ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಫ್ಲ್ಯಾಟ್‌ಗಳಿಗೆ ಬೇಡಿಕೆ ಹೆಚ್ಚಳ

ನೇರ ಖರೀದಿ ವಿಧಾನದಲ್ಲಿ 800 ಅರ್ಜಿ ವಿತರಣೆ, 400 ಫ್ಲ್ಯಾಟ್‌ ಮಾರಾಟ
Last Updated 18 ಸೆಪ್ಟೆಂಬರ್ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಫ್ಲ್ಯಾಟ್‌ಗಳ ನೇರ ಮಾರಾಟ ಆರಂಭಿಸಿದ ಬಳಿಕ ಒಟ್ಟು 400 ಫ್ಲ್ಯಾಟ್‌ಗಳು ಮಾರಾಟವಾಗಿವೆ. 800 ಮಂದಿ ಖರೀದಿಗೆ ನೋಂದಣಿ ಮಾಡಿಸಿದ್ದಾರೆ.

ಕೊಮ್ಮಘಟ್ಟ 1 ಮತ್ತು 2ನೇ ಹಂತ, ದೊಡ್ಡಬನಹಳ್ಳಿ 1 ಮತ್ತು 2ನೇ ಹಂತ, ಆಲೂರು 1 ಮತ್ತು 2ನೇ ಹಂತ, ಕಣಮಿಣಿಕೆ 2, 3 ಹಾಗೂ 4ನೇ ಹಂತ, ಮಾಳಗಾಲ 2ನೇ ಹಂತ ಹಾಗೂ ವಲಗೇರಹಳ್ಳಿಯ 5ನೇ ಹಂತದಲ್ಲಿ ಒಟ್ಟು 2,705 ಫ್ಲ್ಯಾಟ್‌ಗಳ ಮಾರಾಟಕ್ಕೆ ಬಿಡಿಎ ಆಗಸ್ಟ್‌ 9ರಂದು ಆರ್ಜಿ ಆಹ್ವಾನಿಸಿತ್ತು.

ಈ ಹಿಂದೆ ಫ್ಲ್ಯಾಟ್‌ಗಳ ಹಂಚಿಕೆಗೆ ಎರಡೆರಡು ಬಾರಿ ಅರ್ಜಿ ಆಹ್ವಾನಿಸಿದಾಗಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಫ್ಲ್ಯಾಟ್‌ಗಳ ಮಾರಾಟಕ್ಕೆ ಬಿಡಿಎ ಒಂದು ತಿಂಗಳಿನಿಂದ ಹೊಸ ತಂತ್ರ ಅನುಸರಿಸುತ್ತಿದೆ.

ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಿ, ಬಂದ ಅರ್ಜಿಗಳನ್ನು ಚೀಟಿ ಎತ್ತುವ ಮೂಲಕ ಫ್ಲ್ಯಾಟ್‌ ಹಂಚಿಕೆ ಮಾಡುವ ವಿಧಾನವನ್ನು ಕೈಬಿಟ್ಟ ಬಿಡಿಎ, ಫ್ಲ್ಯಾಟ್‌ಗಳ ನೇರ ಖರೀದಿಗೆ ಮೊದಲ ಬಾರಿ ಅವಕಾಶ ಕಲ್ಪಿಸಿದೆ. ಫ್ಲ್ಯಾಟ್‌ಗಳ ಮಾರಾಟದ ಸಲುವಾಗಿಯೇ ಬಿಡಿಎ ಕೇಂದ್ರ ಕಚೇರಿ ಆವರಣದಲ್ಲಿ ಪ್ರತ್ಯೇಕ ಕೌಂಟರ್‌ ಆರಂಭಿಸಿ, ಒಬ್ಬರು ಉಪ ಕಾರ್ಯದರ್ಶಿ, ಇಬ್ಬರು ಎಂಜಿನಿಯರ್‌ಗಳು, ಮೂವರು ಕಚೇರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹೊಸ ವಿಧಾನದಲ್ಲಿ ಗ್ರಾಹಕರು ಫ್ಲ್ಯಾಟ್‌ಗಾಗಿ ಅರ್ಜಿ ಸಲ್ಲಿಸಿ ಕಾಯಬೇಕಾಗಿಲ್ಲ. ನಿಗದಿ ಪಡಿಸಿದ ಶುಲ್ಕವನ್ನು ಕೆನರಾ ಬ್ಯಾಂಕ್‌ನ ಬಿಡಿಎ ಶಾಖೆಯಲ್ಲಿ ಪಾವತಿಸಿ ನೋಂದಣಿ ನಮೂನೆ ಹಾಗೂ ಅರ್ಜಿ ನಮೂನೆ ಪಡೆಯಬಹುದು. ಬೇರೆ ಯಾವುದೇ ಬಿಡಿಎ ಕಚೇರಿಗಳಲ್ಲಿ ಅರ್ಜಿ ನಮೂನೆ ವಿತರಿಸುವುದಿಲ್ಲ. ನಿಗದಿತ ಆರಂಭಿಕ ಠೇವಣಿ ಮೊತ್ತವನ್ನು ಚೆಕ್‌ ಅಥವಾ ಡಿಡಿ ಅಥವಾ ಪೇ ಆರ್ಡರ್‌ ಮೂಲಕ ಪಾವತಿಸಬಹುದು. ಬಳಿಕ ಭರ್ತಿ ಮಾಡಿದ ಅರ್ಜಿಯನ್ನು ನೋಂದಣಿ ಕಾರ್ಡ್‌ನ ಜೊತೆ ಬಿಡಿಎ ಕೇಂದ್ರ ಕಚೇರಿಯ ಕೌಂಟರ್‌ನಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.ಅವರು ಬಯಸಿದ ಸ್ಥಳದಲ್ಲಿ ಪ್ಲ್ಯಾಟ್‌ ಲಭ್ಯವಿದ್ದರೆ ತಕ್ಷಣವೇ ಅವರಿಗೆ ಹಂಚಿಕೆ ಮಾಡಲಾಗುತ್ತದೆ.

ಫ್ಲ್ಯಾಟ್‌ಗಳ ನೇರ ಮಾರಾಟದ ವೇಳೆಯೂ ಪ್ರವರ್ಗ 1ಕ್ಕೆ ಶೇ 2, ಪರಿಶಿಷ್ಟ ಪಂಗಡಕ್ಕೆ ಶೇ 3, ಪರಿಶಿಷ್ಟ ಜಾತಿಗೆ ಶೇ 15, ಹಿಂದುಳಿದ ವರ್ಗಗಳಿಗೆ ಶೇ 10, ರಾಜ್ಯ ಸರ್ಕಾರಿ ನೌಕರರಿಗೆ ಶೇ 10, ಕೇಂದ್ರ ಸರ್ಕಾರಿ ನೌಕರರಿಗೆ ಶೇ2, ಅಂಗವಿಕಲರಿಗೆ ಶೇ 1, ಕಲೆ, ವಿಜ್ಞಾನ, ಕ್ರೀಡಾ ಕ್ಷೇತ್ರದ ಸಾಧಕರಿಗೆ ಶೇ 2ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ. ಶೇ 50ರಷ್ಟು ಫ್ಲ್ಯಾಟ್‌ಗಳು ಸಾಮಾನ್ಯವರ್ಗಕ್ಕೆ ಲಭಿಸಲಿವೆ.

‘ನೇರ ಮಾರಾಟದಲ್ಲಿ ಗ್ರಾಹಕರು ಫ್ಲ್ಯಾಟ್‌ ಖರೀದಿಗಾಗಿ ಕಾಯುವ ಪ್ರಮೇಯ ಇಲ್ಲ. ಹಾಗಾಗಿ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಲ್ಯಾಟ್‌ಗಳ ಮಾರಾಟಕ್ಕೆ ಪ್ರತ್ಯೇಕ ಕೌಂಟರ್‌ ಆರಂಭಿಸಿದ ಬಳಿಕ ಫ್ಲ್ಯಾಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಅನೇಕ ಮಂದಿ ಈ ಕೌಂಟರ್‌ಗೆ ಬಂದು ಫ್ಲ್ಯಾಟ್‌
ಗಳ ಬಗ್ಗೆ ವಿಚಾರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿ ಎನ್‌.ಜಿ.ಗೌಡಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

3 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ ಹೆಚ್ಚು ಬೇಡಿಕೆ

‘ಬಿಡಿಎ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿರುವ 3 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ ಹೆಚ್ಚು ಬೇಡಿಕೆ ಇದೆ’ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.

‘ವಳಗೇರಹಳ್ಳಿಯ ಹಂತ 5ರಲ್ಲಿ ಮಾರಾಟಕ್ಕಿದ್ದ 3 ಬಿಎಚ್‌ಕೆ ಫ್ಲ್ಯಾಟ್‌ಗಳೆಲ್ಲವೂ ಮಾರಾಟವಾಗಿವೆ. ಆಲೂರು ಎರಡನೇ ಹಂತದಲ್ಲಿರುವ 2 ಬಿಎಚ್‌ಕೆ ಡ್ಯೂಪ್ಲೆಕ್ಸ್‌ಗಳಲ್ಲಿ 100 ಮಾತ್ರ ಉಳಿದಿವೆ. ಕೊಮ್ಮಘಟ್ಟದಲ್ಲಿ 2 ಬಿಎಚ್‌ಕೆ ಹಾಗೂ 3 ಬಿಎಚ್‌ಕೆ ಫ್ಲ್ಯಾಟ್‌ಗಳ ಬಗ್ಗೆಯೂ ಅನೇಕರು ವಿಚಾರಿಸಿಕೊಂಡು ಹೋಗಿದ್ದಾರೆ’ ಎಂದು ಗೌಡಯ್ಯ ತಿಳಿಸಿದರು.

ಮುಖ್ಯಾಂಶಗಳು

* ಫ್ಲ್ಯಾಟ್‌ ಮಾರಾಟ ತಂತ್ರ ಬದಲಿಸಿದ ಬಿಡಿಎ

* ನೇರ ಖರೀದಿಗೆ ಅವಕಾಶ

* ಫ್ಲ್ಯಾಟ್‌ ಮಾರಾಟಕ್ಕಾಗಿಯೇ ಪ್ರತ್ಯೇಕ ಕೌಂಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT