ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ದಾರ್‌ ಸರೋವರ: ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ಕೊಡಬೇಕು

Last Updated 18 ಸೆಪ್ಟೆಂಬರ್ 2017, 19:50 IST
ಅಕ್ಷರ ಗಾತ್ರ

ಮಿತಿಮೀರಿದ ವಿಳಂಬ, ಹೆಜ್ಜೆಹೆಜ್ಜೆಗೆ ಅಡಚಣೆ ಎದುರಿಸುತ್ತ ಬಂದ ಸರ್ದಾರ್‌ ಸರೋವರ ಅಣೆಕಟ್ಟೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶಕ್ಕೆ ಸಮರ್ಪಿಸಿದ್ದಾರೆ. ಅವರೇ ಹೇಳಿದಂತೆ ಈ ಅಣೆಕಟ್ಟೆ ಒಂದು ಎಂಜಿನಿಯರಿಂಗ್‌ ವಿಸ್ಮಯ. ಏಕೆಂದರೆ ಅದಕ್ಕೆ ಬಳಸಿದ ಕಾಂಕ್ರೀಟ್‌ನ ಪ್ರಮಾಣವೇ 68 ಲಕ್ಷ ಘನ ಮೀಟರ್‌ಗಳು.

ಅಮೆರಿಕದ ಗ್ರ್ಯಾಂಡ್‌ ಕೌಲ್‌ ಅಣೆಕಟ್ಟೆ ಬಿಟ್ಟರೆ ಇಷ್ಟೊಂದು ಬೃಹತ್‌ ಪ್ರಮಾಣದ ಕಾಂಕ್ರೀಟ್‌ ಉಪಯೋಗಿಸಿ ಕಟ್ಟಿದ ಎರಡನೇ ಅಣೆಕಟ್ಟೆ ಇದು. ಇದರ ಒಂದೊಂದು ಗೇಟಿನ ತೂಕ ಸುಮಾರು 450 ಟನ್‌. ಅವನ್ನು ಪೂರ್ಣ ಮುಚ್ಚುವುದಕ್ಕೇ ಒಂದು ತಾಸು ಬೇಕಾಗುತ್ತದೆ. ಇಷ್ಟೆಲ್ಲ ಮಹತ್ಸಾಧನೆಯ ಹಿಂದೆ ತಂತ್ರಜ್ಞಾನದ ಬಲ ಇದ್ದೇ ಇದೆ.

ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು 1961ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಈ ಅಣೆಕಟ್ಟೆಯ ಕಾಮಗಾರಿ ಮುಗಿಯಲು ಬರೋಬ್ಬರಿ 56 ವರ್ಷಗಳು ಬೇಕಾದವು. ನರ್ಮದಾ ನದಿ ನೀರನ್ನು ಬಳಸಿಕೊಳ್ಳುವ ಈ ಇಡೀ ಯೋಜನೆಯ ನಿರ್ಮಾಣ ವೆಚ್ಚ ಕೂಡ ಆರಂಭದಲ್ಲಿ ₹ 4200 ಕೋಟಿ ಇದ್ದದ್ದು ಯದ್ವಾತದ್ವಾ ಏರಿ ₹ 1 ಲಕ್ಷ ಕೋಟಿಯ ಆಸುಪಾಸಿಗೆ ಬಂದು ನಿಂತಿದೆ. ಕಾಲಮಿತಿಯಲ್ಲಿ ಮುಗಿಸದೇ ತಡ ಮಾಡಿದರೆ ತೆರಬೇಕಾದ ದುಬಾರಿ ಬೆಲೆ ಇದು.

ಗುಜರಾತ್‌ನ ಜೀವನಾಡಿ ಎಂದೇ ಹೇಳಲಾಗುವ ‘ಸರ್ದಾರ್‌ ಸರೋವರ ಅಣೆಕಟ್ಟೆ’ಯಷ್ಟು ವಿವಾದಕ್ಕೆ ಒಳಗಾದ, ವಿರೋಧ ಎದುರಿಸಿದ ಕಾಮಗಾರಿ ದೇಶದಲ್ಲಿ ಬೇರೆ ಇರಲಿಕ್ಕಿಲ್ಲ. ಯೋಜನೆ ವಿಳಂಬಕ್ಕೆ ಇದು ಮುಖ್ಯ ಕಾರಣ. ಸುಪ್ರೀಂ ಕೋರ್ಟ್ ಸುಮಾರು 4 ವರ್ಷ ಕಾಮಗಾರಿಗೆ ತಡೆ ನೀಡಿತ್ತು. ಹಿಂದಿನ ಯುಪಿಎ ಸರ್ಕಾರ ಅಣೆಕಟ್ಟೆಯ ಎತ್ತರ ಹೆಚ್ಚಳಕ್ಕೆ ಅನುಮತಿ ತಡೆಹಿಡಿದಿತ್ತು.

ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 51 ತಾಸು ಉಪವಾಸ ಕುಳಿತಿದ್ದರು. ಪರಿಸರ ಹಾನಿ, ಮುಳುಗಡೆಯಾಗುವ ಕುಟುಂಬಗಳ ಪುನರ್ವಸತಿ ಪ್ರಶ್ನೆ ಮುಂದಿಟ್ಟುಕೊಂಡು ಮೇಧಾ ಪಾಟ್ಕರ್‌ ಅವರ ನೇತೃತ್ವದಲ್ಲಿ ‘ನರ್ಮದಾ ಬಚಾವೊ ಆಂದೋಲನ’ ನಿರಂತರ ಪ್ರತಿಭಟನೆ ನಡೆಸಿತ್ತು.

ಯೋಜನೆಗೆ ಸಾಲ ನೀಡಲು ಮೊದಲು ಒಪ್ಪಿದ್ದ ವಿಶ್ವಬ್ಯಾಂಕ್‌, ಕೊನೆಗೆ ಪರಿಸರ ಹಾನಿಯ ಕಾರಣಕ್ಕಾಗಿ ಸಾಲ ನಿರಾಕರಿಸಿತ್ತು. ಆದರೆ ಅದರಿಂದ ಎದೆಗುಂದದೆ ಬಾಂಡ್‌ಗಳಿಂದ, ದೇವಸ್ಥಾನಗಳಿಂದ ಹಣ ಸಂಗ್ರಹಿಸಿ ಕಾಮಗಾರಿ ಪೂರ್ಣಗೊಳಿಸಿರುವುದು ವಿಶೇಷ.

ಇಡೀ ಯೋಜನೆ ಪೂರ್ಣಗೊಂಡಾಗ ಗುಜರಾತ್‌ನ ಅರ್ಧದಷ್ಟು ಹಳ್ಳಿಗಳ ನೀರಿನ ದಾಹ ತಣಿಸುತ್ತದೆ. ರಾಜಸ್ಥಾನದ 1300ಕ್ಕೂ ಹೆಚ್ಚು ಹಳ್ಳಿ– ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುತ್ತದೆ. ಅಂದರೆ ಒಟ್ಟು ಮೂರೂವರೆ ಕೋಟಿ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುತ್ತದೆ.

ಇಲ್ಲಿ ಉತ್ಪಾದನೆಯಾಗುವ 1450 ಮೆ.ವಾ. ವಿದ್ಯುತ್ತನ್ನು ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಹಂಚಿಕೊಳ್ಳಲಿವೆ. ನಾಲ್ಕು ರಾಜ್ಯಗಳ 21.33 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಸಿಗುತ್ತದೆ.

ಇವೆಲ್ಲವೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸುತ್ತವೆ ಎಂಬ ವಿಶ್ವಾಸ ಇರಿಸಿಕೊಳ್ಳಲಾಗಿದೆ. ಆದರೆ ಇಂತಹ ಬೃಹತ್‌ ಯೋಜನೆಗಳಿಂದ ಸಂತ್ರಸ್ತರಾಗುವ, ತಲೆತಲಾಂತರದಿಂದ ಬಾಳಿ ಬದುಕಿದ ಭೂಮಿಯನ್ನು ತೊರೆದು ಅಪರಿಚಿತ ಸ್ಥಳದಲ್ಲಿ ಹೊಸದಾಗಿ ಬದುಕು ಕಟ್ಟಿಕೊಳ್ಳಬೇಕಾದ ಜನರ ಬಗ್ಗೆಯೂ ಕಾಳಜಿ ವಹಿಸುವುದು ಅತ್ಯವಶ್ಯ.

ಅವರನ್ನು ನಿರ್ಲಕ್ಷಿಸುವುದು ನ್ಯಾಯವಲ್ಲ. ಬಹುತೇಕ ಅಭಿವೃದ್ಧಿ ಯೋಜನೆಗಳಲ್ಲಿ ಅಸಮರ್ಪಕ ಪುನರ್ವಸತಿಯೇ ದೊಡ್ಡ ಸಮಸ್ಯೆ. ಬಣ್ಣದ ಮಾತುಗಳನ್ನಾಡಿ ಜನರನ್ನು ಒಕ್ಕಲೆಬ್ಬಿಸಿ ನಡುನೀರಿನಲ್ಲಿ ಕೈಬಿಡುವುದು ಸರ್ಕಾರಗಳಿಗೆ ಹೊಸತೇನಲ್ಲ. ಸರ್ದಾರ್‌ ಸರೋವರ ಯೋಜನೆಯಿಂದ ಮುಳುಗಡೆಯಾಗುವ ಜನ ಕೂಡ ಹೀಗೆಯೇ ಅನುಮಾನ ಪಟ್ಟಿದ್ದರೆ ಅದು ಸ್ವಾಭಾವಿಕ.

ಅಣೆಕಟ್ಟೆ ಎತ್ತರವನ್ನು ಪ್ರತೀ 5 ಮೀಟರ್‌ ಏರಿಸುವ ಮುನ್ನ ಆ ಹಂತದವರೆಗಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ಕೊಟ್ಟಿದ್ದು ಇದೇ ಕಾರಣಕ್ಕಾಗಿ. ಅದನ್ನು ಪಾಲಿಸುವ, 40 ಸಾವಿರ ಸಂತ್ರಸ್ತರ ವಿಶ್ವಾಸ ಗಳಿಸುವ ಜವಾಬ್ದಾರಿ ಸಂಬಂಧಪಟ್ಟ ಸರ್ಕಾರಗಳ ಮೇಲಿದೆ.

ಅಣೆಕಟ್ಟೆ ಹಿನ್ನೀರಿನ ನಿರಾಶ್ರಿತರು ಮೇಧಾ ಪಾಟ್ಕರ್‌ ನೇತೃತ್ವದಲ್ಲಿ ನೀರಿಗಿಳಿದು ಆರಂಭಿಸಿದ್ದ ಜಲ ಸತ್ಯಾಗ್ರಹವನ್ನು ಭಾನುವಾರ ಕೈಬಿಟ್ಟಿದ್ದಾರೆ. ಆದರೆ ಪುನರ್ವಸತಿ ಪೂರ್ಣಗೊಳ್ಳುವ ತನಕ ಚಳವಳಿ ನಿಲ್ಲದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಪುನರ್ವಸತಿ ಕೆಲಸ ಆದ್ಯತೆ ಮೇಲೆ ನಡೆಯಬೇಕು. ಈ ವಿಷಯದಲ್ಲಿ ಕಿಂಚಿತ್ತೂ ಲೋಪ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT