ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಸಿಪ್ಪೆಯಲ್ಲಿ ಭರಪೂರ ಅಣಬೆ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೇರಳವಾಗಿ ಸಿಗುವ ಅಡಿಕೆ ಸಿಪ್ಪೆಯಲ್ಲಿ ಅಣಬೆ ಬೆಳೆಸಿ, ಅಧಿಕ ಇಳುವರಿ ಪಡೆಯುವಲ್ಲಿ ಇಲ್ಲಿನ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.

ಸ್ವ ಉದ್ಯಮಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಬಿ.ಎಸ್ಸಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿಯನ್ನು ಕಡ್ಡಾಯ ಮಾಡಲಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ 11 ವಿದ್ಯಾರ್ಥಿಗಳು ಚಿಪ್ಪು ಅಣಬೆ ಬೆಳೆಸಿ ಆದಾಯ ಪಡೆಯುತ್ತಿದ್ದಾರೆ.

‘ಕೇರಳದಲ್ಲಿ ಪ್ರಚಲಿತದಲ್ಲಿರುವ ಹ್ಯಾಂಗಿಂಗ್ ಬ್ಯಾಗ್ಸ್ (ನೇತಾಡುವ ಚೀಲ) ಮಾದರಿಯಲ್ಲಿ ಅಣಬೆ ಕೃಷಿ ಪ್ರಾರಂಭಿಸಿದೆವು. ಅಡಿಕೆ ಸಿಪ್ಪೆಯ ಚೀಲ, ಭತ್ತದ ಒಣ ಹುಲ್ಲಿನ ಚೀಲಗಳನ್ನು ಪ್ರತ್ಯೇಕವಾಗಿ ಹಾಗೂ ಅಡಿಕೆ ಸಿಪ್ಪೆ ಮತ್ತು ಭತ್ತದ ಹುಲ್ಲನ್ನು ಸಮ ಪ್ರಮಾಣದಲ್ಲಿ (1:1) ಬೆರೆಸಿದ ಇನ್ನೊಂದು ಮಾದರಿಯ ಚೀಲವನ್ನು ಸಿದ್ಧಪಡಿಸಿದೆವು. ಮೊದಲ ಎರಡು ಚೀಲಗಳಲ್ಲಿ 300 ಗ್ರಾಂನಷ್ಟು ಇಳುವರಿ ದೊರೆತರೆ, ಹುಲ್ಲು ಮತ್ತು ಅಡಿಕೆ ಸಿಪ್ಪೆ ಮಿಶ್ರಿತ ಚೀಲದಲ್ಲಿ ಅರ್ಧ ಕೆ.ಜಿ.ಗಿಂತ ಹೆಚ್ಚು ಬೆಳೆ ಬಂತು’ ಎನ್ನುತ್ತಾರೆ ವಿದ್ಯಾರ್ಥಿ ನಿತಿನ್ ಕೆ.ಎಂ.

‘ಅಡಿಕೆ ಸಿಪ್ಪೆ ಮತ್ತು ಹುಲ್ಲನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸಂಗ್ರಹಿಸಿ ಸಂಸ್ಕರಿಸಬೇಕು. ಅದರಲ್ಲಿರುವ ಶಿಲೀಂದ್ರ ಬೆಳವಣಿಗೆಯಾದ ಮೇಲೆ 21 ದಿನಗಳಿಗೆ ಅದನ್ನು ಪ್ಲಾಸ್ಟಿಕ್ ಚೀಲದಿಂದ ಹೊರತೆಗೆದು ನೇತಾಡುವ ಹಗ್ಗಗಳ ನಡುವೆ ಸಿಲುಕಿಸಬೇಕು. ಮಳೆಗಾಲದಲ್ಲಿ ದಿನಕ್ಕೆ ಮೂರು ಬಾರಿ, ಬೇಸಿಗೆಯಲ್ಲಿ ಎರಡು ತಾಸಿಗೊಮ್ಮೆ ನೀರು ಸಿಂಪಡಿಸಿದರೆ ನಾಲ್ಕು ದಿನಗಳಲ್ಲಿ ಬೆಳೆ ಬರಲು ಪ್ರಾರಂಭವಾಗುತ್ತದೆ. 45 ದಿನಗಳವರೆಗೆ ಪ್ರತಿದಿನ 5–6 ಕೆ.ಜಿ ಅಣಬೆ ಕೊಯ್ಲು ಮಾಡಬಹುದು’ ಎಂದು ವಿದ್ಯಾರ್ಥಿನಿ ಮೇಘಾ ವಿವರಿಸಿದರು.

‘ಆರು ತಿಂಗಳಿನಿಂದ ನಾವು ಇದೇ ಮಾದರಿಯಲ್ಲಿ ಪ್ರಾಯೋಗಿಕವಾಗಿ 400 ಚೀಲಗಳಲ್ಲಿ ಚಿಪ್ಪು ಅಣಬೆ ಬೆಳೆಸಿ ₹ 31ಸಾವಿರ ಆದಾಯ ಪಡೆದಿದ್ದೇವೆ. ಒಂದು ಕೆ.ಜಿ ಅಣಬೆಯ ಉತ್ಪಾದನಾ ವೆಚ್ಚ ಅಂದಾಜು ₹ 76. ಮಾರುಕಟ್ಟೆಯಲ್ಲಿ ಕೆ.ಜಿ.ಯೊಂದಕ್ಕೆ ₹ 200 ದರವಿದೆ. ಬಟನ್ ಅಣಬೆಯಾದರೆ ಇದರ ದುಪ್ಪಟ್ಟು ಬೆಲೆ ಸಿಗುತ್ತದೆ’ ಎಂದು ವಿದ್ಯಾರ್ಥಿನಿ ತ್ರಿವೇಣಿ ತಿಳಿಸಿದರು.
ಅಡಿಕೆಯನ್ನು ಅಧಿಕವಾಗಿ ಬೆಳೆಯುವ ಪ್ರದೇಶದಲ್ಲಿ, ಸುಲಿದ ಅಡಿಕೆಯ ಸಿಪ್ಪೆಯನ್ನು ಸುಡುತ್ತಾರೆ. ಸಿಪ್ಪೆಯ ಸದುಪಯೋಗಕ್ಕಾಗಿ ಈ ಪ್ರಯೋಗ ನಡೆಸಿದ್ದಾಗಿ ಹೇಳುತ್ತಾರೆ ಅವರು.

‘ಟೇಬಲ್, ಹಲಗೆಗಳ ಮೇಲೆ ಅಣಬೆ ಬೆಳೆಸುವುದರಿಂದ ತಳಭಾಗದಲ್ಲಿ ಬೆಳೆ ಬರುವುದಿಲ್ಲ. ನೇತಾಡುವ ಚೀಲಗಳಲ್ಲಾದರೆ ಸುತ್ತಲೂ ಅಣಬೆ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಈ ಮಾದರಿಯನ್ನು ಆಯ್ದುಕೊಂಡೆವು’ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಕೃಷಿ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗುರುಮೂರ್ತಿ ಎಸ್.ಬಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**
ಅತ್ಯಲ್ಪ ಬಂಡವಾಳದಲ್ಲಿ ಹೆಚ್ಚು ಶ್ರಮವಿಲ್ಲದೇ ಸಾವಯವ ಅಣಬೆ ಕೃಷಿ ಮಾಡಿ ಅಧಿಕ ಆದಾಯ ಪಡೆಯಬಹುದು.
–ನಿತಿನ್ ಕೆ.ಎಂ, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT