ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ದರ ಕುಸಿತ: ರೈತರಲ್ಲಿ ಆತಂಕ

Last Updated 19 ಸೆಪ್ಟೆಂಬರ್ 2017, 6:32 IST
ಅಕ್ಷರ ಗಾತ್ರ

ಚಾಮರಾಜನಗರ: ಕೆಲ ದಿನಗಳ ಹಿಂದಷ್ಟೇ ಶ್ರಮಕ್ಕೆ ಮೋಸವಿಲ್ಲದಂತೆ ಉತ್ತಮ ಆದಾಯ ತಂದುಕೊಟ್ಟಿದ್ದ ತರಕಾರಿ, ತಂಪೆರೆಯುತ್ತಿರುವ ಮಳೆಯ ನಡುವೆಯೇ ರೈತರ ಕೈಸುಡಲು ಆರಂಭಿಸಿದೆ. ತರಕಾರಿ ಬೆಲೆ ಕುಸಿಯುತ್ತಿರುವುದು ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದೆ. ಇತ್ತ ಗಗನಮುಖಿಯಾಗುತ್ತಿದ್ದ ಧಾರಣೆ ಕಂಡು ಸುಸ್ತಾಗಿದ್ದ ಗ್ರಾಹಕರಲ್ಲಿ ಬೆಲೆ ಇಳಿಕೆ ನೆಮ್ಮದಿ ಮೂಡಿಸಿದೆ.

‘3 ತಿಂಗಳ ಹಿಂದೆ ಟೊಮೆಟೊ ಕೆಜಿಗೆ ₹ 80 ರಿಂದ 100 ದರ ಇತ್ತು. ಇತರೆ ತರಕಾರಿ ಬೆಲೆಗಳಲ್ಲಿಯೂ ಏರಿಕೆ ಕಂಡು ಬಂದಿತ್ತು. ಹಾಗಾಗಿ, ಹೆಚ್ಚಿನ ರೈತರು ಸಾಮೂಹಿಕವಾಗಿ ತರಕಾರಿ ಬೆಳೆಯಲು ಮುಂದಾದರು. ಈಗ ಉತ್ತಮ ಮಳೆಯಾಗುತ್ತಿರುವುದರಿಂದ ಇಳುವರಿ ಹೆಚ್ಚಾಗಿದ್ದು, ಬೆಲೆ ಕಡಿಮೆಯಾಗಿದೆ’ ಎಂದು ಕಬ್ಬುಬೆಳೆಗಾರರ ಸಂಘದ ಸಂಚಾಲಕ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿತ್ತನೆಬೀಜ, ಔಷಧ, ಗೊಬ್ಬರಗಳಿಗೆ ಖರ್ಚು ಮಾಡುವುದಲ್ಲದೆ, ಕಾರ್ಮಿಕರಿಗೆ ಕೂಲಿ ನೀಡಿ ಪರಿಶ್ರಮದಿಂದ ಬೇಸಾಯ ಮಾಡಿದ ರೈತರಿಗೆ ಹಾಕಿದ ಬಂಡವಾಳವನ್ನೂ ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತರಕಾರಿಗಳನ್ನು ಮಾರುಕಟ್ಟೆಗೆ ಸಾಗಣೆ ಮಾಡಿದ ಹಣವೂ ಒಮ್ಮೊಮ್ಮೆ ದೊರೆಯುತ್ತಿಲ್ಲ. ಟೊಮೆಟೊ, ಕ್ಯಾರೆಟ್‌ ಅನ್ನು ಕೇಳುವವರೇ ಇಲ್ಲ. ಇದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ರೈತರು.

‘ಜಿಲ್ಲೆಯಲ್ಲಿ ಟೊಮೆಟೊ, ಮೆಣಸಿಕಾಯಿ ಹಾಗೂ ಬದನೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಮೈಸೂರು ಜಿಲ್ಲೆಯಿಂದ ಕ್ಯಾರೆಟ್‌, ಬೀಟ್‌ರೂಟ್‌ ಹಾಗೂ ಹಾಸನದಿಂದ ಆಲೂಗಡ್ಡೆ ಮುಂತಾದ ತರಕಾರಿಗಳು ಪೂರೈಕೆಯಾಗುತ್ತದೆ. 15 ದಿನಗಳಿಂದ ಮಾರುಕಟ್ಟೆಗೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿರುವುದರಿಂದ ಇಲ್ಲಿ ಬೆಳೆದಿರುವ ತರಕಾರಿಗೆ ಬೇಡಿಕೆ ಕಡಿಮೆಯಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು.

‘ಮಧ್ಯವರ್ತಿಗಳು ರೈತರ ಜಮೀನುಗಳಿಗೆ ತೆರಳಿ ತರಕಾರಿಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡಿ ಉಳಿದ ತರಕಾರಿಯನ್ನು ಇಲ್ಲಿನ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಯಾವುದೇ ಲಾಭ ದೊರೆಯುತ್ತಿಲ್ಲ’ ಎಂದು ರೈತ ಬಸವಣ್ಣ ತಿಳಿಸಿದರು. ಬೆಳಿಗ್ಗೆ ಕೆ.ಜಿಗೆ ₹10–₹20 ದರದಲ್ಲಿ ಮಾರಾಟವಾಗುವ ತರಕಾರಿಗಳನ್ನು ಸಂಜೆ ₹ 5ರಿಂದ 10ಕ್ಕೆ ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT