ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಬಿಂಬಗಳಲ್ಲಿ ಹಲವು ಅರ್ಥ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸುಕೃತ ಎಸ್‌.

ಕಣ್ಣು ಮುಚ್ಚಿ, ಗಮನವನ್ನು ಒಂದೆಡೆ ಕೇಂದ್ರೀಕರಿಸಿ ಧ್ಯಾನಿಸಿದರೆ, ಅಲ್ಲೊಂದು ಭಾವಲೋಕ ಸೃಷ್ಟಿಯಾಗುತ್ತದೆ. ಹೊರಗಿನ ಶಬ್ದ ಮತ್ತು ಒಳಗಿನ ಭಾವನೆ ಸೇರಿ ಬಣ್ಣಗಳು ಮೂಡುತ್ತವೆ. ಹಾಗೆ ಮೂಡಿದ ಚಿತ್ರಶೈಲಿ ‘ಸೌಂಡ್‌ ಆಂಡ್‌ ಫಾರಂ’. ಈ ಶೈಲಿಯಲ್ಲಿಯೇ ಸೆಲ್ವ ಸೆಂತಿಲ್ ಕುಮಾರ್ ಅವರು ತಮ್ಮ ಹೆಚ್ಚಿನ ಕಲಾಕೃತಿಗಳನ್ನು ಬಿಡಿಸಿದ್ದಾರೆ.

ಅವರ ಬಹುತೇಕ ಕಲಾಕೃತಿಗಳಲ್ಲಿ ಒಂದು ಅಂಶವನ್ನು ನಾವು ಗಮನಿಸಬಹುದು. ಅದು, ‘ಬಿಂಬ’. ಹಾಗೆಯೇ ಒಂದರಲ್ಲೊಂದು ಅಡಗಿಕೊಂಡಿರುವ, ಅವಿತಿರುವಾಗಲೇ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಅವರ ಚಿತ್ರಗಳು ನಮ್ಮನ್ನು ಸೆಳೆಯುತ್ತವೆ.

ಅವರದೊಂದು ಕಲಾಕೃತಿ ಹೀಗಿದೆ. ಹೆಣ್ಣು ತನ್ನೆಲ್ಲಾ ಜೀವನವನ್ನು ಕೇವಲ ಹೆರುವುದಕ್ಕೆ ಮೀಸಲಿಡುತ್ತಾಳೆ. ಇದರೊಂದಿಗೆ ಆಕೆಯ ಹೊಟ್ಟೆಯಲ್ಲಿ ಇರುವುದು ಗಂಡು ಮಗು. ಹಾಗಾದರೆ, ಯಾರು ಮೇಲು? ಕೊನೆಗೂ ಸ್ತ್ರೀ ಶಕ್ತಿಯೇ ನಿಜವಾದ ಶಕ್ತಿ ಎನ್ನುವ ಅವರ ಕಲ್ಪನೆ ಅರ್ಥಪೂರ್ಣವಾದದ್ದು.

1920ರಲ್ಲಿ ಪ್ರಾರಂಭವಾದ ಅತಿವಾಸ್ತವವಾದ (ಸರ್‌ರಿಯಲಿಸಂ) ಸಾಂಸ್ಕೃತಿಕ ಚಳವಳಿಯಾಗಿ ಬೆಳೆದುಬಂತು. ಆವರೆಗೂ ಇದ್ದ ಕಾಲ್ಪನಿಕ ಜಗತ್ತನ್ನು ಬಿಂಬಿಸುವ ಕಲೆಗಳು ನಿಧಾನವಾಗಿ ವಾಸ್ತವ ಜಗತ್ತು ಮತ್ತು ಸೂಪರ್‌ ರಿಯಾಲಿಟಿ ತರಹದಲ್ಲಿ ಚಿತ್ರಿಸಲು ಪ್ರಾರಂಭಿಸಿದವು. ತೈರೋಮಲೈ ಅವರದು ಈ ರೀತಿಯ ಕಲಾಕೃತಿ. ಉದ್ದ ಕಾಲಿನ ಜನರು. ಅವರ ತಲೆ ಆಕಾಶವನ್ನು ಮುಟ್ಟುತ್ತವೆ. ಹಾಗೆ ಕಿಡ್ಡ ಕಾಲಿನ ಜನರೂ ಇದ್ದಾರೆ. ಅಲ್ಲೊಂದು ಆಟೊ, ಜೊತೆಗೆ ಹಡಗೂ ಸಹ. ಜನರ ವಾಸಸ್ಥಾನ ಮುಗಿಲು. ಹಡಗಿಗೆ ಅಲ್ಲಿಂದಲೇ ಜನರು ಬಂದು ತುಂಬಿಕೊಳ್ಳುತ್ತಾರೆ. ಹೀಗೆ ಸೂಪರ್‌ ರಿಯಾಲಿಸಂನ ಚಿತ್ರಗಳು ಅವರ ಕುಂಚದಲ್ಲಿ ಮೂಡಿವೆ.

ಅಲ್ಲೊಂದು ಚಾಲಕನಿಲ್ಲದ, ಪ್ರಯಾಣಿಕರಿಲ್ಲದ ಆಟೊ. ಆದರೆ, ವಾಸ್ತವದ ಆಟೊಗಿಂತ ಮಿಗಿಲು. ಅಲ್ಲಿ ತುಂಬಾ ಜನ ಹಿಡಿಯುತ್ತಾರೆ. ಹಾಗಾದರೆ, ಚಾಲಕ ಯಾರು? ಪ್ರಯಾಣಿಕ ಯಾರು? ಯಾರೂ ಇಲ್ಲದೆಯೂ ಅದು ಚಲಿಸುತ್ತದೆ. ಇಳಿಯುವ ದಾರಿಯೂ ಅಲ್ಲಿದೆ. ಮುಖ–ದೇಹಗಳಿಲ್ಲದ ಆ ಕಲಾಕೃತಿ ತಾತ್ವಿಕ ದೃಷ್ಟಿಕೊನವನ್ನು ನಮ್ಮ ಮುಂದಿಡುತ್ತದೆ.

ಗಣಪತಿ ಸುಬ್ರಮಣಿಯಮ್‌ ಅವರ ಕಲಾಕೃತಿಗಳನ್ನು ಗಮನಿಸಿದಾಗ ಅವರ ಗ್ರಹಣ ಸಾಮರ್ಥ್ಯದ ಶಕ್ತಿ ಅರಿವಾಗುತ್ತದೆ. ಚಿತ್ರಕಲೆಯಲ್ಲಿ ಬಹುಮುಖ್ಯ ಭಾಗವನ್ನು ಆವರಿಸಿರುವುದು ಅಮೂರ್ತತೆ. ಇದು ಹೆಚ್ಚು ಬಣ್ಣದ ಸಂಯುಕ್ತತೆಗೆ ಒತ್ತು ಕೊಡುತ್ತದೆ. ಒಂದೊಂದು ಬಣ್ಣ ಒಂದೊಂದು ಭಾವದ ಪ್ರತೀಕ. ಹಾಗಾಗಿ ಇಲ್ಲಿ ಬಳಸಲಾಗುವ ಬಣ್ಣಗಳು ಹೆಚ್ಚು ನಮ್ಮೊಂದಿಗೆ ಸಂವಹನ ನಡೆಸುತ್ತವೆ. ರೇಖಾಗಣಿತಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ.

ನೋಡುಗರಾಗಿ ನಾವು ಸ್ವಲ್ಪ ನಮ್ಮ ಕಲ್ಪನಾ ಶಕ್ತಿಯನ್ನು ವಿಸ್ತರಿಸಿಕೊಂಡರೆ ಇವರ ಕಲಾಕೃತಿಗಳು ನಮ್ಮನ್ನು ಅದರೊಳಗೆ ಎಳೆದುಕೊಳ್ಳುತ್ತದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT