ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕೆಂದಿದ್ದ ಹುಡುಗಿ ಬೇಕೆಂದು ಆಡಿದ್ದು...

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

2013ರ ಮೇ ತಿಂಗಳಿನಲ್ಲಿ ತನ್ನ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಲಾಟ್ವಿಯಾದ ಅನಸ್ತೇಸಿಜಾ ಸೆವಾಸ್ಟೋವಾ ಒಂದು ಪುಟ್ಟ ಪತ್ರ ಬರೆದರು.

ಅದು ಹೀಗಿತ್ತು: ‘ಪ್ರಿಯರೇ, ನಾನು ವೃತ್ತಿಪರ ಟೆನಿಸ್ ಆಟದಿಂದ ನಿವೃತ್ತಳಾಗುತ್ತಿದ್ದೇನೆ. ಮೂರು ವರ್ಷಗಳಿಂದ ಪದೇ ಪದೇ ಅನಾರೋಗ್ಯ ಅನುಭವಿಸಿದ್ದೇನೆ. ಬೇನೆಗಳು, ಗಾಯಗಳು ಕಾಡಿವೆ. ಸಂಕೀರ್ಣ ಆಟವಾದ ಟೆನಿಸ್ ಆಡುವಷ್ಟು ಕಸುವು ಉಳಿದಿಲ್ಲ. ನನ್ನನ್ನು ಇದುವರೆಗೆ ಬೆಂಬಲಿಸಿದ ಎಲ್ಲರಿಗೆ, ತರಬೇತುದಾರರಿಗೆ, ಡಬ್ಲ್ಯುಟಿಎ, ಎಟಿಪಿಗೆ ಧನ್ಯವಾದ’.

ಹಾಗೆ ಬರೆದಾಗ ಸೆವಾಸ್ಟೋವಾ ಅವರಿಗೆ 23 ವರ್ಷ. ಅಲ್ಲಿಂದಾಚೆಗಿನ ಒಂದೂವರೆ ವರ್ಷ ಅವರು ಇಷ್ಟವಾದದ್ದನ್ನು ಓದಿಕೊಂಡರು. ಬರೆಯಲೂ ಯತ್ನಿಸಿದರು. ಆದರೆ ಟೆನಿಸ್ ಆಡದೇ ಇರಲು ಆಗಲಿಲ್ಲ. ಜನವರಿ 2015ರಲ್ಲಿ ವೃತ್ತಿಪರ ಟೆನಿಸ್ ಗೆ ಮರಳಿದರು. ‘I am unretiring’ ಎಂಬ ಸಾಲನ್ನು ಆಗ ಬರೆದರು!

ಸೆವಾಸ್ಟೋವಾ ನಿವೃತ್ತಿಯಾಗುವ ಮೊದಲು 2010ರಲ್ಲಿ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದಿದ್ದರು. ಅದಕ್ಕೂ ಮೊದಲು ಲಾಟ್ವಿಯಾ ದೇಶಕ್ಕೆ ಟೆನಿಸ್ ನಲ್ಲಿ ಅಂಥದೊಂದು ಪ್ರಶಸ್ತಿ 20 ವರ್ಷಗಳ ಹಿಂದೆ ಸಿಕ್ಕಿತ್ತು. ಹಾಗಿದ್ದೂ ಅವರು ಸೆಲೆಬ್ರಿಟಿ ಆಗಲಿಲ್ಲ. ಅವರೇ ಕರೆದುಕೊಂಡಂತೆ ತಾನು ‘ಡಿ ಲಿಸ್ಟ್ ಸೆಲೆಬ್ರಿಟಿ’.

ಸಹಜವಾಗಿಯೇ ಕೆಲವು ಪ್ರತಿಕ್ರಿಯೆಗಳನ್ನು ಕೊಡಲು ಸೆವಾಸ್ಟೋವಾ ಹಿಂದೆಮುಂದೆ ನೋಡಿದವರಲ್ಲ. ಡಬ್ಲ್ಯುಟಿಎ ವೆಬ್ ಸೈಟ್ ನಲ್ಲಿ ಇದ್ದ ತನ್ನ ಗಿಡ್ಡಕೂದಲಿನ ಫೋಟೊ ನೋಡಿ ಇದ್ದಕ್ಕಿದ್ದಂತೆ, 'ಅದರಲ್ಲಿ ನಾನು ಚೆನ್ನಾಗಿ ಕಾಣುತ್ತಿಲ್ಲ. ತೆಗೆದು ಹಾಕಿ, ಪ್ಲೀಸ್' ಎಂದು ಬರೆದಿದ್ದರು.

2015ರಲ್ಲಿ ಅವರು ವೈಲ್ಡ್ ಕಾರ್ಡ್ ಪ್ರವೇಶ ಪಡೆದು, ಈಜಿಪ್ಟ್‌ನ ಶೆರ್ಮ್-ಎಲ್-ಶೇಕ್ ಟೂರ್ನಿಯಲ್ಲಿ ಆಡತೊಡಗಿದಾಗ ಹಳೆಯ ಲಯಕ್ಕೆ ಮರಳಬಹುದು ಎಂದು ಯಾರೂ ಎಣಿಸಿರಲಿಲ್ಲ. ಆ ವರ್ಷದ ಮೊದಲರ್ಧದಲ್ಲಿ ಅವರು ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಆತ್ಮಬಲ ಗಟ್ಟಿಗೊಳಿಸಿಕೊಂಡರು.

2016ರಲ್ಲಿ ಅಮೆರಿಕ ಓಪನ್ ಟೆನಿಸ್ ನಲ್ಲಿ ಅವರು ಎರಡೆರಡು ಮಾಂಝಾ ಕೊಟ್ಟರು. ಒಂದು-ಆಗ ನಂಬರ್ 3 ಆಟಗಾರ್ತಿಯಾಗಿದ್ದ ಗಾರ್ಬೈನ್ ಮುಗುರುಜಾ ಅವರನ್ನು ಸೋಲಿಸಿದ್ದು. ಎರಡು-ನಂಬರ್ 13ರ ಜೊಹಾನ್ನಾ ಕೊಂತಾ ವಿರುದ್ಧ ಸಾಕಷ್ಟು ಬೆವರು ಬಸಿದು ಆಡಿ, ಜಯ ಕಸಿದುಕೊಂಡದ್ದು.

'ಚೆಂಡು ಇವತ್ತು ನನಗೆ ಸೊಗಸಾಗಿ ಕಾಣುತ್ತಿತ್ತು' ಎಂದು ಆ ಪಂದ್ಯದ ಗೆಲುವಿನ ನಂತರ ಅವರು ನಗುನಗುತ್ತಾ ಹೇಳಿಕೊಂಡಿದ್ದರು.

ಕಳೆದ ವರ್ಷದ ಅವರ ಸಾಧನೆಯನ್ನು ಕಂಡಿದ್ದ ಮರಿಯಾ ಶರಪೊವಾ ಈ ಸಲ ಹೆಚ್ಚು ಉತ್ಸಾಹದಿಂದಲೇ ಆಡಿದರು. ಮೊದಲ ಸೆಟ್ ನಲ್ಲಿ ಲೀಲಾಜಾಲವಾಗಿ ಗೆದ್ದಾಗ ಅಮೆರಿಕ ಓಪನ್ ನಲ್ಲಿ ಅವರು ಇನ್ನಷ್ಟು ಮುಂದಕ್ಕೆ ಹೋಗುವ ಎಲ್ಲಾ ಲಕ್ಷಣಗಳೂ ಕಾಣಿಸಿದವು. ಎರಡನೇ ಸೆಟ್ 4-4ರ ಸಮಬಲದಲ್ಲಿ ಇದ್ದಾಗಲೂ ಹಾಗೆಯೇ ಅನಿಸಿತ್ತು. ಆದರೆ ಮೂರನೇ ಸೆಟ್ ನಲ್ಲಿ ಲಾಟ್ವಿಯಾ ಹುಡುಗಿ 21 ವಿನ್ನರ್ ಗಳ ದರ್ಶನ ಮಾಡಿಸಿದಾಗ ಶರಪೊವಾ ಸರಣಿ ಸ್ವಯಂಕೃತ ತಪ್ಪುಗಳನ್ನು ಕಾಣಿಸಿದರು. ಸೆವಾಸ್ಟೋವಾ ಗೆದ್ದರು.

ಅನಾ ಇವಾನೊವಿಕ್, ಜಾಂಕೊವಿಕ್, ಸಮಾಂತಾ ಸ್ತೊಸುರ್ ತರಹದ ಘಟಾನುಘಟಿ ಆಟಗಾರ್ತಿಯರ ಎದುರು ಹಿಂದೆ ಗೆಲುವು ಸಾಧಿಸಿ, ಅಚ್ಚರಿ ಮೂಡಿಸಿದ್ದವರು ಸೆವಾಸ್ಟೋವಾ. ಅಮೆರಿಕ ಓಪನ್ ನಲ್ಲಿ ಅವರು ಕ್ವಾರ್ಟರ್ ಫೈನಲ್ಸ್ ತಲುಪಲು ಶರಪೊವಾ ಅವರನ್ನು ಸೋಲಿಸಿದ್ದು ಅವರ ಪಾಲಿಗೆ ಇನ್ನೊಂದು ಒಳ್ಳೆಯ ದಿನವಷ್ಟೆ.

'ಟೆನಿಸ್ ನಲ್ಲಿ ಸೋತರೆ ಜಗತ್ತೇನೂ ಮುಳುಗುವುದಿಲ್ಲ' ಎಂಬ ಅವರ ಅಭಿಪ್ರಾಯವನ್ನು ಹಿಂದೆ ಅನೇಕರು ಟೀಕಿಸಿದ್ದರು. ಈಗ ಅವರ ಉತ್ಕಟತೆ ಕಂಡು ಆ ಟೀಕಾಕಾರರೂ ಯೋಚಿಸುವಂತಾಗಿದೆ.

ಫೋರ್ ಹ್ಯಾಂಡ್ , ಬ್ಯಾಕ್ ಹ್ಯಾಂಡ್ ಹೊಡೆತಗಳ ಬಿಸುಪು, ನೆಟ್ ನತ್ತ ನುಗ್ಗುವ ವೇಗ, ಯಾವುದೋ ಕೋನದಿಂದ ಎದುರಾಳಿ ಹೊಡೆಯುವ ಚೆಂಡು ಸಾಗಬಹುದಾದ ದಿಕ್ಕನ್ನು ಅಳೆಯುವ ಜಾಣ್ಮೆ... ಇವೆಲ್ಲವನ್ನೂ ತೋರಿರುವ ಅವರು ಮೂರು ವರ್ಷ ಅನಾರೋಗ್ಯ ಸಮಸ್ಯೆ ಅನುಭವಿಸಿದವರು ಎಂದರೆ ನಂಬುವುದೇ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT