ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ

Last Updated 19 ಸೆಪ್ಟೆಂಬರ್ 2017, 6:11 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಅನೇಕ ಕಡೆಗಳಲ್ಲಿ ಸರ್ಕಾರಿ ಶಾಲಾ ಕೋಣೆಗಳು ಶಿಥಿಲಗೊಂಡಿದ್ದು, ಅಪಾಯದ ಅಂಚಿನಲ್ಲಿವೆ. ತಾಲ್ಲೂಕು ಮರ್ಚೇಡ್‌ ಗ್ರಾಮದ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೋಣೆಗಳ ಮೇಲ್ಛಾವಣಿಯಲ್ಲಿ ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಹೊರಗೆ ಬಂದಿವೆ.

ಇಂತಹ ಕೋಣೆಗಳಲ್ಲೆ ಮಕ್ಕಳು ಹಾಗೂ ಶಿಕ್ಷಕಿಯರು ನಿತ್ಯವೂ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ರಾಯಚೂರು ನಗರ ಜಹೀರಾಬಾದ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳಲ್ಲಿ ಇದ್ದಕ್ಕಿದ್ದಂತೆ ಕಳೆದ ಬುಧವಾರ ಸಿಮೆಂಟ್‌ ಬಿಚ್ಚಿಕೊಂಡು ಬೀಳಲಾರಂಭಿಸಿತು.

ಮಕ್ಕಳೆಲ್ಲ ಶಾಲೆಯಿಂದ ಭೀತಿಯಿಂದ ಮನೆಯತ್ತ ಓಡಿಹೋದರು. ಎರಡು ದಿನಗಳ ಹಿಂದೆ ಶಕ್ತಿನಗರ ಪಕ್ಕದ ಜಗರಕಲ್‌ ಸರ್ಕಾರಿ ಪ್ರಾಥಮಿಕ ಶಾಲೆಯ ಕೋಣೆಗಳು ಮಳೆಯಿಂದ ಸೋರಿ ನೀರು ತುಂಬಿಕೊಂಡಿದ್ದರಿಂದ ಮಕ್ಕಳನ್ನು ಮನೆಗೆ ಕಳುಹಿಸಿದರು.

ರಾಯಚೂರು ತಾಲ್ಲೂಕಿನ ಸರ್ಕಾರಿ ಶಾಲೆಗಳದ್ದು ಮಾತ್ರ ಈ ದುಃಸ್ಥಿತಿಯಲ್ಲ; ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಸರ್ಕಾರಿ ಶಾಲಾ ಕೋಣೆಗಳ ಅವ್ಯವಸ್ಥೆ ಆಗಾಗ ಸುದ್ದಿಗೆ ಬರುತ್ತಿವೆ. ಜಿಲ್ಲೆಯಲ್ಲಿ ಒಟ್ಟು ಪ್ರಾಥಮಿಕ ಶಾಲೆಗಳ 1040 ಕೊಠಡಿಗಳಿಗೆ ದುರಸ್ತಿ ಅಗತ್ಯವಿದೆ. ಪ್ರೌಢಶಾಲೆಗಳ 521 ಕೊಠಡಿಗಳಿಗೆ ದುರಸ್ತಿಯ ಅಗತ್ಯವಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ 2016 ರಲ್ಲೆ ಅಂಕಿ–ಅಂಶ ಕಳುಹಿಸಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಹಾಳುಬಿದ್ದ ಶಾಲಾಕೋಣೆಗಳ ಆವಾಂತರಗಳು ಹೊರಬರುತ್ತವೆ. ಸರ್ಕಾರಿ ಶಾಲೆಗಳ ಆರಂಭದಲ್ಲಿ ನಿರ್ಮಿಸಿದ ಕಟ್ಟಡಗಳು ಗಟ್ಟಿಮುಟ್ಟಾಗಿವೆ. ಆನಂತರದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡಗಳಲ್ಲಿ ಬಹುತೇಕ ಕಳಪೆ ಆಗಿವೆ ಎಂಬುದು ಮೇಲ್ನೊಟದಲ್ಲೆ ಕಂಡು ಬರುತ್ತದೆ.

ಮರ್ಚೇಡ್‌ ಸರ್ಕಾರಿ ಕುವೆಂಪು ಮಾದರಿ ಶಾಲೆಗೆ ಆರಂಭದಲ್ಲಿ ನಿರ್ಮಿಸಿರುವ ಕೋಣೆಗ ಸರಿಯಾಗಿವೆ. 2006 ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾದ ನೂತನ ಶಾಲಾ ಕೋಣೆಗಳು ಕುಸಿಯುವುದಕ್ಕೆ ಕಾದಿವೆ.

ಮಳೆಯಿಂದಾಗಿ ಹೊರಗೆ ಪಾಠ ಮಾಡುವುದು ಅಸಾಧ್ಯ. ಹೀಗಾಗಿ ಹಾಳುಬಿದ್ದ ಕೋಣೆಗಳಲ್ಲೆ ಶಿಕ್ಷಕಿಯರು ಅನಿವಾರ್ಯವಾಗಿ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಶಾಲಾ ಕಟ್ಟಡದ ಕಾಲಂಗಳು ಹಾಗೂ ಮೇಲ್ಛಾವಣೆ ಶಿಥಿಲಗೊಂಡು ಸಿಮೆಂಟ್‌ ಉದುರಿ ಬೀಳುತ್ತಿದೆ. 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಹಾಳುಬಿದ್ದ ಕೋಣೆಗಳಲ್ಲೆ ಪಾಠ ಹೇಳಲಾಗುತ್ತಿದೆ. ಹಳೇ ಕಟ್ಟಡದಲ್ಲಿ 6 ರಿಂದ 8 ನೇ ತರಗತಿವರೆಗಿನ ಮಕ್ಕಳಿಗೆ ಪಾಠ ನಡೆಯುತ್ತಿದೆ.

‘ನೌಕರಿ ಮಾಡುವುದಷ್ಟೆ ನಮ್ಮ ಕೆಲಸ ಎನ್ನುವಂತಾಗಿದೆ. ಹಾಳುಬಿದ್ದ ಶಾಲಾ ಕೋಣೆಗಳನ್ನು ದುರಸ್ತಿ ಮಾಡಿಸುವಂತೆ ಶಾಲಾ ಮುಖ್ಯಗುರುಗಳಿಗೆ ಹೇಳುತ್ತಿದ್ದೇವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದಾಗ ಹೇಳುತ್ತಲೇ ಇದ್ದೇವೆ. ಶಾಲೆಯಲ್ಲಿ ಮಕ್ಕಳನ್ನು ನೋಡಿ ಪಾಠ ಮಾಡುವ ಬದಲು ಛಾವಣಿ ನೋಡಿ ಪಾಠ ಮಾಡುತ್ತಿದ್ದೇವೆ. ಪ್ರತಿ ಕೋಣೆಯಲ್ಲೂ ಮಕ್ಕಳ ಸಂಖ್ಯೆ ದಟ್ಟವಾಗಿದೆ. ಹೀಗಾಗಿ ಹಾಳುಬಿದ್ದ ಕೋಣೆಗಳಲ್ಲೆ ಪಾಠ ಮಾಡುವುದು ಅನಿವಾರ್ಯವಾಗಿದೆ’ ಎಂದು ಮರ್ಚೇಡ್‌ ಸರ್ಕಾರಿ ಶಾಲೆಯ ಶಿಕ್ಷಕಿಯರು ‘ಪ್ರಜಾವಾಣಿ’ ಎದುರು ಸಾಮೂಹಿಕವಾಗಿ ಅಳಲು ತೋಡಿಕೊಂಡರು.

ಮರ್ಚೇಡ್‌ ಶಾಲೆಯ ಮುಖ್ಯಗುರು ಮಲ್ಲಮ್ಮ ಹೇಳುವಂತೆ ‘ಶಾಲಾ ಕಟ್ಟಡಗಳ ಅವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಆದರೆ ಏನೂ ಕ್ರಮವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಶಾಲಾ ಕೋಣೆಗಳು ಬಹಳ ಹಾಳಾಗಿವೆ. ದುರಸ್ತಿ ಮಾಡುವಂತೆ ಒಂದು ವರ್ಷದಿಂದ ಮನವಿ ಸಲ್ಲಿಸಿ, ಅಧಿಕಾರಿಗಳಿಗೆ ನೇರವಾಗಿ ಭೇಟಿಯಾಗಿ ಬರುತ್ತಿದ್ದೇವೆ. ವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ ಆರಂಭಿಸುತ್ತೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಡಿವೆಪ್ಪ ಹೇಳಿದರು.

ಶಿಕ್ಷಣ ಸಚಿವರೆ ಉಸ್ತುವಾರಿ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಟ್‌ ಅವರು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರು. ಜಿಲ್ಲೆ
ಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು ಮತ್ತು ಸಭೆಗೆ ಅವರು ಆಗಾಗ ಭೇಟಿ ಕೊಟ್ಟು ಹೋಗುತ್ತಾರೆ. ಆದರೆ ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನು ಸಮಸ್ಯೆಗಳಿಂದ ಮುಕ್ತವಾಗಿಸಲು ಯಾವ ವಿಶೇಷ ಕ್ರಮಗಳನ್ನು ಅವರು ಜರುಗಿಸಿಲ್ಲ.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರಿನಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆ ಇನ್ನೂ ಹಿಂದುಳಿದಿರುವುದಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಿದರೆ ಸಾಕು. ಶಾಲಾ ಕೋಣೆಗಳ ದುಃಸ್ಥಿತಿಯೆ ಇನ್ನೂ ಸುಧಾರಿಸಿಲ್ಲ. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಮಕ್ಕಳಿಗೆ ದೊರೆಯುವುದು ಗಗನ ಕುಸುಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT