ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಗಿಂಗ್: ಆಂಧ್ರಪ್ರದೇಶ ವಿವಿಯಿಂದ 54 ವಿದ್ಯಾರ್ಥಿಗಳ ಅಮಾನತು

Last Updated 19 ಸೆಪ್ಟೆಂಬರ್ 2017, 8:30 IST
ಅಕ್ಷರ ಗಾತ್ರ

ಹೈದರಾಬಾದ್‌: ಕಿರಿಯ ವಿದ್ಯಾರ್ಥಿಗಳನ್ನು ನಿರಂತರವಾಗಿ ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ವಿಶ್ವವಿದ್ಯಾಲಯದಿಂದ ಅಮಾನತು ಮಾಡಲಾಗಿದೆ. ಮಂಗಳವಾರ ಈ ಬಗ್ಗೆ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗಸ್ಟ್‌ 29ರಂದು ರ‍್ಯಾಗಿಂಗ್ ನಡೆದಿರುವುದು ತನಿಖೆಯ ನಂತರ ಖಚಿತವಾಗಿರುವುದರಿಂದ ಕೃಷ್ಣ ಜಿಲ್ಲೆಯ ನುಜ್ವಿದ್‌ನಲ್ಲಿರುವ ರಾಜೀವ್‌ ಗಾಂಧಿ ತಂತ್ರಜ್ಞಾನ ವಿವಿಯ 54 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

2009ರಲ್ಲೇ ರ‍್ಯಾಗಿಂಗ್ ವಿರೋಧಿ ಕಾನೂನುಗಳು ಜಾರಿಯಾಗಿವೆ. ಜತೆಗೆ ಸರ್ಕಾರಗಳೂ ರ‍್ಯಾಗಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯವಾಣಿಗಳನ್ನು ನೀಡಿವೆ. ಆದರೂ ಹಿರಿಯ ವಿದ್ಯಾರ್ಥಿಗಳಿಂದ ಕಿರುಕುಳಕ್ಕೊಳಗಾದವರು ಸುಮ್ಮನಾಗಿದ್ದಾರೆ.

ಹಲ್ಲೆಗೊಳಗಾದ ಹೆಚ್ಚಿನವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಹಿರಿಯ ವಿದ್ಯಾರ್ಥಿಗಳು ದೈಹಿಕ ‘ಶಿಕ್ಷೆ’ ನೀಡಿದ್ದಾರೆ ಎಂದು ಹೇಳಿಕೊಂಡಿರುವುದು ವಿವಿಯ ಶಿಸ್ತು ಸಮಿತಿಯ ಗಮನಕ್ಕೆ ಬಂದಿದೆ.

ಅಮಾನತುಗೊಂಡಿರುವ ವಿದ್ಯಾರ್ಥಿಗಳು ಸಾಫ್ಟ್‌ವೇರ್‌ ಇಂಜಿನಿಯರಿಂಗ್‌ ವಿಷಯದ 3 ಮತ್ತು 4ನೇ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ತನಿಖೆಯ ವರದಿ ಬಂದ ನಂತರ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ವಿವಿಯ ಆಡಳಿತ ಮಂಡಳಿ ತಿಳಿಸಿದೆ.

ವಿವಿಯ ರಿಜಿಸ್ಟ್ರಾರ್‌ ವಿ.ವೆಂಕಟ್‌ ದಾಸ್‌ ಅವರು, ‘ಒಟ್ಟು 15 ವಿದ್ಯಾರ್ಥಿಗಳನ್ನು ಒಂದು ವರ್ಷದ ವರೆಗೆ ತರಗತಿಗಳಿಗೆ ಬರದಂತೆ ಮಾಡಲಾಗಿದೆ. ಅದರಲ್ಲಿ 6 ಮಂದಿಗೆ ವಾರ್ಷಿಕ ಪರಿಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.

13 ವಿದ್ಯಾರ್ಥಿಗಳನ್ನು ನವೆಂಬರ್‌ವರೆಗೆ ಅಮಾನತು ಮಾಡಲಾಗಿದ್ದು, ಉಳಿದ 24 ವಿದ್ಯಾರ್ಥಿಗಳನ್ನು ವಿವಿಯಿಂದ ಹೊರಕಳುಹಿಸಲಾಗಿದೆ.

ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್ ಹೆಸರಿನಲ್ಲಿ ಹಿರಿಯ ವಿದ್ಯಾರ್ಥಿಗಳು ಹಲವು ಬಗೆಯ ದೈಹಿಕ ‘ಶಿಕ್ಷೆ’ ವಿಧಿಸಿದ್ದಾಗಿ ಹಲ್ಲೆಗೊಳಗಾದ 12 ವಿದ್ಯಾರ್ಥಿಗಳು ತನಿಖೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಜತೆಗೆ ವಿವಿಯ ಆಡಳಿತ ಮಂಡಳಿಗೆ ದೂರು ನೀಡಿದ್ದಕ್ಕಾಗಿಯೂ ಹಲ್ಲೆ ನಡೆಸಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ರ‍್ಯಾಗಿಂಗ್ ನಿರ್ಮೂಲನೆಗಾಗಿ ಇರುವ ಒಕ್ಕೂಟ(ಸಿಯುಆರ್‌ಇ) ನಡೆಸಿರುವ ಸಮೀಕ್ಷೆಯಲ್ಲಿ 2007–13ರ ಅವಧಿಯಲ್ಲಿ 717 ರ‍್ಯಾಗಿಂಗ್ ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ 71 ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, 30 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

99 ಗಾಯಗೊಂಡ ಪ್ರಕರಣಗಳು ಹಾಗೂ 128 ಲೈಗಿಂಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, ಶಾಶ್ವತ ಅಂಗವೈಕಲ್ಯಕ್ಕೊಳಗಾದ 81 ಪ್ರಕರಣಗಳೂ ಬೆಳಕಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT