನು ದಾಟಲು ಎಷ್ಟೋ ಕಡೆ ಸಂಕಗಳಿಲ್ಲದೆ ಕೃಷಿಕರು ಹಾಗೂ ಅವರ ಮಕ್ಕಳು ಪರದಾಡುವುದನ್ನು ಕಂಡಿದ್ದ ಸಿಇಒ, ಕಿಂಡಿ ಅಣೆಕಟ್ಟುಗಳನ್ನೇ ಸಂಕವಾಗಿಯೂ ಬಳಸಲು ಅನುವಾಗುವಂತೆ ವಿನ್ಯಾಸ ಮಾಡಿಸಿದರು. ನೀರು ಹಿಡಿದಿಡುವ ಅಣೆಕಟ್ಟೆಯೇ ಎರಡೂ ದಂಡೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗುವ ಹೊಣೆಯನ್ನೂ ಹೊತ್ತಿತು.

ರೈತರು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಅಣೆಕಟ್ಟು ಕಟ್ಟುವ ಹೊಣೆ ವಹಿಸಿಕೊಡಲಾಯಿತು. ಮೊದಲ ಹಂತದಲ್ಲಿ ನೋಡನೋಡುತ್ತಿದ್ದಂತೆ 257 ಅಣೆಕಟ್ಟುಗಳು ನಿರ್ಮಾಣಗೊಂಡವು. ಬಲ್ನಾಡಿನಲ್ಲಿ ಅಣೆಕಟ್ಟೆಯ ಬಹುತೇಕ ಎಲ್ಲ ಕಾಮಗಾರಿಯನ್ನು ಸ್ತ್ರೀಯರೇ ಪೂರೈಸುವ ಮೂಲಕ ಈ ಯೋಜನೆಗೆ ಹೊಸದೊಂದು ಆಯಾಮ ನೀಡಿದರು. ಜಲ ಸಂರಕ್ಷಣೆಯ ಈ ಕೈಂಕರ್ಯ ಹೀಗೆ ತನ್ನ ಹೆಜ್ಜೆ ಗುರುತುಗಳನ್ನು ದಾಖಲಿಸುತ್ತಾ ಮುನ್ನಡೆಯಿತು.

ಕಿಂಡಿ ಅಣೆಕಟ್ಟೆಯದ್ದು ಬಲು ಸುಲಭದ ತಂತ್ರಜ್ಞಾನ. ತೋಡಿನ ಎರಡೂ ಬದಿ ಗಳಲ್ಲಿ ಒಂದೊಂದು ಹಾಗೂ ಮಧ್ಯದಲ್ಲಿ ಒಂದು– ಹೀಗೆ ಮೂರು ಪಿಲ್ಲರ್‌ಗಳನ್ನು ಹಾಕುವುದು, ಪಿಲ್ಲರ್‌ಗಳ ಮೇಲೆ ಓಡಾಡಲು ಸಂಕ ನಿರ್ಮಾಣ ಮಾಡುವುದು, ಮಳೆ ಕಡಿಮೆಯಾಗುತ್ತಾ ಹೋದಂತೆ (ನವೆಂಬರ್‌ ತಿಂಗಳು) ಪಿಲ್ಲರ್‌ಗಳ ಆಸರೆಯಿಂದ ತೋಡಿಗೆ ಅಡ್ಡಲಾಗಿ ಮರದ ಹಲಗೆ ಹಾಕಿ, ನೀರು ನಿಲ್ಲುವಂತೆ ಮಾಡುವುದು, ಕಟ್ಟೆ ತುಂಬಿದ ಬಳಿಕ, ಮಿಕ್ಕ ನೀರು ಅದರ ಮೇಲ್ಭಾಗದ ಕಿಂಡಿಗಳಿಂದ ಮುಂದೆ ಹರಿಯುವಂತೆ ನೋಡಿಕೊಳ್ಳುವುದು... ಜಲ ಸಂರಕ್ಷಣೆಗೆ ಹೀಗೆ ಬಲು ಸುಲಭದ ಉಪಾಯಗಳು ಇಲ್ಲಿ ಕೆಲಸ ಮಾಡಿವೆ.

ಕರಾವಳಿಯ ಈ ಜಿಲ್ಲೆಯಲ್ಲಿ ನೀರಿನ ವಿಷಯ ಬಂತೆಂದರೆ ಇಡೀ ಗ್ರಾಮವೇ ಒಟ್ಟಾಗುವುದು ರೂಢಿ. ಒಂದೊಂದು ಕುಟುಂಬಕ್ಕೂ ಒಂದೊಂದು ಹೊಣೆ. ತೋಡು ಇಲ್ಲವೆ ಮಗದವನ್ನು ಎಲ್ಲರೂ ಜತೆಯಾಗಿ ಶುಚಿಗೊಳಿಸುವ ಪರಿಪಾಠ. ಆದರೆ, ಇತ್ತೀಚಿನ ದಿನಗಳಲ್ಲಿ ಏಕೋ ಆ ನೀರೆಚ್ಚರ ಕಡಿಮೆಯಾಗುತ್ತಾ ಬಂದಿತ್ತು. ಅದಕ್ಕೆ ಮರುಚಾಲನೆ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾಯ್ತಿ ಪ್ರತಿಯೊಂದು ಕಿಂಡಿ ಅಣೆಕಟ್ಟಿನ ನಿರ್ವಹಣೆಗೆ ಗ್ರಾಮ ಮಟ್ಟದಲ್ಲೇ ಒಂದೊಂದು ಸಮಿತಿಯನ್ನು ರಚಿಸಿದೆ. ಸಮುದಾಯದ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೂ ಮಂಗಳೂರು ಭಾಗದಲ್ಲಿ ಈ ಹಿಂದೆ ಬೇರೆ ಇಲಾಖೆಗಳು ನಿರ್ಮಿಸಿದ್ದ ಕಿಂಡಿ ಅಣೆಕಟ್ಟೆಗಳಿಗೆ ಹಾಕಿದ್ದ ಕಳಪೆ ಹಲಗೆಗಳು ತುಂಡರಿಸಿ, ನೀರೆಲ್ಲಾ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ರವಿಯವರು ಈ ಯೋಜನೆ ಕೈಗೆತ್ತಿಕೊಂಡಾಗ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಿಂದಿನ ತಪ್ಪುಗಳು ಪುನರಾವರ್ತನೆ ಆಗದಂತೆ ನಿಗಾವಹಿಸಿದ ಅವರು, ಒಳ್ಳೆಯ ಮರದ ಹಲಗೆಗಳನ್ನು ಬಳಸುವಂತೆ ಸೂಚಿಸಿದರು. ಕೆಲವು ಗ್ರಾಮಗಳಲ್ಲಿ ಜನ ಫೈಬರ್‌ ಇಲ್ಲವೆ ತಗಡಿನ ಶೀಟುಗಳನ್ನು ಹಾಕಲು ನಿರ್ಧರಿಸಿದರು.

‘ಪುತ್ತೂರಿನಲ್ಲಿ ದೇಸಿ ತಂತ್ರಜ್ಞಾನದ ಮೂಲಕ ಕ್ಯಾಂಪ್ಕೊ ವುಡ್‌ ಶೀಟ್‌ಗಳನ್ನು ತಯಾರು ಮಾಡಲಾಗುತ್ತಿದೆ. ಈ ಶೀಟುಗಳನ್ನೇ ಕಟ್ಟೆಯ ಹಲಗೆಗಳನ್ನಾಗಿ ಉಪಯೋಗಿಸಲು ಉದ್ದೇಶಿಸಿದ್ದೇವೆ. ನೀರು ಪೋಲಾಗುವುದಿಲ್ಲ’ ಎಂದರು ರವಿ.

ಹೌದು, ಬಲ್ನಾಡಿನ ಮುರಳಿಕೃಷ್ಣ, ಸುಳ್ಯದ ಸುಬ್ರಾಯ ಭಟ್ಟ ಅವರಂತಹ ಸಾವಿರಾರು ಜನ ಹಲಗೆ ಸಿದ್ಧಪಡಿಸಿಕೊಂಡು ನವೆಂಬರ್‌ ಬರುವುದನ್ನೇ ಕಾಯುತ್ತಾ ಕುಳಿತಿದ್ದಾರೆ (ಮಳೆಗಾಲದಲ್ಲಿ ನೀರು ಬಲು ರಭಸವಾಗಿ ಹರಿವುದರಿಂದ ಮಳೆ ಕಡಿಮೆಯಾದ ಬಳಿಕವೇ ಕಿಂಡಿ ಅಣೆಕಟ್ಟಿನಲ್ಲಿ ಜಲ ಸಂಗ್ರಹ ಆರಂಭಿಸಲಾಗುತ್ತದೆ). ತಮ್ಮೂರಿನ ಕಿಂಡಿ ಅಣೆಕಟ್ಟೆಯಲ್ಲಿ ನೀರು ನಿಲ್ಲುವುದನ್ನು ನೋಡುವ ಆತುರ ಅವರಿಗೆ. ನಮ್ಮ ಜಿಲ್ಲೆಗೆ ಇನ್ನುಮುಂದೆ ಯಾವತ್ತೂ ಬರದ ಶಾಪ ತಟ್ಟುವುದಿಲ್ಲ ಎಂದು ಅವರೆಲ್ಲ ಹೇಳುವಾಗ, ಆ ಮಾತು, ಕರಾವಳಿಯಲ್ಲಿ ನೀರೆಚ್ಚರದ ಸೆಲೆಗಳು ಮತ್ತೆ ಜೀವ ಪಡೆದ ದ್ಯೋತಕವಾಗಿ ಪ್ರತಿಧ್ವನಿಸುತ್ತಿತ್ತು.

***

ಕಿಂಡಿ ಅಣೆಕಟ್ಟೆಯಿಂದ ಏನು ಲಾಭ?

ಬೆಟ್ಟಗಳಿಂದ ತೊರೆಯಾಗಿ ಹರಿಯುತ್ತಾ ವ್ಯರ್ಥವಾಗಿ ಸಾಗರ ಸೇರುವಂತಹ ಪರಿಶುದ್ಧ ಜಲವನ್ನು ಅಲ್ಲಲ್ಲಿ ಹಿಡಿದಿಟ್ಟುಕೊಳ್ಳಲು ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತದೆ. ಜಲ ಮರುಪೂರಣದಿಂದ ಸುತ್ತಲಿನ ಕೆರೆ–ಕಟ್ಟೆ, ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟದ ಏರಿಕೆಯಾಗುತ್ತದೆ. ಒಂದೊಂದು ಅಣೆಕಟ್ಟೆಯಿಂದ ಸುಮಾರು 20 ಕುಟುಂಬಗಳು ನಿತ್ಯದ ಎಲ್ಲ ಅಗತ್ಯಗಳಿಗೆ ನೀರು ಪಡೆಯಬಹುದು. ಅಂದಾಜು 30 ಎಕರೆ ಭೂಮಿಗೆ ನೀರುಣಿಸುವ ಸಾಮರ್ಥ್ಯವೂ ಈ ಕಿರು ಅಣೆಕಟ್ಟೆಗಿದೆ.

‘ನಾವು ಆಕಾಶಗಂಗೆಯನ್ನು ಅಂತರಗಂಗೆಯಾಗಿ ಮಾಡುತ್ತಿದ್ದೇವೆ. ಮೊದಲ ಹಂತದ ಕೆಲಸ ನಿರೀಕ್ಷಿತ ವೇಗದಲ್ಲೇ ನಡೆದಿದೆ. ಎರಡನೇ ಹಂತದ ಕಾಮಗಾರಿ ನವೆಂಬರ್‌ನಲ್ಲಿ ಶುರುವಾಗಲಿದ್ದು, ಮುಂಬರುವ ಮಾರ್ಚ್‌ ಹೊತ್ತಿಗೆ ಸಾವಿರ ಅಣೆಕಟ್ಟುಗಳೂ ನೀರಿನಿಂದ ತುಂಬಿರುವುದನ್ನು ನೀವು ಕಾಣಬಹುದು’ ಎಂದು ಹೇಳುವಾಗ ಎಲ್ಲ ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿಯುವ ವಿಶ್ವಾಸ ಸಿಇಒ ರವಿ ಅವರಲ್ಲಿ ಎದ್ದು ಕಾಣುತ್ತಿತ್ತು. ‘ನಮ್ಮ ಜಿಲ್ಲೆ ಜಲ ಸಾಕ್ಷರತೆಯಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ’ ಎಂದು ಹೆಮ್ಮೆಯಿಂದ ಹೇಳಿದರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು.

***

1,000 – ಕಿಂಡಿ ಅಣೆಕಟ್ಟು ನಿರ್ಮಿಸಲು ಹಾಕಿಕೊಂಡಿರುವ ಗುರಿ
257 – ನೀರು ಸಂಗ್ರಹಕ್ಕಾಗಿ ಸನ್ನದ್ಧವಾದ ಕಿಂಡಿ ಅಣೆಕಟ್ಟುಗಳು
₹ 43 ಕೋಟಿ– ಯೋಜನೆಗಾಗಿ ಬಳಕೆಯಾಗುತ್ತಿರುವ ಒಟ್ಟು ಅನುದಾನ
291 ಕೋಟಿ ಲೀಟರ್‌– ಕಿಂಡಿ ಅಣೆಕಟ್ಟೆಗಳಲ್ಲಿ ಒಟ್ಟು ನೀರು ಸಂಗ್ರಹ ಸಾಮರ್ಥ್ಯ
20 ಸಾವಿರ– ಕಾಮಗಾರಿಯಿಂದ ಉದ್ಯೋಗ ಪಡೆದಿರುವವರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT